ಮೂಢ ನಂಬಿಕೆಗಳ ಮಿಥ್ಯೆಯ ನಡುವೆ ವೈಚಾರಿಕತೆಯ ಹತ್ಯೆ

divakar
ನಾ ದಿವಾಕರ

ಭಾರತದ ಸಾಮಾಜಿಕ ಸನ್ನಿವೇಶದಲ್ಲಿ ಆಧುನಿಕತೆ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ನಾಗರೀಕತೆಯ ಮೇಲೆ ಎಷ್ಟೇ ಪ್ರಭಾವ ಬೀರಿದ್ದರೂ ನಮ್ಮ ಸಮಾಜದ ಆಂತರ್ಯದಲ್ಲಿ ಬಲವಾಗಿ ಬೇರೂರಿರುವ ಮತೀಯ ಭಾವನೆಗಳು, ಧಾರ್ಮಿಕ ನಂಬಿಕೆಗಳು ಮತ್ತು ದೈವೀಕ ವಿಶ್ವಾಸ ಜನರನ್ನು ಪ್ರಗತಿಯತ್ತ ಕೊಂಡೊಯ್ಯುವ ಬದಲು ಮೌಢ್ಯತೆಯೆಡೆಗೆ, ಪ್ರಾಚೀನತೆಯೆಡೆಗೆ ಕೊಂಡೊಯ್ಯುತ್ತಿವೆ. ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಪ್ರಶ್ನಿಸುವ ಧೋರಣೆಯನ್ನು ಅನುಮಾನದ ದೃಷ್ಟಿಯಿಂದಲೇ ನೋಡುವ ಪರಂಪರೆ ಗಟ್ಟಿಯಾಗುತ್ತಿರುವಂತೆಯೇ ಸಂಸ್ಕೃತಿ ಮತ್ತು ಧರ್ಮ ರಕ್ಷಣೆಯ ಹೆಸರಿನಲ್ಲಿ ಮಾನವ ಸಮಾಜವನ್ನು ಪ್ರಾಚೀನ ಕಾಲದ, ಅನಾಗರೀಕ ನಂಬಿಕೆಗಳತ್ತ ಕೊಂಡೊಯ್ಯುತ್ತಿರುವುದೂ ಇಂದಿನ ದುರಂತವಾಗಿದೆ. ಮತಧರ್ಮಗಳ ಚೌಕಟ್ಟಿನೊಳಗೆ ಬಂಧಿಸಲಾಗದ್ದನ್ನು ಆಧ್ಯಾತ್ಮಿಕತೆಯ ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನದಲ್ಲಿ ಭಾರತೀಯ ಸಮಾಜ ಆಧ್ಯಾತ್ಮದ ವೈಭವೀಕರಣ ಮತ್ತು ವಾಣಿಜ್ಯೀಕರಣದ ಹಾದಿಯಲ್ಲಿ ದಾಪುಗಾಲು ಹಾಕುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು ಜನಸಾಮಾನ್ಯರಿಗೆ ಈ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲವು ಸಾಧು ಸಂತರ ಜೀವನಗಾಥೆಗಳನ್ನು ರಂಜನೀಯವಾಗಿ ಬಿತ್ತರಿಸಿ ಜನತೆಯನ್ನು ಮತೀಯ ಮೌಢ್ಯತೆಯಿಂದ ಆಧ್ಯಾತ್ಮ ಮೌಢ್ಯತೆಯೆಡೆಗೆ ಕೊಂಡೊಯ್ಯುತ್ತಿವೆ. ಈ ಢೋಂಗಿ ಆಧ್ಯಾತ್ಮ-ಧರ್ಮವನ್ನು ಪ್ರಶ್ನಿಸುವವರು ಶಿಕ್ಷಾರ್ಹರಾಗಿಬಿಡುತ್ತಾರೆ. ಹತ್ಯೆಗೀಡಾಗಿರುವ ಡಾ ಎಂ ಎಂ ಕಲಬುರ್ಗಿ ಇಂತಹ ವಿಕೃತ ಶಿಕ್ಷೆಗೀಡಾಗಿದ್ದಾರೆ.

ಸಾಮುದಾಯಿಕ ನೆಲೆಯಲ್ಲಿ ಯಾವುದೇ ಒಬ್ಬ ಸಂತನ ಅಥವಾ ಯತೀಂದ್ರನ ಜೀವನ ಮತ್ತು ಸಾಧನೆಗಳನ್ನು ಪರಾಮರ್ಶಿಸುವಾಗ ಅಲ್ಲಿ ಜಾತಿ ಪಾರಮ್ಯವೇ ಮುಂದಾಗುತ್ತದೆ. ಈ ಜಾತಿಯ ಗೋಡೆಗಳನ್ನು ತೊಡೆದು ಸರ್ವಜನ ಸಂಪನ್ನತೆಯನ್ನು ಪಡೆಯಲೋಸುಗ ಆಧುನಿಕ ಕಥಾ ವಿನ್ಯಾಸಕರು ಸಂತರ ಸಾಧನೆಗಳನ್ನು ಪವಾಡಗಳ ಮೂಲಕ ಜನತೆಗೆ ಪರಿಚಯಿಸುವುದರಲ್ಲಿ ಮುಂದಾಗುತ್ತಿದ್ದಾರೆ. ಅತೀತವಾದಂತಹ ದೈವೀಕ ಶಕ್ತಿ ಧಾರಣೆ ಮಾಡಿದಂತಹ ಸಂತರು ಜನಸಾಮಾನ್ಯರಿಗೆ ಅದ್ಭುತ ಶಕ್ತಿಗಳಾಗಿಯೇ ಕಾಣುತ್ತಾರೆ. ಆರಾಧನಾ ಮನೋಭಾವದಿಂದಲೇ ಸಾಧು ಸಂತರನ್ನು, ಸಮಾಜ ಸುಧಾರಕರನ್ನು ಕಾಣುವ ಭಾರತೀಯ ಸಮಾಜದಲ್ಲಿ ಇಂತಹ ಪ್ರವೃತ್ತಿಗಳು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಪ್ರಭಾವಿ ವಲಯವನ್ನು ಸೃಷ್ಟಿಸುತ್ತವೆ. ಸಾಧು ಸಂತರನ್ನು ಜಾತಿಯ ಚೌಕಟ್ಟಿನಿಂದ ಹೊರಗೆಳೆದು ಸರ್ವಜನಾನುರಾಗಿಗಳನ್ನಾಗಿ ಮಾಡುವ ಪ್ರಯತ್ನಗಳು ಇಂತಹ ಸನ್ನಿವೇಶಗಳಲ್ಲಿ ಯಶಸ್ಸು ಕಾಣುತ್ತವೆ. ಪ್ರಶ್ನಾರ್ಹವಾಗಬಹುದಾದ ವಿದ್ಯಮಾನಗಳು ಪ್ರಶ್ನಾತೀತವಾಗುತ್ತವೆ. ಅತೀಂದ್ರಿಯ ಶಕ್ತಿಗಳಿಗೆ ಮರುಳಾಗುವ ಜನಸಾಮಾನ್ಯರು ಸಾಧು ಸಂತರ, ಸುಧಾರಕರ ಮೌಲ್ಯಗಳನ್ನು ಪಾಲಿಸುವುದಕ್ಕಿಂತಲೂ ಹೆಚ್ಚಾಗಿ ಅವರೊಳಗಿನ ಅತೀತ ಶಕ್ತಿಯ ಆರಾಧನೆಯಲ್ಲಿ ತೊಡಗುತ್ತಾರೆ. ಹಾಗಾಗಿ ಆಚರಣೆಗಳು ಆಡಂಭರದ ಡಂಭಾಚಾರಗಳಾಗುತ್ತವೆ, ಮೌಡ್ಯಗಳು ಆಧ್ಯಾತ್ಮಿಕತೆಯ ನೆಲೆಯಲ್ಲಿ ಮೌಲ್ಯಯುತವಾಗುತ್ತವೆ, ಆರಾಧನಾ ಸಂಸ್ಕೃತಿ ವ್ಯಕ್ತಿಗತ ನೆಲೆಯಲ್ಲಿ ತನ್ನದೇ ಆದ ಅಸ್ಮಿತೆಗಳನ್ನು ಕಂಡುಕೊಳ್ಳುತ್ತದೆ.

೧

ಈ ವಿದ್ಯಮಾನವೇ ಸಮಾಜದಲ್ಲಿ ಪ್ರತಿಮಾ ಸಂಸ್ಕೃತಿಯನ್ನೂ ಬೆಳೆಸುತ್ತದೆ. ತಮ್ಮ ಸಾಮಾಜಿಕ ಕಳಕಳಿ, ಮನುಕುಲವನ್ನು ಕುರಿತ ಕಾಳಜಿ ಮತ್ತು ಮಾನವೀಯ ಪ್ರಜ್ಞೆಯನ್ನು ಜನತೆಯ ಒಳಿತಿಗಾಗಿ ಬಳಸಿ ತಮ್ಮದೇ ಆದ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಧರ್ಮ ಪ್ರವರ್ತಕರು, ಆಧ್ಯಾತ್ಮ ಗುರುಗಳು, ಸಾಧು ಸಂತರು ಮತ್ತು ಯೋಗಿಗಳು ಕಾಲ ಕ್ರಮೇಣ ಒಂದು ಸ್ಥಾವರ ರೂಪದ ಪ್ರತಿಮಾ ಸಂಸ್ಕೃತಿಗೆ ಬಲಿಯಾಗುವ ಪರಂಪರೆಯನ್ನು ಇಲ್ಲಿ ಕಾಣಬಹುದು. ಈ ಸಂಸ್ಕೃತಿಯ ಪೋಷಣೆಯ ಮೂಲಕವೇ ಸಮಾಜದಲ್ಲಿ ವೈಚಾರಿಕತೆಯನ್ನು ಹತ್ತಿಕ್ಕಿ ಮೌಢ್ಯತೆಯನ್ನು ಬೆಳೆಸುವ ಹುನ್ನಾರವನ್ನು ಮತೀಯವಾದಿಗಳು ಮಾಡುತ್ತಲೇ ಇರುತ್ತಾರೆ. ವಿವೇಕಾನಂದರ ದಿವ್ಯ ವಾಣಿ ’ಏಳಿ ಎದ್ದೇಳಿ’ ಘೋಷಣೆಯನ್ನು ಹಿಂದುತ್ವದ ಲಾಂಛನ ಘೋಷಣೆಯನ್ನಾಗಿ ಬಳಸಿಕೊಳ್ಳುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಮುಸ್ಲಿಂ ಸಂತರಾದ ಶಿರಡಿ ಸಾಯಿಬಾಬಾ ತಮ್ಮ ಪವಾಡಗಳ ಮುಖಾಂತರ ಹಿಂದೂ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಮೆಯಾಗಿ ರಾರಾಜಿಸುತ್ತಾರೆ. ಮಾನವತೆಯನ್ನು ಸಾರಿದ ವಿವೇಕಾನಂದ ಆಧುನಿಕ ಹಿಂದೂ ಧರ್ಮದ ಪ್ರವರ್ತಕರಾಗುತ್ತಾರೆ. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಮಾನವ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸಿದ ಬಸವಣ್ಣನವರು ಒಂದು ಸಮುದಾಯದ ಆಸ್ತಿಯಾಗುತ್ತಾರೆ. ತಮ್ಮ ಭಕ್ತಿಯ ಮೂಲಕವೇ ದೈವ ಸಾಕ್ಷಾತ್ಕಾರ ಪಡೆಯಲೆತ್ನಿಸಿ ಅಜರಾಮರರಾದ ರಾಘವೇಂದ್ರರೂ ಪವಾಡ ಪುರುಷರಾಗುತ್ತಾರೆ.

ಈ ಒಂದು ಪರಂಪರೆಯನ್ನು ಶಾಶ್ವತವಾಗಿ ಕಾಪಾಡಲು ಧಾರ್ಮಿಕ ನೆಲೆಗಳನ್ನೇ ಚಿಮ್ಮು ಹಲಗೆಯನ್ನಾಗಿ ಬಳಸುವ ಯಥಾಸ್ಥಿತಿವಾದಿಗಳು ಆಧ್ಯಾತ್ಮಿಕತೆಯೊಳಗಿನ ಆತ್ಮವಿಶ್ವಾಸವನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ತಮ್ಮ ಆತ್ಮವಂಚಕ ಪ್ರವೃತ್ತಿಗೆ ಚಾಲನೆ ನೀಡತೊಡಗುತ್ತಾರೆ. ಪುರಾಣ ಪುರುಷರ, ಆಧ್ಯಾತ್ಮದ ಹರಿಕಾರರ, ಸಮಾಜ ಸುಧಾರಕ ಸಾಧು ಸಂತರ ಮತ್ತು ಯೋಗಿಗಳ ತತ್ವ ಸಿದ್ಧಾಂತಗಳನ್ನ ಮನುಕುಲದ ಉನ್ನತಿಗಾಗಿ ಬಳಸುವ ಮೂಲಕ ಒಂದು ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ಯತ್ನಿಸುವವರು ಇಂತಹ ಸನ್ನಿವೇಶಗಳಲ್ಲಿ ಧರ್ಮ ದ್ರೋಹಿಗಳಾಗುತ್ತಾರೆ, ಸಂಸ್ಕೃತಿ ವಿರೋಧಿಗಳಾಗುತ್ತಾರೆ. ವೈಚಾರಿಕತೆ ಎಂಬ ಪದವೇ ಅಪಥ್ಯವಾಗಿಬಿಡುತ್ತದೆ. ವೈಜ್ಞಾನಿಕ ಮನೋಭಾವವನ್ನು ಧರ್ಮವಿರೋಧಿ ನೆಲೆಯಲ್ಲೇ ಕಾಣಲಾಗುತ್ತದೆ. ಹಾಗಾಗಿಯೇ ಸಾಯಿಬಾಬಾ ಅವರಂತಹ ಪವಾಡ ಪುರುಷರನ್ನು ವೈಭವೀಕರಿಸುವ ಸಮಾಜ ಪವಾಡಗಳಿಂದ ಜನಸಾಮಾನ್ಯರನ್ನು ಮರಳು ಮಾಡಿ ವಂಚಿಸುವ ಪವೃತ್ತಿಯನ್ನು ಪ್ರಶ್ನಿಸುವವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತದೆ. ವೈಚಾರಿಕತೆ ಮತ್ತು ಮೌಢ್ಯತೆಯ ನಡುವಿನ ದೀರ್ಘ ಸಂಘರ್ಷದಲ್ಲಿ ಜನಸಾಮಾನ್ಯರ ನಂಬಿಕೆ ಮತ್ತು ವಿಶ್ವಾಸಗಳು ನುಸುಳುತ್ತವೆ. ಈ ಅತಿಕ್ರಮಣವನ್ನು ಆಧರಿಸಿಯೇ ವೈಚಾರಿಕತೆಯನ್ನು ಹೀಯಾಳಿಸಲಾಗುತ್ತದೆ. ಮೌಢ್ಯತೆಯೂ ನಂಬಿಕೆಯಾಗಿ ಪರಿಣಮಿಸುತ್ತದೆ.

ಈ ಬಂಧನದ ಪಂಜರಗಳಿಗೆ ಸರಳುಗಳನ್ನು ಹೆಣೆಯುವ ಹಿತಾಸಕ್ತಿಗಳು ವೈಚಾರಿಕತೆಯನ್ನು, ವಿಚಾರವಾದಿಗಳನ್ನು, ವೈಜ್ಞಾನಿಕ ಪರಂಪರೆಯನ್ನು ಹೀಗಳೆಯಲಾರಂಭಿಸುತ್ತವೆ. ನರೇಂದ್ರ ಕುಮಾರ್ ಧಬೋಲ್ಕರ್ ಪನ್ಸಾರೆ ಅವರಂತಹ ವಿಚಾರವಾದಿಗಳು ಕೊಲೆಯಾಗುತ್ತಾರೆ. ಪೆರುಮಾಳ್ ಮುರುಗನ್ ಅವರಂತಹ ಸಾಹಿತಿಗಳು ತಮ್ಮೊಳಗಿನ ಸಾಹಿತಿಯ ಅವಸಾನವನ್ನು ಘೋಷಿಸುತ್ತಾರೆ. ಕರ್ನಾಟಕದಲ್ಲಿ ಇದೀಗ ಈ ಪರಂಪರೆಗೆ ನಾಂದಿ ಹಾಡಲಾಗಿದೆ, ವೈಚಾರಿಕತೆಯನ್ನು ಸಂಶೋಧನಾತ್ಮಕ ನೆಲೆಯಲ್ಲಿ ಸಲಹಿದ ಡಾ ಎಂ ಎಂ ಕಲಬುರ್ಗಿ ಹತ್ಯೆಗೀಡಾಗಿದ್ದಾರೆ. ಸಾವಿರಾರು ಧಬೋಲ್ಕರ್ ಅವರಂತಹ ವಿಚಾರವಾದಿಗಳನ್ನು ಕಳೆದುಕೊಂಡರೂ ವಿಚಾರವಂತ ಸಮಾಜ ಜೀವಂತವಾಗಿರುತ್ತದೆ. ಆದರೆ ವಿಚಾರವಾದವೇ ಹತ್ಯೆಗೊಳಗಾದಾಗ ಸಮಾಜ ಅವನತಿಯತ್ತ ಸಾಗುತ್ತದೆ. ಬಹುಶಃ ನಾಗರಿಕ ಸಮಾಜ ಈ ಮಾರ್ಗದಲ್ಲಿ ಸಾಗುತ್ತಿದೆ. ಡಾ ಕಲಬುರ್ಗಿ ಹತ್ಯೆ ಕರ್ನಾಟಕದ ಸಂವೇದನಾಶೀಲ ಸಾಹಿತ್ಯ ಕ್ಷೇತ್ರಕ್ಕೆ, ವೈಚಾರಿಕತೆಗೆ, ವೈಜ್ಞಾನಿಕ ಪ್ರಜ್ಞೆಗೆ ಒಂದು ಸವಾಲಿನಂತೆ ಬಂದೊರಗಿದೆ. ಹತ್ಯೆಗೀಡಾದ ಪ್ರಪ್ರಥಮ ಸಾಹಿತಿ-ಸಂಶೋಧಕರಾಗಿ ಕಲಬುರ್ಗಿ ವಿಚಾರವಂತ ಪ್ರಜ್ಞೆಗೆ ಸಾಕ್ಷೀಭೂತವಾಗಿ ಪರಿಣಮಿಸಿದಲ್ಲಿ ಅದೇ ನಾವು ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ.

‍ಲೇಖಕರು avadhi-sandhyarani

September 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: