ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಾಮನೆತನಕ್ಕೆ ಸಂದ ನಾಲ್ಕನೆ ರಾಷ್ಟ್ರಪ್ರಶಸ್ತಿ

ಇತ್ತೀಚಿಗಷ್ಟೇ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಅವರ ಕುರಿತು ನಾರಾಯಣ ಯಾಜಿ ಅವರ ಒಂದು ಬರಹ ಇಲ್ಲಿದೆ.

-ನಾರಾಯಣ ಯಾಜಿ

ಮಿತ್ರ ಶಿವಾನಂದ ಹೆಗಡೆಯವರಿಗೆ ಈ ವರ್ಷದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ದೊರೆತಿರುವವುದು ಓರ್ವ ವ್ಯಕ್ತಿಯ ಸಾಧನೆಗಾಗಿಯಲ್ಲ; ೯೨ ವರ್ಷಗಳ ಕಾಲ ನಿರಂತರವಾಗಿ ಯಕ್ಷಗಾನ ರಂಗಭೂಮಿಯ ಪರಂಪರೆಯನ್ನು ಕಾಪಿಟ್ಟುಕೊಂಡು ಮುಂದಿನ ತಲೆಮಾರಿಗೆ ತಲುಪಿಸುವ ರಂಗಗುರುವಿಗೆ ದೊರೆತ ಸಮ್ಮಾನವಾಗಿದೆ. ಒಂದೇ ಮನೆತನದಲ್ಲಿ ಅಜ್ಜ, ದೊಡ್ಡಪ್ಪ, ಅಪ್ಪ ಮತ್ತು ಮಗ ಎಲ್ಲರಿಗೂ ಈ ಗೌರವ ಸಿಕ್ಕಿರುವುದು ಬಹುಶಃ ವಿರಳ. ಯಕ್ಷಗಾನದ  ರಂಗಭೂಮಿಗೆ ಇನ್ನೊಂದು ಹೆಸರೇ ಕೆರೆಮನೆ ಮನೆತನ. ೧೯೩೪ನೇ ಇಸವಿಯಲ್ಲಿ ಇವರ ಅಜ್ಜ ಇಡಗುಂಜಿ ಮೇಳವನ್ನು ಸ್ಥಾಪಿಸುವಾಗ  ಅವರ ಮನಸ್ಸಿನಲ್ಲಿ ಯಾವ ರಂಗಸ್ವರೂಪದ ಖಚಿತತೆ ಇದ್ದಿತ್ತೋ ಅದೇ ತತ್ತ್ವವೇ  ಇಂದಿಗೂ ಮೊಮ್ಮಗ ಶಿವಾನಂದ ಹೆಗಡೆಯವರಲ್ಲಿ ಕಾಣಬಹುದಾಗಿದೆ. ಹಲವು ಅವಕಾಶಗಳ ನಡುವೆಯೂ ಮನೆತನದ ಕಲೆಗೆ ತನ್ನ ೧೨ರ ವಯಸ್ಸಿನಲ್ಲಿಯೇ ಆಕರ್ಷಿತಗೊಂಡು ಮಹಾಬಲ ಹೆಗೆಡೆಯವರಲ್ಲಿ, ಚಿಕ್ಕಪ್ಪ ಗಜಾನನ ಹೆಗಡೆಯವರಲ್ಲಿ, ಜೊತೆಗೆ ಅಜ್ಜ, ಅಪ್ಪ ಎಲ್ಲರಿಂದಲೂ ಸತ್ವವನ್ನು ಹೀರಿ ತನ್ನದೇ ಆದ ನಿರ್ದೇಶಿತ ಕಲಾಪರಂಪರೆಯನ್ನು ಕಟ್ಟಿಕೊಟ್ಟಿರುವುದು ಸಣ್ಣ ಸಾಧನೆಯೇನೂ ಅಲ್ಲ.

ಪರಂಪರೆಯ ಹಿನ್ನೆಲೆ

ಕೆರೆಮನೆ ಮನೆತನದ  ಮಹಾನ್ ಪ್ರತಿಭೆಗಳಾದ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಶಂಭು ಹೆಗಡೆ ಇವರೆಲ್ಲರನ್ನೂ ರಾಷ್ಟ್ರಪ್ರಶಸ್ತಿ ಅರಸಿಕೊಂಡು ಬಂದಿದೆ. ತರುಣದಲ್ಲಿಯೇ ತೀರಿ ಹೋದ ಗಜಾನ ಹೆಗಡೆ ಇನ್ನಷ್ಟು ಕಾಲ ಬದುಕಿದ್ದರೆ ಖಂಡಿತವಾಗಿಯೂ ಅವರಿಗೂ ರಾಷ್ಟ್ರಪ್ರಶಸ್ತಿ ಗೌರವ ದೊರೆಯುತ್ತಿತ್ತು! ಕೆರೆಮನೆಯ ಕಲಾವಿದರ ವಿಶೇಷತೆ ಏನೆಂದರೆ ಇವರೆಲ್ಲರೂ ಯಕ್ಷಗಾನ  ಪ್ರಸಂಗದ ಎಲ್ಲಾ ಬಗೆಯ ವೇಷಗಳನ್ನು ಮಾಡಿದವರು. ಆದರೆ ಒಬ್ಬರ ವೇಷದಂತೆ ಮತ್ತೊಬ್ಬರದಲ್ಲ. ಉದಾಹರಣೆಗೆ ಕೌರವ, ಮೂವರೂ ಕಲಾವಿದರು ತಮ್ಮದೇ ಆದ ಆಂಗಿಕ, ವಾಚಿಕ ಮತ್ತು ಸಾತ್ತ್ವಿಕ ಅಭಿನಯದ ಮೂಲಕ ಪ್ರಸ್ತುತಪಡಿಸಿದಾಗ ರಂಗದ ಮೇಲಿನ ಬಾಹ್ಯ ಪ್ರಸ್ತುತಿ ಬೇರೆಯಾಗಿ ಕಂಡರೂ, ಅದರ ಒಳಗಿರುವ ಮೂಲ ರಸ ಮತ್ತು ಭಾವದ ಸೂತ್ರ, ಕಥೆಯ ಮೂಲ ‘ಸ್ಥಾಯಿಭಾವ’ ಒಂದೇ ಆಗಿರುತ್ತದೆ; ಶಿವರಾಮ ಹೆಗಡೆಯವರು ತಮ್ಮ ಗಾಂಭೀರ್ಯ ಮತ್ತು ರಸಭಾವವನ್ನು ಹಿಡಿದು ಮೀಟುವುದರಲ್ಲಿ ಹೆಸರಾದವರು. ಮಹಾಬಲ ಹೆಗಡೆಯವರದ್ದು ಗಂಭೀರ ಮತ್ತು ಕಂಚಿನ ಕಂಠ. ಶಂಭು ಹೆಗಡೆಯವರು ತಮ್ಮ ಬೌದ್ಧಿಕ ಮತ್ತು ನಟನಾ ಚಾತುರ್ಯದಿಂದ ಇಬ್ಬರಿಗಿಂತ ಭಿನ್ನವಾಗಿ ಆ ರಸವನ್ನು ಪ್ರಸ್ತುತಪಡಿಸಿರುತ್ತಾರೆ. ಶಿವಾನಂದ ಹೆಗಡೆಯವರು ಎಳೆವೆಯಲ್ಲಿಯೇ ರಂಗಭೂಮಿಗೆ ಬಂದರೂ ದೈತ್ಯಪ್ರತಿಭೆಗಳಾದ ತನ್ನ ಹಿರಿಯರ ದಾರಿಯನ್ನು ಸಮರ್ಥವಾಗಿ ತೆಗೆದುಕೊಂಡುಹೋಗುವುದು ಅವರ ಮುಂದಿರುವ ದೊಡ್ಡ ಸವಾಲಾಗಿತ್ತು.   ರಂಗಕ್ಕೆ ನೇರವಾಗಿ ಧುಮಿಕಿದರೆ ಅವರೆಲ್ಲರ ನೆರಳಿನಲ್ಲಿ ಕಳೆದುಹೋಗುವ ಅಪಾಯವೂ ಇತ್ತು. ಈ ಕಾರಣಕ್ಕೆ ಮನೆತನದ ಹಾದಿಯನ್ನು ಆಯ್ದುಕೊಳ್ಳುವ ಮುನ್ನದೆಹಲಿಗೆ ಹೋಗಿ ಖ್ಯಾತ ಕಲಾವಿದೆ ಡಾ. ಮಾಯಾ ರಾವ್ ಅವರ ಕಥಕ್ ಮತ್ತು ಕೋರಿಯೋಗ್ರಾಫಿ ಸಂಸ್ಥೆಗೆ ಸೇರಿಕೊಂಡರು.  . ಶಂಭು ಹೆಗಡೆಯವರ ನಂತರ  ಕೋರಿಯೋಗ್ರಾಪರ್ ಆಗಿ ಬಂದ ಎರಡನೆಯ ಕಲಾವಿದ ಶಿವಾನಂದ.  (ಈಗ ಅವರ ಮಗ ಶ್ರೀಧರ ಮೂರನೆಯವರಾಗಿ ಕೋರಿಯೋಗ್ರಫಿ ಪದವಿಗಳಿಸಿದ್ದಾರೆ). ಇದರಿಂದ ಅವರಿಗೆ ಪ್ರಾದೇಶಿಕವಾಗಿ ಯಕ್ಷಗಾನದಲ್ಲಿದ್ದುಕೊಂಡೇ ಇನಿತರ ಸೋದರಕಲೆಗಳಾದ ಕಥಕ್, ಛಾವೂ ಮೊದಲಾದವುವಗಳ ಮೂಲ ನಿರ್ವಚನವನ್ನು ತೌಲನಿಕವಾಗಿ ಅಧ್ಯಯನ ಮಾಡಲು ಸಹಕಾರಿಯಾಯಿತು. ಪಾರಂಪರಿಕವಾಗಿ ಯಕ್ಷಗಾನದ  ಮೌಲ್ಯವನ್ನು ವ್ಯಕ್ತಿಸ್ಥ ಮತ್ತು ಕಾಲಸ್ಥವಾಗಿ ಗುರುತಿಸುತ್ತಾರೆ.  ಪ್ರಸಿದ್ಧ ವೇಷವೊಂದರ ಯಶಸ್ಸಿನ ಮಾನದಂಡಯಾವುದೆಂದರೆ  ಆ ಪಾತ್ರವನ್ನು ಮಾಡಿದ ಪ್ರಸಿದ್ಧ ವ್ಯಕ್ತಿಗಳ ವೇಷದೊಂದಿಗೆ ಹೋಲಿಕೆ ಮಾಡುವುದು. ಕಲೆ ಕಾಲದೊಂದಿಗೆ ಪ್ರಯಾಣಮಾಡುವಾಗ ವರ್ತಮಾನದ ಮೌಲ್ಯವನ್ನು ಹದವಾಗಿ ಮಿಳಿತಮಾಡಿ ಕೊಡಬೇಕಾಗುತ್ತದೆ. ಕೆರಮನೆ ಶಂಭು ಹೆಗಡೆಯವರು ತಾವು ರೂಢಿಗೆ ತಂದ ಹಲ ಪ್ರಸಂಗಗಳಲ್ಲಿ ಈ ಪ್ರಯೋಗವನ್ನು ಮಾಡಿರುತ್ತಾರೆ. ಉದಾಹರಣೆಗೆ ಕಾರ್ತ್ಯವೀರ್ಯಾರ್ಜುನ ಕಾಳಗದಲ್ಲಿ ಕಾರ್ತ್ಯವೀರ್ಯನ ಪ್ರವೇಶಕ್ಕೆ ಬೇಕಾದ ಪದ್ಯವನ್ನು ಹೊಸ್ತೋಟರಿಂದ ಬರೆಸಿರುವದು, ಎಂ. ಎ. ಹೆಗಡೆಯವರ ಸೀತಾವಿಯೋಗವನ್ನು ಆಯ್ದುಕೊಂಡಿದ್ದು, ಶೋಕ ಪದ್ಯಗಳಿಗೆ ಅಭಿನಯದ ಕುಣಿತ, ಕೀಚಕನ ಪ್ರವೇಶಕ್ಕೆ ತೆರೆಮರೆ ಕುಣಿತದಲ್ಲಿ ಖಡ್ಗವನ್ನು ತೋರಿಸುತ್ತಾ ಪ್ರವೇಶಿಸುವುದು ಮುಂತಾದವುಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಇಂಥ ಸಾಧನೆಯನ್ನು ಮಾಡಿದ ಹಿರಿಯರ ನೆರಳಿನಲ್ಲಿ ಸ್ವಂತಿಕೆಯನ್ನು ಎತ್ತಿತೋರಿಸುವ ಸವಾಲು ಶಿವಾನಂದ ಹೆಗೆಡೆಯವರಿಗೆ ಎದುರಾಗಿತ್ತು. ಅದರಲ್ಲಿಯೂ ತನ್ನ ತನವನ್ನು ಇನ್ನೂ ಸ್ಥಾಪಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ತಂದೆ ಶಂಭು ಹೆಗಡೆಯವರು, ದೊಡ್ಡಪ್ಪ ಮಹಾಬಲ ಹೆಗಡೆಯವರು ಕಾಲವಾದಾಗ ಕೆರೆಮನೆ ಮನೆತನದ ಘರಾಣೆಯನ್ನು ಎತ್ತಿಹಿಡಿಯಬೇಕಾದ ಸವಾಲು ಬೆಟ್ಟದಷ್ಟಿತ್ತು. ಚಪ್ಪಾಳೆಯೇ ಜನಪ್ರಿಯತೆಯ ಮಾನದಂಡ ಹಾಗೂ ಕಲಾಮೌಲ್ಯವೆನ್ನುವ ಕಲಾವಿದರ ನಡುವೆ ಎಪ್ಪತ್ತು ವರುಷ ಕಂಡ ಮೇಳವನ್ನು ನಡೆಸಿಕೊಂಡು ಹೋಗುವುದು ಸುಲಭದ ಮಾತೇನೂ ಅಲ್ಲ. ಶಂಭು ಹೆಗಡೆಯವರ ಜೊತೆಗೆ ಅವರ ಅಂತರಂಗವನ್ನು ಬಲ್ಲ ನೆಬ್ಬೂರು ನಾರಾಯಣ ಹೆಗಡೆಯವರು ಭಾಗವತರಾಗಿದ್ದರು. ಎದುರು ವೇಷದಲ್ಲಿ ಮಹಾಬಲ ಹೆಗಡೆ, ಗೋಡೆ ನಾರಾಯಣ ಹೆಗಡೆ ಮೊದಲಾದವರಿದ್ದರು. ೧೯೩೪ರಲ್ಲಿ ಮಂಡಳಿಯನ್ನು  ಇವರ ಅಜ್ಜ ಕೆರಮನೆ ಶಿವರಾಮ ಹೆಗಡೆ ಸ್ಥಾಪಿಸಿದನಂದಿನಿಂದ ಇದುತನಕ ಈ ಮಂಡಳಿ ಸಾಗಿಬಂದ ಹಾದಿಯಲ್ಲಿ ಸವಾಲುಗಳನೇಕವಿದ್ದವು. ೧೯೩೪ನೆ ಇಸವಿಯೆನ್ನುವುದು ಕಾಲದ ಲೆಕ್ಕಾಚಾರಕ್ಕಿರಬಹುದು. ಯಾವುದೇ ಮಂಡಳಿ ಸ್ಥಾಪನೆಯಾದುದರ ಹಿನ್ನೆಲೆ ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದಿನ ಯೋಜನೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಮಂಡಳಿಯ ರಂಗಚಿಂತನೆಗೆ ನೂರುವರ್ಷ ದಾಟಿದೆ. ಹೀಗೆ ಭವ್ಯ ಪರಂಪರೆಯನ್ನು ಹೊಂದಿದ ಮಂಡಳಿಯನ್ನು ಸುವರ್ಣಯುಗಕ್ಕೆ ಕೊಂಡೊಯ್ದವರು ಕೆರಮನೆ ಶಂಭು ಹೆಗಡೆಯವರು. ಅವರ ನಿರ್ಯಾಣದ ನಂತರ ಶಿವಾನಂದ ಹೆಗಡೆ ಮಂಡಳಿಯ ಜವಾಬುದಾರಿಯನ್ನು ವಹಿಸಿಕೊಂಡಾಗ ಅವರ ಮುಂದೆ ಯಕ್ಷಗಾನದ ಸದಾತನವನ್ನು ಕಾಯ್ದಿಟ್ಟುಕೊಳ್ಳುವ ಮಹತ್ವದ ಜವಾಬ್ದಾರಿಯಿತ್ತು. ಗುರಿ ಸ್ಪಷ್ಟ, ದಾರಿ ಅಸ್ಪಷ್ಟ. ಅವರ ಜೊತೆ ಇದ್ದಿದ್ದು ತಾಯಿ ಗೌರಿ ಶಂಭು ಹೆಗಡೆಯವರಿಗೆ ಮಗನ ಮೇಲೀನ ಅಪಾರ ನಂಬಿಕೆ ಮತ್ತು ಮಡದಿ ರಾಜೇಶ್ವರಿಯ ಬೆಂಬಲ ಇವೆರಡನ್ನು ಬಿಟ್ಟರೆ ಮತ್ತೆಲ್ಲವೂ ಬಟಾಬಯಲು.

ಸನಾತನ ಅದ್ಯತನ ಸದಾತನಗಳ ಸಮನ್ವಯ:

“ಪ್ರದರ್ಶನ ಕಲೆ” ಅಥವಾ Performing Art ಎನ್ನುವುದು ಕೇವಲ ವೇದಿಕೆಯ ಮೇಲೆ ಪ್ರದರ್ಶಿಸಲ್ಪಡುವ ಮನರಂಜನಾ ಕಾರ್ಯಕ್ರಮವಲ್ಲ. ಅದು ದೇಹ, ಧ್ವನಿ, ಸಂಗೀತ, ಚಲನೆ, ಭಾವ, ಲಯಗಳನ್ನು ರಂಗಸಂಯೋಜನೆಯ ಮೂಲಕ ಅಭಿವ್ಯಕ್ತಗೊಳಿಸುವ ಜೀವಂತ ಕಲಾಪ್ರಕ್ರಿಯೆ. ಚಿತ್ರಕಲೆ ಅಥವಾ ಶಿಲ್ಪಕಲೆಗಳಂತೆ ಸ್ಥಿರವಾಗಿರುವ ಕಲೆಗಳಿಗೆ ವಿರುದ್ಧವಾಗಿ, ಪ್ರದರ್ಶನಕಲೆಗಳು “ಕ್ಷಣದಲ್ಲಿ ಹುಟ್ಟಿ, ಕ್ಷಣದಲ್ಲೇ ಅನುಭವವಾಗುವಂತವುಗಳು”. ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಕಥಕ್ಕಳಿ, ಕಥಕ್, ಕೂಡಿಯಾಟ್ಟಂ, ಛಾವು, ಮೋಹಿನಿಯಾಟ್ಟಂ, ತಾಳಮದ್ದಳೆ  ಇವೆಲ್ಲವೂ ಪ್ರದರ್ಶನಕಲೆಗಳ ವಿಭಿನ್ನ ರೂಪಗಳಾಗಿರಬಹುದು. ಆದರೆ ಇವುಗಳ ನಿರ್ವಚನ ಮಾತ್ರ  ವಿವಿಧ ಭಾವಗಳನ್ನು ಸಮೂಹಾನುಭೂತಿಯಾಗಿ ಪರಿವರ್ತಿಸುವತ್ತವೆ. ಕಲೆ ಪ್ರೇಕ್ಷಕನ ಮನಸ್ಸಿನಲ್ಲಿ ಒಂದು “ರಸಾನುಭವ”ವನ್ನು ಹುಟ್ಟಿಸುವ ಸಾಧನ, ಕೇವಲ ಮನರಂಜನೆಯಲ್ಲ. ಶಿವಾನಂದ ಹೆಗಡೆಯವರು ಈ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅಭ್ಯಸಿಸಿದರು.  ತಂದೆಯವರು ತೀರಿಹೋದ ವರ್ಷವೇ  ತಾನು ಗ್ರಹಿಸಿದ ಈ ಸಂಗತಿಗಳನ್ನು ಅನುಷ್ಟಾನಕ್ಕೆ ತರುವ ಉದ್ಧೇಶದಿಂದ ಮೊತ್ತಮೊದಲು ಪ್ರಾರಂಭಿಸಿದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ” ಇವರೊಳಗೆ ಹುದುಗಿದ್ದ ಸಂಘಟನಾ  ಪ್ರತಿಭೆಯನ್ನು ಹೊರತರುವಲ್ಲಿ ಸಹಕಾರಿಯಾಯಿತು. ಗುಣವಂತೆಯಂತಹ ಹಳ್ಳಿಯಲ್ಲಿ ಸಾವಿರಗಟ್ಟಲೆ ಪ್ರೇಕ್ಷಕರು ಚಳಿಯಲ್ಲಿ ಕುಳಿತು ಆಸ್ಸಾಮಿನಿಂದ ಹಿಡಿದು ಕೇರಳದವರೆಗಿನ ಪ್ರದರ್ಶನ ಕಲೆಗಳ ವೈವಿಧ್ಯವನ್ನು ಸವಿಯುವುದು, ಜೊತೆಗೆ  ಸಹಜವಾಗಿ ಯಕ್ಷಗಾನವನ್ನು ಅದರೊಟ್ಟಿಗೆ ಹೋಲಿಸಿ ಕಲೆಯ ಮೌಲ್ಯವನ್ನು ಅರಿಯುವ ಶಿಕ್ಷಣವೂ ದೊರೆಯಿತು. ಇದರಿಂದ ಕೆರೆಮನೆ ಮನೆತನ ರೂಪಿಸಿದ್ದ, ನಂತರ ಶಾಸ್ತ್ರೀಯ ಸಂಗೀತದೆಡೆ ತಿರುಗಿದ ಪ್ರೇಕ್ಷಕರನ್ನು ಹಾಗೂ ಹೊಸ ಪ್ರೇಕ್ಷರನ್ನು ಯಕ್ಷಗಾನ ರಂಗದೆಡೆ ಪುನಃ ಸೆಳೆಯಲು ಸಹಕಾರಿಯಾಯಿತು. ಶಂಭು ಹೆಗಡೆ ಭಾರತ ಕಂಡ ಅತ್ಯುತ್ತಮ ರಂಗ ತಂತ್ರಜ್ಞರೂ ಆಗಿದ್ದರು. ಅದಕ್ಕೆ ಸಂದ ಗೌರವವೂ ಈ ನಾಟ್ಯೋತ್ಸವವಾಗಿದೆ.

ಕಲಾಸಂಸ್ಕೃತಿಯ ಮಹತ್ವವೆನ್ನುವುದು ಕೇವಲ ಭೂತಕಾಲದ ನೆನಪುಗಳ ಸಂಗ್ರಹವಲ್ಲ; ಅದು ಹರಿಯುವ ನದಿ. ಮೂಲವನ್ನು ಕಳೆದುಕೊಳ್ಳದೆ, ಕಾಲಕ್ಕೆ ತಕ್ಕಂತೆ ತನ್ನ ದಾರಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ.  ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ “ಸನಾತನ” ಎಂಬ ಪದಕ್ಕೆ “ಹಳೆಯದು” ಎಂಬ ಅರ್ಥವಲ್ಲ; “ನಿತ್ಯ ನವೀನ” ಎಂದಾಗಿದೆ. ಇದೇ ಅರ್ಥದಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ಯಕ್ಷಗಾನ ಸಾಧನೆಯನ್ನು ನೋಡಬೇಕು. ಅವರು ಕೇವಲ ಒಂದು ಪಾರಂಪರಿಕ ಮೇಳದ ನಿರ್ದೇಶಕರಲ್ಲ; ಅವರು ಸನಾತನ ಮತ್ತು ಅದ್ಯತನ ಎಂಬ ಎರಡು ತುದಿಗಳ ನಡುವೆ ಯಕ್ಷಗಾನವನ್ನು “ಸದಾತನ”ವಾಗಿ ಉಳಿಸಿರುವ ಅಪರೂಪದ ಕಲಾಸಾಧಕ. ಇಂದು ಜನಪದ ಮತ್ತು ಪಾರಂಪರಿಕ ಕಲೆಗಳ ಮುಂದೆ ಎರಡು ಅಪಾಯಗಳಿವೆ. ಒಂದು ಕಡೆ “ಆಧುನಿಕತೆ” ಎಂಬ ಹೆಸರಿನಲ್ಲಿ ಕಲೆಯ ಮೂಲಸ್ವರೂಪವನ್ನೇ ಬದಲಾಯಿಸುವ ಪ್ರಯತ್ನ. ಇನ್ನೊಂದು ಕಡೆ “ಪರಂಪರೆ” ಎಂಬ ಹೆಸರಿನಲ್ಲಿ ಕಲೆಯನ್ನು ಜೀವಹೀನ ಆಚರಣೆಯನ್ನಾಗಿ ಮಾಡುವ ಮನೋಭಾವ. ಯಕ್ಷಗಾನ ಈ ಎರಡೂ ಹಾದಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು.  ಶಿವಾನಂದ ಹೆಗಡೆ ಈ ಎರಡರ ಮಧ್ಯೆ ಅತ್ಯಂತ ಸೂಕ್ಷ್ಮವಾದ ಸಮತೋಲನ ಸಾಧಿಸಿದ್ದಾರೆ. ಕೆರೆಮನೆ ಮನೆತನದ ಯಕ್ಷಗಾನ ಪರಂಪರೆ ಕೇವಲ ಒಂದು ಮೇಳದ ಇತಿಹಾಸವಲ್ಲ; ಅದು ಬಡಗುತಿಟ್ಟಿನ ಯಕ್ಷಗಾನದ ರೂಪಶುದ್ಧಿಯ ಪರಂಪರೆ. ಶಿವಾನಂದ ಹೆಗಡೆಯವರು ಈ ಪರಂಪರೆಯನ್ನು ಕೇವಲ ಅನುಕರಿಸಿಲ್ಲ; ಅದರ ಅಂತಃಸತ್ವವನ್ನು ಅರಿತು ಮುಂದುವರಿಸಿದ್ದಾರೆ. ಈ ಹಿನೆಲೆಯಲ್ಲಿ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ, ಶಂಭು ಹೆಗಡೆಯವರ ಸಹಿತವಾಗಿ ಉತ್ತರ ಕನ್ನಡದ ಎಲ್ಲಾ ಹಿರಿಯ ಕಲಾವಿದರ ಹತ್ತಿರ ಚರ್ಚಿಸಿ ಸಮನ್ವಯಗೊಳಿಸಿ ಪ್ರದರ್ಶಿಸುತ್ತಿದ್ದಾರೆ ಎನ್ನಬಹುದು.

ಸಂಪ್ರದಾಯ ಶುದ್ಧತೆ:

ಇವರ ಪ್ರದರ್ಶನಗಳಲ್ಲಿ ಸಂಪ್ರದಾಯ ಶುದ್ಧತೆ, ವೇಷಭೂಷಣ, ಮುಖವರ್ಣಿಕೆ,  ಭಾಗವತಿಕೆ, ರಾಗಪ್ರಯೋಗ, ಗತಿಭೇದ, ಸಂಭಾಷಣೆಯ ನಡಿಗೆ, ಎಲ್ಲಿಯೂ ಯಕ್ಷಗಾನದ ಮೂಲಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ. ಅವರು ಯಕ್ಷಗಾನವನ್ನು “ಕೇವಲ ಮನರಂಜನೆ”ಯನ್ನಾಗಿಸಿಲ್ಲ. ಅದರ ರಸಾನುಭವವನ್ನು ಉಳಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಅವರ ಪ್ರದರ್ಶನ ನೋಡಿದಾಗ ಪ್ರೇಕ್ಷಕನಿಗೆ “ಆಟವನ್ನು ನೋಡಿದ್ದೇನೆ” ಎಂಬ ಭಾವಕ್ಕಿಂತ “ಒಂದು ಪರಂಪರೆಯೊಳಗೆ ಪ್ರವೇಶಿಸಿದ್ದೇನೆ” ಎಂಬ ಅನುಭವ ಉಂಟಾಗುತ್ತದೆ; ಪರಂಪರೆಯೊಳಗೆ ಪ್ರಯೋಗವನ್ನು ಅವರ ತಂದೆ ಶಂಭು ಹೆಗಡೆಯವರಂತೆ ಮುಂದುವರಿಸಿಕೊಂಡು ಹೋಗಿದ್ದಾರೆ. ಇವರ ಮೇಳದ ಹಿಮ್ಮೇಳದಲ್ಲಿ ತನ್ನ  ಅಭಿನಯಕ್ಕೆ ತಕ್ಕಂತ್ರೆ ಸ್ಪಂದಿಸುವ ಅನಂತ ಹೆಗಡೆಯವರಂತಹ ಭಾಗವತರನ್ನು ಜೊತೆಗೂಡಿಸಿಕೊಂಡರು.

ಆಹಾರ್ಯದಲ್ಲಿನ  ಸೂಚಕತೆ:

ಯಕ್ಷಗಾನದಲ್ಲಿ  “ಸತ್ಯ ಹರಿಶ್ಚಂದ್ರ” ಪ್ರಸಂಗದಲ್ಲಿ ರಾಜನಾದವ ಸ್ಮಶಾನಕಾಯುವ ಸಂದರ್ಭದಲ್ಲಿ ನಾಟಕೀಯವಾಗಿ ಪಾತ್ರವನ್ನು ಕಂಬಳಿ ಹೊದ್ದುಕೊಂಡು ಬರುವುದು ರೂಢಿಗೆ ಬಂದಿದೆ. ಇಲ್ಲಿ ವೇಷ ಸಂಪೂರ್ಣ ರೂಪಾಂತರದ ಪ್ರಕ್ರಿಯಾಗುತ್ತದೆ. ಶಿವಾನಂದ ಹರಿಶ್ಚಂದ್ರ ಸ್ಮಶಾನಕಾಯುವ ಸನ್ನಿವೇಷದಲ್ಲಿ ಕಿರೀಟ ಮತ್ತು ಹೆಗಲಿಗೆ ಕಪ್ಪುಬಟ್ಟೆಯನ್ನು ಮರೆಮಾಚಿ ಅಭಿನಯಿಸುತ್ತಾರೆ. ಇದೇ ರೀತಿ ನಳಚರಿತ್ರೆಯಲ್ಲಿ ಬಾಹುಕನಾಗಿರುವಾಗಲೂ ಇದೇ ರೀತಿ ರೂಪಾಂತರವನ್ನು ಮಾಡುತ್ತಾರೆ. ಕಲೆಯ ದೃಷ್ಟಿಯಿಂದ ಬಹು ಸೂಕ್ಷ್ಮವಾದ ಅಭಿನಯ ಇದು. ಭಾರತೀಯ ಪ್ರದರ್ಶನಕಲೆಗಳ ಮಹತ್ವವೇನೆಂದರೆ ಅವು “ನಿಜವನ್ನು ನಕಲು” ಮಾಡುವುದಿಲ್ಲ; “ಸತ್ಯವನ್ನು ಸೂಚಿಸುವದಾಗಿದೆ”. ಇದನ್ನು “ಲೋಕಾನುವೃತ್ತಾನುಕರಣ” ಎನ್ನುತ್ತಾರೆ.  ಆಹಾರ್ಯವೆನ್ನುವುದು ಬಾಹ್ಯ ಜೀವನದ ನಕಲಿ ಪ್ರತಿರೂಪವಲ್ಲ; ಜೀವನದ ರಸಾತ್ಮಕಘಟ್ಟಗಳ  ಸಂಕೇತ. ಕಲೆಯ ಗುರಿ ವಾಸ್ತವದ ಛಾಯಾಚಿತ್ರವಲ್ಲ, ಭಾವಸತ್ಯದ ಅನುಭವ. ಪಾಶ್ಚಾತ್ಯ ರಂಗಭೂಮಿಯಲ್ಲಿ ಪಾತ್ರ ಬದಲಾದರೆ ವೇಷ ಸಂಪೂರ್ಣ ಬದಲಾಗುತ್ತದೆ. ಆದರೆ ಭಾರತೀಯ ರಂಗಭೂಮಿಯಲ್ಲಿ “ಸೂಚಕತೆ” ಮುಖ್ಯ. ಒಂದು ಅಂಗವಿಕ್ಷೇಪ. 

ಯಕ್ಷಗಾನ, ಕಥಕ್ಕಳಿ, ಕೂಡಿಯಾಟ್ಟಂ ಮೊದಲಾದ ಭಾರತೀಯ ರಂಗಪ್ರಕಾರಗಳಲ್ಲಿ “ರೂಪಾಂತರ”ಕ್ಕಿಂತ “ವೇಷಾಂತರ” ಮುಖ್ಯವಾಗುತ್ತದೆ. ಹರಿಶ್ಚಂದ್ರನು ಸ್ಮಶಾನ ಕಾಯುವಾಗ ಅಥವಾ ಬಾಹುಕನಾಗಿ ಬದಲಾಗುವಾಗ, ಸಂಪೂರ್ಣ ವೇಷ ಬದಲಿಸುವುದಕ್ಕಿಂತ, ರಾಜವೇಷದ ಮೇಲೆಯೇ ಕಪ್ಪುಬಟ್ಟೆಯನ್ನು ಹೊದೆದು ಅಭಿನಯಿಸುವುದು ಸೂಕ್ಷ್ಮವಾದ ರಂಗತತ್ತ್ವದ ಅಭಿವ್ಯಕ್ತಿ. ಇಲ್ಲಿ ಪಾತ್ರದ “ಸ್ವರೂಪ” ಬದಲಾಗುವುದಿಲ್ಲ; ಅದರ “ಅವಸ್ಥೆ” ಬದಲಾಗುತ್ತದೆ. ಹರಿಶ್ಚಂದ್ರನು ಬಾಹುಕನಾದರೂ ಅವನೊಳಗಿನ ರಾಜಧರ್ಮ ನಾಶವಾಗಿಲ್ಲ. ರಾಮನು ಅರಣ್ಯವಾಸಿಯಾದರೂ ಅವನ ದೈವಿಕತೆ ಕ್ಷೀಣವಾಗಿಲ್ಲ. ಆದ್ದರಿಂದಲೇ ಕಥಕ್ಕಳಿಯಲ್ಲಿ ವನವಾಸದ ರಾಮನು ಕಿರೀಟವನ್ನೇ ಧರಿಸುತ್ತಾನೆ. ಯಕ್ಷಗಾನದಲ್ಲಿಯೂ ರಾಮ, ಕೃಷ್ಣ, ಧರ್ಮರಾಜ ಮೊದಲಾದ ಪಾತ್ರಗಳು ಸಂಪೂರ್ಣ ವೇಷತ್ಯಾಗ ಮಾಡುವುದಿಲ್ಲ. ಅಭಿನವಗುಪ್ತ ಇದನ್ನೇ “ಭಾವಾನುಸಂಧಾನ” ಎಂದಿದ್ದಾನೆ. ಶಿವಾನಂದ ಹೆಗಡೆ ಅವರು ರಾಜಪೂಷಾಕಿನ ಕಿರೀಟವನ್ನು ಸಂಪೂರ್ಣ ತೆಗೆದುಹಾಕದೆ ಕಪ್ಪುಬಟ್ಟೆಯಿಂದ ಮರೆಮಾಚಿ ಅಭಿನಯಿಸುವುದು, ಕೇವಲ ಶೈಲಿಯ ಆಯ್ಕೆ ಅಲ್ಲ; ಅದು ಭಾರತೀಯ ರಂಗದರ್ಶನದ ಆಳವಾದ ಅರಿವು. ಇಲ್ಲಿ “ನಾನು ಈಗ ಬೇರೆ ವ್ಯಕ್ತಿ” ಎನ್ನುವುದಕ್ಕಿಂತ, “ನನ್ನೊಳಗಿನ ಸ್ಥಿತಿ ಬದಲಾಗಿದೆ” ಎನ್ನುವುದೇ ಮುಖ್ಯ. ಅದಕ್ಕಾಗಿಯೇ ಕೆರೆಮನೆ ಪರಂಪರೆಯಲ್ಲಿ “ಅತಿಯಾದ ವಾಸ್ತವಿಕತೆ”ಗೆ ಅವಕಾಶವಿಲ್ಲ. ಅಭಿನಯವೆನ್ನುವುದು ನಿಜಜೀವನದ ಪುನರುತ್ಪತ್ತಿಯಲ್ಲ; ಬದುಕಿನ ವಿವಿಧ ಮುಖಗಳ ರಸಮಯ ರೂಪಕ. (ಶ್ರೀರಂಗರು ಈ ವಿಷಯವನ್ನು ವಿವರವಾಗಿ ವಿವರಿಸಿದ್ದಾರೆ)  ಆ ರೂಪಕದ ಶುದ್ಧತೆಯನ್ನು ಕೆರೆಮನೆ ಶಿವಾನಂದ ಹೆಗಡೆ ಅವರು ಕಾಪಾಡಿಕೊಂಡು ತಪಸ್ಸಿನಂತೆ ಕಾಪಾಡಿಕೊಂಡು ಬಂದಿದ್ದಾರೆ. 

ಖಂಡಗೊಳಿಸದ ಕಥಾ ಪ್ರಸಂಗ:

ಸಾಮಾನ್ಯವಾಗಿ ಯಕ್ಷಗಾನ ಪ್ರಸಂಗಗಳ ವಿಶೇಷತೆ ಏನೆಂದರೆ ಕಥೆಯನ್ನು ಖಂಡವಾಗಿ ಅಭಿನಯಿಸುವುದು. ನಾಯಕ ತನ್ನ ಅನುಭವದ ನೆಲೆಯಲ್ಲಿ ವಸ್ತುವಿನ ನಿರೂಪಣೆ ಮಾಡಿದರೆ ನಾಯಕಿಯೋ, ಪ್ರತಿನಾಯಕಿಯೋ ತಾನು ತಿಳಿದುಕೊಂಡಂತೆ ಕಥೆಯನ್ನು ಬೆಳೆಸುತ್ತಾರೆ. ಇದು ಯಕ್ಷಗಾನದ ದೋಷವೂ ಆಗಿದೆ. ಇದಕ್ಕೆ ಕಾರಣ ಇಲ್ಲಿನ ಸಂಭಾಷಣೆ ಕಂಠಸ್ಥವಲ್ಲ. ಸ್ವಯಂಸ್ಪೂರ್ತಿಯಿಂದ  ಬರುವುದು. ಶಿವಾನಂದ ಈ ವಿಷಯದಲ್ಲಿ ಮೊದಲ ದಿನದಿಂದಲೂ ಮಂಡಳಿಯ ಪ್ರಸಂಗವನ್ನು ನಿರ್ದೇಶಿತ ವ್ಯವಸ್ಥೆಗೆ  ಅಳವಡಿಸಿದರು. ಪರಿಣಾಮವಾಗಿ ಕಥಾಭಾಗವನ್ನು ನೋಡುವಾಗ ಅಖಂಡವಾಗಿ ಅನುಭವಿಸುತ್ತೇವೆ. ಇದರಿಂದ ಸಹಪಾತ್ರಗಳೂ ಸಹ ನಾಟಕ ರಂಗಭೂಮಿಯಂತೆ ಪರಿಣಾಮವನ್ನು ಬೀರಲು ಕಾರಣವಾಯಿತು. “ಸೀತಾಪಹರಣ, ವಾಲಿವಧೆ” ಮೊದಲಾದ ಪ್ರಸಂಗಗಳನ್ನು ಶಿವಾನಂದ  ರಸಕಾವ್ಯವಾಗಿ ನಿರ್ದೇಶಿಸಿ ಅಭಿನಯಿಸುತ್ತಾರೆ. ಇದುವೇ ಅವರ ಯಕ್ಷಗಾನದಲ್ಲಿನ “ಅದ್ಯತನ”. ಅವರು ಪರಂಪರೆಯನ್ನು ಮುರಿಯುವುದಿಲ್ಲ. ಬದಲಾಗಿ, ಅದರೊಳಗಿನ ಶಕ್ತಿಯನ್ನು ಇನ್ನಷ್ಟು ಬೆಳಗಿಸುತ್ತಾರೆ. “ಸದಾತನ”ದ ಅರ್ಥ.

ಹೊಸತಲೆಮಾರಿಗೆ ತಲುಪಿಸುವ ಯತ್ನ

ಇದೇ ವೇಳೆ ಅವರು ಕಾಲದ ಬದಲಾವಣೆಯನ್ನೂ ಅರ್ಥಮಾಡಿಕೊಂಡಿದ್ದಾರೆ. ಇಂದಿನ ಪ್ರೇಕ್ಷಕನ ಮನಸ್ಥಿತಿ, ವೇದಿಕೆಯ ತಾಂತ್ರಿಕ ಸಾಧ್ಯತೆಗಳು, ದೃಶ್ಯಪ್ರಜ್ಞೆ, ಸಮಯಪ್ರಜ್ಞೆ ಇವೆಲ್ಲವನ್ನೂ ಅವರು ಗಮನಿಸಿದ್ದಾರೆ. ಅವರ ಕೊರಿಯೋಗ್ರಫಿ ಹಿನ್ನೆಲೆ, ಕಥಕ್ ಮತ್ತು ಛಾವು ಮೊದಲಾದ ಕಲಾಪ್ರಕಾರಗಳ ಅಧ್ಯಯನ, ಆಧುನಿಕ ರಂಗಭೂಮಿಯ ಅನುಭವ ಇವೆಲ್ಲವೂ ಅವರ ಯಕ್ಷಗಾನಕ್ಕೆ ಹೊಸ ಸಂವೇದನೆಯನ್ನು ನೀಡಿವೆ. ಈ ಹೊಸತನ ಎಲ್ಲಿಯೂ “ಪ್ರದರ್ಶನಕ್ಕಾಗಿ ಪ್ರದರ್ಶನ” ಆಗುವುದಿಲ್ಲ. ಅದು ಯಕ್ಷಗಾನದ ಒಳಸೌಂದರ್ಯವನ್ನು ಮತ್ತಷ್ಟು ಸ್ಪಷ್ಟಗೊಳಿಸುವ ಸಾಧನವಾಗುತ್ತದೆ. ಅವರ “ಆಟವೇ ಪಾಠ” ಯೋಜನೆಯನ್ನು ಗಮನಿಸಿದರೆ, ಯಕ್ಷಗಾನವನ್ನು ಮಕ್ಕಳಿಗೆ ತಲುಪಿಸುವ ಹೊಸ ವಿಧಾನ ಅದು. ಕಲೆಯ ಮೂಲಕ ಬದುಕಿನ ಮೌಲ್ಯಗಳನ್ನು ಕಲಿಸುವುದು. “ಯಕ್ಷದೀಕ್ಷಾ” ಯೋಜನೆಯ ಮೂಲಕ ಶಾಲಾ ಮಕ್ಕಳಿಗೆ ಯಕ್ಷಗಾನ ಕಲಿಸುವುದು ಕೂಡ ಇದೇ ದೃಷ್ಟಿಯ ಭಾಗ. ಇಲ್ಲಿ ಅವರು ಯಕ್ಷಗಾನವನ್ನು ಉಳಿಸುತ್ತಿಲ್ಲ; ಮುಂದಿನ ತಲೆಮಾರಿಗೆ ಅದನ್ನು ಬಿತ್ತುತ್ತಿದ್ದಾರೆ. ಇದೇ ರೀತಿ “ಭಾಸಂ” ಯೋಜನೆಯ ಮೂಲಕ ಭಾಗವತಿಕೆಯ ಅಧ್ಯಯನ ನಡೆಸಿರುವುದು ಮಹತ್ವದ ಕೆಲಸ. ಯಕ್ಷಗಾನದ ಹೃದಯ ಭಾಗವತಿಕೆ. ಆ ಭಾಗವತಿಕೆಯ ಶುದ್ಧತೆಯನ್ನು ಕಾಪಾಡದೇ ಯಕ್ಷಗಾನದ ಆತ್ಮ ಉಳಿಯುವುದಿಲ್ಲ ಎಂಬ ಅರಿವು ಅವರಿಗೆ ಇದೆ. ಆದ್ದರಿಂದ ಅವರು ಕೇವಲ ರಂಗದ ಮೇಲಿನ ಹೊಳಪಿನ ಕಡೆ ನೋಡದೆ, ಕಲೆಯ ಆಂತರಿಕ ಶಕ್ತಿಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ಓರ್ವ ರಂಗಗುರುವಾಗಿ ಅವರ ಸಾಧನೆ ’ಭಾಸಂ’ ನಲ್ಲಿ ಮತ್ತಷ್ಟು ಮಹತ್ವ ಪಡೆಯುತ್ತದೆ. ಅವರು ಕೇವಲ ವೇದಿಕೆಯ ಮೇಲೆ ಪಾತ್ರಧಾರಿಯಾಗಿರುವ ಕಲಾವಿದರಲ್ಲ; ಪರಂಪರೆಯ ಒಳಾರ್ಥವನ್ನು ಮುಂದಿನ ತಲೆಮಾರಿಗೆ ಬೋಧಿಸುವ ರಂಗಗುರು. ಅವರ ತರಬೇತಿಯಲ್ಲಿ ಯಕ್ಷಗಾನವು ಕೇವಲ ಹೆಜ್ಜೆಗಳ ಕಲಿಕೆಯಲ್ಲ; ಅದು ಶಿಸ್ತು, ಸಂಸ್ಕಾರ, ದೇಹಭಾಷೆ, ತಾಳಪ್ರಜ್ಞೆ, ಭಾಷಾ ಸಂವೇದನೆ ಮತ್ತು ಆತ್ಮವಿಶ್ವಾಸದ ಶಿಕ್ಷಣಗಳಾಗಿ ಕಾಣಿಸುತ್ತದೆ.

ಶಿವಾನಂದ ಹೆಗಡೆಯವರ ಸಾಧನೆ ಯಕ್ಷಗಾನದ “ಉಳಿವು” ಮಾತ್ರವಲ್ಲ; ಅದರ “ಜೀವಂತಿಕೆ”ಯ ಉಳಿಸುವ ಪ್ರಯತ್ನವಾಗಿದೆ. ಅವರು ಯಕ್ಷಗಾನವನ್ನು ಕೇವಲ ಭೂತಕಾಲದ ಸ್ಮಾರಕವನ್ನಾಗಿಸಿಲ್ಲ; ವರ್ತಮಾನದಲ್ಲಿ ಉಸಿರಾಡುವ ಕಲೆಯನ್ನಾಗಿಸಿದ್ದಾರೆ. ಇದೇ ಕಾರಣಕ್ಕೆ ಅವರ ಯಕ್ಷಗಾನದಲ್ಲಿ ಸನಾತನದ ಬೇರುಗಳೂ ಇವೆ, ಅದ್ಯತನದ ಚೈತನ್ಯವೂ ಇದೆ, ಮತ್ತು ಸದಾತನದ ನಿರಂತರ ಜೀವಶಕ್ತಿಯೂ ಇದೆ.  ಕೆರೆಮನೆ ಪರಂಪರೆಯ ಈ ಸಾಧನೆಯೇ ಇಂದು ಯಕ್ಷಗಾನವನ್ನು ಕೇವಲ ಕರಾವಳಿಯ ಕಲೆಯಾಗಿ ಉಳಿಸದೆ, ಭಾರತೀಯ ಸಾಂಸ್ಕೃತಿಕ ಚೇತನೆಯ ಜೀವಂತ ರೂಪವಾಗಿ ನಿಲ್ಲಿಸಿದೆ.

ದೇಸಿಸೊಗಡಿನಲ್ಲಿಯೇ ದೇಶದಾದ್ಯಂತ:

ತಮ್ಮ ಶ್ರೀಮಯ ಕಲಾಕೇಂದ್ರದ ಮೂಲಕ ಸ್ಪಿಕ್ ಮೆಕೆ ಮೊದಲಾದವರ ಸಹಯೋಗದಲ್ಲಿ ಯಕ್ಷಗಾನವನ್ನು ದೇಶದಾದ್ಯಂತ ಪಸರಿಸುವುದರಲ್ಲಿ ಇದೀಗ ಯಶಸ್ವಿಯೂ ಆಗಿದ್ದಾರೆ. ಅವರೆಲ್ಲರೂ ಇಲ್ಲಿಬಂದು ನೃತ್ಯದಲ್ಲಿ ಪಾಲ್ಗೊಳ್ಳುವಾಗ ಸಂಭಾಷಣೆ ಕನ್ನಡದಲ್ಲಿಯೇ ಇರುತ್ತದೆ ಹೊರತೂ ಬೇರೆ ಭಾಷೆಯಲ್ಲಿ ಅಲ್ಲ. ಕಲೆ ಭಾಷೆಗಳ ಗಡಿಯನ್ನು ದಾಟುತ್ತದೆ ಎನ್ನುವುದನ್ನು ಪ್ರಭಲವಾಗಿ ನಂಬಿ ಅದನ್ನು ಯಶಸ್ವಿಯಾಗಿಸಿದ್ದಾರೆ. ದೇಶದ ಸಮಗ್ರ ಪ್ರದರ್ಶನ ಕಲೆಗಳ ಓರ್ವ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿಯೂ ಅವರು ಕಾಣಿಸುತ್ತಾರೆ. ಇತ್ತೀಚೆಗಷ್ಟೇ ಅವರ ಸಾಧನೆಯನ್ನು ಗುರುತಿಸಿ “ಶ್ರೀ ವಿದ್ಯಾ ವೇದ ವಿಜ್ಞಾನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ, ಫ್ಲೋರಿಡಾ (ಅಮೇರಿಕಾ) ಹಾಗೂ ಶ್ರೀ ವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನಂ, ಬೆಂಗಳೂರು”  ಇವರು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇದು ಯಕ್ಷಗಾನ ಕಲೆಗೆ ಸಂದ ಗೌರವ. ಇದೀಗ ಈ ಎಲ್ಲಾ ಸಾಧನೆಯನ್ನು ಗುರುತಿಸಿ ಅವರಿಗೆ ಸಂದ ಕೇಂದ್ರ  ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಅರ್ಹವಾಗಿಯೇ ಅವರಿಗೆ ಸಂದ ಗೌರವ.

‍ಲೇಖಕರು Admin

30 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading