'ಕಬೀರ್ ಸಿಂಗ್'ನಲ್ಲಿ ನಾಯಕನೇ ಕೆಲವೊಮ್ಮೆ ಖಳನಾಯಕ

ಡಾ. ಅನಿಲ್ ಎಮ್ ಚಟ್ನಳ್ಳಿ / ಗುಲಬರ್ಗಾ
ಒಂದು ಸುಪ್ರಸಿದ್ಧ ಮೆಡಿಕಲ್ ಕಾಲೇಜಿನ ಸುಂದರ ಕ್ಯಾಂಪಸ್ಸು, ಅಲ್ಲಿ ಉರಿಯುವ ಬೇಸಿಗೆಯ ಸುಡುಬಿಸಿಲಿನಂತ ಸೀನಿಯರ್ ಹುಡುಗ, ಆ ಕಾಲೇಜಿಗೆ
ಹೊಸದಾಗಿ ಬರುವ ಬೆಳ್ಳಿ ಬೆಳದಿಂಗಳಿನಂತಹ ಜೂನಿಯರ್ ಹುಡುಗಿ. ಸರಿ ಇನ್ನೇನು ಈ ಹುಡುಗಿ ಕಾಲೇಜಿಗೆ ಕಾಲಿಟ್ಟಳು ಅನ್ನುವಷ್ಟರಲ್ಲಿ ಪ್ರೇಮ ಕಥೆ ಆರಂಭ. ಹೀಗೆ ಶುರುವಾಗುವ ಕಬೀರ್ ಸಿಂಗ್ ಚಿತ್ರ ನಾಯಕನ ಆರ್ಭಟದಲ್ಲಿ ನಾಯಕಿಯ ಕಣ್ಣೀರಲ್ಲಿ ಮುಂದುವರೆದು ನಡುವೆ ಒಂದಿಷ್ಟು ಬೋರು ಹೊಡೆಸಿ ಕೊನೆಯಾಗುತ್ತದೆ.
ಯಾರನ್ನೂ ಗಣನೆಗೆ ತೆಗೆದುಕೊಳ್ಳದ ನಾಯಕನ ನಿರ್ಭೀತ ನಡವಳಿಕೆಯಲ್ಲಾಗಲಿ, ನಾಯಕ ನಾಯಕಿ ನಡುವೆ ಚಿಗುರೊಡೆದು ಬೆಳೆಯುವ ಪ್ರೀತಿಯಲ್ಲಾಗಲಿ ಅಂತಹ ನೈಜತೆ ಕಂಡುಬರುವುದಿಲ್ಲ. ನಾಯಕನ ವ್ಯಕ್ತಿತ್ವದಲ್ಲಿ ಬಂಡಾಯ ಮನೋಧರ್ಮಕ್ಕಿಂತ ಹೆಚ್ಚಾಗಿ ಕಂಡುಬರುವುದು ಯಾವ ಉದ್ದೇಶವನ್ನೂ ಪೂರೈಸದ ಅನಾವಶ್ಯಕ ಉದ್ಧಟತನ. ಎಲ್ಲಾ ದುಷ್ಚಟಗಳೂ ಇರುವ, ತೀರಾ ಮುಂಗೋಪಿಯಾಗಿರುವ ಹುಡುಗನಿಗೆ ತನ್ನ ಮಗಳನ್ನು ಕೊಡಲು ಬಯಸದ ಹುಡುಗಿಯ ತಂದೆ ತಾಯಿಗಳ ವಿರುದ್ಧ ಹಾರಾಡುವ ನಾಯಕನೇ ಕೆಲವೊಮ್ಮೆ ಖಳನಾಯಕನಂತೆ ಕಾಣುತ್ತಾನೆ.
ಸಂಭಾಷಣೆಯಲ್ಲೂ ಕೂಡ ಮನಸೂರೆಗೊಳ್ಳುವಂತಹ ಮಾತುಗಳಿಲ್ಲ. ಮನೆಯಲ್ಲಿ ಎಲ್ಲರಿಗಿಂತ ನಾಯಕನಿಗೆ ತನ್ನ ಅಜ್ಜಿಯೊಂದಿಗೆ ಸಲುಗೆ, ಪ್ರೀತಿ ಹೆಚ್ಚು. ವಿರಹದ ಬೇಗೆಯಲ್ಲಿ ತನ್ನನ್ನು ತಾನು ಸುಟ್ಟುಕೊಳ್ಳುತ್ತಿರುವ ನಾಯಕನನ್ನು ಕುರಿತು ಆತನ ಅಣ್ಣ ಅಜ್ಜಿಗೆ ನಿಮ್ಮದೊಂದು ಮಾತಿನಿಂದ‌ ಅವನು ಬದಲಾಗಬಹುದು ನೀವೇಕೆ‌ ಅವನಿಗೇನೂ ಹೇಳುವುದಿಲ್ಲ ಎಂದು ಕೇಳುತ್ತಾನೆ. ಆಗ ಅಜ್ಜಿ ದುಃಖ ಅನುಭವಿಸುವ ಪ್ರಕ್ರಿಯೆ ತೀರಾ ವೈಯಕ್ತಿಕ ಆತ ಅನುಭವಿಸಲಿ ಬಿಡು , ಬಹುಷ ನಮ್ಮ ಯಾವ ಮಾತುಗಳೂ ಅವನನ್ನು ಸಂತೈಸಲಾರವು ಎಂದು ಹೇಳುತ್ತಾರೆ. ಚಿತ್ರದಲ್ಲಿ ಈ ಅಜ್ಜಿಯ ಪಾತ್ರದಿಂದ ಮಾತ್ರ ಕೆಲವು ತೂಕದ ಮಾತುಗಳನ್ನು ಕೇಳಿಸಿಕೊಳ್ಳಬಹುದು.
ಶಾಹಿದ್ ಕಪೂರ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಮತ್ತು ನಾಯಕಿಯ ಪಾತ್ರ‌ದಲ್ಲಿ ಅಂತಹ ಸವಾಲುಗಳೇನಿಲ್ಲವಾದ್ದರಿಂದ ಕಿಯಾರಾ ಅಡ್ವಾಣಿ ಪಾತ್ರವನ್ನು ಸುಲಭವಾಗಿ ನಿಭಾಯಿಸಿದ್ದಾರೆ. ನಿಕಿತಾ ದತ್ತಾ ಅವರು ಮಾಡಿರುವ ‌ಇನ್ನೊಬ್ಬ ನಾಯಕಿಯ ಪಾತ್ರ ಕಥೆಯ ದೃಷ್ಟಿಯಿಂದ ಪ್ರಮುಖ ಅನಿಸಬಹುದಾದರೂ ಆ ಪಾತ್ರ ಪ್ರೇಕ್ಷಕರ ನೆನಪಿನಲ್ಲುಳಿಯುವುದಿಲ್ಲ.
ಇದೊಂದು ಭಿನ್ನ‌ ಪ್ರೇಮ‌ ಕಥೆ, ಉತ್ಕಟ ಪ್ರೇಮ ಕಥೆ ಎಂದೆಲ್ಲ ಚಿತ್ರದ ಕುರಿತ ಹಲವರ ಅಭಿಪ್ರಾಯ ಓದಿ ಥಿಯೇಟರ್ ಗೆ ಹೋಗಿದ್ದ ನನಗೆ , ಚಿತ್ರದಲ್ಲಿ ಪ್ರೀತಿ ಪ್ರೇಮ ವಿರಹ ಇವೆಲ್ಲಕ್ಕಿಂತ ಹೆಚ್ಚಾಗಿ ಕಂಡದ್ದು ಸಿಗರೇಟು, ಅಲ್ಕೊಹಾಲು, ಡ್ರಗ್ಸು , ಕಿಸ್ಸು, ಸೆಕ್ಸು ಇವೆ. ಚಿತ್ರದಲ್ಲಿ ಇಷ್ಟಪಡಬಹುದಾದ ಅಂಶಗಳೆಂದರೆ ಹಾಡುಗಳು ಮತ್ತು ಎಷ್ಟೆಲ್ಲ ಹಿಂಸೆ ಅನುಭವಿಸಿ ಕೊನೆಗೂ ನಾಯಕ ನಾಯಕಿ ಒಂದಾಗುವ ದೃಶ್ಯ.

‍ಲೇಖಕರು avadhi

June 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: