ಡಾ ಶ್ರುತಿ ಬಿ ಆರ್ ಮೈಸೂರು
ಎಂತೆoಥಾ ಆಳದ ಗಾಯಗಳೋ
ಮಾಯುತ್ತವೆ ಗೆಳತಿ,
ಈ ಪಾಪಿ ಕಲೆಗಳಿವೆಯಲ್ಲ
ಇವಕ್ಕೆ ಕರುಣೆಯಿಲ್ಲ!

ಅಟ್ಟದ ಮೆಟ್ಟಿಲಿಂದ ಉರುಳಿ
ಹಣೆ ನೆಲಕ್ಕೆ ಬಡಿದು
ರಕ್ತ ಸುರಿಸಿದ ಹಳೇ ಗಾಯ
ಈಗಿಲ್ಲ, ಅಂದು ಅಜ್ಜನಾಡಿದ
ಹೆಣ್ಣು ಹದ್ದುಬಸ್ತಿನಲ್ಲಿಲದಿದ್ದರೆ
ಹೀಗೆ ಕಾಲುಜಾರುವುದೆ
ಎಂಬ ನುಡಿ ಕಿವಿಯೊಳಗೆ
ನಂಜಾಗಿದೆ!
ಕಾಲೇಜು ದಾರಿಯಲ್ಲಿ
ಕಲ್ಲೆಡವಿ ಕಿತ್ತಿದ್ದ ಹೆಬ್ಬೆರಳುಗುರು
ಒಂದಷ್ಟಾದರೂ ಕುರುಹು
ಉಳಿಸಿಲ್ಲ,
ಅದೇ ಹಾದಿಯಲ್ಲಿ ದಿನವೂ
ಕಾದು ನಿಲ್ಲುತ್ತಿದ್ದ
ಗುಳಿಕೆನ್ನೆಯ ಹುಡುಗನ
ಮರೆಯಲಾಗಿಲ್ಲ!

ಮಗಳು ಹುಟ್ಟುವಾಗಿನ
ಆಪರೇಷನ್ನಿನ ಗಾಯದ ಗುರುತು
ಕಣ್ಣಿಟ್ಟು ಹುಡುಕಿದರೆ ಮಾತ್ರವೇ
ಕಂಡೀತೇನೊ,
ನೀನು ಒಳ್ಳೆಯ ತಾಯಿಯಲ್ಲ
ಎಂದ ಮಗಳ ಕಿಡಿನುಡಿ
ಅಳಿಸಲಾಗದ ಕಾರ್ಗಪ್ಪು
ಕಲೆಯಾಗಿದೆ!
ಗಾಯಗಳು ಮಾಯುತ್ತವೆ, ಗೆಳತಿ
ಈ ಕಲೆಗಳಿಗೆ ಕರುಣೆಯಿಲ್ಲ!!






ಈ ಪಾಪಿ ಕಲೆಗಳಿವೆಯಲ್ಲ ಇವಕ್ಕೆ ಕರುಣೆಯಿಲ್ಲ!
ಒಳಗಣ್ಣಿನಿಂದ ಓದಿಸಿಕೊಳ್ಳುವ ಕವನ