ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಮರದಿರಲಿ ಹುತಾತ್ಮರ ಕನಸುಗಳು..

ಕೆ ಮಹಾಂತೇಶ


ಮಾನವ ಜಗತ್ತಿನ ಕ್ರಾಂತಿಕಾರಿ ಚಳುವಳಿ ಇತಿಹಾಸದಲ್ಲಿ ಪ್ರಗತಿಪರ ಮೌಲ್ಯ ಹಾಗೂ ಸಮಾಜಕ್ಕಾಗಿ ಚಾರ್ವಕರಿಂದ ಹಿಡಿದು ನೂರಾರು ಕ್ರಾಂತಿಕಾರಿಗಳು ತಮ್ಮ ಅಮೂಲ್ಯವಾದ ಜೀವಗಳನ್ನು ಬಲಿಯಾಗಿಸಿ ಹುತ್ತಾತ್ಮರೆನಿಸಿಕೊಂಡಿದ್ದಾರೆ. ಈ ಆಧುನಿಕ ಸಮಾಜದ ಬೆಳವಣಿಗೆಯ ಹಾದಿಯಲ್ಲೂ ಹಲವು ಕ್ರಾಂತಿಕಾರಿ ಚಳುವಳಿಗಳು ಬೆಳೆದು ಅಸಂಖ್ಯಾತ ಜನರು ವಿಶೇಷವಾಗಿ ಯುವಜನರು ಆಯಾ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಕಿತ್ತು ಹಾಕುವ ಆಶಯದೊಂದಿಗೆ ತಮ್ಮ ಯೌವನವನ್ನೇ ಬಲಿಯಾಗಿಸಿ ಪ್ರಾಣ ತ್ಯಾಗ ಮಾಡಿದ್ದಾರೆ.ಹಾಗೆ ಹುತಾತ್ಮರಾಗಿ ಇವತ್ತು ಕೂಡ ಜಾಗತೀಕವಾಗಿ ಯುವಜನರ ಮೈ ಹಾಗೂ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವ ಏಕೈಕ ವ್ಯಕ್ತಿ ಎಂದರೆ ಅರ್ಜೆಂಟೈನಾದಲ್ಲಿ ಹುಟ್ಟಿ ಕ್ಯೂಬಾದಲ್ಲಿ ತನ್ನ ಕ್ರಾಂತಿಕಾರಿ ಸಮಾಜದ ಕನಸನ್ನು ನನಸುಗೊಳಿಸಿದ ‘ಚೆಗೆವಾರ’ ಎನ್ನುವದು ಸರ್ವಕಾಲಿನ ಸತ್ಯವಾಗಿದೆ. ಇನ್ನೂ ಏಷ್ಯಾ ಉಪಖಂಡದಲ್ಲಿ ವಿಶೇಷವಾಗಿ ಭಾರತದಲ್ಲಿ ಅಂತಹ ಸ್ಥಾನ ಹೊಂದಿ ಇವತ್ತು ಕೂಡ ಭಾರತದ ಕೋಟ್ಯಾಂತರ ಜನರ ಹೃದಯದಲ್ಲಿ ಹುತಾತ್ಮ ಸ್ಥಾನ ಪಡೆದ ವ್ಯಕ್ತಿಯೆಂದರೆ ಅದು ‘ಭಗತ್ ಸಿಂಗ್’ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಬ್ರಿಟಿಷರ ನೇಣುಕಂಭಕ್ಕೆ ತನ್ನ ಯೌವನದ ಸುಗಂಧವನ್ನು ಲೇಪಿಸಿ ಹುತಾತ್ಮನೆಂಬ ಬಿರುದು ಪಡೆದಾಗ ಭಗತ್ ಸಿಂಗ್ ಅವರ ವಯಸ್ಸು ಕೇವಲ 24 ವರ್ಷ.!
ಅಂತಹ ಭಗತ್ ಸಿಂಗ್ ನನ್ನು ಲಾಹೋರಿನ ಕೇಂದ್ರ ಕಾರಗೃಹದಲ್ಲಿ ನೇಣಿಗೆ ಏರಿಸಿ ಇಂದಿಗೆ ಅಂದರೆ 2014 ಮಾರ್ಚ 23 ಕ್ಕೆ 83 ವರ್ಷಗಳಾದವು. ಜಗತ್ತಿನ ಕ್ರಾಂತಿಕಾರಿ ಚಳುವಳಿಯ ಇತಿಹಾಸದಲ್ಲಿ ಇಷ್ಟು ಚಿಕ್ಕವಯಸ್ಸಿನಲ್ಲಿ ಹುತಾತ್ಮರಾದ ಮತ್ತು ಆ ಚಿಕ್ಕ ವಯಸ್ಸಿನಲ್ಲಿ ಆಳವಾದ ರಾಜಕೀಯ ಜ್ಞಾನವನ್ನು ಪಡೆದಿದ್ದ ವ್ಯಕ್ತಿಗಳು ಅತ್ಯಂತ ವಿರಳ. ಅಷ್ಟು ಮಾತ್ರವಲ್ಲ ಭಗತ್ ಸಿಂಗ್  ಹುತಾತ್ಮರಾಗಿ ಇಷ್ಟೊಂದು ಧೀರ್ಘ ಅವಧಿಯ ಬಳಿಕವೂ ಅವರ ಬಗ್ಗೆ ಈಗಲೂ ಹಲವು ರೀತಿಯ ಚರ್ಚೆಗಳು ನಡೆಯುತ್ತಿರುವುದು, ಅವರ ಕುರಿತಾದ ಹತ್ತಾರು ಪುಸ್ತಕಗಳು ಈಗಲೂ ನಿರಂತರವಾಗಿ ಪ್ರಕಟವಾಗುತ್ತಿರುವುದು ಅವರ ಕುರಿತಾಗಿ ಸಾಕ್ಷ್ಯ ಚಿತ್ರಗಳು, ಚಲನಚಿತ್ರಗಳು ನಿರ್ಮಾಣಗೊಂಡಿರುವುದನ್ನು ಗಮನಿಸಿದಾಗ ಭಗತ್ ಸಿಂಗ್ ಅವರ ಬಗ್ಗೆ ಇದ್ದ ಗೌರವ ಮತ್ತು ಮತ್ತು ಅಭಿಮಾನ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಇತ್ತೀಚಿಗೆ ಬ್ರಿಟಿಷ್ ಇತಿಹಾಸಕಾರನೊಬ್ಬ ಬರೆದ ಪುಸ್ತಕದಲ್ಲಿ ಭಗತ್ಸಿಂಗ್ ಹಾಗೂ ಮತ್ತೊಬ್ಬ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರನ್ನು ‘ಭಯೋತ್ಪಾದಕರು’ ಎಂಬ ಹಣೆ ಪಟ್ಟಿ ಕಟ್ಟಿರುವುದು ಹಲವರನ್ನು ಕೆರಳಿಸಿದ. ಅದರಲ್ಲೂ ಭಗತ್ಸಿಂಗ್ ಅವರ ಇತಿಹಾಸವನ್ನು ಅತ್ಯಂತ ಹತ್ತಿರದಿಂದ ಬಲ್ಲ ಹೆಸರಾಂತ ಹಿರಿಯ ಪತ್ರಕರ್ತರಾದ ಕಲದೀಪ್ ನಯ್ಯರ್ ಬ್ರಿಟಿಷ್ ಬರಹಗಾರನ ಆ ಆಭಿಪ್ರಾಯವನ್ನು ಹಾಗೂ ಆ ಬಗ್ಗೆ ಬ್ರಿಟಿಷ್ ಸಮುದಾಯ ಮೌನವಹಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿ ಲೇಖನ ಬರೆದಿದ್ದಾರೆ. ಹಾಗೆ ನೋಡಿದರೆ ಭಾರತದ ಸ್ವಾತಂತ್ರ್ಯ ಚಳುವಳಿಯ ಆರಂಭದ ಘಟ್ಟದಲ್ಲೇ ಎರಡು ವಿಭಿನ್ನ ಧಾರೆಗಳು ಬೆಳೆದು ಬಂದಿದ್ದು ಇತಿಹಾಸ.
ಅಂದಿನ ಚಳುವಳಿಯ ನೇತೃತ್ವವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಳಗೆಯೇ ಸೌಮ್ಯವಾದಿಗಳು ಮತ್ತು ಉಗ್ರವಾದಿಗಳು ಎಂಬ ಎರಡು ಬಣಗಳು ಅಸ್ತಿತ್ವದಲ್ಲಿದ್ದವು. ಆ ಕಾಲದಲ್ಲಿ ಉತ್ತರ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಆರಂಭದಲ್ಲಿ ನೌಜವಾನ್ ಸಭಾ ಹಾಗೂ ನಂತರದಲ್ಲಿ ಹಿಂದುಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಷಿಯೇಷನ್ ಮೂಲಕ ವಿಶೇಷವಾಗಿ ಯುವಜನರನ್ನು ಸಂಘಟಿಸುತ್ತ ಕ್ರಾಂತಿಕಾರಿ ಚಳುವಳಿಯನ್ನು ರೂಪಿಸುತ್ತಿದ್ದ ಭಗತ್ ಸಿಂಗ್ ಹಾಗು ಆತನ ಸಂಗಾತಿಗಳನ್ನು ಸ್ವತಃ ಕಾಂಗ್ರೆಸ್ ನಾಯಕರೆ ಉಗ್ರವಾದಿಗಳು ಹಾಗೂ ಭಯೋತ್ಪಾದಕರು ಎಂದು ಹೀಯಾಳಿಸುತ್ತಿದ್ದರು. ಆದರೆ ಸ್ವತಃ ಭಗತ್ ಸಿಂಗ್ ಅವರೇ ಬರೆದ ಹಲವು ಬರಹಗಳಲ್ಲಿ ಅವರ ಬಗ್ಗೆ ಬಂದ ಆರೋಪಗಳಿಗೆ ಹೀಗೆ ಪ್ರತ್ಯುತ್ತರ ನೀಡಿದ್ದಾರೆ. ನಾನು ಭಯೋತ್ಪಾದಕನಲ್ಲ ಮತ್ತು ಪ್ರಾಯಶಃ ಕ್ರಾಂತಿಕಾರಿ ಜೀವನದ ಪ್ರಾರಂಭದ ದಿನಗಳನ್ನು ಹೊರತುಪಡಿಸಿದರೆ ಎಂದೂ ಭಯೋತ್ಪಾದಕನಾಗಿರಲಿಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಲು ಇಚ್ಚಿಸುತ್ತೇನೆ; ಭಯೋತ್ಪಾದಕ ವಿಧಾನಗಳಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂಬುದೂ ನನಗೆ ಖಚಿತವಾಗಿದೆ. ‘ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ನ್ ಅಸೋಷಿಯೇಷನ್’ ಇತಿಹಾಸವೇ ಇದಕ್ಕೆ ಜೀವಂತ ಉದಾಹರಣೆ. ನಮ್ಮನ್ನು ನಾವು ಈ ಮಹಾ ಚಳುವಳಿಯ ಮಿಲಿಟರಿ ವಿಭಾಗವಾಗಿ ಗುರುತಿಸಿಕೊಳ್ಳಬೇಕೆಂಬ ಒಂದೇ ಗುರಿಯತ್ತ ನಮ್ಮ ಎಲ್ಲಾ ಚಟುವಟಿಕೆಗಳು ಕೇಂದ್ರೀಕರಣವಾಗಿದ್ದವು.
ಆದರೆ ಭಗತ್ ಸಿಂಗ್,ರಾಜಗುರು, ಸುಖದೇವ ಮೊದಲಾದ ಯುವಕರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರಿ ಹಾದಿಯನ್ನು ಹಿಡಿದಿದ್ದು ಯಾಕೆ? ಮತ್ತು ಅವತ್ತು ಅದಕ್ಕೆ ಪೂರಕವಾಗಿ ಕಾರಣವಾದ ಆಂಶಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಭಗತ್ ಸಿಂಗ್ ಅವರು ಹೊಂದಿದ್ದ ಗುರಿ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಮೊದಲನೆಯದಾಗಿ ಭಗತ್ ಸಿಂಗ್ ಗೆ ಜನ್ಮ ನೀಡಿದ ಮನೆಯ ವಾತವರಣವೇ ಅವರಿಗೆ ಸ್ವಾತಂತ್ರ್ಯ ಚಳುವಳಿಯ ಮೊದಲ ಪಾಠವನ್ನು ಕಲಿಸಿತ್ತು. ಇನ್ನು ಅಮೃತಸರದಲ್ಲಿ 1919 ರಲ್ಲಿ ಜನರಲ್ ಡಯಾರ್ನ ಗುಂಡೇಟಿಗೆ ಬಲಿಯಾದ ನಾನೂರಕ್ಕೂ ಹೆಚ್ಚಿನ ಅಮೂಲ್ಯ ಜೀವಗಳು ಬಾಲಕ ಭಗತ್ ಸಿಂಗ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಲು ಪ್ರೇರಣೆಯಾದವು. ಹೀಗೆ ಕ್ರಾಂತಿಕಾರಿ ಚಳುವಳಿಯತ್ತ ಮುಖಮಾಡಿದ್ದ ಭಗತ್ ಸಿಂಗ್ ಗೆ  ಬದುಕಿನಲ್ಲಿ ಅವರ ಕನಸುಗಳಿಗೆ ಬಣ್ಣ ಹಾಗೂ ರೆಕ್ಕೆ ಬಂದಿದ್ದು 1917ರಲ್ಲಿ ನಡೆದ ರಷ್ಯಾದ ಸಮಾಜವಾದಿ ಸಮಾಜ ನಿರ್ಮಾಣದ ಕ್ರಾಂತಿ. ಅದರಿಂದಾಗಿ ಪ್ರೇರೇಪಿತರಾದ ಭಗತ್ ಸಿಂಗ್. 1931 ಫೆಬ್ರವರಿ 2ರಂದು ಅಂದರೆ ಬ್ರಿಟಿಷರು ಗಲ್ಲಿಗೇರಿಸುವ ಎರಡು ತಿಂಗಳ ಹಿಂದಷ್ಟೇ ಬರೆದ ಒಂದು ಲೇಖನದಲ್ಲಿ ದೇಶದ ಯುವಕರು ಮಾಕ್ರ್ಸವಾದವನ್ನು ಅಳವಡಿಸಿಕೊಳ್ಳುವಂತೆ ಆ ಮೂಲಕ ಸಮಾಜದಲ್ಲಿ ಅಳವಾಗಿ ಬೇರು ಬಿಟ್ಟಿರುವ  ಶೋಷಣಾ ವ್ಯವಸ್ಥೆಯನ್ನು ಕೊನೆಗಾಣಿಸಲು ದೇಶದಲ್ಲಿ ಅತ್ಯಂತ ಶೋಷಣೆಗೆ ಒಳಗಾಗಿರುವ ರೈತ-ಕಾರ್ಮಿಕರನ್ನು ಸಂಘಟಿಸಬೇಕೆಂದು ಕರೆ ನೀಡಿದ್ದರು.
ಆದರೆ ಭಾರತದಲ್ಲಿ ಅಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಬ್ರಿಟಿಷ್ ಆಡಳಿತದ ವಿರೋಧಿಯಾಗಿ ಬೆಳೆದು ಬರುತ್ತಿದ್ದ ಕ್ರಾಂತಿಕಾರಿ ಚಳುವಳಿಯನ್ನು ಧಮನ ಮಾಡಲು ಬ್ರಿಟಿಷ್ ಸರ್ಕಾರವು ಶಾಸನ ಸಭೆಯಲ್ಲಿ ‘ಸಾರ್ವಜನಿಕ ಸಂರಕ್ಷಣಾ ಮಸೂದೆ ಹಾಗೂ ಕಾರ್ಮಿಕ ಚಳುವಳಿಯನ್ನು ಧಮನ ಮಾಡುವ ಕಾರ್ಮಿಕ ವಿವಾದ ಮಸೂದೆಯನ್ನು ಮಂಡಿಸಲು ಮುಂದಾಗಿದ್ದ ಘಟನೆಯೇ 1929 ಮಾರ್ಚ 20 ರಂದು ಸೆಂಟ್ರಲ್ ಆಸೆಂಬ್ಲಿಯಲ್ಲಿ ಬಾಂಬು ಹಾಕುವ ಪ್ರೇರಣೆಯನ್ನು ಕಾಂತಿಕಾರಿಗಳಿಗೆ ನೀಡಿದ್ದುಂತೂ ಸತ್ಯ ಆದರೆ ಹಾಗಂತ ಮಾತ್ರಕ್ಕೆ ಅವರು ಖಂಡಿತ ಭಯೋತ್ಪಾದಕರಾಗಿರಲಿಲ್ಲ ಅಥವಾ ಹಿಂಸೆಯ ಮೂಲಕ ಜನರ ಕಲ್ಯಾಣವನ್ನು ರೂಪಿಸುವ ಉಗ್ರ ಸ್ವರೂಪದ ಹಿಂಸೆಯ ಆರಾಧಕರಂತೂ ಆಗಿರಲೇ ಇಲ್ಲ. ‘ಕಿವುಡರಿಗೆ ಕಿವಿ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ನಾವು ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ಕಿವುಡು ಸರ್ಕಾರವನ್ನು ಎಚ್ಚರಿಸುವುದಷ್ಟೇ ನಮ್ಮ ಗುರಿಯಾಗಿತ್ತು’ ಎಂದು ತಮ್ಮ ಕೃತ್ಯವನ್ನು ಭಗತ್ ಸಿಂಗ್ ನ್ಯಾಯಲಯದಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಅಲ್ಲದೆ ಕ್ರಾಂತಿ ಎಂದರೆ ಬಾಂಬು ಬಂದೂಕುಗಳ ಆರಾಧನೆಯೂ ಅಲ್ಲ ನಮ್ಮ ಪ್ರಕಾರ ‘ಕ್ರಾಂತಿ ಎಂದರೆ ಅನ್ಯಾಯದ ಬುನಾದಿಯ ಮೇಲೆ ಕಟ್ಟಲ್ಪಟ್ಟ ಈ ಅಸಮಾನ ಶೋಷಣಾ ವ್ಯವಸ್ಥೆ ಬದಲಾಗಬೇಕು. ಎಂಬ ಆದರ್ಶ ಭಗತ್ ಸಿಂಗ್ ಅವರದ್ದಾಗಿತ್ತು.ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿವೆ. ಆಳಿದವರು ಮತ್ತು ವಿರೋಧ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಹಣಾಹಣಿಗಳು, ವ್ಯಕ್ತಿಗತ ಪೈಪೋಟಿಗಳು ನಡೆದಿವೆ. ಇಂತಹ ರಾಜಕೀಯ ಭರಾಟೆಯಲ್ಲಿ ಹುತಾತ್ಮಕ ಕನಸುಗಳು ಕಮರಿ ಹೋಗಬಾರದು. ದೇಶಕ್ಕಾಗಿ, ಜನತೆಯ ಒಳಿತಿಗಾಗಿ ತನ್ನ ಯೌವನವನ್ನೇ ಬಲಿಯಾಗಿಸಿದ ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳನ್ನು ಮತು ಅವರ ಆದರ್ಶಗಳನ್ನು ನಮ್ಮ ಯುವಜನರು ಕನಿಷ್ಟ ನೆನಪಿಸಕೊಳ್ಳುವ  ಸಾಧ್ಯವಾದರೆ  ಅಂತಹ  ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

‍ಲೇಖಕರು avadhi

23 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading