ಸಾಹಿತ್ಯ ಪರಿಷತ್ತು ಮಾಡಲೇಬೇಕಾದ ಕೆಲಸವಿದು
ಡಾ ಎಸ್ ಬಿ ಜೋಗುರ
ಶತಮಾನದ ಸಂದರ್ಭದಲ್ಲಿರುವ ಸಾಹಿತ್ಯ ಪರಿಷತ್ತು ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಯೋಚನೆಯ ಬೆನ್ನಲ್ಲಿಯೇ ಬರಗಾಲದ ಬಿಸಿ ಮಾತುಗಳು ಕೇಳಿಬರತೊಡಗಿವೆ. ಬರಗಾಲದ ಪರಿಸ್ಥಿತಿ ಇದೆ ಎನ್ನುವ ಕಾರಣಕ್ಕಾಗಿ ನಾವು ಪರಿಷತ್ತು ಮಾಡಬೇಕಾದ ಪಾರಂಪರಿಕ ಕಾರ್ಯಗಳನ್ನು ಮಾಡದೇ ಇರಲಾದೀತೆ..? ಬರಗಾಲವೆಂದು ನಾವು ಯಾವ ಕೆಲಸಗಳನ್ನು ಮಾಡದೇ ನಿಲ್ಲಿಸಿರುವದಿದೆ ಹೇಳಿ ಎಂದು ಕೇಳುವವರಿಗೆ ಒಂದಂತೂ ಹೇಳಲೇ ಬೇಕು. ಮಾಡಬೇಕಾದ ಕೆಲಸಗಳನ್ನು ಮಾಡುವಂತಿರಬೇಕು ಮಾಡದಂತಿರಬೇಕು ಎನ್ನುವ ಹಾಗೆ ಸದ್ಯದ ಪರಿಸ್ಥಿತಿಯಲ್ಲಿ ಸಮ್ಮೇಳನವನ್ನಾಗಲೀ.. ದಸರಾ ಮತ್ತು ಇತರೆ ಹಬ್ಬ ಹರಿದಿನಗಳನ್ನಾಗಲೀ ಆಚರಿಸುವ ಅಗತ್ಯತೆಯಿದೆ. ಕೇವಲ ಕನ್ನಡ ಸಾಹಿತ್ಯ ಪರಿಷತ್ ನ ಅಕ್ಷರ ಜಾತ್ರೆ ಮಾತ್ರವಲ್ಲ, ಸದ್ಯದಲ್ಲೇ ಬರಲಿರುವ ಗಣೇಶನ ಚತುರ್ಥಿಯ ಸಂದರ್ಭದಲ್ಲಿಯೂ ಸೀದಾ ಸಾದಾತನವನ್ನು ಮೆರೆಯುವ ಅಗತ್ಯವಿದೆ. ಒಂದೆಡೆ ಮಳೆಯಿಲ್ಲ. ಇನ್ನೊಂದೆಡೆ ಇದ್ದ ಬಿದ್ದ ಕೆರೆ ಬಾವಿಗಳೆಲ್ಲಾ ಒಣಗಿವೆ, ಗ್ರಾಮೀಣ ಭಾಗಗಳಲ್ಲಿ ಅದಾಗಲೇ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ದೈನಂದಿನ ಅಗತ್ಯತೆಗಳ ಬೆಲೆ ಮುಗಿಲು ಮುಟ್ಟಿವೆ. ಹೀಗಿರುವಾಗ ಬೃಹತ್ ಪ್ರಮಾಣದ ಗಣಪನನ್ನು ಕುಳ್ಳರಿಸುವ ಬದಲಾಗಿ ಸಾಧ್ಯವಾದಷ್ಟು ಸಣ್ಣ ಗಾತ್ರದ, ಸ್ವರೂಪದ ಗಣಪನನ್ನು ಕುಳ್ಳರಿಸಿ ವಿಸರ್ಜಿಸುವುದು ಉಚಿತ. ಈಗಾಗಲೇ ನೈಸರ್ಗಿಕ ವೈಪರೀತ್ಯಗಳು ಮನುಕುಲವನ್ನು ಹತ್ತಾರು ದಿಕ್ಕಿನಿಂದ ಯೋಚಿಸುವಂತೆ ಮಾಡಿವೆ. ಈ ಬಗೆಯ ಹಬ್ಬಗಳು ಈಗಲಾದರೂ ಅರ್ಥವಂತಿಕೆಯನ್ನು ಕಂಡುಕೊಳ್ಳುವ ಮೂಲಕ ಮುಂದುವರೆಯಬೇಕಾಗಿದೆ.
ಸಾಹಿತ್ಯ ಪರಿಷತ್ತು ಪ್ರತಿವರ್ಷ ಆಚರಿಸುವ ಸಮ್ಮೇಳನ ಜಾತ್ರೆಗಿಂತಲೂ ತೀರಾ ವಿಭಿನ್ನವಾಗಿರುವದಿಲ್ಲ. ಕನ್ನಡ ನಾಡಿನ ಮನಸುಗಳನ್ನು ಬೆಸೆಯುವ ದಿಸೆಯಲ್ಲಿ ಪ್ರತಿಯೊಂದು ಸಮ್ಮೇಳನವು ಒಂದು ಪ್ರಯೋಗಶೀಲ ಕೆಲಸವನ್ನು ಮಾಡಬೇಕು. ಹಾಗಾಗದೇ ಕೇವಲ ಜಾತ್ರೆಯ ಸ್ವರೂಪದಲ್ಲಿ ಆರಂಭವಾಗಿ ತೇರು ಎಳೆಯುವ ಮೂಲಕ ಮುಕ್ತಾಯವಾಗುವಂಥಾ ವಾತಾವರಣವೇ ಅಲ್ಲಿ ತುಂಬಿ ತುಳುಕುತ್ತಿರುತ್ತದೆ. ಇನ್ನು ಜಿಲ್ಲೆ ತಾಲೂಕು ಮಟ್ಟದ ಪರಿಷತ್ತಿನ ಸಮ್ಮೇಳನಗಳ ಬಗ್ಗೆಯಂತೂ ಮಾತನಾಡುವುದೇ ಬೇಡ ಎನ್ನುವಂಥಾ ಪರಿಸ್ಥಿತಿಯಿದೆ. ತಮ್ಮ ತಮ್ಮ ಜಿಲ್ಲೆಯಲ್ಲಿಯೇ ಕನ್ನಡಕ್ಕಾಗಿ ಕೈ ಎತ್ತುವವರ, ದುಡಿಯುತ್ತಿರುವವರ ಬಗ್ಗೆ ಅರಿವಿರದ ಇವರು ಸಂಘಟಿಸುವ ಸಮ್ಮೇಳನಗಳ ಬಗ್ಗೆ ಮತ್ತೆ ಚರ್ಚೆ ಮಾಡುವುದೇ ಬೇಡ. ಕನ್ನಡ ಸಾಹಿತ್ಯ ಪರಿಷತ್ತು ಅತಿ ಮುಖ್ಯವಾಗಿ ನಾಡು-ನುಡಿಯ ಬೆಳವಣಿಗೆಯಲ್ಲಿ ವಿಭಿನ್ನವಾದ ಕೆಲಸಗಳನ್ನು ಮಾಡಬೇಕಿದೆ. ನಾಡ ಭಾಷೆಯ ಬೆಳವಣಿಗೆ ಕೇವಲ ಕನ್ನಡ ಸಾಹಿತ್ಯದ ವಿದ್ಯಾರ್ಥಿ ವಾರಸುದಾರರಿಂದ ಮಾತ್ರ ಎನ್ನುವ ಭ್ರಮೆಗಳಿಂದ ದೂರ ಸರಿಯಬೇಕಾದ ಅಗತ್ಯವಿದೆ. ಯಾವುದೇ ಒಂದು ಭಾಷೆ ಬಲಗೊಳ್ಳಬೇಕಾದರೆ ಮೊದಲು ಆ ಪ್ರಾಂತದ, ಭಾಷೆಯನ್ನಾಡುವ ಕಟ್ಟಕಡೆಯವನನ್ನೂ ಗಂಭೀರವಾಗಿ ಪರಿಗಣಿಸುವತ್ತ ಗಮನಹರಿಸಬೇಕು. ಅತ್ಯಂತ ಅಜ್ಞಾತ ಸ್ಥಿತಿಯಲ್ಲುಳಿದು ನಾಡು-ನುಡಿಯ ಸೇವೆ ಮಾಡುವ ಅಸಂಖ್ಯಾತರು ನಾಡಿನುದ್ದಕ್ಕೂ ಚದುರಿಕೊಂಡಿರುವದಿದೆ. ಇವರೇ ನಿಜವಾಗಿಯೂ ಕನ್ನಡ ಭಾಷೆಯ ಜೀವ ತ್ರಾಣ. ಕನ್ನಡಾಂಬೆಯ ಪ್ರಾಣ ಕಂಪನ.
ಸಾಹಿತ್ಯ ಪರಿಷತ್ತಿನ ಹುದ್ದೆಯಲ್ಲಿರುವ ಪಧಾಧಿಕಾರಿಗಳಿಗಿಂತಲೂ ಇಂಥವರು ಅಭೂತಪೂರ್ವವಾದ ಕೆಲಸವನ್ನು ಹುದ್ದೆಗಳ ಮೋಹವಿಲ್ಲದೇ ಮಾಡುತ್ತಿರುವವರು. ಒಬ್ಬ ಎಕ್ಕಾ ಗಾಡಿ ಹೊಡೆಯುವವನು, ತರಕಾರಿ ಮಾರುವವನು, ಚಪ್ಪಲಿ ಹೊಲೆಯುವವನು, ಹಣ್ಣುಮಾರುವವನು, ಬೀಡಿ ಅಂಗಡಿಯವನು, ರಿಕ್ಷಾದವನು, ಬಸ್ ಕಂಡಕ್ಟರ್, ಡ್ರೈವರ್ ಇವರು ಪರೋಕ್ಷವಾಗಿ ನಾಡು ನುಡಿಯ ಬೆಳವಣಿಗೆಯಲ್ಲಿ ನಿರಂತರವಾಗಿ ತಮ್ಮ ಕೊಡುಗೆಯನ್ನು ಸಲ್ಲಿಸುವವರು ಒಂದು ಭಾಷೆಯ ಬೆಳವಣಿಗೆಯಲ್ಲಿ ಈ ಥರದವರು ನೈಸರ್ಗಿಕ ಗೊಬ್ಬರವನ್ನು ಒದಗಿಸುವವರು. ಇವರನ್ನು ಪ್ರಾಮಾಣಿಕವಾಗಿ ಗುರುತಿಸದ , ತೊಡಗಿಸಿಕೊಳ್ಳದ ಪರಿಷತ್ತು ತನ್ನ ಪಾಲಿನ ಕೆಲಸವನ್ನು ಜನ ಮೆಚ್ಚುವಂತೆ ಮಾಡುವದಿದೆಯೆ..? ತನಗೆ ಬೇಕಾದವರು, ಪರಿಚಯದವರು, ಜಾತಿಯವರು, ಬಂಧುಗಳು ಎಂದು ಬಗೆಯುತ್ತಾ ನೀ ನನಗಾದರೆ ನಾ ನಿನಗೆ ಎನ್ನುವ ಪಕ್ಕಾ ಸ್ವಾರ್ಥದ ನೆಲೆಯಲ್ಲಿ ಕನ್ನಡ ಕಟ್ಟುವ ಹೆಸರಲ್ಲಿ ತಮ್ಮ ತಮ್ಮಲ್ಲೇ ಒಳಗುಂಪುಗಳನ್ನು ಕಟ್ಟಿಕೊಂಡು ಕನ್ನಡಪರ ಕೆಲಸವೊಂದನ್ನು ಬಿಟ್ಟು ಎಲ್ಲವನ್ನು ಮಾಡುವವರು ನಿಜವಾಗಿಯೂ ನಾಡ ನುಡಿಗೆ ಕಂಠಕರು. ಅವರು ನಿಮ್ಮ ಜಾತಿಯ ಬಂಧುಗಳಿದ್ದರೆ ವಿವಾಹ ಸಂಬಂಧ ಬೆಳೆಸಿ, ಪರಿಚಿತರು ಆತ್ಮೀಯರಿದ್ದರೆ ಮನೆಗೆ ಕರೆದೊಯ್ದು ಊಟ ಹಾಕಿಸಿ ಅಂಥಾ ನೆಪಗಳಲ್ಲಿ ಪರಿಷತ್ತಿನ ನೆರಳಿಗೂ ಭಾಜನರಾಗದವರನ್ನು ಅಲ್ಲಿಗೆ ಕರೆತರುವ ಯತ್ನ ಮಾಡುವ ಯತ್ನ ಮಾಡಬಾರದು.
ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯೇತರ ಶಿಸ್ತುಗಳನ್ನು ಆರಂಭದಿಂದಲೂ ನಿರ್ಲಕ್ಷಿಸುತ್ತ ಬಂದ ಪರಿಣಾಮವಾಗಿಯೇ ಇವತ್ತಿಗೂ ಅದು ಅನ್ಯ ಶಿಸ್ತುಗಳೊಂದಿಗೆ ಕೈ ಕೈ ಹಿಡಿದುಕೊಂಡು ನಿಲ್ಲುವ ಗುಣಗಳನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗಿಲ್ಲ. ಕನ್ನಡ ನಾಡ ನುಡಿಯ ಬೆಳವಣಿಗೆಯಲ್ಲಿ ಸಾಹಿತ್ಯದ ವಿದ್ಯಾಥರ್ಿಗಳ ಕೊಡುಗೆಯ ಸಮಸಮನಾಗಿಯೇ ಅನ್ಯ ಶಿಸ್ತುಗಳನ್ನು ಪ್ರತಿನಿಧಿಸುವವರಿಂದ ಸಲ್ಲಿರುವದಿದೆ.ಆದರೆ ಪ್ರತಿ ಭಾರಿಯ ಸಾಹಿತ್ಯ ಸಮ್ಮೇಳನಗಳಲ್ಲಿ ಸಮಾಜ ವಿಜ್ಞಾನಗಳ, ಭೌತವಿಜ್ಞಾನಗಳ ವಲಯವನ್ನು ಪ್ರತಿನಿಧಿಸಿದರೂ ಸಾಕಷ್ಟು ಕನ್ನಡದ ಬಗೆಗೆ ಕೆಲಸ ಮಾಡಿರುವವರನ್ನು ಗುರುತಿಸದೇ ಅವರನ್ನು ಸಾಹಿತ್ಯದವರಲ್ಲ ಎಂದು ದೂರವಿಡುವ ಮೂಲಕವೇ ಜಾತ್ರೆಯನ್ನು ಮಾಡಿಮುಗಿಸುವ ಕ್ರಮ ಸರಿಯಾದುದಲ್ಲ. ಕೇವಲ ಸಾಹಿತ್ಯದ ವಿದ್ಯಾಥರ್ಿಗಳು ಅದರಲ್ಲೂ ಕನ್ನಡ ಸಾಹಿತ್ಯದ ವಿದ್ಯಾಥರ್ಿಗಳಿಂದ ಮಾತ್ರ ಕನ್ನಡ ಕಟ್ಟುವ ಕೆಲಸ ಸಾಧ್ಯ ಎನ್ನುವ ನಂಬುಗೆಯೇ ಸರಿಯಲ್ಲ. ಮನೆಯ ಒಳಗಿನವರು ಮತ್ತು ಹೊರಗಿನವರು ಎನ್ನುವ ಭಾವನೆ ಇರಲಿ, ಆದರೆ ಮನೆಯ ಹೊರಗಿನವರು ಮನೆಯ ಒಳಗೆ ಬಂದಾಗ ಮನೆಯವರಿಗಿಂತಲೂ ಹೆಚ್ಚಿನ ಗೌರವಗಳು ಸಲ್ಲುವಂತಾಗಬೇಕು.
ಪರಿಷತ್ತಿನಲ್ಲಿ ಅನೇಕ ಬಗೆಯ ದೊಷಗಳಿರಬಹುದು ಅವೆಲ್ಲವುಗಳಿಗಿಂತಲೂ ದೊಡ್ದ ದೋಷವೆಂದರೆ ತೆರೆಮರೆಯ ಕಾಯಿಗಳಂತೆ ಉಳಿದು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡು ಯಾವ ಪ್ರಶಸ್ತಿ ಪುರಷ್ಕಾರಗಳಿಗೆ ಲಾಬೀ ಮಾಡದ ಜನಸಾಮಾನ್ಯನ ಕೊಡುಗೆಯನ್ನು ಗುರುತಿಸದೇ ಇರುವುದು. ಶತಮಾನೋತ್ಸವದ ಸಂದರ್ಭದಲ್ಲಾದರೂ ಪರಿಷತ್ತು ಆ ಬಗೆಯ ಕೆಲಸಗಳನ್ನು ಮಾಡುವಲ್ಲಿ ಹಿರಿಮೆಯನ್ನು ತೋರುವದಿದೆಯೇ..?
ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗುತ್ತದೆಯೋ ಇಲ್ಲವೇ ಸೀದಾ ಸಾದಾ ಸಮಾರಂಭವಾಗಿ ಮುಗಿಯುತ್ತದೆಯೋ ಎನ್ನುವುದು
ಮುಖ್ಯವಲ್ಲ ಮುಖ್ಯವಾದುದು ನಾಡಿನ ಉಪೇಕ್ಷಿತ ಜನಸಮೂಹಗಳನ್ನು ಒಳಗೊಳ್ಳುವ ಆ ಮೂಲಕ ಅವರು ಇನ್ನಷ್ಟುಕನ್ನಡಕ್ಕಾಗಿ ದುಡಿಯುವಂತೆ ಪ್ರೋತ್ಸಾಹಿಸುವ ಕೆಲಸಗಳಾಗಬೇಕು. ಅದಾಗದೇ ನೀವು ಜಾತ್ರೆಯೋಪಾದಿಯಲ್ಲಿ ಅದನ್ನು ಮಾಡಿ ಮುಗಿಸುವದರಲ್ಲಿ ಯಾವ ಅರ್ಥವಂತಿಕೆಯೂ ಇರದು. ಕನ್ನಡಕ್ಕಾಗಿ ಒಂದೇ ಒಂದು ಸಣ್ಣ ಕೊಡುಗೆಯನ್ನು ಕೊಟ್ಟಿರುವ ಸಾಹಿತ್ಯೇತರ ವಲಯದ ವ್ಯಕ್ತಿಗೆ ನಿಜವಾದ ಮಾನ ಸಮ್ಮಾನಗಳು ದೊರೆಯಬೇಕು. ಹಾಗಾಗದ ಕಾರಣದಿಂದಲೇ ಇವತ್ತಿಗೂ ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಬಗೆಗಿನ ಮಾತುಗಳು ಹಾಗೇ ಉಳಿದುಕೊಂಡಿವೆ.







0 Comments