ನಿದ್ದೆ ಮತ್ತು ಕನಸುಗಳು

 

(ಲೇಖನದ ಹಿಂದಿನ ಭಾಗ ಇಲ್ಲಿದೆ)J Balakrishna

ಜೆ ಬಾಲಕೃಷ್ಣ

ಕನಸು ಮತ್ತು ಆರೋಗ್ಯ
ಫ್ರಾನ್ಜ್ ಕಾಫ್ಕನ ಪ್ರಸಿದ್ಧ ಕತೆ ‘ರೂಪಾಂತರ’ದ ಮೊದಲನೆಯ ಸಾಲು ಹೀಗಿದೆ: ‘ಗ್ರೆಗರ್ ಸಂಸ ಒಂದು ದಿನ ಬೆಳಿಗ್ಗೆ ಕೆಟ್ಟ ಕನಸುಗಳಿಂದ ಎಚ್ಚೆತ್ತಾಗ ತನ್ನ ಹಾಸಿಗೆಯಲ್ಲಿ ತಾನೊಂದು ದೊಡ್ಡ ಹುಳುವಾಗಿ ರೂಪಾಂತರಗೊಂಡಿರುವುದಾಗಿ ಕಂಡ’. ಗ್ರೆಗರ್ ಸಂಸನಲ್ಲಿ ರೂಪಾಂತರದ ‘ಅಸ್ವಸ್ಥ’ ಕ್ರಿಯೆ ನಡೆಯುತ್ತಿದ್ದಾಗ ಆತ ‘ಕೆಟ್ಟ ಕನಸು’ಗಳನ್ನು ಕಾಣುತ್ತಿದ್ದ.
ನಮ್ಮ ಆರೋಗ್ಯಕ್ಕೂ ಮತ್ತು ನಾವು ಕಾಣುವ ಕನಸುಗಳಿಗೂ ಸಂಬಂಧವಿದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಕಾಫ್ಕ ಮನೋವಿಜ್ಞಾನಿಯಲ್ಲದಿದ್ದರೂ ಆತನಿಗೆ ಆ ವಿಷಯ ತಿಳಿದಿತ್ತು. ಅದಕ್ಕೆ ಸಿಗ್ಮಂಡ್ ಫ್ರಾಯ್ಡ್, ‘ಮನೋವಿಜ್ಞಾನಿಗಳು, ಮನೋವಿಶ್ಲೇಷಕರು ಬರುವ ಮೊದಲೇ ಆ ಕೆಲಸವನ್ನು ಕವಿ, ಲೇಖಕರು ಹಾಗೂ ತತ್ವಜ್ಞಾನಿಗಳೇ ನಿರ್ವಹಿಸುತ್ತಿದ್ದರು’ಎಂದು ಹೇಳಿದ್ದಾರೆ.
ದೆಹಲಿಯ ದರ್ಗಾವೊಂದರಲ್ಲಿ ಹಕೀಮನೊಬ್ಬ ಮಾನಸಿಕ ರೋಗಿಗಳು ಕನಸುಗಳನ್ನು ಕೇಳಿ ಅದರ ಆಧಾರದ ಮೇಲೆ ಅವರ ಕಾಯಿಲೆಗಳಿಗೆ ಪರಿಹಾರ ಸೂಚಿಸುತ್ತಿದ್ದಾನೆಂದು ಮನೋವಿಶ್ಲೇಷಕ ಸುಧೀರ್ ಕಕ್ಕರ್ ತನ್ನ ಪುಸ್ತಕದಲ್ಲಿ ಹೇಳಿದ್ದಾನೆ.
ಕನಸುಗಳ ಮೂಲಕ ಕಾಯಿಲೆಗಳ ತಪಾಸಣೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ರಷ್ಯಾದ ವಿಜ್ಞಾನಿ ವಾಸಿಲಿ ಕಸಾಟ್ಕಿನ್ರ ಪ್ರಕಾರ ಮನುಷ್ಯ ಆರೋಗ್ಯವಾಗಿದ್ದು ಅವನ ಮನಸ್ಸು ಶಾಂತಿಯುತವಾಗಿದ್ದಲ್ಲಿ ಅವನಿಗೆ ಕೆಟ್ಟ ಕನಸುಗಳು ಬರಲಾರವು. ನಲವತ್ತೊಂದು ಸಾವಿರಕ್ಕಿಂತ ಹೆಚ್ಚಿನ ಕನಸುಗಳ ವರದಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿರುವ ಕಸಾಟ್ಕಿನ್ ಹೇಳುವಂತೆ ಹಲವಾರು ನಿದರ್ಶನಗಳಲ್ಲಿ ಮನುಷ್ಯನಲ್ಲಿ ಯಾವುದಾದರೂ ಕಾಯಿಲೆಯ ಸೂಚನೆ, ಚಿಹ್ನೆಗಳು ಕಾಣಿಸಿಕೊಳ್ಳುವ ಮೊದಲೇ ಕನಸುಗಳು ಆಯಾ ವ್ಯಕ್ತಿಗೆ ಎಚ್ಚರಿಕೆ ನೀಡುತ್ತವೆ. ನಿದ್ರೆಯ ಸಮಯದಲ್ಲಿ ನಮ್ಮ ದೇಹ ಮತ್ತು ಮನಸ್ಸು ಬಾಹ್ಯ ಪ್ರಪಂಚ ಮರೆತು ತನ್ನ ಒಳ ಪ್ರಪಂಚಕ್ಕೆ ಕಿವಿ ಕೊಟ್ಟಿರುತ್ತದೆ. ದೇಹದಲ್ಲಿ ಒಂದು ಚೂರು ಏರುಪೇರಾದರೂ ಅದು ನಮ್ಮ ಅರಿವಿಗೆ ಬರದೆ ನಾವು ಆರೋಗ್ಯವಾಗಿದ್ದೇವೆಂದೇ ತಿಳಿದಿರುತ್ತೇವೆ. ನಮ್ಮ ದೇಹ ಅತ್ಯಂತ ಸೂಕ್ಷ್ಮ ರಾಸಾಯನಿಕ ವಿನ್ಯಾಸ ಹೊಂದಿದೆ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದನ್ನು ಕನಸುಗಳ ಮೂಲಕ ತೋರಿಸಿಕೊಡುತ್ತದೆ ಎನ್ನುತ್ತಾರೆ ವಾಸಿಲಿ ಕಸಾಟ್ಕಿನ್.
ನನ್ನ ಪರಿಚಯಸ್ತರೊಬ್ಬರು ಹೇಳಿರುವ ಘಟನೆ ಇನ್ನೂ ನೆನಪಿದೆ. ಒಬ್ಬಾತ ರಾತ್ರಿ ಇದ್ದಕ್ಕಿದ್ದ ಹಾಗೆ ಬೆದರಿ ಎಚ್ಚೆತ್ತು ಏನೇನೋ ಕೆಟ್ಟ ಕನಸುಗಳು ಬರುತ್ತಿವೆಯೆಂದು ಹೆಂಡತಿಗೆ ತಿಳಿಸಿದ. ಹೆದರಿಕೆಯಿಂದ ಮೈಯೆಲ್ಲಾ ಬೆವರಿತ್ತು, ಎದೆ ಢವಢವಗುಟ್ಟುತ್ತಿತ್ತು. ಬಾಯಾರಿಕೆಯೆಂದು ನೀರು ಕೇಳಿ ಕುಡಿದು ಮತ್ತೆ ಮಲಗಿದ ಸ್ವಲ್ಪ ಹೊತ್ತಿಗೇ ಹೃದಯಾಘಾತವಾಗಿ ಆತ ತೀರಿಕೊಂಡ.
ಆಸ್ತಮಾ ಕಾಯಿಲೆಯಿರುವ ನನ್ನ ಗೆಳೆಯನೊಬ್ಬನಿಗೆ ರಾತ್ರಿ ಮಲಗುವಾಗ ಏನೂ ತೊಂದರೆಯಿಲ್ಲದಿದ್ದರೂ ಕೆಲವು ದಿನ ಬೆಳಗಿನ ಜಾವ 4-5 ಗಂಟೆಗೆ ಉಸಿರಾಟದ ತೊಂದರೆಯಾಗುತ್ತಿತ್ತು. ಅಂಥ ದಿನ ಆತನಿಗೆ ಉಸಿರು ಬಿಗಿಹಿಡಿದಂಥ, ಯಾರಾದರೂ ಕುತ್ತಿಗೆ ಅದುಮಿ ಹಿಡಿದಂತೆ, ದೇಹವನ್ನೆಲ್ಲಾ ಕತ್ತರಿಸಿ ಚೂರು ಚೂರು ಮಾಡಿದ ಅವರ್ಣನೀಯ ಹಿಂಸೆ ಅನುಭವಿಸುತ್ತಿರುವ ಹಾಗೆ ಕನಸುಗಳು ಬರುತ್ತಿದ್ದವು. ಯುವತಿಯೊಬ್ಬಳಿಗೆ ಋತುಸ್ರಾವದ ಒಂದು ವಾರದ ಮೊದಲೇ ‘ರಕ್ತಸಿಕ್ತ’ ಕನಸುಗಳು ಬರುತ್ತಿದ್ದವಂತೆ.
ನಿದ್ರೆಯಲ್ಲಿ ಓಡಾಟ (ಸೋಮ್ನಾಂಬುಲಿಸಂ)
ನಿದ್ರೆಯಲ್ಲಿ ನಡೆದಾಡುವವರು ಮತ್ತು ಮಾತನಾಡುವವರು ಕನಸಿನಲ್ಲಿ ಕಾಣುತ್ತಿರುವ ಘಟನೆಗಳನ್ನೇ ಅಭಿನಯಿಸುತ್ತಿದ್ದಾರೆಂದು ಸಾಮಾನ್ಯವಾಗಿ ಅನೇಕರು ತಿಳಿದಿದ್ದಾರೆ. ಆದರೆ ಕನಸಿನಲ್ಲಿನ ಘಟನೆಗಳನ್ನು ಅಭಿನಯಿಸಲು ಅಥವಾ ದೈಹಿಕವಾಗಿ ವ್ಯಕ್ತಪಡಿಸಲು ನಮ್ಮ ಮಿದುಳು ಬಿಡುವುದಿಲ್ಲ. ಕನಸಿನ ಒಂದು ಘಟನೆಯಲ್ಲಿ ನೀವು ಓಡಲು ತೊಡಗುತ್ತೀರಿ. ನಿದ್ರೆಯಲ್ಲಿರುವ ನಿಮ್ಮ ಕಾಲುಗಳೂ ಸಹ ನಿಮಗರಿವಿಲ್ಲದೆ ಓಡಲು ತಯಾರಾಗುತ್ತವೆ. ಆಗ ತಕ್ಷಣ ಮಿದುಳಿನಿಂದ ನರಸಂದೇಶಗಳು ಬಂದು ಕಾಲಿಗೆ ಅಲುಗಾಡದಂತೆ ಆದೇಶ ಕೊಡುತ್ತವೆ. ಅದಕ್ಕೇ ನಿದ್ರಿಸುವಾಗ ಹಲವಾರು ಬಾರಿ ಕೈಕಾಲು ಹಿಡಿದು ಎಳೆದಂತಾಗಿ ಅಥವಾ ‘ಜರ್ಕ್’ ಕೊಟ್ಟಂತಾಗಿ ತಕ್ಷಣ ಎಚ್ಚರವಾಗುತ್ತದೆ. ಆ ಕ್ಷಣಗಳಲ್ಲಿ ಮಿದುಳಿನಿಂದ ನರಸಂದೇಶಗಳು ಬಂದು ಕೈಕಾಲಿಗೆ ಅಲುಗಾಡದಂತೆ ಆದೇಶ ಕೊಟ್ಟಿರುವುದರಿಂದ ಚಲಿಸಲು ಹೊರಟ ಕೈಕಾಲು ಹಿಡಿದು ಎಳೆದಂತಾಗಿ ಎಚ್ಚರಾಗುತ್ತದೆ. ಉಸಿರಾಟ, ಎದೆಬಡಿತ, ಕಣ್ಣಗಳ ಚಲನವಲನ ಮುಂತಾದ ದೇಹದ ಆಂತರಿಕ ಕ್ರಿಯೆಗಳನ್ನು ಬಿಟ್ಟು ಮಿದುಳು ಇಡೀ ದೇಹವನ್ನು ಒಂದು ರೀತಿಯಲ್ಲಿ ‘ಲಕ್ವ’ ಬಡಿದಂತೆ ಜಡ ಮಾಡಿಬಿಟ್ಟಿರುತ್ತದೆ. ನೀವು ಕನಸಿನಲ್ಲಿ ಕುಣಿದಾಡುತ್ತಿದ್ದರೂ ನಿಮ್ಮ ದೇಹ ಕಟ್ಟಿ ಹಾಕಿದ ಹಾಗೆ ತೆಪ್ಪಗೆ ಮಲಗಿರುತ್ತದೆ.
ನಿದ್ರಿಸುವಾಗ ನಡೆದಾಡುವುದು ಸಣ್ಣ ಮಕ್ಕಳಲ್ಲಿ ಸಾಮಾನ್ಯ. ಭಾವನಾತ್ಮಕ ಸಮಸ್ಯೆಗಳಿರುವ ಮಕ್ಕಳಲ್ಲಿ ಅದು ಹೆಚ್ಚಿಗೆ ಕಂಡುಬರುತ್ತದೆ. ಅಲ್ಲದೆ ಅದು ಆನುವಂಶಿಕವಾಗಿರುವುದಾಗಿ ಸಹ ಕಂಡುಬಂದಿದೆ. ನಿದ್ರಿಸುವಾಗ ಎದ್ದು, ಮುಖದಲ್ಲಿ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ತನ್ನಷ್ಟಕ್ಕೆ ತಾನೇ ಗೊಣಗಿಕೊಂಡು ಅತ್ತಿತ್ತ ಓಡಾಡುತ್ತಿರಬಹುದು. ಅವರು ಅಲ್ಲಲ್ಲಿ ಎಡವಿದರೂ ಸಹ ಸಾಮಾನ್ಯವಾಗಿ ದೊಡ್ಡ ಅಡಚಣೆಗಳಿಂದ ದೂರ ಸರಿಯಬಲ್ಲರು. ಯಾರು ಎಚ್ಚರಿಸದಿದ್ದಲ್ಲಿ ತಾವೇ ತಮ್ಮ ಹಾಸಿಗೆಗೆ ಬಂದು ಮಲಗುತ್ತಾರೆ. ನಿದ್ರೆಯಲ್ಲಿ ಓಡಾಡಿದ ನೆನಪು ಬೆಳಿಗ್ಗೆ ಅವರಲ್ಲಿ ಸ್ವಲ್ಪವೂ ಇರುವುದಿಲ್ಲ. ಈ ರೀತಿಯ ಓಡಾಡದಿಂದ ತೊಂದರೆಗಳೂ ಇಲ್ಲದಿಲ್ಲ. ಕೆಲವರು ಮಾಳಿಗೆಯಿಂದ, ಕಿಟಕಿಗಳಿಂದ ಕೆಳಗೆ ಬಿದ್ದಿರುವ ಉದಾಹರಣೆಗಳೂ ಇವೆ.
1
ನಿದ್ರೆಯಲ್ಲಿನ ನಡಿಗೆ ಮತ್ತು ಮಾತು ಕನಸುಗಳ ಅಭಿವ್ಯಕ್ತಿಯಾಗಿದ್ದಲ್ಲಿ ಅವು ನಿದ್ರೆಯ ‘ತೀವ್ರ ಕಣ್ಣು ಚಲಿಸಾಟದ ಹಂತ’ದಲ್ಲಿ (ರೆಮ್ ನಿದ್ರೆ) ಕಾಣಿಸಿಕೊಳ್ಳಬೇಕಿತ್ತು. ಆದರೆ ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಅವು ‘ತೀವ್ರ ಕಣ್ಣು ಚಲಿಸಾಟವಿಲ್ಲದ ಹಂತ’ದ (ರೆಮ್ ಇಲ್ಲದ ನಿದ್ರೆ) ನಿದ್ರೆಯಲ್ಲಿ ಮಾತ್ರ ಕಾಣಿಸಿಕೊಂಡಿವೆ. ಅಲ್ಲದೆ ನಿದ್ರೆಯಲ್ಲಿನ ಓಡಾಟದ ಸಮಯದಲ್ಲಿ ಅವರ ಮಿದುಳಿನ ಅಲೆಗಳನ್ನು ಎಲೆಕ್ಟ್ರೋ ಎನ್ಸೆಫಲೋಗ್ರಾಮ್ನಲ್ಲಿ ದಾಖಲಿಸಿಕೊಂಡಾಗ ಅವರು ಓಡಾಡದ ಸಮಯವೆಲ್ಲಾ ರೆಮ್ ಇಲ್ಲದ ನಿದ್ರೆಯಲ್ಲೇ ಇದ್ದುದು ಕಂಡುಬಂದಿದೆ. ತಾವು ಎಚ್ಚರದ ಬದುಕಿನಲ್ಲಿ ಮಾಡುತ್ತಿದ್ದ ಕೆಲಸ, ಮಾತುಗಳೇ ನಿದ್ರೆಯ ಮಾತ್ರಗಳಲ್ಲಿ ಮತ್ತು ಓಡಾಟದ ಸಮಯದಲ್ಲಿ ಇರುತ್ತಿತ್ತೇ ಹೊರತು ಕನಸಿನಲ್ಲಿನ ಹಾಗೆ ಭ್ರಾಮಕ ಪ್ರಪಂಚದ್ದಲ್ಲ. ರೆಮ್ ನಿದ್ರೆಯಲ್ಲಿ ಕನಸು ಕಾಣುತ್ತಿರುವಾಗ ಓಡಾಡುವುದು ಸಾಧ್ಯವಿಲ್ಲ. ಏಕೆಂದರೆ ಈ ಮೊದಲೇ ಹೇಳಿರುವಂತೆ ಆ ಸಮಯದಲ್ಲಿ ದೇಹವೆಲ್ಲಾ ಅಲುಗಾಡದಾಂತೆ ಜಡವಾಗಿರುತ್ತದೆ.
ನಿದ್ರಾ ನಡಿಗೆ ಕೆಲವು ಸಲ ಮಿದುಳಿನ ಕೆಲವು ಕಾಯಿಲೆಗಳ ಹಾಗೂ ಮಿದುಳಿಗೆ ಆದ ಹಾನಿಯ ಪರಿಣಾಮದಿಂದಲೂ ಇರಬಹುದು. ಉದಾಹರಣೆಗೆ, ಕಪಾಲ ಭಾಗದ ಅಪಸ್ಮಾರದಲ್ಲಿ ರೋಗಿ ಅಪಸ್ಮಾರದ ಒಂದು ಭಾಗವಾಗಿ ನಿದ್ರಾ ನಡಿಗೆ ಮಾಡಬಹುದು. ಮಿದುಳಿನ ಕೆಲವು ನಶಿಸುವ ರೋಗಗಳಲ್ಲಿ ಸಹ ಇದು ಕಂಡುಬರುತ್ತದೆ. ಈ ಬಗೆಯ ನಿದ್ರಾ ನಡಿಗೆಯಲ್ಲಿ ವ್ಯಕ್ತಿ ಸಂಕೀರ್ಣವಾದ ಚಟುವಟಿಕೆಗಳನ್ನು ಮಾಡಲಾರ. ಉದಾಹರಣೆಗೆ, ಬೀಗ ತೆಗೆಯುವುದು, ವಾಹನ ಚಾಲಿಸುವುದು ಇತ್ಯಾದಿ. ಹಾಗೆಯೇ ನಡೆಯುವಾಗ ಅವರು ಎದುರು ಬರುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳಲಾರರು. ಆದುದರಿಂದ ಈ ಬಗೆಯ ನಿದ್ರಾ ನಡಿಗೆ ಕಂಡುಬಂದಾಗ ವೈದ್ಯರ ಸಲಹೆ ಅಗತ್ಯ.
ಭಯಂಕರ ನಿದ್ರೆ
ಕೆಲವು ವರ್ಷಗಳ ಹಿಂದೆ ಬ್ರಿಟನ್ನಿನ 33 ವರ್ಷದ ಕೋಲಿನ ಕೆಂಪ್ ಎಂಬಾತ ಆ ದಿನ ಎಂದಿನಂತೆ ಮಲಗಿದ. ನಿದ್ರಿಸಿದ ಸುಮಾರು ಎರಡು ಗಂಟೆಗಳ ನಂತರ ಇಬ್ಬರು ಜಪಾನ್ ಸೈನಿಕರು ಅವನನ್ನು ಕೊಲ್ಲಲು ಕಾಡೊಂದರಲ್ಲಿ ಅಟ್ಟಿಸಿಕೊಂಡು ಬರುತ್ತಿರುವುದಾಗಿ ‘ಅನ್ನಿಸಿತು’. ಒಬ್ಬ ಸೈನಿಕನ ಕೈಯಲ್ಲಿ ಬಂದೂಕು ಹಾಗೂ ಮತ್ತೊಬ್ಬನ ಕೈಯಲ್ಲಿ ಚೂರಿಯಿತ್ತು. ಕೆಂಪ್ ತನ್ನ ಪ್ರಾಣ ಉಳಿಸಿಕೊಳ್ಳಲು ಆದಷ್ಟು ಜೋರಾಗಿ ಓಡುತ್ತಿದ್ದ. ಆದರೆ ಜಪಾನ್ ಸೈನಿಕರು ಅವನನ್ನು ಬಿಡಲಿಲ್ಲ. ಕೊನೆಗೆ ಚೂರಿ ಹಿಡಿದಿದ್ದ ಸೈನಿಕ ಕೆಂಪ್ನನ್ನು ತಿವಿಯಲು ಯತ್ನಿಸಿದ. ಮತ್ತೊಬ್ಬ  ತಲೆಗೆ ಬಂದೂಕ ಗುರಿ ಹಿಡಿದ. ಚೂರಿ ಹಿಡಿದಿದ್ದ ಸೈನಿಕನೊಟ್ಟಿಗೆ ಸೆಣಸುತ್ತಾ ಕೆಂಪ್ ಕೆಳಗೆ ಬಿದ್ದ. ಬಂದೂಕ ಹಿಡಿದಿದ್ದವನನ್ನು ಒದ್ದು ದೂರ ತಳ್ಳಿದ. ಮತ್ತೊಬ್ಬನ ಕುತ್ತಿಗೆಗೆ ಕೈ ಹಾಕಿ ತನ್ನ ಬಲ ಎಲ್ಲಾ ಬಿಟ್ಟು ಹಿಸುಕಿದ. ಅಷ್ಟರಲ್ಲಿ ಮತ್ತೊಬ್ಬ ಬಂದೂಕದಿಂದ ಗುಂಡು ಹಾರಿಸಿದ. ಆ ಶಬ್ದಕ್ಕೆ ಕೆಂಪ್ ಬೆಚ್ಚಿ ನಿದ್ರೆಯಿಂದ ಎಚ್ಚರಾದ. ಎದೆಯ ಬಡಿತ ಜೋರಾಗಿತ್ತು. ಮೈಯೆಲ್ಲಾ ಬೆವರಿನಿಂದ ತೊಯ್ದಿತ್ತು. ಪಕ್ಕದಲ್ಲಿ ಮಲಗಿದ್ದ ತನ್ನ ಹೆಂಡತಿ ಎಲ್ಲೆನ್ಳನ್ನು ನಿದ್ರೆಯಿಂದ ಎಬ್ಬಿಸಲು ಯತ್ನಿಸಿದ. ಆದರೆ ಅವಳು ಏಳಲೇ ಇಲ್ಲ. ಕೆಂಪ್ ತನ್ನ ನಿದ್ರೆಯಲ್ಲಿ ಅವಳ ಕುತ್ತಿಗೆ ಹಿಸುಕಿ ಕೊಂದಿದ್ದ!
ಕೊಲೆಯ ಆರೋಪ ಹೊತ್ತಿದ್ದ ಕೆಂಪ್ನ ಕತೆ ಕೇಳಿದ ಮನೋವಿಜ್ಞಾನಿಗಳು ಕೆಂಪ್ ಕೊಲೆ ಬೇಕೆಂದೇ ಮಾಡಿದ್ದಲ್ಲ, ಆತ ‘ಭಯಂಕರ ನಿದ್ರೆ’ ಅನುಭವಿಸಿದ್ದರಿಂದ ಅವನಿಗರಿವಿಲ್ಲದೆ ಸಾವು ನಡೆದಿದೆ ಎಂದು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದದ್ದರಿಂದ ಅವನು ನಿರಪರಾಧಿ ಎಂದು ಆತನಿಗೆ ಬಿಡುಗಡೆಯಾಯಿತು.
ಅಮೆರಿಕಾದಲ್ಲೂ ಸಹ ಇಂಥ ಒಂದು ಘಟನೆ ನಡೆದಿತ್ತು. ವಿಲ್ಲೀಸ್ ಬೋಷಿಯರ್ಸ್ ಎಂಬ ಸಾರ್ಜೆಂಟ್ ರಾತ್ರಿ ಒಬ್ಬ ಹೆಂಗಸಿನೊಂದಿಗೆ ಮಲಗಿ ಎಚ್ಚೆತ್ತಾಗ ಅವನ ಕೈಗಳು ಆಕೆಯ ಕುತ್ತಿಗೆಯ ಮೇಲಿದ್ದವು. ಆ ಹೆಂಗಸೂ ಸಹ ಸತ್ತು ಹೋಗಿದ್ದಳು. ಅಲ್ಲೂ ಸಹ ಬೋಷಿಯರ್ಸ್ ಕೊಲೆಯ ಆಪಾದನೆಯಿಂದ  ಮುಕ್ತನಾದ.
ಈ ‘ಭಯಂಕರ ನಿದ್ದೆ’ ಶೇಕಡಾ 3ರಷ್ಟು ಮಂದಿಯಲ್ಲಿ, ಸುಮಾರು 1ರಿಂದ 4ರ ವಯಸ್ಸಿನ ಮಕ್ಕಳಲ್ಲಿ ಕಂಡು ಬರುತ್ತದೆ. ವಯಸ್ಕರಲ್ಲಿ ಇದು ತೀರಾ ಅಪರೂಪ. ಮಲಗುವ ಮುನ್ನ ತೀರಾ ಮಾನಸಿಕ ಹಿಂಸೆ ಅನುಭವಿಸಿದ್ದಲ್ಲಿ ಈ ತರಹದ ಕನಸಿನ ಅನುಭವವಾಗಬಹುದು. ‘ಭಯಂಕರ ನಿದ್ರೆ’ ಮತ್ತು ನಿದ್ರೆಯಲ್ಲಿ ಓಡಾಡುವ ಅಭ್ಯಾಸ ಸಾಮಾನ್ಯವಾಗಿ ಒಬ್ಬರಲ್ಲೇ ಕಂಡುಬರುತ್ತದೆ. ‘ಭಯಂಕರ ನಿದ್ರೆ’ ಅನುಭವಿಸಿದಾಗ ತೀವ್ರ ಆತಂಕ, ಹೆದರಿಕೆಯಿಂದ ಬೆಚ್ಚಿ ನಿದ್ರೆಯಿಂದ ಎಚ್ಚರವಾಗುತ್ತದೆ. ಎದೆಬಡಿತ ಜೋರಾಗಿ ಉಸಿರಾಟ ತೀವ್ರವಾಗುತ್ತದೆ. ಮೈಯೆಲ್ಲಾ ಬೆವರಿನಿಂದ ತೊಯ್ದು ಹೋಗುತ್ತದೆ. ಬೆಚ್ಚಿ ಜೋರಾಗಿ ಕಿರುಚುತ್ತಾರೆ, ಅಸ್ಪಷ್ಟವಾಗಿ ತೊದಲುತ್ತಾರೆ, ಕೆಲವೊಮ್ಮೆ ನಿದ್ರೆಯಲ್ಲೇ ಎದ್ದು ಕೂರುತ್ತಾರೆ, ಮನೆಯಲ್ಲೆಲ್ಲಾ ಓಡಾಡುತ್ತಾರೆ, ಕೈಗೆ ಸಿಕ್ಕಿದ್ದನ್ನೆಲ್ಲಾ ಒಡೆದುಹಾಕುತ್ತಾರೆ, ಕೆಲವೊಮ್ಮೆ ಕೈಗೆ ಸಿಕ್ಕವರನ್ನು ಚಚ್ಚುತ್ತಾರೆ. ನಿದ್ರೆಯಿಂದ ಎಚ್ಚರಾದರೂ ಪೂರ್ಣವಾಗಿ ವಾಸ್ತವ ಲೋಕಕ್ಕೆ ಬರಲು ಹಲವು ನಿಮಿಷಗಳಾದರೂ ಬೇಕಾಗುತ್ತದೆ. ಎಚ್ಚರಾದ ನಂತರ ಅವರಿಗೆ ಯಾವುದೂ ನೆನಪಿರುವುದಿಲ್ಲ. ನೆನಪಾದರೂ ಸಹ ಎಲ್ಲಿಂದಲೋ ಬಿದ್ದ ಹಾಗೆ, ಯಾರೋ ಹೊಡೆದ ಹಾಗೆ, ಎಲ್ಲೋ ಸಿಕ್ಕಿಹಾಕಿಕೊಂಡ ಹಾಗೆ, ಉಸಿರು ಕಟ್ಟಿದ ಹಾಗಿನ ಅನುಭವಗಳನ್ನು ವರ್ಣಿಸುತ್ತಾರೆ.
‘ಭಯಂಕರ ನಿದ್ರೆ’ ಮತ್ತು ‘ದುಃಸ್ವಪ್ನ’ಗಳು ಒಂದೇ ಅಲ್ಲ. ದುಃಸ್ವಪ್ನದಲ್ಲೂ ಸಹ ಬೆಚ್ಚಿಬೀಳುವ, ಎದೆಬಡಿತ, ಉಸಿರಾಟ ಜೋರಾಗುವ, ತೀವ್ರವಾಗಿ ಬೆವರುವುದು ಇದ್ದರೂ ಸಹ ಅವು ‘ಭಯಂಕರ ನಿದ್ರೆ’ಯ ಅನುಭವಕ್ಕಿಂತ ಕಡಿಮೆ ಇರುತ್ತವೆ. ಆದರೆ ದುಃಸ್ವಪ್ನದ ಹಾಗೆ ‘ಭಯಂಕರ ನಿದ್ರೆ’ ಒಂದು ಕನಸಲ್ಲ. ಕನಸುಗಳು ನಿದ್ರೆಯ ತೀವ್ರ ಕಣ್ಣು ಚಲಿಸಾಟದ ಹಂತದಲ್ಲಿ (ರೆಮ್ ನಿದ್ರೆಯ ಸಮಯದಲ್ಲಿ) ಮಾತ್ರ ಕಂಡುಬರುತ್ತವೆ. ಆದರೆ ‘ಭಯಂಕರ ನಿದ್ರೆ’ ತೀವ್ರ ಕಣ್ಣು ಚಲಿಸಾಟವಿಲ್ಲದ ನಿದ್ರೆಯ (ರೆಮ್ ಇಲ್ಲದ ನಿದ್ರೆಯ ಸಮಯದಲ್ಲಿ) ಹಂತದಲ್ಲಿ ಕಂಡುಬರುತ್ತದೆ. ದುಃಸ್ವಪ್ನಗಳು ನಿದ್ರೆಯ ಮಧ್ಯದ ಅಥವಾ ಕೊನೆಯ ಭಾಗದಲ್ಲಿ ಕಂಡುಬಂದರೆ, ‘ಭಯಂಕರ ನಿದ್ರೆ’ ನಿದ್ರೆಯ ಮೊದಲ ಭಾಗದಲ್ಲೇ ಕಂಡುಬರುತ್ತದೆ. ದುಃಸ್ವಪ್ನವಾದಲ್ಲಿ ಎಚ್ಚರಾದಾಗ ಅದನ್ನು ಕಂಡ ವ್ಯಕ್ತಿಗೆ ಅದರ ನೆನಪಿರುತ್ತದೆ. ಆದರೆ ‘ಭಯಂಕರ ನಿದ್ರೆ’ಯ ಅನುಭವವಾದಲ್ಲಿ ಅದರ ಯಾವ ನೆನಪೂ ಉಳಿಯುವುದಿಲ್ಲ.
ಆದರೆ ಬ್ರಿಟನ್ನಿನ ಕೋಲಿನ್ ಕೆಂಪ್ನಿಗೆ ತನ್ನ ‘ಭಯಂಕರ ನಿದ್ರೆ’ಯ ಅನುಭವದ ವಿವರವಾದ ನೆನಪಿತ್ತು. ಅವನ ಅನುಭವದ ವಿವರ ಕೇಳಿದ ಮನೋವಿಜ್ಞಾನಿಗಳು ಅದು ದುಃಸ್ವಪ್ನವಲ್ಲ, ‘ಭಯಂಕರ ನಿದ್ರೆ’ ಎಂದರು. ಏಕೆಂದರೆ ಅದು ನಿದ್ರೆಯ ಮೊದಲ ಭಾಗದಲ್ಲೇ ನಡೆದಿತ್ತು. ಅಲ್ಲದೆ ಕೆಟ್ಟ ಕನಸು ಕಂಡು ಕಿರುಚುತ್ತಾ ಎಚ್ಚರಾಗುವುದು ದುಃಸ್ವಪ್ನದಲ್ಲಿ ತೀರಾ ಅಪರೂಪ ಹಾಗೂ ದುಃಸ್ವಪ್ನ ನಿದ್ರೆಯ ತೀವ್ರ ಕಣ್ಣು ಚಲಿಸಾಟದ ಹಂತದಲ್ಲಿ ಬರುವುದರಿಂದ ಆಗ ಎದ್ದು ಓಡಾಡುವುದಾಗಲೀ, ಕತ್ತು ಹಿಸುಕುವಂಥ ಕ್ಲಿಷ್ಟ ಕಾರ್ಯಗಳನ್ನು ಮಾಡುವುದಾಗಲೀ ಸಾಧ್ಯವಾಗುವುದಿಲ್ಲ.
ನಿದ್ರೆಯ ತೀವ್ರ ಕಣ್ಣು ಚಲಿಸಾಟದ ಹಂತದಲ್ಲಿ ನಾವು ಕನಸು ಕಾಣುವಾಗ ನಮ್ಮ ದೇಹವನ್ನು ಮಿದುಳು ಅಲುಗಾಡದಂತೆ ಜಡವಾಗಿಸದಿದ್ದಲ್ಲಿ ರಾತ್ರಿ ನಾವು ಮಲಗಿದ ಸ್ಥಳದಲ್ಲಿ ಬೆಳಿಗ್ಗೆ ಎಚ್ಚೆತ್ತಾಗ ಇರಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಕನಸುಗಳಲ್ಲಿ ಓಡಾಟ, ಹಾರಾಟ, ಹೊಡೆದಾಟ, ಬಡಿದಾಟಗಳು ಸಾಮಾನ್ಯ. ಅದಕ್ಕೇ ತತ್ವಜ್ಞಾನಿ ಪ್ಲಾಟೊ, ‘ನಮ್ಮೆಲ್ಲರಲ್ಲು, ಮೃದು ಹೃದಯದ ಜನರಲ್ಲೂ ಸಹ ಯಾವುದೇ ಕಾನೂನಿನ ಹಿಡಿತಕ್ಕೊಳಪಡದ ಕಾಡು ಮೃಗವೊಂದಿದೆ. ನಾವು ನಿದ್ರಾ ಪ್ರಪಂಚಕ್ಕೆ ಕಾಲಿಟ್ಟಾಗ ಅದು ತಾನಾಗಿ ಹೊರಬರುತ್ತದೆ’ ಎಂದು ಹೇಳಿದ್ದಾನೆ.
(ಕಡೆಯ ಭಾಗ ಮುಂದಿನ ಸಂಚಿಕೆಯಲ್ಲಿ)

‍ಲೇಖಕರು avadhi-sandhyarani

September 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vijaya lakshmi S.P.

    ಅಬ್ಬಾ …ಈ ನಿದ್ರಾ ಪ್ರಪಂಚದ ಮತ್ತು ಕನಸಿನ ಅದ್ಭುತ ವಿವರಣೆ ಓದಿ ಮೈ ರೋಮಾಂಚನವಾಯ್ತು . ಅದೆಷ್ಟು ವಿಷಯ ಸಂಗ್ರಹಣೆ ಇಲ್ಲಿದೆ . ಲೇಖಕರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: