ಚಿತ್ತಾಲರ ಮನೆಯ ಹೊಸ್ತಿಲಲ್ಲಿ…

ಟಿ ಎಸ್ ಶ್ರವಣಕುಮಾರಿ

ದೇಶದ ಯಾವಯಾವುದೋ ಭಾಗವನ್ನು ಸುತ್ತಿ ಬಂದಿದ್ದರೂ ಮುಂಬೈಯನ್ನು ನೋಡುವ ಕನಸು ಬಹಳ ದಿನಗಳು ಕನಸಾಗಿಯೇ ಉಳಿದುಬಿಟ್ಟಿತ್ತು.

ಚಿಕ್ಕಂದಿನಿಂದಲೂ ಮುಂಬೈ ಬಗ್ಗೆ ಕೇಳುತ್ತಿದ್ದ ವಿಷಯಗಳು ಹಲವಾರು. ಪತ್ರಿಕೆಗಳಲ್ಲಿ ಓದುತ್ತಿದ್ದ ಎಷ್ಟೋ ರೋಚಕ ಸುದ್ದಿಗಳ ಹಿನ್ನೆಲೆಯಲ್ಲಿ ನನ್ನ ಕಲ್ಪನೆಯಲ್ಲಿ ಮುಂಬೈ ಎಂದರೆ ಏನೋ ಒಂದು ಅದ್ಭುತ ಲೋಕವೇ ಆಗಿತ್ತು.

ಸಾಹಿತ್ಯವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡ ಮೇಲೆ ಮುಂಬೈ ಜೀವನದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುವ ಭೈರಪ್ಪನವರ ಹಲವು ಕಾದಂಬರಿಗಳು, ಯಶವಂತ ಚಿತ್ತಾಲರ ಬಹಳಷ್ಟು ಕತೆಗಳು ಮತ್ತು ಕಾದಂಬರಿಗಳು, ವ್ಯಾಸರಾಯ ಬಲ್ಲಾಳರ ಕತೆಗಳು ಹಾಗೂ ಇನ್ನಿತರ ಹಲವಾರು ಸಾಹಿತಿಗಳ ಸಾಹಿತ್ಯ ಪ್ರಪಂಚದಲ್ಲಿ ತೆರೆದುಕೊಳ್ಳುವ ಮುಂಬೈ ಎಂಬ ಮಾಯಾನಗರಿ ನನಗೊಂದು ವಿಶೇಷ ಆಕರ್ಷಣೆಯ ಕೇಂದ್ರವಾಗಿತ್ತು.

ಆ ಕತೆ, ಕಾದಂಬರಿಗಳಲ್ಲಿ ಕಾಣ ಸಿಗುವ ಪ್ರವಾಸಿ ತಾಣಗಳು, ಸಮುದ್ರ ತೀರಗಳು, ಬೇಲ್‌ ಪುರಿ, ವಡಾ ಪಾವ್‌, ಗೋಲಾಗಳು, ಜನ ನಿಬಿಡ ಲೋಕಲ್‌ಗಳು, ಜನಸಂದಣಿಯ ಮಾರುಕಟ್ಟೆಗಳು, ಅಲ್ಲಿನ ಮಳೆ, ಅಂಟುವ ಸೆಖೆ, ವಿವಿಧ ಬಗೆಯ ಜನರು, ಮೇಲ್ವರ್ಗದ ಅಧಿಕಾರಿಗಳು, ಹಮಾಲಿಗಳು, ಕೂಲಿ ಕಾರ್ಮಿಕರು, ಜನಸಾಮಾನ್ಯರು, ಗಡಿಯಾರದೊಂದಿಗೆ ಸುತ್ತುವ ಜೀವನ ಶೈಲಿ, ಚಾಳುಗಳು, ಜೋಪಡಿಗಳು, ಗಗನಚುಂಬಿ ಕಟ್ಟಡಗಳು…… ಎಲ್ಲದರ ಬಗ್ಗೆ ನನ್ನದೇ ಆದ ಕಲ್ಪನಾ ಲೋಕವಿತ್ತು. ಈ ಕಲ್ಪನಾಲೋಕದ ಹಲವು ದೃಶ್ಯಗಳನ್ನು ನನ್ನ ಚಿತ್ತಬಿತ್ತಿಯಲ್ಲಿ ಬರೆದವರು ಚಿತ್ತಾಲರು.

ಇಂತ ನನ್ನ ಕಲ್ಪನಾ ಲೋಕದ ಮಾಯಾನಗರಿ ಮುಂಬೈಯನ್ನು ಖುದ್ದಾಗಿ ನೋಡುವ ಮಹದಾಸೆ ನನ್ನದೇ ಆದ ಕಾರಣಗಳಿಂದಾಗಿ ಆಸೆಯಾಗಿಯೇ ಉಳಿದುಬಿಟ್ಟಿತ್ತು. ಮೊತ್ತ ಮೊದಲನೆಯದಾಗಿ ನಾನಿರುವ ಸ್ಥಿತಿಯಲ್ಲಿ ಅಲ್ಲಿನ ಜನಜಂಗುಳಿಯಲ್ಲಿ ನಿಭಾಯಿಸಲು ಸಾಧ್ಯವೇ? ಓಡುತ್ತಿರುವ ಜನರ ಮಧ್ಯೆ, ನಡೆಯಲೂ ಕಷ್ಟಪಡುವ ನಾನು, ಮನೆಯ ಮೆಟ್ಟಿಲನ್ನು ಇಳಿದರೆ ಇನ್ನೊಂದು ವಾಹನದಲ್ಲೇ ಹೆಜ್ಜೆಯಿಡುವ ನನಗೆ ಮುಂಬಯಿಯಲ್ಲಿ ಏನನ್ನು ನೋಡಲು ಸಾಧ್ಯ?! ಯಾರಾದರೂ ಹತ್ತಿರದವರಿದ್ದರೆ ನಿಭಾಯಿಸಲು ಸಾಧ್ಯವಾಗಬಹುದೋ ಏನೋ… ಪ್ರಾಯಶಃ ಇದು ನನಸಾಗದ ಕನಸಾಗಬಹುದೆಂಬ ಭಾವ ನನ್ನದಾಗಿತ್ತು.

ಇತ್ತೀಚೆಗೆ ಸತತವಾದ ವೈದ್ಯಕೀಯ ಆರೈಕೆ, ನಿರಂತರ ವ್ಯಾಯಾಮ ಮತ್ತು ಸ್ವಲ್ಪ ಸ್ವಲ್ಪ ನಡೆಯುವ ಪ್ರಯತ್ನದಿಂದಾಗಿ, ನನ್ನ ನಡಿಗೆಯ ರೀತಿ ಸ್ವಲ್ಪ ಸುಧಾರಿಸಿದ ಮೇಲೆ ಮತ್ತೆ ಮುಂಬಯಿಯ ಕನಸು ಚಿಗುರೊಡೆಯತೊಡಗಿತು. ಬಹುಷಃ ಒಬ್ಬ ಪ್ರವಾಸಿ ನೋಡಲು ಸಾಧ್ಯವಾಗುವಷ್ಟು ನನ್ನಿಂದ ನೋಡಲು ಸಾಧ್ಯವಾಗದೇ ಇರಬಹುದು. ಆದರೆ ನಾನು ಮುಂಬೈ ಜೀವನವನ್ನು ಸಾಹಿತಿಗಳ ಕಣ್ಣಿಂದ ಕಂಡದ್ದನ್ನು ಸ್ವಲ್ಪ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗಬಹುದು. ಚಿತ್ತಾಲರು ಮನದ ಭಿತ್ತಿಯಲ್ಲಿ ಬರೆದ ಎಷ್ಟೆಷ್ಟೋ ಚಿತ್ರಗಳಿಗೆ ಬಣ್ಣ ತುಂಬಿಕೊಳ್ಳಬಹುದು.

ಸಧ್ಯಕ್ಕೆ ತಂಗಿಯ ಗಂಡ ಶಿವರಾಂ ಉದ್ಯೋಗದ ಮೇಲೆ ಅಲ್ಲೇ ಇದ್ದಾರೆ. ಅವರಿರುವುದು ಅತಿಥಿಗೃಹದಲ್ಲಾದರೂ, ನನ್ನ ಸ್ಥಿತಿಯನ್ನು ಮೊದಲಿನಿಂದಲೂ ನೋಡಿದವರಾದ್ದರಿಂದ ನಾನು ನೋಡಲು ಸಾಧ್ಯವಿರುವ ಸ್ಥಳಗಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಲು ಅವರಿಂದ ಸಾಧ್ಯ. ಕೆಲವು ವರ್ಷಗಳ ಹಿಂದೆ ಅಲ್ಲಿ ಉದ್ಯೋಗದಲ್ಲಿದ್ದ ಗೆಳೆಯ ಶ್ರೀನಿವಾಸ್‌, ನಾನು ಯಾವಾಗ ಮುಂಬೈಯನ್ನು ನೋಡಲು ಬಯಸಿದರೂ ಇಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡುವ ಭರವಸೆಯನ್ನು ನೀಡಿದ್ದರು.

ಇವೆಲ್ಲದರ ಜೊತೆಗೆ ಚಿತ್ತಾಲರ ಮನೆಗೆ ಹೋಗುವುದೂ ಸಾಧ್ಯವಾಗುವುದಾದರೆ…… ಅವರ ಕತೆಗಳಲ್ಲಿ ಕಾಣುವ ಅವರ ಡ್ರಾಯಿಂಗ್‌ ರೂಂ, ಬಾಲ್ಕನಿ, ಅಲ್ಲಿಂದ ಕಾಣುವ ಬ್ಯಾಂಡ್‌ ಸ್ಟ್ಯಾಂಡ್‌ ಬೀಚ್‌, ಅವರ ಲೈಬ್ರರಿ ಇವೆಲ್ಲವನ್ನು ನೋಡುವುದು ಸಾಧ್ಯವಾಗುವುದಾದರೆ… ಅವರು ಎಷ್ಟೋ ವರ್ಷಗಳು ಉಸಿರಾಡಿದ ಮನೆಯಲ್ಲಿನ ಗಾಳಿಯನ್ನು ಕೆಲವೇ ಕ್ಷಣಗಳಾದರೂ ನಾನು ಉಸಿರಾಡಲು ಸಾಧ್ಯವಾಗುವುದಾದರೆ… ಇದು ಸಾಧ್ಯವೇ…?

ಹೇಗೆ ಸಾಧ್ಯ?! ನನಗೆ ಅವರು ಕೃತಿಗಳ ಮೂಲಕ ಮಾತ್ರ ಪರಿಚಿತರು. ಅವರಿಲ್ಲದ ಮನೆಯಲ್ಲಿ ನಾನು ಅವರ ಅಭಿಮಾನಿ ಎಂದುಕೊಂಡು ಹೋಗುವುದಾದರೂ ಹೇಗೆ? ಅವರೇ ಇದ್ದಿದ್ದರೂ, ಹಾಗೆ ಏಕಾಏಕಿ ಅವರ ಮನೆಗೆ ನುಗ್ಗಲು ಸಾಧ್ಯವೇ?! ಆದರೂ ಈ ಆಸೆ ನನ್ನ ಮನದಲ್ಲಿ ಬೇರುಬಿಡುತ್ತಾ ಹೋದಂತೆ… ಕಡೆಕಡೆಗೆ ನಾನು ಮುಂಬೈಗೆ ಹೋಗಬೇಕೆಂದಿರುವುದೇ ಚಿತ್ತಾಲರ ಮನೆಯನ್ನು ನೋಡಲೇನೋ ಎಂಬಷ್ಟು ತೀವ್ರವಾಗತೊಡಗಿತು.

ಪ್ರವಾಸದ ಆಸೆಯನ್ನು ಮೊದಲು ಮನೆಯವರಲ್ಲಿ ಬಿತ್ತಿದೆ. ಮುಂಬೈಯನ್ನು ಅವರು ನೋಡಿದ್ದೂ ಮದುವೆಗೆ ಮುಂಚೆ ಯಾವುದೋ ಕೆಲಸದ ಮೇಲೆ ಹೋದಾಗ ಒಂದೆರಡು ದಿನಗಳ ಮಟ್ಟಿಗೆ. ಈಗ ಉತ್ಸಾಹದಿಂದಲೇ ರೂಪರೇಷೆಯನ್ನು ತಯಾರಿಸತೊಡಗಿದರು. ಅಕ್ಟೋಬರ್‌ 2ನೇ ತಾರೀಖಿನಿಂದ ಸತತವಾಗಿ ಐದು ದಿನಗಳು ಬ್ಯಾಂಕಿಗೆ ರಜೆಯಿದ್ದುದರಿಂದ ಆ ದಿನಗಳಲ್ಲಿ ನಾವಿಬ್ಬರು, ಮಗಳು ಅಳಿಯ ಮೊಮ್ಮಕ್ಕಳೊಂದಿಗೆ ಹೊರಡಬಹುದೆಂದು ತೀರ್ಮಾನಿಸಿದೆವು. ತಂಗಿಯ ಕುಟುಂಬವೂ ಜೊತೆಗೂಡಿದ್ದರಿಂದ ಶಿವರಾಂ ಅವರೂ ಆ ದಿನಗಳಲ್ಲಿ ಅಲ್ಲಿರುತ್ತಾರೆಂದು ಖಚಿತವಾಯಿತು.

ಗೆಳೆಯ ಶ್ರೀನಿವಾಸ್‌ ನಮ್ಮಿಬ್ಬರಿಗೂ ಸಮಾನ ಗೆಳೆಯರಾದ ಶ್ರೀ ಸುದರ್ಶನ್‌ರವರ ಮೂಲಕ ವಸತಿಗೃಹದ ವ್ಯವಸ್ಥೆ ಮಾಡಿಕೊಟ್ಟರು. ಪ್ರವಾಸದ ಎಲ್ಲ ವ್ಯವಸ್ಥೆಗಳೂ ಮುಗಿದವು. ಇನ್ನು ನನ್ನ ವೈಯಕ್ತಿಕ ಕನಸು – ಚಿತ್ತಾಲರ ಮನೆಯನ್ನು ನೋಡುವುದು ಸಾಧ್ಯವಾಗುವುದಾದರೆ… ತಕ್ಷಣವೇ ಶ್ರೀಯುತ ಜಯಂತ ಕಾಯ್ಕಿಣಿಯವರು ನೆನಪಾದರು.

ಚಿತ್ತಾಲರು ಕಾಲವಾದಾಗ ನಿಯತಕಾಲಿಕವೊಂದರಲ್ಲಿ ಬಂದ ಅವರ ಲೇಖನವನ್ನು ಓದಿದ್ದ ನನಗೆ ಅವರು ಚಿತ್ತಾಲರ ಕುಟುಂಬದವರಿಗೆ ಬಹಳ ಬೇಕಾದವರು ಎಂದು ಅರಿವಾಗಿತ್ತು. ಅದಕ್ಕೂ ಹಿಂದೆ ನಾನು ಜಯಂತರ ಬಣ್ಣದ ಕಾಲು ಹಾಗೂ ಚಾರ್‌ ಮಿನಾರ್‌ ಪುಸ್ತಕಗಳನ್ನು ಓದಿದ್ದ ಹೊಸತರಲ್ಲಿ ಅವರನ್ನು ಒಂದು ಸಮಾರಂಭದಲ್ಲಿ ಭೇಟಿಯಾಗಿದ್ದೆ. ಆ ಪುಸ್ತಕಗಳನ್ನು ಓದಿದಾಗ ನನಗೆ ಚಿತ್ತಾಲರ ನೆನಪಾದದ್ದನ್ನು ಅವರೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದೆ. ನಂತರ ಕೆಲವೇ ದಿನಗಳಲ್ಲಿ ಒಂದೆರಡು ಬಾರಿ ಬ್ಯಾಂಕಿನಲ್ಲಿ ಭೇಟಿಯಾಗಿದ್ದೆ.

ಏಕೆ ಒಮ್ಮೆ ಪ್ರಯತ್ನ ಪಡಬಾರದು ಎನ್ನಿಸಿ ಹಿಂಜರಿಕೆಯಿಂದಲೇ ಅವರಿಗೆ ಫೋನಾಯಿಸಿದೆ. ಸ್ವಲ್ಪ ಪರಿಚಯವನ್ನು ಹೇಳಿಕೊಳ್ಳುವಷ್ಟರಲ್ಲಿ ಅವರಿಗೆ ನನ್ನ ಗುರುತಾಯತು. ಹೇಗೆ ಕೇಳುವುದೋ… ಹಾಗೆಲ್ಲಾ ಸಾಧ್ಯವಿಲ್ಲ… ಎಂದು ಬಿಟ್ಟರೇ… ಎಂಬ ದುಗುಡದಿಂದಲೇ ನನ್ನ ಕನಸನ್ನು ಅವರೊಂದಿಗೆ ಹಂಚಿಕೊಂಡೆ. ಆದರೆ ನನ್ನ ಆಸೆ ಅವರ ಮನವನ್ನು ತಟ್ಟಿತು. “ನೀವು ಹೊರಡುವಾಗ ಹೇಳಿ ಅವರ ಮನೆಯವರನ್ನು ಸಂಪರ್ಕಿಸಿ ತಿಳಿಸುತ್ತೇನೆ” ಎಂದರು. ನನಗೋ, ತಕ್ಷಣವೇ ಅವರ ಮನೆಯಲ್ಲೇ ಇದ್ದುಬಿಟ್ಟೆನೇನೋ ಎನ್ನುವಂತ ಸಂಭ್ರಮ!

ನಿಗದಿಯಾದಂತೆ ಅಕ್ಟೋಬರ್‌ 2ನೇ ತಾರೀಖು ಮಧ್ಯಾಹ್ನ ಮುಂಬೈಯನ್ನು ತಲುಪಿದೆವು. ಆ ದಿನ ಮತ್ತು ಶುಕ್ರವಾರ ಹಾಗೂ ಶನಿವಾರ ಮುಂಬೈನ ಪ್ರವಾಸಿ ತಾಣಗಳನ್ನೆಲ್ಲಾ ನೋಡಿಕೊಂಡು ಭಾನುವಾರದ ಬೆಳಗನ್ನು ಚಿತ್ತಾಲರ ಮನೆಗೆ ಮೀಸಲಿರಿಸಿದೆವು. ಗುರುವಾರ, ಶುಕ್ರವಾರ ನಮ್ಮ ಕಾರ್ಯಕ್ರಮದಂತೆ ಪ್ರೇಕ್ಷಣೀಯ ಸ್ಥಳಗಳನ್ನು, ಬೀಚ್‌ಗಳನ್ನು ನೋಡಿಕೊಂಡು ಬಂದೆವು.

ಶನಿವಾರ ಮೊದಲೇ ನಿಗದಿಯಾದಂತೆ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಹಾಜಿ ಆಲಿ ದರ್ಗಾಗಳನ್ನು ನೋಡಿಕೊಂಡು ಶಾಪಿಂಗ್‌ಗೆ ತೆರಳುವಾಗ ಎರಡು ಟ್ಯಾಕ್ಸಿಯಲ್ಲಿ ಹಂಚಿಹೋದೆವು. ಮಾರುಕಟ್ಟೆ ಆವರಣವನ್ನು ಹೊಕ್ಕಾಗ ಗಮನಿಸಿಕೊಂಡರೆ ನನ್ನ ಕೈಚೀಲ ಟ್ಯಾಕ್ಸಿಯಲ್ಲೇ ಉಳಿದು ಹೋಗಿತ್ತು. ನನಗೆ ಭಾರವಾಗುತ್ತದೆಂದು ಸದಾ ಯಾರಾದರೊಬ್ಬರು ನನ್ನ ಕೈಚೀಲವನ್ನು ತರುತ್ತಿದ್ದರು. ಇಳಿಯುವ ಗಡಿಬಿಡಿಯಲ್ಲಿ ಕೆಳಗಿಟ್ಟುಕೊಂಡಿದ್ದ ಚೀಲವನ್ನು ಯಾರೂ ಗಮನಿಸಿರಲಿಲ್ಲ… ಅಷ್ಟೇ…

ಎಲ್ಲರೂ ಹುಡುಕಾಡತೊಡಗಿದರು… ನಾನು ತಂದಿದ್ದ ದುಡ್ಡೆಲ್ಲಾ ಅದರಲ್ಲೇ ಇದೆ. ಜೊತೆಗೆ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಮನೆಯ ಕೀಲಿಕೈ, ಲಾಕರಿನ ಕೀಲಿಕೈ, ನಮ್ಮ ಕಾರಿನ ಕೀಲಿ ಕೈ, ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್…‌ ಮೊಬೈಲ್‌ ಫೋನು… ತಲೆಕೆಟ್ಟು ಹೋಯಿತು. ಗಂಡ ಮಗಳು ಒಂದು ದಿಕ್ಕಿಗೆ ಓಡಿದರು… ಅಳಿಯ, ತಂಗಿಯ ಗಂಡ ಇನ್ನೊಂದು ದಿಕ್ಕಿಗೆ ಓಡಿದರು… ನನಗಂತೂ ಎಲ್ಲೂ ಓಡಲು ಸಾಧ್ಯವಿಲ್ಲವಲ್ಲ!  ಏನೂ ತೋಚದೆ ಅಂಗಡಿಯಿಂದ ಹೊರಬಂದು ಕಾರಿಡಾರಿನಲ್ಲಿ ಒಂದು ಮೆಟ್ಟಿಲ ಮೇಲೆ ಕಣ್ಣು ಮುಚ್ಚಿ ಕುಳಿತೆ…

ಸ್ವಲ್ಪ ಹೊತ್ತು ಮನಸ್ಸು ಪೂರ್ತಿ ಖಾಲಿಯಾದಂತೆನಿಸಿತು… ಏನು ಮಾಡಬೇಕೆಂದು ತೋಚಲಿಲ್ಲ… ಮುಂಬೈಯಂತಹ ಮಹಾನಗರಿಯಲ್ಲಿ ಕಳೆದು ಹೋದ ಕೈಚೀಲ ಸಿಗುವ ಸಂಭವವಿದೆಯೇ… ಸಿದ್ಧಿ ವಿನಾಯಕ, ಮಹಾಲಕ್ಷ್ಮಿ, ಹಾಜಿ ಆಲಿ ಎಲ್ಲರೂ ಕಣ್ಣ ಮುಂದೆ ಒಬ್ಬೊಬ್ಬರಾಗಿ ಬರತೊಡಗಿದರು.. ಕಾರ್ತಿವೀರ್ಯಾರ್ಜುನ ಸ್ತೋತ್ರ ಸಂಪೂರ್ಣವಾಗಿ ಬರುವುದಿಲ್ಲ… ಅದರ ಭಾವವನ್ನು ಮನಸ್ಸಿಗೆ ತಂದುಕೊಂಡು ಹತ್ತು ನಿಮಿಷ ಸಂಪೂರ್ಣವಾಗಿ ಧ್ಯಾನದಲ್ಲಿ ಮುಳುಗಿದೆ. ಕಣ್ಣು ತೆರೆದಾಗ ತಂಗಿ ಹೇಳುತ್ತಿದ್ದಳು ʻನನಗೇನೋ ಸಿಕ್ಕುತ್ತದೆ ಅನ್ನಿಸ್ತಿದೆʼ. ಆಸೆಯೇ ಬೆಳಕು ತಾನೆ. ಎಲ್ಲರ ಮುಖದಲ್ಲೂ ದುಗುಡ. ಏನು ಮಾಡಬೇಕೆಂದು ತಿಳಿಯದ ಭಾವ. ಮೊಮ್ಮಕ್ಕಳ ಗಲಾಟೆ ಹೆಚ್ಚಾದಾಗ ಹೊರಗಡೆ ಬಂದು ಒಂದು ಕಟ್ಟೆಯ ಮೇಲೆ ಕುಳಿತೆವು.

ಪೋಲೀಸ್‌ ಚೌಕಿಗೆ ಹೋಗಿದ್ದ ಮಗಳು. ಯಜಮಾನರು ಸಪ್ಪೆ ಮುಖದಿಂದ ಬಂದಿದ್ದರು. ಅಳಿಯ ಮತ್ತು ತಂಗಿಯ ಗಂಡ ಇನ್ನೂ ಪೋಲೀಸ್‌ ಠಾಣೆಯಲ್ಲೇ ಕಂಪ್ಲೇಂಟ್‌ ಕೊಡಲು ಉಳಿದಿದ್ದರು. ಇದ್ದಕ್ಕಿದ್ದಂತೆ ಏನೋ ಹೊಳೆದು ತಂಗಿಗೆ ನನ್ನ ಫೋನಿಗೆ ಕರೆಮಾಡಲು ಹೇಳಿದೆ. ಆಶ್ಚರ್ಯ! ಕರೆ ಹೋಗುತ್ತಿತ್ತು… ಯಾರೂ ತೆಗೆದುಕೊಳ್ಳಲಿಲ್ಲ. ಸ್ವಲ್ಪ ಸ್ವಲ್ಪ ಸಮಯ ಬಿಡುವು ಕೊಟ್ಟು ಮತ್ತೆ ಮತ್ತೆ ಮಗಳು, ಗಂಡ, ತಂಗಿ ಎಲ್ಲರೂ ಕರೆಮಾಡಲು ಶುರು ಮಾಡಿದರು….

ಸ್ವಲ್ಪ ಕಾಲದ ನಂತರ ಕರೆ ಹೋಗುವುದು ಬಂದಾಗಿ ವ್ಯಾಪ್ತಿ ಪ್ರದೇಶದಿಂದ ದೂರ ಉಳಿಯಿತು. ಅಲ್ಲಿಗೆ ಯಾರದೋ ಪಾಲಾಗಿದೆಯೆನ್ನುವುದು ಖಾತ್ರಿಯಾಯಿತು. ವಾಪಸ್ಸು ಸಿಗುವ ಅವಕಾಶ ಬಹಳ ದೂರವೆನ್ನಿಸತೊಡಗಿತು. ಪೋಲೀಸ್‌ ಠಾಣೆಗೆ ಹೋದವರು ಬರುವ ತನಕ ಕಾದು ಆಮೇಲೆ ಏನು ಮಾಡುವುದೆಂದು ತೀರ್ಮಾನಿಸುವುದೆಂದು ಸುಮ್ಮನೇ ಕುಳಿತೆವು. ಮಕ್ಕಳಿಗೆ ಹಸಿವು, ಬೇಜಾರು; ಹಿರಿಯರಿಗೆ ದುಗುಡ, ಅಸಹನೆ. ಒಟ್ಟಿನಲ್ಲಿ ಒಂದು ಉಸಿರುಗಟ್ಟುವ ವಾತಾವರಣ…

ಇಷ್ಟರ ಮಧ್ಯೆ ನನ್ನ ಮನದಲ್ಲಿ ನಾಳೆ ಚಿತ್ತಾಲರ ಮನೆಗೆ ಹೋಗುವುದು ಹೇಗೆ? ಆ ಮೊಬೈಲಲ್ಲಿ ಕಾಯ್ಕಿಣಿಯವರ ನಂಬರ್‌ ಇದೆ. ಅದೇ ಕಳೆದು ಹೋದರೆ ನಾನು ಅವರನ್ನು ಸಂಪರ್ಕಿಸುವುದು ಹೇಗೆ? ಅವರೇ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ನಾನು ಅವರಿಗೆ ಸಿಗಲು ಹೇಗೆ ಸಾಧ್ಯ? ಅಲ್ಲಿಗೆ ನನ್ನ ಚಿತ್ತಾಲರ ಮನೆಯನ್ನು ನೋಡುವ ಆಸೆ ಬರಿಯ ಕನಸೇ..?? ಗೂಗಲ್‌ನಲ್ಲಿ ಅವರ ಮನೆಯನ್ನು ಹುಡುಕಿದರೆ! ಮನೆ ಸಿಕ್ಕರೂ ಮನೆಯೊಳಗೆ ಹೋಗುವುದು ಹೇಗೆ? ಅವರ ಮನೆಯವರ್ಯಾರಿಗೂ ಕನ್ನಡ ಬರುವುದಿಲ್ಲವೆಂದು ಕಾಯ್ಕಿಣಿಯವರು ಹೇಳಿದ್ದರು.

ಅವರ ಪಾಲಿಗೆ ನಾನು ಸಂಪೂರ್ಣ ಅಪರಿಚಿತಳು. ಇಲ್ಲ; ಅಷ್ಟೊಂದು ಸೀದಾ ಒಳಗೆ ನುಗ್ಗುವಷ್ಟು ಧಾಷ್ರ್ಟ್ಯ ನನಗಿಲ್ಲ. ಆ ರೀತಿ ನಾನೇ ನನ್ನನ್ನು ಪರಿಚಯಿಸಿಕೊಂಡು ಅವರ ಮನೆ ಬಾಗಿಲಲ್ಲಿ ನಿಂತರೆ ಅವರು ಹೇಗೆ ತಾನೇ ಒಳಗೆ ಕರೆದುಕೊಳ್ಳುತ್ತಾರೆ?! ಮುಂಬೈಗೆ ಬಂದದ್ದೇ ವ್ಯರ್ಥವಾಯಿತೇ… ಮನದೊಳಗಣ ದುಃಖವನ್ನು ಹೊರಗೆಡವುವಂತಿಲ್ಲ. ಏಕೆಂದರೆ ನನ್ನ ಈ ಆಸೆ, ಅಸ್ಥೆ, ಅದರ ತೀವ್ರತೆ ಬೇರೆಯವರಿಗೆ ಹೇಗೆ ಅರಿವಾಗಲು ಸಾಧ್ಯ! ಪರ್ಸೇ ಕಳೆದು ಹೋಗಿದೆಯೆಂದಾಗ ಇವಳಿಗೆ ಈ ಹುಚ್ಚಾ? ಎನ್ನಬಹುದು. ಮನದ ಭಾವ ನಾಲಗೆಗೆ ಬರದಂತೆ ತಡೆದುಕೊಂಡೆ.

ತಕ್ಷಣದಲ್ಲಿ ಏನು ಮಾಡಬೇಕೆಂದು ತೀರ್ಮಾನಿಸಿ ತಂಗಿಯ ಫೋನನ್ನು ಕೈಗೆತ್ತಿಕೊಂಡು ನನ್ನ ಎಲ್ಲಾ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡುಗಳನ್ನು ಬ್ಲಾಕ್‌ ಮಾಡತೊಡಗಿದೆ. ಎಲ್ಲ ಕಾರ್ಡುಗಳೂ ರದ್ದಾದ ಮೇಲೆ ಒಂದು ನೆಮ್ಮದಿ. ತಂದಿದ್ದ ದುಡ್ಡು… ಎಲ್ಲವೂ ಪರ್ಸಲ್ಲೇ ಇತ್ತು. ಕೈಗಾವಲಿಗೆಂದು ಸೂಟ್ಕೇಸಿನಲ್ಲಿ ಸ್ವಲ್ಪವನ್ನು ಮಾತ್ರ ಇಟ್ಟಿದ್ದೆ. ಈಗ ಕಾರ್ಡೂ ಇಲ್ಲ, ಮನೆಯ, ಲಾಕರಿನ, ಕಾರಿನ ಕೀಲಿಕೈ… ದೇವರೇ ಯಾವ್ಯಾವುದನ್ನು ಬದಲಿಸಬೇಕೋ… ಪ್ಯಾನ್‌ ಕಾರ್ಡ್‌, ಆಧಾರ್‌, ಬ್ಯಾಂಕಿನ ಐಡೆಂಟಿಟಿ ಕಾರ್ಡ್…‌ ಮರು ಪ್ರಯಾಣದ ಟಿಕೇಟು, ಲೋನಾವಾಲಾದ ವಸತಿಯನ್ನು ಕಾಯ್ದಿರಿಸಿದ ಪತ್ರ, ಇನ್ನೂ ಏನೇನಿತ್ತೋ… ಪರದಾಟಗಳ ಸರತಿ ಸಾಲು ನನ್ನ ಕಣ್ಣ ಮುಂದೆ ಮೆರವಣಿಗೆಯಲ್ಲಿ ಸಾಗಿ, ಮುಂಬೈಗೆ ಬಂದ ಉತ್ಸಾಹ ಒಮ್ಮೆಲೇ ಇಳಿದು ಹೋಯಿತು…

ಎಷ್ಟೋ ಹೊತ್ತು ಕಳೆದ ನಂತರ ಅಳಿಯ ಓಡೋಡಿ ಬರುತ್ತಾ ʻಅವನು ಫೋನ್‌ ತೊಗೊಂಡಿದಾನೆ. ಏನೋ ಅಡ್ರೆಸ್‌ ಹೇಳ್ತಿದಾನೆ. ನಿನ್ನ ಫೋನ್‌ ಕೊಡು. ಲೊಕೇಶನ್‌ ಹಾಕ್ತೀನಿ” ಎಂದು ಮಗಳನ್ನು ಕೇಳಿದರು “ಅರೆ! ಸಿಕ್ಕನಾ?” ಎಲ್ಲರೂ ಒಮ್ಮೆಗೇ ಕೇಳಿದೆವು. “ನಾವಿಬ್ರೂ ಹೋಗ್ತಿದೀವಿ. ಬಾಂದ್ರಾ ವೆಸ್ಟ್‌ನಲ್ಲಿ ಯಾವುದೋ ಅಡ್ರೆಸ್‌ ಹೇಳಿದ. ಇಲ್ಲಿಂದ ಇಪ್ಪತ್ತರಿಂದ ಮೂವತ್ತು ನಿಮಿಷದ ದಾರಿಯಂತೆ” ಎನ್ನುತ್ತಾ ಮತ್ತೆ ಓಡಿದರು. ಮತ್ತೆ ಆಸೆಯ ಹಣತೆ ಮೆಲ್ಲಗೆ ಹತ್ತಿಕೊಂಡಿತು. ಅವರು ಬರುವ ತನಕ ಏನೂ ತಿಳಿಯುವುದಿಲ್ಲ. ಕಾಯುವುದು ಬಿಟ್ಟು ಬೇರೆ ದಾರಿಯಿಲ್ಲ.

ಒಂದೊಂದು ಕ್ಷಣವೂ ಭಾರವೇ. ಮಾತಾಡಲು ಮನಸ್ಸಿಲ್ಲ. ಅನಿಶ್ಚಿತ ವಾತಾವರಣದಲ್ಲಿ ಮಾತೂ ಪರದೇಶಿಯೇ… ಮಕ್ಕಳಿದ್ದುದರಿಂದಷ್ಟೇ ಗದ್ದಲ. ಅರ್ಧವಿದ್ದದ್ದು, ಮುಕ್ಕಾಲು ಗಂಟೆಯಾದರೂ ನಾವು ಕೇಳ ಬಯಸುತ್ತಿದ್ದ ಕರೆಯಿಲ್ಲ. ಇಬ್ಬರ ಮೊಬೈಲಿಗೂ ಫೋನಾಯಿಸಿದೆವು. “ನಾವು ಅಂದುಕೊಂಡಷ್ಟು ಸಲೀಸಲ್ಲ. ಬಂದು ಹೇಳ್ತೀವಿ” ಎನ್ನುತ್ತಾ ಫೋನಿಟ್ಟರು. ಹತ್ತಿಕೊಂಡ ಹಣತೆ ಆರತೊಡಗಿದೆಯೇನೋ ಅನ್ನಿಸಹತ್ತಿತು. ಮತ್ತೆ ಮೊದಲ ಭಾವವೇ ಎಲ್ಲರ ಮುಖದಲ್ಲಿ. ಆಡಲು ಮಾತಿಲ್ಲ; ಮೌನ ಬೇಕಿಲ್ಲ. ಮತ್ತೆ ಮತ್ತೆ ಅವರಿಗೆ ಫೋನ್‌ ಮಾಡಿ ಬೈಸಿಕೊಂಡ ಮೇಲೆ ತೆಪ್ಪಗೆ ಕುಳಿತೆವು. ಮಕ್ಕಳ ತಾಳ್ಮೆಯ ಮಿತಿಯೂ ಮೀರಿತು.

ಎಲ್ಲರ ಸಹನೆಯ ಕಟ್ಟೆಯೊಡೆಯುವ ಹೊತ್ತಿಗೆ ನಾವು ಕಾಯುತ್ತಿದ್ದ ಆ ಕರೆ ಅಂತೂ ಬಂತು. “ಅಮ್ಮಾ, ಪರ್ಸಿನಲ್ಲಿ ಏನೇನಿತ್ತು?” ಅಳಿಯ ಕೇಳುತ್ತಿದ್ದರು. ಎಲ್ಲ ವಿವರಗಳನ್ನೂ ಕೊಟ್ಟೆ. ಅವರೂ ಹುಡುಕುತ್ತಾ ಹೋದರು. ದುಡ್ಡೊಂದು ಬಿಟ್ಟು ಮಿಕ್ಕೆಲ್ಲವೂ ಪರ್ಸಿನಲ್ಲಿತ್ತು. ದುಡ್ಡಿನಲ್ಲೂ ಸುಮಾರು ಮೂರೂವರೆ ಸಾವಿರದಷ್ಟನ್ನು ಬಿಟ್ಟಿದ್ದ. ಎಲ್ಲರ ಮುಖದಲ್ಲೂ ಒಂದು ರೀತಿಯ ನಿರಾಳತೆ. ಪರ್ಸು ಸಿಕ್ಕಿತೆಂದು ಸಂಪೂರ್ಣ ಸಂತೋಷವಿಲ್ಲ. ಆದರೆ ಮುಂದಿನ ಪರದಾಟದ ಒಂದು ದೊಡ್ಡ ಸರಪಣಿ ತಪ್ಪಿತಲ್ಲ ಎನ್ನುವ ಬಹು ದೊಡ್ಡ ಸಮಾಧಾನವಂತೂ ಎಲ್ಲರಿಗೂ ಆಯಿತು.

ಅಂತೂ ಇನ್ನರ್ಧ ಗಂಟೆ ಕಾದಮೇಲೆ ನನ್ನ ಪರ್ಸ್‌ ನನ್ನ ಕೈಸೇರಿತು. ಸಿದ್ಧಿ ವಿನಾಯಕನ ಕೃಪೆಯೋ, ಮಹಾಲಕ್ಷ್ಮಿಯ ದಯೆಯೋ, ಹಾಜಿ ಆಲಿಯ ಪವಾಡವೋ, ಕಾರ್ತಿವೀರ್ಯಾರ್ಜುನನ ಮಹಿಮೆಯೋ ಅಥವಾ ಧ್ಯಾನಕ್ಕಿರುವ ಶಕ್ತಿಯೋ…… ಅಂತೂ ಮುಂಬೈಯೆಂಬ ಮಹಾನಗರಿಯಲ್ಲಿ ಪ್ರವಾಸಿಯೊಬ್ಬಳ ಕಳೆದು ಹೋದ ಕೈಚೀಲ ಕೆಲವೇ ಗಂಟೆಗಳಲ್ಲಿ ಮತ್ತೆ ಸಿಕ್ಕಿತು ಎನ್ನುವುದೇ ಒಂದು ಅಸಾಧಾರಣ ವಿಷಯವೆಂಬಂತೆ ಎಲ್ಲರಿಗೂ ಭಾಸವಾಯಿತು.

ಎಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿದೆ. ಏನೇನೋ ತಪ್ಪು ಕೀಲಿಗಳ ಪ್ರಯತ್ನ ಮಾಡಿದ್ದರಿಂದ ಮೊಬೈಲ್‌ ಲಾಕ್‌ ಆಗಿಹೋಗಿತ್ತು. ಅಷ್ಟು ಹೊತ್ತಿಗೆ ಸಂಜೆ ನಾಲ್ಕರ ಸಮಯ. ಇಷ್ಟು ಹೊತ್ತೂ ಎಲ್ಲೋ ಅಡಗಿದ್ದ ಹಸಿವು ಎಲ್ಲರ ಹೊಟ್ಟೆಯಲ್ಲೂ ಒಮ್ಮೆಲೆ ಕುಣಿಯತೊಡಗಿತು. ತಿಂಡಿ ತಿನ್ನುತ್ತಿರುವಾಗ ಸಾಕಷ್ಟು ಸುತ್ತಾಡಿಸಿ, ಕಡೆಗೆ ಒಂದು ಕಿತ್ತುಹೋದ ಗಲ್ಲಿಯ ಅರ್ಧ ಬಿದ್ದುಹೋದ ಮಳಿಗೆಯಲ್ಲಿ ಒಂದು ಬಾಟಲ್‌ ಪೆಪ್ಸಿಯನ್ನೂ, ಅವನ ವಿಸಿಟಿಂಗ್‌ ಕಾರ್ಡನ್ನೂ ಕೊಟ್ಟು ಚೀಲವನ್ನು ಕೊಟ್ಟ ಕತೆಯನ್ನು ರಸವತ್ತಾಗಿ ಹೇಳಿದರು.

ಅವನು ವಾಪಸ್ಸು ಕೊಟ್ಟಿದ್ದಕ್ಕೆ ಪ್ರತಿಯಾಗಿ ಎರಡು ಸಾವಿರ ರೂಪಾಯಿಗಳ ಭಕ್ಷೀಸನ್ನೂ ಕೊಟ್ಟಿದ್ದರು. ಭಂಡ! ಅದನ್ನೂ ಸಂತೋಷವಾಗೇ ತೆಗೆದುಕೊಂಡಿದ್ದ. ಏನೇ ಆದರೂ ಅವನಿಗೆ ಉಪಯೋಗವಿಲ್ಲವೆಂದು ಬಿಸಾಡದೆ ಮಿಕ್ಕೆಲ್ಲಾ ವಸ್ತುಗಳನ್ನೂ ಜೋಪಾನವಾಗಿ ಕೊಟ್ಟಿದ್ದಕ್ಕೆ, ನಮ್ಮ ಮುಂದಿನ ಪರದಾಟಗಳ ಸರಮಾಲೆಯನ್ನು ತಪ್ಪಿಸಿದ್ದಕ್ಕೆ ಅವನಿಗೆ ಎಲ್ಲರೂ ಕೃತಜ್ಞತೆಗಳನ್ನು ಹೇಳಿಕೊಂಡೆವು. ಮುಂಬೈ ಪ್ರವಾಸ ಕಥನದ ರೋಚಕ ಆಕ್ಷನ್‌ ಸನ್ನಿವೇಶ ಹೀಗೆ ಸುಖಾಂತವಾಗಿತ್ತು.

ಬೆಳಗ್ಗೆ ಕಾಫಿ ಕುಡಿಯುತ್ತಿದ್ದಾಗ ಅಳಿಯ, ಮಗಳು ರಾತ್ರಿ ಎಷ್ಟೋ ಹೊತ್ತು ರಿಪೇರಿ ಮಾಡಿದ್ದ ಮೊಬೈಲ್‌ ನನ್ನ ಕೈಸೇರಿತು. ತಕ್ಷಣವೇ ಸಂಪರ್ಕ ಸಂಖ್ಯೆಗಳೆಲ್ಲವೂ ಸುರಕ್ಷಿತವಾಗಿವೆಯೇ ಎಂದು ನೋಡಿದೆ. ಕಾಯ್ಕಿಣಿಯವರ ದೂರವಾಣಿ ಸಂಖ್ಯೆಯನ್ನು ನೋಡಿದ ಬಳಿಕ ಸಮಾಧಾನವಾಯಿತು. ಹೋಗುವುದೇ ಇದ್ದರೆ ಹೇಗೋ ಆಗೇ ಆಗತ್ತೆ ಅಂತ ಸ್ವಲ್ಪ ಜಂಭ ಪಟ್ಟುಕೊಂಡೆ. ಎಂಟು ಗಂಟೆಯಾಗುವುದನ್ನೇ ಕಾದು ಕಾಯ್ಕಿಣಿಯವರಿಗೆ ಕರೆ ಮಾಡಿದೆ.

ಎರಡು ಬಾರಿ ಪ್ರಯತ್ನಿಸಿದರೂ  ಆ ಕಡೆಯಿಂದ ಉತ್ತರವಿಲ್ಲ. ಮತ್ತೆ ನಿರಾಶೆ… “ಚಿತ್ತಾಲರ ಮನೆಯ ಅಡ್ರೆಸ್‌ ಹುಡುಕಿ ಕೊಡಲಾ?” ಎಂದಳು ಮಗಳು ಗೂಗಲ್‌ನಲ್ಲಿ ಹುಡುಕುತ್ತಾ. “ಅವರ ಮಗನ ಟೆಲಿಫೋನ್‌ ನಂಬರ್‌ ಕೂಡಾ ಇದೆ. ಒಮ್ಮೆ ಮಾಡಿ ನೋಡು. ಬನ್ನಿ ಎಂದರೆ ಹೋದರಾಯಿತು” ಎಂದಳು. ಹಾಗೆ ಮಾಡಬಹುದೇ ಎಂದು ಯೋಚಿಸುತ್ತಿರುವಾಗಲೇ ನನ್ನ ಫೋನ್‌ ಕರೆಯಿತು. ನೋಡಿದರೆ ಕಾಯ್ಕಿಣಿಯವರು. ಸಂಭ್ರಮದಿಂದ ಕೈಗೆತ್ತಿಕೊಂಡೆ. “ಯಾವಾಗ ಹೋಗುತ್ತಿದ್ದೀರಿ” ಅವರ ಎಂದಿನ ಸಡಗರದ ದನಿಯಲ್ಲಿ ಕೇಳಿದರು. “ಇಂದೇ.. ಈಗ ತಿಂಡಿ ತಿಂದು ಹೊರಡೋಣಾಂತ” ಮನದ ಸಂಭ್ರಮಕ್ಕೆ ಎರಡು ರೆಕ್ಕೆ ಕಟ್ಟಿಕೊಂಡು ಹೇಳಿದೆ. “ಸರಿ ಹಾಗಾದ್ರೆ. ಅವರೊಂದಿಗೆ ಮಾತಾಡಿ ನಿಮಗೆ ವಿಳಾಸ, ಫೋನ್‌ ನಂಬರ್‌, ದಾರಿಯ ಸುಳಿಹು ಎಲ್ಲವನ್ನೂ ಕೊಡ್ತೀನಿ. ಪ್ರಾಯಶಃ ಎಲ್ಲೂ ಹೋಗಿರಲಾರರು. ಆದರೂ ಒಮ್ಮೆ ಮಾತಾಡಿ ಹೇಳ್ತೀನಿ” ಎಂದು ಫೋನಿಟ್ಟರು. ʻದೇವರೇ ಅವರು ಮನೆಯಲ್ಲೇ ಇರಲಿʼ ಎಂದುಕೊಳ್ಳುತ್ತಾ ಹೊರಡುವ ಸಿದ್ಧತೆ ನಡೆಸತೊಡಗಿದೆ.

ಮತ್ತೆ ಕೆಲವೇ ನಿಮಿಷಗಳಲ್ಲಿ ಕರೆ ಬಂತು ಕಾಯ್ಕಿಣಿಯವರಿಂದ. “ಚಿತ್ತಾಲರ ಹೆಂಡತಿ ಮಾಲತಿ ಮನೆಯಲ್ಲೇ ಇರುತ್ತಾರೆ. ಮಗನಿಗೆ ಎಲ್ಲೋ ಹೊರಹೋಗುವುದಿದೆಯಂತೆ. ನಿಮ್ಮ ಬಗ್ಗೆ ಹೇಳಿದ್ದೇನೆ. ಅಗತ್ಯವಾಗಿ ಹೋಗಿ ಬನ್ನಿ. ಬ್ಯಾಂಡ್‌ ಸ್ಟ್ಯಾಂಡ್‌ ಬೀಚಿನ ಕಡೆಯ ಮನೆಯೇ ಅದು. ಶಾರೂಖ್‌ ಖಾನನ ಮನೆಯ ಪಕ್ಕದ ಕಟ್ಟಡ. ಬ್ಯಾಂಡ್‌ ಸ್ಟ್ಯಾಂಡ್‌ ಅಪಾರ್ಟ್‌ಮೆಂಟ್‌ ಅಂತಲೇ ಇದೆ. ಕಟ್ಟಡದ ಕೆಳ ಅಂತಸ್ತಿನಲ್ಲಿ ಕಾಫಿ ಡೇ ಇದೆ. ಅದರ ಮೇಲಿರುವ ಬಾಲ್ಕನಿಯೇ ಚಿತ್ತಾಲರ ಮನೆಯ ಬಾಲ್ಕನಿ. ಮೊದಲ ಅಂತಸ್ತಿನಲ್ಲೇ ಅವರ ಮನೆಯಿರುವುದು. ದೂರವಾಣಿ ಸಂಖ್ಯೆ ಇದು ತೆಗೆದುಕೊಳ್ಳಿ…” ಕನಸಿನಲ್ಲಿರುವಂತೆ ಎಲ್ಲವನ್ನೂ ಕೇಳಿಸಿಕೊಂಡೆ, ಬರೆದುಕೊಂಡೆ……

ಅಂದುಕೊಂಡ ಹಾಗೆಯೇ ತಿಂಡಿ ತಿಂದು ಎಲ್ಲರೂ ಹೊರಟೆವು. ಮಗಳು ಅಳಿಯನಿಗೆ ಮುಂಬೈಗೆ ಬಂದಾಗಿನಿಂದಲೂ ಒಳ್ಳೆಯ ಕಾಫಿ ಸಿಕ್ಕಿರಲಿಲ್ಲ. ʻಕಾಫಿ ಡೇʼ ಎಂದ ತಕ್ಷಣ ಅವರ ಕಿವಿಗಳು ನೆಟ್ಟಗಾದವು. “ಮಕ್ಕಳನ್ನು ಇಟ್ಟುಕೊಂಡು ನಾವು ಕಾಫಿ ಡೇನಲ್ಲಿ ಇರ್ತೀವಿ ನೀವು ಎಷ್ಟು ಹೊತ್ತು ಬೇಕಾದರೂ ಅವರ ಮನೆಯಲ್ಲಿದ್ದು ಬನ್ನಿ” ಎಂದರು. ಅದೂ ಸರಿಯೇ. ಮಕ್ಕಳನ್ನು ಕಟ್ಟಿಕೊಂಡು ಅವರ ಮನೆಗೆ ಹೋಗುವುದು ಅಷ್ಟು ಸರಿಯಾಗುವುದಿಲ್ಲ ಎಂದುಕೊಂಡು ʻಹಾಗೇ ಮಾಡೋಣʼ ಎಂದೆವು. ಟ್ಯಾಕ್ಸಿವಾಲಾನಿಗೆ ವಿಳಾಸ ಹೇಳುವುದೇನೂ ಕಷ್ಟವಿರಲಿಲ್ಲ. ದಾರಿಯಲ್ಲಿ ಒಂದಷ್ಟು ಹಣ್ಣು ಹೂವುಗಳನ್ನು ತೆಗೆದುಕೊಂಡು ಹೋಗಬೇಕು ಎಂದುಕೊಂಡು ದಾರಿಯುದ್ದಕ್ಕೂ ಹುಡುಕಿದರೂ ಒಂದಾದರೂ ಹಣ್ಣಿನಂಗಡಿ ಇನ್ನೂ ತೆರೆದಿರಲಿಲ್ಲ. ಅವರ ಮನೆಯ ಹತ್ತಿರ ಹತ್ತಿರ ಬರುವಾಗ ಬರಿಯ ಬಾಳೆಹಣ್ಣು ಮಾತ್ರ ಸಿಕ್ಕಿತು. ಸರಿ, ಅದನ್ನೇ ತೆಗೆದುಕೊಂಡೆವು.

ಟ್ಯಾಕ್ಸಿಯಿಂದ ಇಳಿದ ತಕ್ಷಣವೇ ಅಳಿಯ ಕಾಫಿ ಡೇ ಯೊಳಗೆ ಹೋಗಿ ಅಲ್ಲಿಂದ ಒಂದು ದೊಡ್ಡ ಕುಕೀಸ್‌ ಡಬ್ಬವನ್ನು ತಂದು ಕೈಗಿತ್ತರು. ಸ್ವಲ್ಪ ಸಮಾಧಾನವಾಯಿತು. ನಾನು, ನನ್ನವರು ಅಪಾರ್ಟ್‌ಮೆಂಟಿನ ಒಳಹೊಕ್ಕೆವು. ಗೂರ್ಖ ಯಾರ ಮನೆಗೆಂದು ವಿಚಾರಿಸಿದವನು ʻಸಾಹಬ್‌ ಮನೆಯಲ್ಲಿಲ್ಲ; ಈಗಷ್ಟೇ ಹೊರಹೋದರು” ಎಂದ. “ಪರವಾಗಿಲ್ಲ. ನಾವು ಮೇಡಂ ಅವರನ್ನು ಕಾಣಲು ಬಂದಿದ್ದೇವೆ” ಎಂದೆವು. “ಸರಿ ಹಾಗಾದರೆ” ಎನ್ನುತ್ತಾ ಲಿಫ್ಟಿನಲ್ಲಿ ನಮ್ಮನ್ನು ಕರೆದೊಯ್ದು ಅವರ ಮನೆಯ ಬಾಗಿಲಿಗೆ ತಲುಪಿಸಿದ. ಒಂದು ಬಗೆಯ ಹಿಂಜರಿಕೆಯಿಂದಲೇ ಮನೆಯ ಕರೆಗಂಟೆಯನ್ನು ಒತ್ತಿದೆವು.

ಬಾಗಿಲು ಸ್ವಲ್ಪ ತೆರೆಯಿತು. ಸರಳ ಉಡುಪಿನಲ್ಲಿದ್ದ ಹೆಂಗಸೊಬ್ಬರು “ನೀವು” ಎಂದರು. ಹೆಸರು ಹೇಳಿದೆ. ಕದವನ್ನು ಪೂರ್ತಿಯಾಗಿ ತೆರೆಯುತ್ತಾ “ಒಳಗೆ ಬನ್ನಿ; ಜಯಂತ ಫೋನ್‌ ಮಾಡಿ ತಿಳಿಸಿದ” ಎನ್ನುತ್ತಾ ಒಳಗೆ ಕರೆದೊಯ್ದರು. ಅವರೇ ಚಿತ್ತಾಲರ ಮಡದಿಯೆಂದು ಅರಿವಾಯಿತು. ಅವರೂ ತಮ್ಮ ಪರಿಚಯವನ್ನು ಮಾಡಿಕೊಂಡರು. ಅವರಿಗೆ ಕನ್ನಡ ಬರುವುದಿಲ್ಲವೆಂದು ಕಾಯ್ಕಿಣಿಯವರು ಹೇಳಿದ್ದರಿಂದ ನಮ್ಮ ಸಂಭಾಷಣೆ ಇಂಗ್ಲೀಷಿನಲ್ಲಿ ಸಾಗಿತು.

ಡ್ರಾಯಿಂಗ್‌ ರೂಮಿನ ಒಳ ಹೋಗುತ್ತಲೇ ಒಂದು ಮೂಲೆಯಲ್ಲಿ ಕಾಣುವ ಚಿತ್ತಾಲರ ಒಂದು ಸುಂದರ ಫೋಟೋ. ನೋಡುತ್ತಲೇ ನಾನು ಅತ್ಯಂತ ಭಾವುಕಳಾದೆ. ನಾನು ಚಿತ್ತಾಲರನ್ನು ಓದಲು ಶುರುಮಾಡಿದ ಆ ದಿನಗಳಲ್ಲಿ ಮುಂದೊಂದು ದಿನ ಅವರ ಮನೆಗೆ ಹೋಗುತ್ತೇನೆಂದು ಕನಸಿನಲ್ಲೂ ಕಂಡಿರಲಿಲ್ಲ… ಶಿವಮೊಗ್ಗೆಯ ಸಾಹಿತ್ಯ ಸಮ್ಮೇಳನದಲ್ಲೊಮ್ಮೆ ದೂರದಿಂದ ಕಂಡ ನೆನಪು. ಹಾಗೆಯೇ ಒಮ್ಮೆ ನಮ್ಮ ಬ್ಯಾಂಕಿನ ಬೆಂಗಳೂರು ಶಾಖೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಮಾತುಗಳನ್ನು ಕೇಳಿದ ನೆನಪು. ಅವರಿದ್ದಾಗಲೇ ಇಲ್ಲಿಗೆ ಬರಲು ಸಾಧ್ಯವಾಗಿದ್ದರೆ…. ಅಂದುಕೊಂಡೆ.

ಆಗಿದ್ದರೆ ಎಂದುಕೊಳ್ಳುವುದಕ್ಕಿಂತ ಇಂದು ಸಾಧ್ಯವಾದದ್ದಕ್ಕೆ ಸಂತೋಷ ಪಡೋಣ ಎಂದುಕೊಂಡು ಅಲ್ಲಿಯೇ ಮಾತಾಡುತ್ತಾ ಕುಳಿತೆವು. ಮಗ ಹೊರಗೆ ಕೆಲಸದ ಮೇಲೆ ಹೋಗಿದ್ದಾರೆಂದರು. ಮೊಮ್ಮಗನನ್ನೂ, ಸೊಸೆಯನ್ನೂ ಪರಿಚಯಿಸಿದರು. ನಾವು ಕುಳಿತಲ್ಲಿಗೇ ಎದುರು ಕಾಣುವ ಸಮುದ್ರ. ಅದ್ಭುತವಾದ ಮನೆಯದು. ಅದರ ಶ್ರೀಮಂತಿಕೆಯಿಂದಲ್ಲ. ಮನೆಯನ್ನು ಮನೆಯೆಂದುಕೊಳ್ಳುವಂತೆ ಇಟ್ಟುಕೊಂಡಿದ್ದ ರೀತಿಯಿಂದ…

ಎಲ್ಲೆಲ್ಲೂ ಕಾಣುತ್ತಿದ್ದ ಶುಭ್ರತೆ, ಅಲಂಕರಣದಲ್ಲಿ ಕಾಣುತ್ತಿದ್ದ ಕಲಾತ್ಮಕತೆ, ಎಲ್ಲ ವಸ್ತುಗಳಲ್ಲೂ ಅಲ್ಲಲ್ಲಿಗೆಂದೇ ಹೇಳಿ ಮಾಡಿಸಿದಂತಿದ್ದ ಓರಣ…… ನನ್ನ ಜೀವಮಾನದಲ್ಲಿ ನಾನು ನೋಡಿದ ಅತ್ಯಂತ ಸುಂದರವಾದ ಮನೆಗಳಲ್ಲಿ ಅದೊಂದು ಎಂದರೆ ಅತಿಶಯೋಕ್ತಿಯಂತೂ ಖಂಡಿತಾ ಅಲ್ಲ. ಗಜಿಬಿಜಿಯ ಮುಂಬೈನಿಂದ ಇದು ಹೊರತಾದ ಒಂದು ಭಾಗವೋ… ಆ ಮುಂಬೈಗೆ ಸೇರಿದ್ದೇ ಅಲ್ಲವೇನೋ ಎಂಬಂತಿದ್ದ ಆ ಮನೆಯ ಒಂದೊಂದು ಭಾಗವನ್ನೂ ನಾನು ಮನದಲ್ಲೇ ಪ್ರಶಂಸಿಸುತ್ತಾ ಹೋದೆ.

“ಚಿತ್ತಾಲರು ಬರೆಯಲು ಕೂಡುತ್ತಿದ್ದ ಜಾಗ?” ಎಂದು ಕೇಳಿದೆ. ಅವರ ಫೋಟೋದ ಬಳಿಯಿದ್ದ ಸೋಫಾವನ್ನು ತೋರಿಸಿದರು. “ಅದರ ಈ ಮೂಲೆಯಲ್ಲಿ ಕುಳಿತೇ ಅವರು ಸದಾ ಬರೆಯುತ್ತಿದ್ದುದು. ಬೇರೆ ಯಾರೂ ಆ ಜಾಗದಲ್ಲಿ ಕೂಡಲು ಅವರು ಬಿಡುತ್ತಿರಲಿಲ್ಲ. ನೀನು ಅಲ್ಲಿ ಕೂಡಬೇಕೆಂದರೆ ಏನನ್ನಾದರೂ ಬರೆಯಬೇಕು ಎನ್ನುತ್ತಿದ್ದರು” ಅಂದರು. ಎದ್ದು ಸೋಫಾದ ಆ ಭಾಗಕ್ಕೆ ಹೋದೆ. ನಾಗಪ್ಪ, ಬೇನ್ಯಾ, ಅಬೋಲೀನ, ಸರಸ್ವತಿ, ನಿರ್ಮಲೆ, ವೋಮು, ಪುರುಷೋತ್ತಮ, ಜಾನಕಿ, ಷಾಪೂರಜೀ… ಅದೆಷ್ಟು ಜನರು ಇಲ್ಲಿಂದ ಎದ್ದು ಜೀವ ತಳೆದು ಹೊರಬಂದವರು ಎಂದು ಭಾವುಕಳಾಗಿ ಆ ಜಾಗವನ್ನು ತಡವಿದೆ.

“ಬಾಲ್ಕನಿಯಲ್ಲೇ ಕೂಡೋಣ” ಎಂದರು. ಚಿತ್ತಾಲರಿಗೆ ಸ್ಪೂರ್ತಿ ಕೊಟ್ಟ ಬಾಲ್ಕನಿ. ಸಂತೋಷದಿಂದ ಅಲ್ಲಿ ಕುಳಿತೆವು. ಸಮುದ್ರದ ದಂಡೆಯ ಮೇಲೇ ಕುಳಿತಿದ್ದೇವೇನೋ ಎನ್ನುವ ಭಾವನೆ ಹುಟ್ಟಿಸುವ ಆ ಜಾಗ. ಒಬ್ಬ ಸಹೃದಯೀ ಲೇಖಕನಿಗೆ ಈ ಜಾಗ ಅದೆಷ್ಟು ಆಪ್ಯಾಯಮಾನವಾಗಿದ್ದಿರಬಹುದು ಎನ್ನಿಸಿತು. ಎದುರು ಅವರ ಮಡದಿ ಆ ಮನೆಗೆ ಬಂದಿದ್ದು, ಪತಿಯ ಕೆಲಸ, ಅವರ ಬರವಣಿಗೆ, ಮಕ್ಕಳು, ಪತಿಯ ಕುಟುಂಬದವರು, ಗಂಗಾಧರ ಚಿತ್ತಾಲರು… ಎಲ್ಲದರ ಬಗ್ಗೆ ಮಾತಾಡುತ್ತಾ ಹೋದರು.

ನಮ್ಮ ಬಗ್ಗೆಯೂ ಕೇಳಿದರು. “ಏನಾದರೂ ಬರೆಯುತ್ತೀರಾ” ಎಂದರು. “ಸುಮ್ಮನೆ ಹವ್ಯಾಸಕ್ಕೆ ಬರೆಯುತ್ತೇನೆ; ಪ್ರಕಟಿಸುವುದಕ್ಕಲ್ಲ” ಎಂದೆ. “ಮೊದಮೊದಲಿಗೆ ಇವರೂ ಹಾಗೇ ಅನ್ನುತ್ತಿದ್ದರು. ಆದರೆ ಮೊದಲ ಪುಸ್ತಕ ಪ್ರಕಟವಾದಾಗ ಇವರ ಸಂತೋಷವೇ ಬೇರೆ. ನನಗೆ ಕನ್ನಡ ಬರುವುದಿಲ್ಲ. ಆದರೆ ಅರ್ಥವಾಗುತ್ತೆ. ಅವರು ಬರೆದದ್ದನ್ನು ನನಗೆ ಓದಲಾಗುವುದಿಲ್ಲ. ಮೊದಮೊದಲಿಗೆ ಅವರು ಓದಿ ಹೇಳುತ್ತಿದ್ದರು. ಆಮೇಲಾಮೇಲೆ ಅದು ನಿಂತು ಹೋಯಿತು” ಎಂದರು. ಅವರ ಸೊಸೆಯೂ ಸ್ವಲ್ಪ ಹೊತ್ತು ನಮ್ಮ ಮಾತಿನಲ್ಲಿ ಭಾಗಿಯಾದರು. ನಮಗೆ “ಚಹಾ ಆಗಬಹುದೋ ಇಲ್ಲಾ ಕಾಫಿಯೋ” ಎಂದರು. “ಯಾವುದಾದರೂ ಪರವಾಗಿಲ್ಲ” ಎಂದೆವು. ಆಕೆ ಒಳಗೆ ಹೋದರು. ಹಾಗೆಯೇ ನಮ್ಮ ಮಾತುಕತೆ ಮುಂದುವರೆಯಿತು. ಅವರ ಹುಟ್ಟಿದೂರಿನ ಬಗ್ಗೆ, ಓದಿನ ಬಗ್ಗೆ ಹೇಳಿದರು. ಬೆಂಗಳೂರಿನ ಬಗ್ಗೆಯೂ ಸಾಕಷ್ಟು ಮಾತಾಡಿದೆವು.

ತುಸು ಸಮಯದಲ್ಲೇ ನಾವು ಕುಳಿತಲ್ಲಿಗೆ ಚಹಾ, ಶೀರಾ, ಚೂಡಾ ಮತ್ತು ಚಿಪ್ಸ್‌ ಬಂದಿತು. ಚಿತ್ತಾಲರು ಯಾವಾಗಲೂ ಕುಳಿತಿರುತ್ತಿದ್ದ ಕುರ್ಚಿಯಲ್ಲಿ ಇಂದು ನಾನು ಕುಳಿತಿದ್ದೇನೆ… ಅವರು ತಿಂದಿದ್ದಿರಬಹುದಾದ ತಟ್ಟೆಯಲ್ಲಿ ನಾನೀಗ ಮೆಲ್ಲುತ್ತಿದ್ದೇನೆ… ಅವರು ಕುಡಿದಿದ್ದಿರಬಹುದಾದ ಚಹಾ ಕಪ್ಪು ಬಸಿಯಲ್ಲಿ ನಾನು ಚಹಾ ಸವಿಯುತ್ತಿದ್ದೇನೆ… ಹೀಗೇ ಎದುರಿನ ಸಮುದ್ರವನ್ನು ನೋಡುತ್ತಾ ಇವೆಲ್ಲವನ್ನೂ ಸವಿಯುತ್ತಾ ಕತೆಗಳನ್ನು ಸೃಷ್ಟಿಸುತ್ತಿದ್ದರೇನೋ ಎನ್ನುವ ಭಾವ ನಾನು ಅವರಿಗೆ ಎಷ್ಟೋ ಹತ್ತಿರವಾಗಿಬಿಟ್ಟೆನೇನೋ ಎನ್ನುವಂತೆ ನನ್ನನ್ನಾವರಿಸಿತು.

ಅವರ ಮನೆಯ ಭೇಟಿ ನಿರೀಕ್ಷೆಗೂ ಮೀರಿದ ಸಂತೋಷವಾಗಿತ್ತು. ಚಿತ್ತಾಲರನ್ನು ನಾನು ಕಂಡಿದ್ದು ಅವರ ಕತೆಗಳಲ್ಲಿ, ಪಾತ್ರಗಳಲ್ಲಿ, ಅವರು ಎಳೆಎಳೆಯಾಗಿ ಬಿಡಿಸಿಡುತ್ತಿದ್ದ ಭಾವಗಳಲ್ಲಿ. ಅತ್ಯಂತ ಸೂಕ್ಷ್ಮ ಭಾವಗಳನ್ನೂ, ಸಂವೇದನೆಗಳನ್ನೂ ಸ್ಪಷ್ಟವಾಗಿ ತೆರೆದು ತೋರಿಸುತ್ತಿದ್ದ ಅವರ ಬರವಣಿಗೆಯಲ್ಲಿ – ಸಾಹಿತ್ಯದ ಒಂದು ದೈತ್ಯ ಪ್ರತಿಭೆಯಾಗಿ. ನಾನು ಅಥವಾ ನನ್ನಂತ ಸಾವಿರಾರು ಓದುಗರು ಕಂಡ ಚಿತ್ತಾಲರನ್ನು ಅವರ ಪತ್ನಿಯಾಗಲೀ, ಮಕ್ಕಳು, ಮೊಮ್ಮಕ್ಕಳಾಗಲೀ ಕಂಡಿಲ್ಲ. ಅವರು ಕಂಡ ಚಿತ್ತಾಲರನ್ನು ನಾವು ಕಂಡಿಲ್ಲ. ಆದರೂ ನಮ್ಮಿಬ್ಬರ ಮಾತೂ ಚಿತ್ತಾಲರ ಬಗ್ಗೆಯೇ – ಚಿತ್ತಾಲರೇ ನಮ್ಮ ಮಾತಿನ ಸೇತುವೆ. ಇಬ್ಬರಿಗೂ ಅವರ ಬಗ್ಗೆ ಅಪಾರ ಗೌರವ ಅವರವರದೇ ದೃಷ್ಟಿಯಿಂದ!

ಬಹಳ ಹೊತ್ತು ಅವರ ಸಮಯವನ್ನು ತೆಗೆದುಕೊಂಡೆವೇನೋ ಅನ್ನಿಸತೊಡಗಿತು. “ಇನ್ನು ಹೊರಡುತ್ತೇವೆ” ಎಂದು ಎದ್ದು ನಿಂತೆವು. “ನನಗಿನ್ನೂ ಅವರ ಸಾವಿನಿಂದ ಚೇತರಿಸಿಕೊಳ್ಳಲಾಗಿಲ್ಲ. ಹಾಗಾಗಿ ಜನರೊಂದಿಗೆ ಬೆರೆಯುವುದು ಕಡಿಮೆ” ಎಂದರು. ʻಅವರಿಗೆ ಸಾವಿಲ್ಲ; ಕನ್ನಡ ಸಾಹಿತ್ಯವನ್ನು ಓದುವವರ ಮನದಲ್ಲಿ ಚಿತ್ತಾಲರ ಹೆಜ್ಜೆಗುರುತು ಅಳಿಸಲಾಗದಂತದುʼ ಎಂದುಕೊಂಡೆ. ಆ ತಾಯಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದೆ. ಅಷ್ಟು ಅವಕಾಶ ಮಾಡಿಕೊಟ್ಟದ್ದಕ್ಕೆ ಅವರಿಗೆ ಧನ್ಯವಾದಗಳನ್ನು ತಿಳಿಸಿ ಹೊರಬಂದೆವು. ಹೊರಗೆ ಬಂದ ಮೇಲೆ ಹೊಳೆದದ್ದು ʻನನ್ನ ಮೊಬೈಲ್‌ನಿಂದ ಕೆಲವಾದರೂ ಫೋಟೋಗಳನ್ನು ತೆಗೆದುಕೊಳ್ಳಬಹುದಿತ್ತುʼ ಎಂದು…. ʻಮನದಲ್ಲಿ ಅಚ್ಚೊತ್ತಿದ ಚಿತ್ರಗಳಿಗೆ ಪುರಾವೆ ಏಕೆʼ ಅನ್ನಿಸಿ ಸುಮ್ಮನಾದೆ…

ಅಲ್ಲಿಂದ ಕೆಳಗೆ ಬಂದು ಮಕ್ಕಳು, ಮೊಮ್ಮಕ್ಕಳನ್ನು ಕೂಡಿಕೊಂಡು ಶಾರೂಖ್‌ ಖಾನ್‌ ಮನೆಯ ಮುಂದೆ ವಾಹನವನ್ನು ಹಿಡಿದು ನಮ್ಮ ಬಿಡಾರಕ್ಕೆ ಮರಳಿ ನಮ್ಮ ಪ್ರವಾಸದ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸಿದೆವು. ಸಂಜೆ ಪೊವಾಯ್‌ನ ಹೀರಾನಂದಾನಿಯ ಮಾಲ್‌ಗಳಲ್ಲಿ ಸುತ್ತಾಡಿಕೊಂಡು ಬಂದೆವು ಅಲ್ಲಿಗೆ ನಮ್ಮ ಮುಂಬೈ ಪ್ರವಾಸ ಮುಗಿಯುತ್ತಾ ಬಂದಿತ್ತು.

ಕಾಯ್ಕಿಣಿಯವರಿಗೆ ಫೋನಾಯಿಸಿ ಥ್ಯಾಂಕ್ಸ್‌ ಹೇಳಲೇ ಎಂದುಕೊಂಡೆ. ʻಸಿಕ್ಕಿದ್ದೇ ಸಾಕು ಅಂತ ತಲೆ ತಿನ್ನುತ್ತಾಳೆʼ ಅಂದುಕೊಂಡರೆ ಅನ್ನಿಸಿ ಸುಮ್ಮನಾದೆ. ಆದರೆ ರಾತ್ರಿ ಅವರೇ ಫೋನ್‌ ಮಾಡಿ ವಿಚಾರಿಸಿಕೊಂಡರು. ಅತ್ಯಂತ ಸಂತಸ ವ್ಯಕ್ತಪಡಿಸಿದರು. ಗೋಕರ್ಣದ ಅವರ ಮನೆಗೆ ಹೃತ್ಪೂರ್ವಕ ಆಹ್ವಾನವಿತ್ತರು. ಅವರ ಸಜ್ಜನಿಕೆಗೆ ಮಾರುಹೋದೆ. ಗೋಕರ್ಣದ ಪ್ರವಾಸದ ಅನುಭವ ʻಕಾಯ್ಕಿಣಿಯವರ ಮನೆಯ ಕದವ ತಟ್ಟಿʼ ಮುಂದೆಂದಾದರೂ ಸಾಧ್ಯವಾಗುವುವಾದರೆ..

‍ಲೇಖಕರು avadhi

June 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: