ಕನ್ನಡ ಧ್ವಜ ಕಡೆಗಣನೆಗೂ, ಟಿಪ್ಪೂ ಪಠ್ಯ ತೆಗೆದುಹಾಕುವುದಕ್ಕೂ ಸಂಬಂಧವಿದೆ..

ಸವಾಲುಗಳು ಸಾವಿರ ಬಾವುಟ ಒಂದೇ

ನಾ ದಿವಾಕರ

ವಿಧಿ 370ರ ರದ್ದತಿಗೂ, ಹಿಂದಿ ಹೇರಿಕೆಯ ಪ್ರಯತ್ನಗಳಿಗೂ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಧ್ವಜವನ್ನು ಕಡೆಗಣಿಸುವುದಕ್ಕೂ , ಟಿಪ್ಪೂ ಸುಲ್ತಾನನನ್ನು ಇತಿಹಾಸ ಪಠ್ಯಗಳಿಂದ ತೆಗೆದುಹಾಕುವುದಕ್ಕೂ ಸೂಕ್ಷ್ಮ ಸಂಬಂಧ ಇರುವುದನ್ನು ಗಮನಿಸಬೇಕಿದೆ. ಕರ್ನಾಟಕದ ದುರಂತ ಎಂದರೆ ಇಲ್ಲಿ ಸಮಗ್ರ ಕನ್ನಡ ಚಿಂತನೆಯ ಕನ್ನಡ ಸಂಘಟನೆಗಳಿಲ್ಲ. ಎಲ್ಲವೂ ಅಧಿಕಾರ ರಾಜಕಾರಣದ ಸೂತ್ರದ ಗೊಂಬೆಗಳು. ನಾಯಕನ ಸುತ್ತ ಗೋಡೆ ನಿರ್ಮಿಸುವ, ಕೋಟೆ ಕಟ್ಟುವ ಸಂಘಟನೆಗಳು. ನಾಮಫಲಕದಲ್ಲಿನ ಕನ್ನಡದ ರಕ್ಷಣೆಗೆ ಮಾತ್ರವೇ ಸೀಮಿತವಾಗಿರುವ ಸಂಘಟನೆಗಳು. ಹಿಂದಿ ಹೇರಿಕೆಯೂ ತಲ್ಲಣ ಸೃಷ್ಟಿಸಲಿಲ್ಲ, ಧ್ಜಜಾರೋಹಣದ ವಿವಾದವೂ ತಲ್ಲಣ ಉಂಟುಮಾಡಲಿಲ್ಲ. ಕನ್ನಡ ಭಾಷೆ ಮತ್ತು ಭಾಷಿಕರ ಅಸ್ಮಿತೆಗಾಗಿ ಹೋರಾಡುವ ಸಮಗ್ರ ನೆಲೆಗಟ್ಟಿನ ಒಂದು ಸಂಘಟನೆ ಅತ್ಯಗತ್ಯವಾಗಿದೆ. ಪಕ್ಷ ರಾಜಕಾರಣ, ಜಾತಿ ರಾಜಕಾರಣದಿಂದ ಹೊರತಾದ ಸಂಘಟನೆ ಅತ್ಯಗತ್ಯವಾಗಿದೆ. ಒಕ್ಕೂಟ ವ್ಯವಸ್ಥೆ ಮತ್ತು ಅಧಿಕಾರ ರಾಜಕಾರಣದ ನಡುವೆ ಇರುವ ಸೂಕ್ಷ್ಮ ಸಂಬಂಧಗಳನ್ನು , ಆಳುವ ವರ್ಗಗಳು ಅನುಸರಿಸುತ್ತಿರುವ ಆರ್ಥಿಕ ನೀತಿ, ನವ ಉದಾರವಾದ, ಪರಿಸರ ರಕ್ಷಣೆ, ಸಂಪನ್ಮೂಲಗಳ ರಕ್ಷಣೆ ಇಂತಹ ಜ್ವಲಂತ ಸಮಸ್ಯೆಗಳನ್ನು ಚರ್ಚೆಗೊಳಪಡಿಸುವ ಕಾರ್ಯದಲ್ಲಿ ಕನ್ನಡ ಸಂಘಗಳು ಪಾಲ್ಗೊಳ್ಳಬೇಕಿದೆ. ದುರದೃಷ್ಟವಶಾತ್ ಬಹುಪಾಲು ಕನ್ನಡ ಸಂಘಗಳು ಸ್ಥಳೀಯ ರಾಜಕಾರಣಕ್ಕೆ ಬಲಿಯಾಗುತ್ತಿವೆ.

ತಳಮಟ್ಟದಿಂದ, ಗ್ರಾಮ ಮತ್ತು ತಾಲ್ಲೂಕು ಮಟ್ಟದಿಂದ ಜನಸಾಮಾನ್ಯರಲ್ಲಿ ಭಾಷೆ, ಭಾಷಿಕರು ,ಕನ್ನಡದ ಪ್ರಾದೇಶಿಕ ಅಸ್ಮಿತೆ ಮತ್ತು ಈ ನೆಲದ ಭೌಗೋಳಿಕ ಹಾಗೂ ನೈಸರ್ಗಿಕ ಸಂಪತ್ತಿನ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಯತ್ನ ನಡೆಯಬೇಕಿದೆ. ಪ್ರತಿಯೊಂದು ಪಟ್ಟಣದಲ್ಲೂ ಇರುವ ಕನ್ನಡ ಸಂಘಗಳು ಈ ಹೊಣೆಗಾರಿಕೆಯನ್ನು ಅರಿತರೆ ಕನ್ನಡದ ಮತ್ತು ಕನ್ನಡಿಗರ ಉಳಿವು ಸಾಧ್ಯ. ಕೆಲವೆಡೆ ಕನ್ನಡ ಭಾವನಾತ್ಮಕ ವಿಚಾರವಾಗಿದೆ. ವಾಸ್ತವ ಸನ್ನಿವೇಶದ ಚರ್ಚೆಯಾಗುತ್ತಿಲ್ಲ. ಭಾವಾವೇಶದಿಂದ ಕನ್ನಡ ಮತ್ತು ಕರ್ನಾಟಕದ ರಕ್ಷಣೆ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮ, ಆಂಗ್ಲ ಖಾಸಗಿ ಶಾಲೆಗಳ ನಿಯಂತ್ರಣ, ಶಿಕ್ಷಣದ ರಾಷ್ಟ್ರೀಕರಣ ಇವೆಲ್ಲವೂ ನಮ್ಮ ಆಗ್ರಹಗಳಾಗಬೇಕಿದೆ. ಆಂಗ್ಲ ಭಾಷಾ ಶಿಕ್ಷಣದ ಅವಶ್ಯಕತೆಯನ್ನು ಮನಗಂಡೇ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡದ ಪ್ರಾಶಸ್ತ್ಯಕ್ಕಾಗಿ ಹೋರಾಡಬೇಕಿದೆ. ಕರ್ನಾಟಕದ ಸಮಸ್ಯೆಗಳಿಗೆ, ಕನ್ನಡ ಭಾಷಿಕರ ಸಮಸ್ಯೆಗಳಿಗೆ ಅನ್ಯ ಭಾಷಿಕರು ಕಾರಣರಲ್ಲ. ಎಲ್ಲ ಭಾಷಿಕರೂ ನವ ಉದಾರವಾದ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ದಾಳಿಗೆ ತುತ್ತಾಗುತ್ತಿದ್ದಾರೆ. ಈ ಎರಡು ಸವಾಲುಗಳನ್ನು ಎದುರಿಸಲು ಜನಜಾಗೃತಿ ಅಗತ್ಯ.

ಕನ್ನಡದ ಸಾಹಿತ್ಯ ವಲಯ ಇಂತಹ ಸಮಯದಲ್ಲೂ ಸಮಸ್ಯೆಗಳಿಗೆ ವಿಮುಖವಾಗಿರುವುದು ಮತ್ತೊಂದು ದುರಂತ. ಯುವ ಪೀಳಿಗೆಯ ಸಾಹಿತಿ, ಕಲಾವಿದರಿಂದ ವ್ಯಕ್ತವಾಗುತ್ತಿರುವ ಕಾಳಜಿ ಹಿರಿಯ ಸಾಹಿತಿಗಳಿಂದ ಕಾಣಲಾಗುತ್ತಿಲ್ಲ. ರಾಷ್ಟ್ರೀಯತೆಯ ಉನ್ಮಾದ ಮತ್ತು ಸಾಂಸ್ಕೃತಿಕ ರಾಜಕಾರಣದ ಭಾವನಾತ್ಮಕ ನಶೆಗೆ ಬಲಿಯಾಗಿರುವ ಒಂದು ಪೀಳಿಗೆ ಎಷ್ಟೇ ಮೂದಲಿಸಿದರೂ, ಗಂಜಿ ಗಿರಾಕಿ, ಬುದ್ಧಿ ಜೀವಿ ಎಂದು ಹೀಗಳೆದರೂ, ನಮ್ಮ ಭವಿಷ್ಯವನ್ನು ನಿರ್ಧರಿಸಲು ದಿಟ್ಟ ದನಿಯ ಅವಶ್ಯಕತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಟೌನ್ ಹಾಲು ಮುಂದೆ ಕುಳಿತೇ ಪ್ರತಿಭಟಿಸಬೇಕೆಂದಿಲ್ಲ. ಅಕ್ಷರಗಳಲ್ಲೇ ಪ್ರತಿರೋಧ, ಆಕ್ರೋಶ ವ್ಯಕ್ತಪಡಿಸಬಹುದು. ಅದೂ ಕಾಣುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಹಿರಿಯ ಸಾಹಿತಿಗಳು ಮಾತ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿ ಹೇರಿಕೆಯ ಸಂದರ್ಭದಲ್ಲಿ ಮೌನ ವಹಿಸಿದ್ದವರು ಕನ್ನಡ ಧ್ವಜದ ಕಡೆಗಣನೆಯಾದಾಗಲೂ ಮೌನಕ್ಕೆ ಶರಣಾಗಿರುವುದು ಅಕ್ಷಮ್ಯ. ಗೊಷ್ಟಿ, ಸನ್ಮಾನ, ಶಾಲು, ಹಾರ ತುರಾಯಿ, ಭಾಷಣ, ಅಭಿನಂದನಾ ಗ್ರಂಥ , ಪ್ರಶಸ್ತಿ, ಸ್ಥಾನಮಾನ, ಮತ್ತು ಸಾಹಿತ್ಯ ಕೃತಿಗಳ ಅತ್ಯಧಿಕ ಮಾರಾಟ ಕನ್ನಡದ ಭವಿಷ್ಯವನ್ನು ಕಾಪಾಡುವಲ್ಲಿ ನೆರವಾಗುತ್ತಿಲ್ಲ ಎನ್ನುವುದು ವಿಷಾದದ ಸಂಗತಿ.

ಈ ಸಂದರ್ಭದಲ್ಲೂ ಕನ್ನಡದ ಹಿರಿಯ ಕವಿ ಸಾಹಿತಿಗಳ ಮೌನ , ಕನ್ನಡ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಮೌನ ಅಚ್ಚರಿ ಮೂಡಿಸುತ್ತದೆ. ಪರದೆಯ ಮೇಲಿನ ನಾಯಕನಟರ ಭಾವಾವೇಶ ಪ್ರೇಕ್ಷಕರ ಶಿಳ್ಳೆಗಳ ನಡುವೆ ಕಳೆದುಹೋಗುತ್ತದೆ. ಯಾರೋ ಬರೆದ ಸಂಭಾಷಣೆಯನ್ನು ಉರುಹೊಡೆದು ಆರು ಕೋಟಿ ಕನ್ನಡಿಗರ ಪ್ರತಿನಿಧಿಯಾಗಿ ಮಾತನಾಡುವ ಭಾವುಕತೆ ಪರದೆಯ ಹಿಂದೆಯೇ ಮರೆಯಾಗಿಬಿಡುತ್ತದೆ. ಕನ್ನಡದ ಸಿನಿ ಕಲಾವಿದರು ಇದನ್ನು ಅರ್ಥಮಾಡಿಕೊಳ್ಳಬೇಕಲ್ಲವೇ ? ತಮ್ಮ ನೆಚ್ಚಿನ ನಾಯಕ ನಟರ ರಟ್ಟಿನ ಪ್ರತಿಮೆಗಳಿಗೆ ಹಾಲಿನ ಅಭಿಷೇಕ ಮಾಡುವ ಉನ್ಮತ್ತ ಅಭಿಮಾನಿಗಳು, ಆರ್ ಸಿಇಪಿ ಮೂಲಕ ಹೈನುಗಾರಿಕೆಗೇ ಕುತ್ತು ಬಂದಿರುವುದನ್ನು ಅರ್ಥಮಾಡಿಕೊಳ್ಳಬೇಕಲ್ಲವೇ ? ಪರದೆಯ ಮೇಲಿನ ಹುರಿ ಮೀಸೆ, ಕನ್ನಡದ ಪೇಟ, ಗರಿಗರಿ ಪಂಚೆ, ಹೆಗಲಿನ ಮೇಲೊಂದು ಶಲ್ಯ ಮತ್ತು ಕನ್ನಡದ ಪುತ್ರ ಎಂಬ  ಭಾವಾವೇಷದ ಮಾತುಗಳು, ಇವೆಲ್ಲವೂ ಭ್ರಮೆ ಸೃಷ್ಟಿಸುವ ಮಾರ್ಗಗಳಷ್ಟೇ.  ಕನ್ನಡದ ಸಿನಿಮಾ ನಟರು ಪರದೆಯಿಂದ ಹೊರಬರಬೇಕು, ಪರದೆಯ ಗುಂಗಿನಿಂದಲೂ ಹೊರಬರಬೇಕು. ಕನ್ನಡ ಸಂಘಗಳು ನಾಮಫಲಕಗಳಿಂದ ಹೊರಬರಬೇಕು, ಬಾವುಟಗಳಿಂದ ಹೊರಬರಬೇಕು. ಹಿರಿಯ-ಕಿರಿಯ ಸಾಹಿತಿ ಕಲಾವಿದರು ಅಕ್ಷರಗಳ ಗುಂಗಿನಿಂದ ಹೊರಬರಬೇಕು. ಕನ್ನಡದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚಬೇಕು. ಅಧಿಕಾರ ರಾಜಕಾರಣದ ಪ್ರತಿನಿಧಿಗಳಿಗೆ ಭಾಷೆಯೂ ಬಂಡವಾಳವೇ, ಭಾಷಿಕರೂ ಬಂಡವಾಳವೇ. ಮಣ್ಣಿನ ಮಕ್ಕಳೇ ಆದರೂ ಮಣ್ಣನ್ನು ಮಾರಾಟ ಮಾಡಲು ಹೇಸುವವರಲ್ಲ. ಏಕೆಂದರೆ ಹಣಕಾಸು ಬಂಡವಾಳ ದಟ್ಟವಾಗಿ ಆವರಿಸಿದೆ. ಆಡಳಿತವನ್ನೂ ನಿಯಂತ್ರಿಸುತ್ತಿದೆ. ಕನ್ನಡ ಮತ್ತು ಕರ್ನಾಟಕ, ಭಾಷೆ ಮತ್ತು ಭಾಷಿಕರು ಒಂದು ಸೈದ್ಧಾಂತಿಕ ಭೂಮಿಕೆಯನ್ನು ಸೃಷ್ಟಿಸುವಂತಾದರೆ ಕನ್ನಡ ಮತ್ತು ಕನ್ನಡಿಗರ ಭವಿಷ್ಯ ಉಜ್ವಲವಾಗಬಹುದು. ಇಲ್ಲವಾದರೆ ಈಗ ಧ್ವಜವನ್ನು ಕಳೆದುಕೊಳ್ಳುವುದರಲ್ಲಿದ್ದೇವೆ, ಮುಂದೆ ಬೆಳಗಾವಿಯನ್ನೂ ಕಳೆದುಕೊಳ್ಳಬೇಕಾಗಬಹುದು, ಕಾವೇರಿ, ಕೊಡಗು ಸಹ ಕೈಬಿಟ್ಟುಹೋಗಬಹುದು

‍ಲೇಖಕರು avadhi

November 2, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasundhara k m

    ಈ ಬರಹ ನಮ್ಮೆಲ್ಲ ಕನ್ನಡಿಗರಿಗೂ ತಲುಪಬೇಕು. ಇದರ ಆಶಯ ಸ್ಪಷ್ಟವಾಗಿ ಅರಿವಾಗಬೇಕು. ಇಲ್ಲದಿದ್ದರೆ ನಾವೆಲ್ಲಾ ಅದೆಂತಹ ಸಂಕಷ್ಟಕ್ಕೆ ಸಿಲುಕಿಬಿಡುತ್ತೇವೆ…! ಬಹಳ ಉತ್ತಮ ಬರಹ. ಧನ್ಯವಾದಗಳು ಗುರು ಸಮಾನರಾದ ನಾ ದಿವಾಕರ ಅವರಿಗೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: