ಕನ್ಹಯ್ಯ ಕುಮಾರ್ ಜೊತೆ ಕುಳಿತು..

ಎನ್.ಎಸ್. ಶಂಕರ್

ಹೋದ ವರ್ಷ ಫೆಬ್ರವರಿ 12ನೇ ತಾರೀಕು ಕನ್ಹಯ್ಯ ಕುಮಾರ್ ದಸ್ತಗಿರಿ ಆದರು. ಅವರ ಮೇಲೆ ಬಂದಿದ್ದು- ದೇಶದ್ರೋಹದ ಆರೋಪ, ಅಂಥಿಂಥ ‘ಚಿಲ್ಲರೆ’ ವಿಚಾರ ಅಲ್ಲ.

ಆಗ ಮೊದಲು ಪೊಲೀಸ್ ವಶದಲ್ಲಿ ಆಮೇಲೆ ನ್ಯಾಯಾಂಗ ಬಂಧನದಲ್ಲಿ ಹತ್ತಿರ ಹತ್ತಿರ ಒಂದು ತಿಂಗಳ ಕಾಲ ಕಳೆದಿದ್ದರು ಕನ್ಹಯ್ಯ. ಮಾರ್ಚಿ ಮೊದಲ ವಾರದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬರುವ ವೇಳೆಗೆ ಕನ್ಹಯ್ಯ ರಾಷ್ಟ್ರಮಟ್ಟದ ಹೀರೋ ಆಗಿದ್ದರು, ಅದರಲ್ಲೂ ಯುವಸಮೂಹದ ನಡುವೆ.

ಆಗ ಪೊಲೀಸರ ವಶದಲ್ಲಿದ್ದಾಗ, ಮತ್ತೆ ನ್ಯಾಯಾಂಗ ಬಂಧನದಲ್ಲಿದ್ದಾಗ ಅವರ ಮನಸ್ಸಿನಲ್ಲಿ ಏನು ನಡೆದಿತ್ತು?

ನನ್ನ ಈ ಪ್ರಶ್ನೆಗೆ, ಸುದ್ದಿ ಟಿವಿ ಸ್ಟುಡಿಯೋದಲ್ಲಿ ನನ್ನ ಮುಂದೆ ತಣ್ಣಗೆ ಕೂತಿದ್ದ ಕನ್ಹಯ್ಯ ಯಾವ ಪ್ರತಿಕ್ರಿಯೆ ನೀಡಬಹುದು ಅನ್ನುವ ಕುತೂಹಲ ನನಗಿತ್ತು. ಯಾಕೆಂದರೆ ಆವರೆಗಿನ ಪ್ರಶ್ನೋತ್ತರಗಳೆಲ್ಲ ನಿರೀಕ್ಷಿತ ಜಾಡಿನಲ್ಲಿ Politically Correct ಚೌಕಟ್ಟು ಬಿಟ್ಟು ಕದಲದೆ ಸಾಗಿದ್ದವು.

ಮೂವತ್ತರ ಹರೆಯದ ಈ ಯುವಕ ತಪ್ಪು ಮಾತನಾಡುವ, ತೊದಲುವ, ತಡವರಿಸುವ ಹಂತದಲ್ಲಿಲ್ಲ ಎಂಬುದಂತೂ ಎದ್ದು ಕಾಣುತ್ತಿತ್ತು. ಎಷ್ಟೇ ಮೆಲುವಾಗಿ ಮಾತನಾಡಿದರೂ, ಅವರ ಮಾತುಗಳಿಗೆ ವೇದಿಕೆ ಮೇಲಿನ ಭಾಷಣದ ಗುಣ ಇದ್ದೇ ಇತ್ತು. ಅಂದರೆ ಮಾತಿನಲ್ಲಿ ‘ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್’ರ ಸೂಕ್ತ ಉಲ್ಲೇಖ, ‘ದಲಿತರ ಆತ್ಮಗೌರವದ ಪ್ರಶ್ನೆ’, ಸಮಾನತೆ, ನ್ಯಾಯ, ಸಮೃದ್ಧಿಯ ಕಾಳಜಿ…. ಎಲ್ಲ ‘ಹದವಾಗಿ’ ಬೆರೆತಿದ್ದವು.

ಆದರೆ ಬಂಧನದ ಈ ವೈಯಕ್ತಿಕ ಅನುಭವದ ವಿಷಯದಲ್ಲಾದರೂ ಕನ್ಹಯ್ಯ ಎದೆ ಬಿಚ್ಚಿ ಪ್ರಾಮಾಣಿಕ ಉತ್ತರ ಕೊಟ್ಟಾರೆಯೇ ಎಂದು ನಿರೀಕ್ಷಿಸುತ್ತಿದ್ದೆ. ಅಂದರೆ ತಮ್ಮ ಸುಪ್ತ ಆತಂಕ, ಭೀತಿ, ಒಂಟಿ ಬಂಧನದಲ್ಲಿ ಎಷ್ಟು ಬೇಡವೆಂದರೂ ಇಣುಕುವ ಅಧೈರ್ಯ… ಇಲ್ಲ, ಕನ್ಹಯ್ಯ ಈ ಯಾವ ಬಗ್ಗೆಯೂ ಉಸಿರೇ ಎತ್ತಲಿಲ್ಲ! ಮತ್ತೆ ಅದೇ ಪೊಲಿಟಿಕಲಿ ಕರೆಕ್ಟ್ ಮಾತುಗಾರಿಕೆ!!

‘ಅದ್ಯಾವುದೂ ಆನಿರೀಕ್ಷಿತವಾಗಿರಲಿಲ್ಲ… ಹಾಗೆ ನೋಡಿದರೆ ನಾನು ಅನುಭವಿಸಿದ್ದು ಕಡಿಮೆ. ಉಳಿದವರೆಲ್ಲ ನನಗಿಂತ ಹೆಚ್ಚು ದಮನ ಅನುಭವಿಸಿದ್ದಾರೆ….’ ಹೀಗೆ ಆರಂಭಿಸಿದ ಕನ್ಹಯ್ಯ, ದಾದ್ರಿಯಲ್ಲಿ (ಗೋಮಾಂಸ ಇಟ್ಟುಕೊಂಡಿದ್ದಾರೆಂಬ ವದಂತಿಯ ನೆಪದಲ್ಲಿ) ಗುಂಪಿನ ಗೂಂಡಾಗಿರಿಗೆ ಬಲಿಯಾದ ಮಹಮದ್ ಇಖ್ಲಾಕ್, ಊನಾದಲ್ಲಿ ಸಾರ್ವಜನಿಕವಾಗಿ ಥಳಿಸಿಕೊಂಡ ದಲಿತರು ಮುಂತಾದವರ ಉದಾಹರಣೆ ತೆಗೆದರು.. ರೋಹಿತ್ ವೆಮುಲಾ ಆದಿಯಾಗಿ ಪ್ರಾಣವನ್ನೇ ಕಳೆದುಕೊಂಡವರ ನಿದರ್ಶನ ಉಲ್ಲೇಖಿಸಿದರು. ಅಂತೂ ಕನ್ಹಯ್ಯರ ಆಂತರ್ಯ ಅಪರಿಚಿತವಾಗಿಯೇ ಉಳಿಯಿತು….!

ಅಂಥದ್ದೇ ಇನ್ನೊಂದು ಪ್ರಶ್ನೆ: ಮೇಲುಜಾತಿಯಿಂದ ಬಂದ ಕನ್ಹಯ್ಯ- (ಆವರದು ಭೂಮಿಹಾರ್ ಬ್ರಾಹ್ಮಣರು ಎಂದು ಕರೆದುಕೊಳ್ಳುವ ಸಮುದಾಯ) ಕೆಳಜಾತಿ/ ವರ್ಗಗಳ ಸಮಸ್ಯೆಗಳೊಂದಿಗೆ ಗುರುತಿಸಿಕೊಳ್ಳುವಾಗ ಯಾವ ತುಮುಲವನ್ನೂ ಅನುಭವಿಸಲಿಲ್ಲವೇ?

ಇದಕ್ಕೂ ಕನ್ಹಯ್ಯ ತಮ್ಮ ಒಳ ಸಂಘರ್ಷ, ಅಂತರಂಗದ ಹೋರಾಟಗಳ ಪ್ರಸ್ತಾಪವನ್ನೇ ಮಾಡದೆ ಬೌದ್ಧಿಕ ಸಮಾಧಾನ ಹೇಳಹೊರಟರು. ನನಗೆ ಮತ್ತೊಮ್ಮೆ ನಿರಾಸೆ…!

ಇಲ್ಲಿನ ಯುವಸಮೂಹದ ಜೊತೆ ಬೆರೆಯಲು ಗುರುವಾರ ಬೆಂಗಳೂರಿಗೆ ಬಂದಿದ್ದ ಕನ್ಹಯ್ಯ ಕುಮಾರ್ ಸಂದರ್ಶನ ಕೊಟ್ಟಿದ್ದು ಸುದ್ದಿ ಟಿವಿಗೆ ಮಾತ್ರ. ಅದೇ ಖುಷಿಯಲ್ಲಿ ಅವರನ್ನು ಸಂದರ್ಶನ ಮಾಡಿದ ಮೇಲೆ ನಮ್ಮ ವಾಹಿನಿಯ ಎಷ್ಟೋ ಮಂದಿ ಮುಗಿಬಿದ್ದು ಕನ್ಹಯ್ಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದರಲ್ಲೇನೂ ಆಶ್ಚರ್ಯವಿರಲಿಲ್ಲ. ಆದರೆ ಈ ಸುದ್ದಿಯನ್ನು ವಾಹಿನಿ ಮುಖ್ಯಸ್ಥ ಶಶಿಧರ್ ಭಟ್ ‘ಫೇಸ್‍ಬುಕ್’ನಲ್ಲಿ ಹಂಚಿಕೊಂಡಾಗ ಬಂದ ಪ್ರತಿಕ್ರಿಯೆ ಮಾತ್ರ ನಮ್ಮ ಸಾಮಾಜಿಕ ವಾತಾವರಣದ ಬಗ್ಗೆ ವ್ಯಾಕುಲಗೊಳ್ಳುವಂತಿತ್ತು.

ಅಷ್ಟು ವಿಷ, ಅಷ್ಟು ನಂಜು. ಕನ್ಹಯ್ಯ ದೇಶದ್ರೋಹಿ, ಅವನನ್ನು ಕರೆದು ಮಾತನಾಡಿಸಿದ ನಾವೂ ದೇಶದ್ರೋಹಿಗಳು…. ಇತ್ಯಾದಿ ಇತ್ಯಾದಿ.

ಕೆಲವು ಸತ್ಯ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಜೆಎನ್‍ಯು ಆವರಣದಲ್ಲಿ ಭಾಗವಹಿಸಿದ್ದ ಕನ್ಹಯ್ಯ ಸಭೆಯಲ್ಲಿ ‘ದೇಶದ್ರೋಹಿ’ ಘೋಷಣೆಗಳು ಕೇಳಿಬಂದಿದ್ದು ನಿಜ; ಆದರೆ ಆ ಘೋಷಣೆಗಳನ್ನು ಕೂಗಿದವರು ಹೊರಗಿನಿಂದ ಬಂದಿದ್ದ ಮುಸುಕುಧಾರಿಗಳು- ಎಂಬ ಅಂಶ ಆಗಲೇ ಕೇಂದ್ರ ಸರ್ಕಾರದ ತನಿಖೆಯಲ್ಲೇ ಹೊರಬಂತು.

ಕನ್ಹಯ್ಯ ಮತ್ತವರ ಸಂಗಾತಿಗಳು ಘೋಷಣೆ ಕೂಗಿದರೆಂಬ ವಿಡಿಯೋ- ರಾಷ್ಟ್ರೀಯ ಟಿವಿ ಚಾನಲ್‍ಗಳಲ್ಲಿ ಪ್ರಸಾರವಾದ ದೃಶ್ಯಾವಳಿ- ನಕಲಿ, Doctored Video- ಇದು ಕೂಡ ವಿಧಿವಿಜ್ಞಾನ ಪ್ರಯೋಗಾಲಯದ ವರದಿ.

ಇಷ್ಟು ವಿಷಯಗಳು ಬಹಿರಂಗವಾದರೂ ಕನ್ಹಯ್ಯ ಇವರೆಲ್ಲರ ಕಣ್ಣಲ್ಲಿ ದೇಶದ್ರೋಹಿ! ಅಂದರೆ ಈ ಜನಕ್ಕೆ ನಿಜ ಗೊತ್ತಿಲ್ಲವೆಂದಲ್ಲ, ನಿಜ ಬೇಕಿಲ್ಲ! ಈ ದ್ವೇಷದ ವಾತಾವರಣವನ್ನು ಸ್ವತಃ ಅನುಭವಿಸಿ ಬಲ್ಲ  ಕನ್ಹಯ್ಯ ಸಂದರ್ಶನದಲ್ಲಿ ಹೇಳಿದ್ದು- ‘ನೀವು ಮೋದಿಯವರನ್ನು ವಿರೋಧಿಸಿದರೆ, ಟೀಕಿಸಿದರೆ ದೇಶದ್ರೋಹಿ, ಆರೆಸ್ಸೆಸ್ಸನ್ನು ಟೀಕಿಸಿದರೆ ದೇಶದ್ರೋಹಿ…’ ಅಂದ ಮೇಲೆ ನಿಜ ಯಾರಿಗೆ ಬೇಕು?

ಈಗ ನಮ್ಮಂಥ ‘ದೇಶದ್ರೋಹಿ’ಗಳನ್ನು ಒಮ್ಮಿಂದೊಮ್ಮೆಲೇ ಗಲ್ಲಿಗೇರಿಸಲು ಸಜ್ಜಾದ ಈ ಸಾಮಾಜಿಕ ಭಯೋತ್ಪಾದನೆಗೆ ಏನು ಹೇಳುವುದು?

ಸ್ವತಂತ್ರ ಭಾರತದ ಮೊಟ್ಟಮೊದಲ ಭಯೋತ್ಪಾದಕ- ಮಹಾತ್ಮನ ಎದೆಗೆ ಗುಂಡಿಟ್ಟ- ನಾಥೂರಾಮ ಗೋಡ್ಸೆಯನ್ನೇ ಈ ದೇಶ ‘ದೇಶದ್ರೋಹಿ’ ಎಂದು ಕರೆದಿರಲಿಲ್ಲ ಎಂಬುದನ್ನು ನೆನೆಸಿಕೊಂಡರೆ….!

‍ಲೇಖಕರು admin

January 27, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: