ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಲು ವೀಣೆಯ ಕರಗಿಸಿ ಕಟೆದಿದ್ದವಳು…

ಉಗಿ ಓಘ

– ನರೇಶ್ ಮಯ್ಯ

  ಅಲೆದಾಡಿ ಸೆಲೆಸಿಗದೆ ದೌಡುತಿತ್ತು ಎದೆ ಬುರುಜಿನ ಹಳಿಯ ಮೇಲೆ ಹಸಿದು ಹರುಕಾಗಿದ್ದ ಹುಚ್ಚು ಉಗಿಬಂಡಿ. ಬೋಗಿ ಬೋಗಿಯಲ್ಲೂ ಬೂದಿಯಾದ ಭೋಗಗಳನ್ನೊತ್ತು ಹೊರಟಿದ್ದ ಆ ಸಾವಿರ ಷಟ್ಚಕ್ರ ಸೌಧಕ್ಕೆ ಅರಿವಿನರಮನೆಯ ದಾರಿ ಸಾಗಿದ್ದು ಸೋಕಲೇ ಇಲ್ಲ. ಆದರವಳಿಗರಿವಿತ್ತು ಸತ್ಯ ಹಳಸಿದ ಆಕಾಶದ ಪೊರೆಯಿಂದ ಜಿನುಗಿದ್ದ ನೆತ್ತರು ದೇಹ ಕಾಣದೆ ಚೆಲ್ಲಿಕೊಂಡಿತ್ತು ಚೆಲ್ಲಾಪಿಲ್ಲಿ . ಓಟದ ಓಘಕ್ಕೋ, ಪಥ ಸರಿದ ಸುಸ್ತಿಗೋ ಎಂಜಿನ್ನ ತುಂಬ ಒಸರಿತ್ತು ಕಂಡೇ ಕಾರಿಕೊಂಡ ಲೋಳೆಯ ಕೊಳ. ಓಟ ಸಾಗಿತ್ತು ಜುಗು ಜುಗು ಜುಗು ಜುಗು ಮೈಲು ಮೈಲು ಗಾವುದ ಸರಿದರೂ ಹಸಿವು ತಣಿಯಲಿಲ್ಲ, ಕರಿಮೋಡವಾಗಿ ಅಡರಿತ್ತು ಉಗಿ ಸುಟ್ಟ ಉಸಿರು. ನಿರಂತರ ಸಹಿಸಿದ್ದಳು ಆಕೆ. ಅಂಬೋ ಎಂದು ಬಾಯಾರಿ ಬಿರುಕಿದ್ದ ಭುವಿಯಲ್ಲಿ ಚಿಗುರಿತ್ತು ಸಯನೈಡು ಸೋಗೆ. ಹೊಂಗೆ ಟೊಂಗೆಗಳೆಲ್ಲ ಭಂಗ ಭಂಗುರವಾದದ್ದೇ ಸರಿಹೋಯ್ತು ಆ ದಾರಿಗೆ; ಸಂಕ ಸುಂಕಗಳಿಗೆ ಇಟ್ಟಾಗಿತ್ತು ಪಿಂಡ. ಎದೆಯೊಳಗಿನ ಸದ್ದು ಶೃತಿಸುತ್ತಿತ್ತು ಅವಳ ಆಲಾಪನೆಯನ್ನು; ಆಕೆ ನುಡಿಯಲೊಲ್ಲಳು. ಕಲ್ಲು ವೀಣೆಯ ಕರಗಿಸಿ ಕಟೆದಿದ್ದವಳು ಅರಳದೇ ಅಳುಕಿದ್ದಳು. ಹಳಿಯಾನದ ಆಚೆ ಅವಳೆಲ್ಲೋ ಮೋಹಿಸುತಿದ್ದಳು ಮೌನವಾಗಿ. ಆ ಕಠೋರ ಮೌನದ ಕಾವಿಗೆ ಬಂಡಿಯ ಇದ್ದಿಲು ಭುಗ್ ಎಂದು ಹತ್ತಿ ಉರಿಯುತ್ತಲೂ ಓಟದ ಓಘ ಇಮ್ಮಡಿಸುತ್ತಲೂ ಹಸಿವ ಹೂಂಕಾರ ಹಾರಿ ಹಾರಿ ಏರುತಿತ್ತು, ಮೋಹದ ಯಾತ್ರೆ ಸಾಗುತ್ತಲೇ ಇತ್ತು. ಇಷ್ಟಾದರೂ ಅಂಬರದೆತ್ತರಕ್ಕೆ ನಿಂತಿದ್ದಳವಳು ಧೀರಳಾಗಿ. ದಾಹಕ್ಕೆ ನಿಲುಕದ ಸೆಲೆಯಾಗಿ.  ]]>

‍ಲೇಖಕರು G

29 August, 2012

1 Comment

  1. Nataraju S M

    ಕನಕಪುರದಲ್ಲಿ ಕವಿಗಳು ತುಂಬಾ ವಿರಳ ಎನ್ನಬಹುದು.. ಚಂದದ ಕವಿ ನಾಗೇಶ್ ಮಯ್ಯ ನವರು ನಮ್ಮ ಕನಕಪುರದ ಕವಿಗಳು ಎನ್ನಲು ಹೆಮ್ಮೆ ಎನಿಸುತ್ತಿದೆ.. ಅವರ ಕಾವ್ಯ ಕೃಷಿ ಹೀಗೆಯೇ ಮುಂದುವರೆಯಲಿ.. ಶುಭವಾಗಲಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading