ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರಗುತಿದೆ ಕಾಲ…

ಎಸ್ ಪಿ ವಿಜಯಲಕ್ಷ್ಮಿ

ನಿಲ್ಲು ಸಖಿ ಇಂದಾದರೂ ನನ್ನ ಬಳಿಯೇ ತುಸುಕಾಲ
ಮಾತನಾಡೋಣ ಮನಬಿಚ್ಚಿ ಮುಗಿಯಬಹುದು ನಮ್ಮ ಈ ಕಾಲ…

ಯಾವ ಮಿಡಿತಕೆ ಬಂಧ ಬೆಸೆದಿತ್ತು ಅರಿತವರಾರೆ ಸಖಿ
ಬೆಸೆದ ರಾಗದ ಗುನುಗಿಷ್ಟ ಉಳಿಸಿಹುದು ಇನ್ನೂ ಈ ಕಾಲ….

ಮೊಗೆಮೊಗೆದು ಕುಡಿದ ಮಧು ಮರೆತಿಲ್ಲ ನಾನೀನು
ಆದರೂ ಸಖಿ, ಸಾಗರದಾಳ ನಿಲುಕಿಲ್ಲ, ಚಾಟಿ ಬೀಸಿಹುದು ಈ ಕಾಲ…

ನಾ ಹಿಡಿದ ಮಧುಪಾತ್ರೆ , ಅದ ತುಂಬಿದಾ ಬೆರಳ ನಾ ಮರೆತಿಲ್ಲ ಸಖಿ
ಇಂದು ನನ್ನೆದುರು  ಬಟ್ಟಲೂ ಬರಿದಾಗಿ ಅಣಕಿಸಿದೆ ನನ್ನ ಈ ಕಾಲ…

ನಾ ಹೂವ ಹಿಡಿದು ಬಂದೆ ಎನಿತೊಂದು ಬಾರಿ ಓ ನನ್ನ ಸಖಿ
ಭವಸಾಗರದ ಕುದಿಯಲ್ಲಿ ನೀ ಬೇಯುತಿದ್ದೆ, ಸರಿದಿತ್ತು ಸದ್ದಿಲ್ಲದಂತೆ ಈ ಕಾಲ…

ಮರಳದಂಡೆಯಲಂದು  ಸೂರ್ಯಾಸ್ತ ಸಮಯ ಸಖಿ
ಆ ಕೆಂಪು ನಿನ್ನ ಕದಪಿನಲಿತ್ತು ಉಳಿಸಿಲ್ಲ ಇಂದು ನಿರ್ದಯಿ  ಈ ಕಾಲ…

ಬಂಧ ಬೇರಾಗಿಸುವುದು ಅಂತದಾಂತರ್ಯ ಓ ನನ್ನ ಸಖಿ
ಮಿಡಿದ ಗುನುಗ ಎದೆಗೈದು ನುಡಿದುಬಿಡು ಮತ್ತೆ ಮರಳದು ಈ ಕಾಲ…..

ಬಾರೆನ್ನ ಪ್ರೇಮನಿಧಿ ಅರೆಘಳಿಗೆ ಎನ್ನೊಳಗೆ ಭವವ ಮರೆತಂತೆ
ಮುಳ್ಳುಗಳ ತರಿದು ಹುವ್ವೆಸಳ ಹಿಡಿದು ಹಗುರಾಗಿ ಕನಸೋಣ ಈ ಕಾಲ…

‍ಲೇಖಕರು Avadhi

18 January, 2021

1 Comment

  1. ವಿಜಯಲಕ್ಷ್ಮಿ

    ಧನ್ಯವಾದಗಳು ಅವಧಿ ನನ್ನ ಗಜಲ್ ಪ್ರಕಟಿಸಿದ್ದಕ್ಕೆ…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading