ಕರ್ನಾಟಕದ ಸಾಲಿಗ್ರಾಮಗಳು, ಅಲಗೂಡುಗಳು ಅಂಬೇಡ್ಕರ್ ಅವರನ್ನು ಕೈಬೀಸಿ ಕರೆಯುತ್ತಿವೆ..

ಕಿಂದರಜೋಗಿ ಬೇಕಾಗಿದ್ದಾನೆ! -ನಾ ದಿವಾಕರ ಮನುಷ್ಯ ದೇವಸ್ಥಾನದ ಸನಿಹ ಹೋಗುತ್ತಿದ್ದಂತೆಲ್ಲಾ ದೇವರಿಂದ ದೂರವಾಗುತ್ತಿರುತ್ತಾನೆ ಎಂದು ದಾರ್ಶನಿಕರೊಬ್ಬರು ಹೇಳಿದ್ದಾರೆ. ಇದು ಸಾರ್ವಕಾಲಿಕ ಸತ್ಯವೂ ಹೌದು ಸಾರ್ವತ್ರಿಕ ಸತ್ಯವೂ ಹೌದು. ಮಾನವ ಸಮಾಜ ಅಭ್ಯುದಯ ಹೊಂದುತ್ತಿರುವಂತೆಯೇ ತನ್ನ ಅಭ್ಯುದಯದ ಫಲಾಫಲಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಲೇ ಇರುತ್ತಾನೆ. ವ್ಯಕ್ತಿಗತ ನೆಲೆಗಟ್ಟಿನಲ್ಲಿ ವ್ಯಕ್ತವಾಗುವ ಈ ಪ್ರವೃತ್ತಿ ಸಾಮಾಜಿಕ ವಲಯದಲ್ಲಿ ಸಾಂಸ್ಥಿಕ ನೆಲೆಗಟ್ಟಿನಲ್ಲಿ ವ್ಯಕ್ತವಾಗುತ್ತದೆ. ಈ ಸ್ವಾರ್ಥಸಾಧನೆಯ ಮಾರ್ಗದಲ್ಲಿ ಸಾಮಾನ್ಯವಾಗಿ ತೊಡಕು ಎಂದೆನಿಸಬಹುದಾದ ಎಲ್ಲವನ್ನೂ ಮನುಷ್ಯ ನಿನರ್ಾಮ ಮಾಡುತ್ತಲೇ ಹೋಗುತ್ತಿರುತ್ತಾನೆ. ಅಥವಾ ತೊಡಕುಗಳನ್ನು ನಿವಾರಿಸುವ ಮಾರ್ಗಗಳನ್ನು ಅರಸುತ್ತಾ ಹೋಗುತ್ತಾನೆ. ಹಾಗೆಯೇ ತನ್ನ ಸ್ವಾರ್ಥ ಸಾಧನೆಗಾಗಿ ದೇವರನ್ನೂ ಸೇರಿದಂತೆ ಭ್ರಮಾತ್ಮಕ ಐಕಾನ್ಗಳನ್ನು, ಜೀವಂತ ಐಕಾನ್ಗಳನ್ನು ಬಳಸಿಕೊಳ್ಳುತ್ತಾ ಹೋಗುತ್ತಾನೆ. ಇಂತಹ ಐಕಾನ್ಗಳಲ್ಲಿ ಅಂಬೇಡ್ಕರ್ ಸಹ ಸೇರ್ಪಡೆಯಾಗುತ್ತಿರುವುದು ಸಮಕಾಲೀನ ಭಾರತದ ದುರಂತ. ಏಪ್ರಿಲ್ 14 ಭಾರತದ ಆಳ್ವಿಕರಿಗೆ ಆತ್ಮಾವಲೋಕನದ ದಿನ. ದೇಶದ ಶೋಷಿತ ಬಡ ಜನತೆ ಆಶಾಭಾವನೆಯನ್ನು ಮೂಡಿಸುವ ದಿನ. ಭಾರತದ ಸಂವಿಧಾನ ಕತರ್ೃ ಎಂದು ಕರೆಯಲ್ಪಡುವ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಹೃದಯಪೂರ್ವಕವಾಗಿ ನೆನೆದು ನಮಿಸುವ ನೈತಿಕತೆಯನ್ನು ಭಾರತೀಯರಾದ ನಾವು ಉಳಿಸಿಕೊಂಡಿದ್ದೇವೆಯೇ ಎಂದು ಯೋಚಿಸುವ ದಿನ. ಏನೆಲ್ಲಾ ಸಂಭವಿಸುತ್ತಿವೆ ಈ ದೇಶದಲ್ಲಿ. ದಲಿತ ಸಮುದಾಯಗಳ ರಕ್ಷಣೆಗಾಗಿ ಡಾ. ಅಂಬೇಡ್ಕರ್ ಸೂಚಿಸಿದ ಸಾಂವಿಧಾನಿಕ ನಿಯಮಗಳೆಲ್ಲಾ ಗಂಗೆ ಯಮುನೆಗಳಲ್ಲಿ ಹರಿದು ಹೋಗುತ್ತಿರುವ ಸಂದರ್ಭದಲ್ಲಿ, ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಜಾತಿ ವ್ಯವಸ್ಥೆಯ ಮೂಲ ಬೇರನ್ನೇ ಕಿತ್ತು ಹಾಕಿ ಒಂದು ಸೌಹಾರ್ದಯುತ ಸಮಾಜದ ನಿಮರ್ಾಣಕ್ಕಾಗಿ ಹಾತೊರೆದ ನಾಯಕನ ಜನ್ಮದಿನದಂದು ಆತನ ಪ್ರತಿಮೆಗಳ ಮೇಲೆ ಕಂಗೊಳಿಸುವ ಹಾರಗಳಲ್ಲಿನ ಪ್ರತಿಯೊಂದು ಹೂವು ಸಹ, ಆತನ ಅನುಯಾಯಿಗಳ ಆಕ್ರಂದನದ ಸಂಕೇತಗಳಾಗಿ ಕಾಣುತ್ತವೆ. ಹರಿಯಾಣದ ಖಾಪ್ ಪಂಚಾಯತಿಗಳು, ಕರ್ನಾಟಕದ ಸಾಲಿಗ್ರಾಮಗಳು, ಅಲಗೂಡುಗಳು ಅಂಬೇಡ್ಕರ್ ಅವರನ್ನು ಕೈಬೀಸಿ ಕರೆಯುತ್ತಿವೆ. ಸವಣೂರಿನ ಭಂಗಿಗಳು ತಮ್ಮ ಹತಾಶೆ, ಆಕ್ರೋಶ ಮತ್ತು ಜಿಗುಪ್ಸೆಯನ್ನು ವ್ಯಕ್ತಪಡಿಸಲು ತಲೆಯ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ ಸಂದರ್ಭದಲ್ಲಿ ಅದನ್ನು ಕೇವಲ ಒಂದು ಜನಾಂಗದ ಕಠೋರ ಅನುಭವಗಳ ಹಿನ್ನೆಲೆಯಲ್ಲಿ ಮೂಡಿಬಂದ ಪ್ರತಿರೋಧ ಎಂದು ಪರಿಗಣಿಸಲಾಗಿತ್ತು. ತಮ್ಮ ಸಮುದಾಯದ ಜನತೆಯ ಶತಮಾನಗಳ ದಾಸ್ಯ ಮತ್ತು ಹೀನಾಯ ಸ್ಥಿತಿಗೆ ಕಾರಣವಾದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಸವಣೂರಿನ ಭಂಗಿಗಳಿಗೆ ಆಳುವ ವರ್ಗಗಳ ಮತ್ತು ಸುತ್ತಲಿನ ಸಮಾಜದ ಗಮನ ಸೆಳೆಯಲು ಲಭ್ಯವಿದ್ದ ಏಕೈಕ ಮಾರ್ಗ ಇದಾಗಿತ್ತು ಎನ್ನಲು ಸಕರ್ಾರ ಭಂಗಿಗಳ ಪ್ರತಿಭಟನೆಗೆ ಕೂಡಲೇ ಸ್ಪಂದಿಸಿದ್ದೇ ಸಾಕ್ಷಿ. ಭಂಗಿಗಳ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಕರ್ಾರ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲವಾದರೂ, ಶ್ರೇಣೀಕೃತ ಜಾತಿ ವ್ಯವಸ್ಥೆಯ ಒಡಲಲ್ಲೇ ಮಿಂದು ಈಜಾಡುತ್ತಿರುವ ಆಳ್ವಿಕರನ್ನು ಬಡಿದೆಬ್ಬಿಸಲು ಇಂತಹ ಒಂದು ಅಸಹನೀಯ ಪ್ರತಿಭಟನೆ ಅಗತ್ಯ ಎಂಬ ಸತ್ಯವನ್ನು ಸವಣೂರಿನ ಭಂಗಿಗಳು ನಿರೂಪಿಸಿದ್ದರು. ವಸ್ತುನಿಷ್ಠವಾಗಿ ನೋಡಿದಾಗ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ, ನರನಾಡಿಗಳಲ್ಲಿ ಹರಿದಾಡುತ್ತಿರುವ ಜಾತಿ ಪ್ರಜ್ಞೆಯ ಅಮಾನವೀಯ ಚಯರ್ೆಯನ್ನು ಜಗತ್ತಿಗೇ ಪರಿಚಯಿಸುವ ಸಾಂಕೇತಿಕ ಘಟನೆಯಾಗಿ ಸವಣೂರು ಚಿರಸ್ಥಾಯಿಯಾಗಿ ನಿಲ್ಲುತ್ತದೆ. ಜಾತ್ಯಾತೀತ ರಾಷ್ಟ್ರ ಎಂದು ಹೆಮ್ಮೆಯಿಂದ ಬೀಗುವ ಭಾರತೀಯರಲ್ಲಿ ಇಂದಿಗೂ ಜಾತಿ-ಮತ-ಕುಲ ಪ್ರಜ್ಞೆ ಜೀವಂತವಾಗಿರುವುದೇ ಆಧುನಿಕ ಭಾರತದ ವಿಪರ್ಯಾಸ. ಮನುಜ ಸಂಬಂಧಗಳನ್ನು, ಮಾನವನ ಹುಟ್ಟು ಸಾವುಗಳನ್ನು, ಸಮಾಜದ ಸಂರಚನೆಯನ್ನು ಗರ್ಭಧಾರಣೆಯ ಹಂತದಲ್ಲೇ ಗುರುತಿಸುವ ಸಮಾಜವನ್ನು ನಾಗರಿಕ ಸಮಾಜ ಎಂದು ಹೇಗೆ ಹೇಳಲು ಸಾಧ್ಯ ? ಆಧುನಿಕತೆ, ನವ ಉದಾರವಾದ ಮತ್ತು ಜಾಗತೀಕರಣದ ಭ್ರಮೆ ಭಾರತದ ಪ್ರಜ್ಞಾವಂತ ಸಮುದಾಯವನ್ನು ಸಂವೇದನಾರಹಿತರನ್ನಾಗಿ ಮಾಡಿರುವ ಸೂಚನೆಗಳು ಆಗಾಗ್ಗೆ ವ್ಯಕ್ತವಾಗುತ್ತಿರುವುದೇ ಅನಾಗರೀಕತೆಯ ಸಂಕೇತವಾಗಿದೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಸವಣೂರಿನ ಘಟನೆ ತಂತಾನೇ ಸಾರ್ವಜನಿಕ ವಲಯದಿಂದ ಮರೆಯಾಗಿರುವುದು. ಭಂಗಿಗಳಿಗೆ ಸರ್ಕಾರದ ವತಿಯಿಂದ ಒದಗಿಸಲಾಗುವ ಸೌಲಭ್ಯಗಳು ಇಡೀ ಸಮಸ್ಯೆಯನ್ನೇ ನಿವಾರಿಸುತ್ತದೆ ಎಂಬ ಭ್ರಮೆ ನಮ್ಮ ನಾಗರಿಕ ಸಮಾಜವನ್ನು ಆವರಿಸಿದ್ದಂತೆ ಕಾಣುತ್ತದೆ. ಈ ನಿಷ್ಕ್ರಿಯತೆಯ ಮತ್ತೊಂದು ಸ್ವರೂಪವನ್ನು ಅಲಗೂಡಿನಲ್ಲಿ ಕಾಣುತ್ತಿದ್ದೇವೆ. ಭಾರತೀಯ ಸಮಾಜವನ್ನು ಆಳುತ್ತಿರುವ ಮನು ವಿರಚಿತ ಸಂವಿಧಾನ 21ನೆಯ ಶತಮಾನದಲ್ಲೂ ಜಾರಿಯಲ್ಲಿರುವುದು ಸಮಾಜದ ಸುಪ್ತ ನಿಷ್ಕ್ರಿಯತೆ ಮತ್ತು ನಿರ್ವೀಯತೆಯ ಸಂಕೇತವಾಗಿದೆ. ವಿಪರ್ಯಾಸವೆಂದರೆ ಇಂತಹ ಸಮಾಜಘಾತುಕ ಘಟನೆಗಳು ಸಂಭವಿಸಿದಾಗ ಅಪರಾಧಿಗಳಿಗೆ ಶಿಕ್ಷೆಯಾಗುವುದಕ್ಕಿಂತಲೂ ಶಾಂತಿಸಭೆಗಳ ಮೂಲಕ ತಿಪ್ಪೆ ಸಾರಿಸುವ ಕ್ರಮ ಮೇಲುಗೈ ಸಾಧಿಸುತ್ತದೆ. ಸದಾ ಆಕ್ರಮಣದ ಭೀತಿಯಲ್ಲೇ ಬದುಕುವ ದಲಿತ ಸಮುದಾಯಗಳು ಯಾರೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳಬೇಕು ? ಸಾಲಿಗ್ರಾಮ, ಚಳ್ಳಕೆರೆ, ಅಲಗೂಡಿನಲ್ಲಿ ನಡೆದಿರುವುದು ಸಂಘರ್ಷವಲ್ಲ, ಆಕ್ರಮಣ ಮಾತ್ರ. ಆಕ್ರಮಣ ನಡೆಸಿರುವವರ ಉದ್ದೇಶ ಮತ್ತು ಪ್ರಾಬಲ್ಯ ಎರಡೂ ಜಗತ್ತಿಗೇ ತಿಳಿದಿರುವ ಸತ್ಯ. ಆದರೂ ನಮ್ಮ ಸಾಮಾಜಿಕ-ನ್ಯಾಯಿಕ ವ್ಯವಸ್ಥೆ ರಾಜೀಸೂತ್ರಗಳಿಗಾಗಿ ಹುಡುಕಾಡುತ್ತದೆ. ಇಲ್ಲಿ ಸಾಮುದಾಯಿಕ ಅಸ್ಮಿತೆಗಿಂತಲೂ ಜಾತಿ ಅಸ್ಮಿತೆ ಮತ್ತು ಜಾತಿ ಪ್ರಜ್ಞೆ ಮತ್ತು ಆರ್ಥಿಕ ಪ್ರಾಬಲ್ಯ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ. ಭಾರತದ ಪ್ರಪ್ರಥಮ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಅನುಯಾಯಿಗಳಿಗೆ ಸವಣೂರು, ಅಲಗೂಡು ಸಮಸ್ಯೆ ಎನಿಸುವುದೇ ಇಲ್ಲ. ಇನ್ನು ದಲಿತರ ಮೇಲೆ ಪ್ರತಿಯೊಂದು ಆಕ್ರಮಣ ನಡೆದಾಗಲೂ ಉಪವಾಸ ಮಾಡುವ ಪಣ ತೊಟ್ಟಿರುವ ಆಚಾರ್ಯ ಸಂತತಿಗೆ ಇಂತಹ ಘಟನೆಗಳು ಭಾರತೀಯ ಸಮಾಜದ ಆಂತರಿಕ ಬಿಕ್ಕಟ್ಟುಗಳಾಗಿ ಮಾತ್ರ ಕಾಣುತ್ತವೆ. ಅನ್ಯ ಮತ ಧರ್ಮದ ಸಾರವನ್ನು ಜನತೆಗೆ ಮುಟ್ಟಿಸುವವರನ್ನು ಅಟ್ಟಾಡಿಸಿಕೊಂಡು ಹೊಡೆಯುವ ಹಿಂದೂ ಧರ್ಮಪ್ರವರ್ತಕ ಸಂಘಟನೆಗಳಿಗೆ ಈ ಘಟನೆ ಅಪರಾಧ-ಶಿಕ್ಷೆಯ ಚೌಕಟ್ಟಿನಲ್ಲಿ ಬಂಧಿತವಾಗುವ ಪ್ರಕ್ರಿಯೆಯಾಗಿಬಿಡುತ್ತದೆ. ಇನ್ನು ತಮ್ಮ ಹೋರಾಟದ ಮೊನಚು ಕಳೆದುಕೊಂಡು, ಆಕ್ರೋಶದ ದನಿಯನ್ನು ಜಾಗತೀಕರಣದ ಭ್ರಮಾಲೋಕದಲ್ಲಿ ಹುದುಗಿಸಿಟ್ಟಿರುವ ಸಂಘಟನಾತ್ಮಕ ಶಕ್ತಿಗಳಿಗೆ ಇದು ಕೇವಲ ಪ್ರತಿಭಟನೆಯ ವೇದಿಕೆ ಮಾತ್ರವಾಗುತ್ತದೆ. ಈ ಎಲ್ಲ ವಿದ್ಯಮಾನಗಳ ನಡುವೆ ಭಾರತದ ಸಾಮಾಜಿಕ ಚೌಕಟ್ಟಿನಲ್ಲಿ ಮಾನವ ಸಂವೇದನೆ ಎಂಬ ಅಮೂಲ್ಯ ಮೌಲ್ಯವೇ ಕಣ್ಮರೆಯಾಗುತ್ತಿರುವುದನ್ನು ಪ್ರಜ್ಞಾವಂತ ಸಮಾಜ ಗುರುತಿಸುತ್ತಲೇ ಇಲ್ಲ. ಚಳ್ಳಕೆರೆ, ಸಾಲಿಗ್ರಾಮ, ಬದನವಾಳು, ಅಲಗೂಡು ಹೀಗೆ ದೇಶಾದ್ಯಂತ ದಲಿತ ಸಮುದಾಯಗಳ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ನಿರ್ನಾಮ ಮಾಡಲು ಹೊರಟಿರುವ ಪ್ರಬಲವಾದ ಜಾತಿ ಪ್ರಜ್ಞೆ ಸಮಾಜದ ಸುಶಿಕ್ಷಿತ ವರ್ಗಗಳನ್ನೂ ಆವರಿಸುತ್ತಿದೆ. ತಮ್ಮ ಸಾಮುದಾಯಿಕ ಕೊಂಡಿಗಳನ್ನು ಕಳಚಿಕೊಂಡು ಮಧ್ಯಮವರ್ಗದ ಭ್ರಮೆಗಳಲ್ಲಿ ಸಿಲುಕಿ ಸಂವೇದನೆಯನ್ನು ಕಳೆದುಕೊಂಡಿರುವ ನಗರೀಕೃತ ದಲಿತ ಸಮುದಾಯಗಳೂ ಈ ಮಿಥ್ಯಾ ಪ್ರಜ್ಞೆಗೆ ಬಲಿಯಾಗಿರುವುದು ಕಠೋರ ಸತ್ಯ. ಈ ಸಂದರ್ಭದಲ್ಲಿ 1970ರ ಹೋರಾಟದ ಮೊನಚನ್ನು ಕಳೆದುಕೊಂಡಿರುವ ದಲಿತ ಹೋರಾಟಗಳಿಗೆ ಕಾಯಕಲ್ಪವೂ ಅಗತ್ಯವಾಗಿದೆ. ಜಾತಿ ದೌರ್ಜನ್ಯದ ಹಿಂದೆ ಸುಪ್ತವಾಗಿ ಕೆಲಸ ಮಾಡುವ ವರ್ಗ ಹಿತಾಸಕ್ತಿಗಳನ್ನು ಗಮನಿಸುವ ತುರ್ತು ಅಗತ್ಯತೆಯೂ ಹೆಚ್ಚಾಗಿದೆ. ನವ ಉದಾರವಾದದ ಭ್ರಮೆ ಮತ್ತು ಜಾಗತೀಕರಣದ ವೈಭವಗಳ ಸುಳಿಯಲ್ಲಿ ಸಿಲುಕಿ ತಾತ್ವಿಕ ದೀವಾಳಿತನವನ್ನು ಎದುರಿಸುತ್ತಿರುವ ಹೋರಾಟದ ನದಿಗಳನ್ನು ಪುನಃ ಹರಿಯುವಂತೆ ಮಾಡಲು ಕಿಂದರಜೋಗಿಯೊಬ್ಬನ ಅವಶ್ಯಕತೆ ಎದ್ದುಕಾಣುತ್ತಿದೆ.                ]]>

‍ಲೇಖಕರು G

April 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: