ಅಪರೂಪದ ರೂಪದರ್ಶಿ

 ಶಿವಕುಮಾರ್ ಮಾವಲಿ

ಕ್ಷಮಿಸಿ, ಅದೊಂದು ಚಿತ್ರವನ್ನು ಬಿಟ್ಟು ಬೇರೆ ಯಾವುದಾದರೂ ನೀವು ಕೊಳ್ಳಬಹುದು. ಅದನ್ನು ಮಾತ್ರ ನಾನು ಮಾರಾಟಕ್ಕಿಟ್ಟಿಲ್ಲ‌ ಎಂದು ಆ ಚಿತ್ರ ಕಲಾವಿದ ಹೇಳಿದಾಗ ನನಗೆ ಅದರ ಹಿಂದೆ ಏನೋ ವಿಶೇಷ ಕಾರಣ ಇರಬಹುದು ಅನ್ನಿಸಿತಾದರೂ ಅದನ್ನು ಕೊಳ್ಳಲೇಬೇಕು ಎಂದೆನ್ನಿಸಲಿಲ್ಲ.

ಹಾಗಾಗಿ ಅವನ ಬಳಿ ಯಾವುದೇ ಪ್ರಶ್ನೆ ಮಾಡದೆ, ಇಡೀ ಚಿತ್ರಶಾಲೆಯಲ್ಲಿ ನನಗೆ ಹಿಡಿಸಿದ ಕೆಲವು ಚಿತ್ರಗಳನ್ನು ಆರಿಸಿಕೊಂಡು ಅವುಗಳ ಬೆಲೆಗಳಲ್ಲಿ ಯಾವುದೇ ಚೌಕಾಸಿ ಮಾಡದೆ ಅವನಿಗೆ ಹಣ ಕೊಟ್ಟು ಹೊರಡುವಾಗ ಮತ್ತೆ ಆ ಚಿತ್ರದ ಕಡೆಗೆ ಕಣ್ಣಿಟ್ಟೆ. ಅದೊಂದು ಅಪ್ರತಿಮ ಸುಂದರಿಯ ಚಿತ್ರ. ಆ ಕಲಾವಿದನ ಕೈಯಿಂದ‌ ಮೂಡಿದ್ದ ಅತೀ ಶ್ರೇಷ್ಠ ಚಿತ್ರವೇನೋ ಎಂಬಂತೆ ಅದು ಕಾಣುತ್ತಿತ್ತು. ಇಂತಹ ಚಿತ್ರ ಬಿಡಿಸುವಾಗ ಆ ಕಲಾವಿದನ ಮನಸ್ಸಲ್ಲಿ ಇದ್ದ ಆ ರೂಪದರ್ಶಿ ಯಾರಿರಬಹುದು ಎಂದು ವಿಚಲಿತಗೊಳಿಸುವಂಥ ಚಿತ್ರ ಅದಾಗಿತ್ತು.

 

ಇದನ್ನು ಯಾರೋ ಆರ್ಡರ್ ಕೊಟ್ಟು ಮಾಡಿಸಿದ್ದಾರೆಯೆ ? ಎಂದು ಮತ್ತೆ ಪ್ರಶ್ನೆ ಹಾಕಿದೆ.

ಇಲ್ಲ. ಇದು ಸ್ವಂತ ಇಚ್ಛೆಯಿಂದ ಬಿಡಿಸಿದ್ದು ಎಂದು ವಿರಾಗಿಯೊಬ್ಬನಂತೆ ಹೇಳಿದ ಆ ಕಲಾವಿದ.‌

ಮತ್ತೆ, ಇಷ್ಟೊಂದು ಸೊಗಸಾಗಿರೋ ಈ ಚಿತ್ರವನ್ನು ಮಾತ್ರ ನೀವು ಯಾಕೆ‌ ಮಾರಾಟಕ್ಕಿಟ್ಟಿಲ್ಲ ? ಏನು ಇದರ ವಿಶೇಷ ? ಇವಳೇನು ನಿಮ್ಮ ಮೊನಾಲಿಸಾ ನಾ?’  ಎಂದು ವ್ಯಂಗ್ಯವಾಡಿದೆ.

ಹೌದು. ಅವಳು ನನ್ನ ಮೊನಾಲಿಸಾ

ಅಂದುಕೊಂಡೆ. ನೀವು ಇಂಥ ರೂಪಸಿಯ ಚಿತ್ರವನ್ನು ಮಾರಲು ತಯಾರಿಲ್ಲ ಅಂದರೆ ಅವಳು ನಿಮ್ಮ ಪ್ರೇಯಸಿಯೇ ಇರಬೇಕೆಂದು…

ಅವನು ಮಾತಾಡಲಿಲ್ಲ…

ಅವನ ಮೌನವನ್ನು ಅವನ ಮನೋವ್ಯಾಕುಲತೆಯೆಂದೇ ಅರ್ಥೈಸಿಕೊಂಡ ನಾನು , ಕ್ಷಮಿಸಿ, ಅವರು ಈಗ ನಿಮ್ಮೊಂದಿಗಿಲ್ಲ ಎಂದೆನ್ನಿಸುತ್ತೆ. ಅವರ ಬಗ್ಗೆ ನಾನು ಕೇಳಬಾರದಿತ್ತೇನೋ ಎಂದು ಪಶ್ಚಾತ್ತಾಪದಿಂದ ಹೇಳಿ ಹೊರಡುವವನಿದ್ದೆ.

ನನ್ನ ಪ್ರೇಯಸಿ ಇವಳಲ್ಲ  ಎಂದು ಅವನು ಹೇಳಿದ್ದರಿಂದ ಮತ್ತೆ ಮಾತಿಗಿಳಿಯಬೇಕಾಯಿತು.

ಏನು? ಪ್ರೇಯಸಿ ಇವಳಲ್ಲವೆ ?

ಇದೊಂದು ಚಿತ್ರ ಮಾತ್ರ

ಚಿತ್ರ ಮಾತ್ರ ಆಗಿದ್ದರೆ ಮಾರಾಟಕ್ಕೆ ಯಾಕಿಟ್ಟಿಲ್ಲ ?

ಪತಿಯಾದವನು ತನ್ನ ಹೆಂಡತಿಯನ್ನ ಮಾರಾಟಕ್ಕೆ ಇಟ್ಟಾನೆಯೆ?

ಈ ಮಾತು ಕೇಳಿ ನನಗೆ ದಿಗಿಲಾಯಿತು.

ಏನ್ರಿ ನಿಮ್ಮ ಮಾತಿನ ಅರ್ಥ ? ಈ ಚಿತ್ರ …? ನಿಮ್ಮ ಹೆಂಡತಿ…?

ಹೌದು

ಅದ್ಹೇಗೆ ಸಾಧ್ಯ ? ಒಂದು ಚಿತ್ರಪಟದಲ್ಲಿರುವ ಹೆಣ್ಣು ನಿಮ್ಮ ಹೆಂಡತಿಯಾಗಲು ಹೇಗೆ ಸಾಧ್ಯ?

ಇನ್ನೂ ಆಗಿರಲಿಲ್ಲ. ಆಗೇ‌ ಆಗ್ತೀನಿ ಅಂತಿದ್ಲು.‌ ಅಷ್ಟರಲ್ಲಿ…

ಅಷ್ಟರಲ್ಲಿ ಏನಾಯ್ತು ?

ಅವಳು ಎಲ್ಲಾ ಹಾಳು ಮಾಡಿಬಿಟ್ಲು

ಅವಳಾ ? ಈ ಅವಳು ಯಾರು ?

ನನ್ನೊಳಗಿನ ಕಲಾವಿದನ ಅಭಿಮಾನಿ. ನನ್ನನ್ನು ತುಂಬಾ ಹಚ್ಚಿಕೊಂಡವಳು. ಸುಮ್ಮನೆ ಚಿತ್ರ ಬಿಡಿಸಿಕೊಂಡಿದ್ದವನಿಗೆ ಅದನ್ನು ದುಡಿಮೆಯ ಮಾರ್ಗವಾಗಿ ಮಾಡಿಕೊಟ್ಟವಳು.

ನೋಡಿ, ನಿಮ್ಮ ಆ ಅವಳು, ಈ ಚಿತ್ರದಲ್ಲಿರುವ ಇವಳು…  ನಿಮ್ಮ ಕೆಲವು ಚಿತ್ರಗಳಂತೆಯೇ ನನಗೆ ಏನೊಂದೂ ಅರ್ಥವಾಗುತ್ತಿಲ್ಲ.‌ ಸರಿಯಾಗಿ ಹೇಳಿ. ಹಾಗಾದರೆ ಇದು ನಿಮ್ಮ ಆ ಅಭಿಮಾನಿಯ ಚಿತ್ರವಲ್ಲವೆ ? ಅವಳೇ ಬೇರೆ ಈ ಚಿತ್ರದಲ್ಲಿರುವವಳೇ ಬೇರೆಯೇ?

ಎಲ್ಲವನ್ನೂ ವಿವರವಾಗಿ ಹೇಳ್ತೀನಿ‌ ಎಂದು ಚಿತ್ರಶಾಲೆಯಲ್ಲಿದ್ದ ಇನ್ನೂ ನಾಲ್ಕಾರು ಜನ ಹೊರ ಹೋಗುವವರಗೂ ಸುಮ್ಮನಿರುವಂತೆ ನನಗೆ ಸನ್ನೆ ಮಾಡಿದ ಆ ಕಲಾವಿದ ಎಲ್ಲರೂ ಹೊರ ಹೋದಮೇಲೆ ಚಿತ್ರಶಾಲೆಯ ಬಾಗಿಲು ಮುಚ್ಚಿದ.

ಹವ್ಯಾಸಿ ಚಿತ್ರಕಲಾವಿದನಾಗಿದ್ದ ನಾನು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದೆ. ಆಗ ಕಾರ್ಯಕ್ರಮವೊಂದಕ್ಕೆ ನಾನು ಮಾಡಿಕೊಟ್ಟಿದ್ದ ಸ್ಟೇಜ್ ನ ಚಿತ್ರಾಕೃತಿಯನ್ನು ನೋಡಿ ಇಷ್ಟಪಟ್ಟ ಅವಳು, ಪರಿಚಯ ಮಾಡಿಕೊಂಡು ನಾನು ಇದುವರೆಗೂ ಮಾಡಿರುವ ಎಲ್ಲಾ ಚಿತ್ರಗಳನ್ನು ನೋಡುವ ಆಸೆ ವ್ಯಕ್ತಪಡಿಸಿದಳು. ಮನೆಗೆ ಕರೆದೊಯ್ದು ಎಲ್ಲಾ ಚಿತ್ರಗಳನ್ನು ತೋರಿಸಿದೆ. ಒಂದಕ್ಕಿಂತ ಒಂದು ಚೆನ್ನಾಗಿವೆ ಎಂದು ತಾನು ಆ ದಿನದಿಂದಲೇ ನನಗೆ ದೊಡ್ಡ ಅಭಿಮಾನಿ ಎಂದು ಘೋಷಿಸಿಕೊಂಡಳು.

ಆಮೇಲೆ ಅಭಿಮಾನಿಯಾಗಿದ್ದವಳು ಆಗಾಗ ಮನೆಗೆ ಬಂದು ಹೊಸದಾಗಿ ಬರೆದ ಚಿತ್ರಗಳನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿ ಹೋಗುತ್ತಿದ್ದಳು. ಅಷ್ಟಾದರೂ ನಾನು ಅವಳ ಪೂರ್ವಾಪರಗಳನ್ನು ವಿಚಾರಿಸಿರಲಿಲ್ಲ. ಒಂದು ದಿನ ಅವಳೇ ಬಂದು ಊಟಕ್ಕೆ ಕರೆದೊಯ್ದು ತನ್ನ ಬಗ್ಗೆ ಎಲ್ಲಾ ಹೇಳಿಕೊಂಡು, ನಾನೊಂದು ವೆಬ್ ಸೈಟ್ ಮಾಡಿಕೊಂಡು, ಡಿಜಿಟಲ್ ಪ್ಲಾಟ್ ಫಾರ್ಂ ಗೆ ಬಂದರ ನನ್ನ ಚಿತ್ರಗಳನ್ನು ಮಾರಾಟ ಮಾಡಬಹುದು.

ಅಲ್ಲದೆ ಹೆಚ್ಷು ಜನರನ್ನು ಆ ಮೂಲಕ ತಲುಪಲು ಸಾಧ್ಯ ಎಂದು ಹೇಳಿ, ತಾನೊಬ್ಬಳು ಬ್ಯುಸಿನೆಸ್ ಕನ್ಸಲ್ಟೆಂಟ್ ಆಗಿದ್ದು ಈ ಎಲ್ಲಾ ವಿಷಯಗಳಲ್ಲಿ ನನಗೆ ಸಹಾಯ ಮಾಡುವುದಾಗಿಯೂ ಭರವಸೆ ನೀಡಿ, ಪೋಷಕರು ತನಗೆ ಓದಿನಿಂದ ಹಿಡಿದು ಬಾಳ ಸಂಗಾತಿಯ ವಿಷಯದಲ್ಲೂ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿ, ನನ್ನ ಮೇಲೆ ಅವಳಿಗಿರುವ ಪ್ರೇಮವನ್ನು ಮುಕ್ತವಾಗಿ ಹೇಳಿಕೊಂಡಳು.

ನನ್ನ ಅಭಿಪ್ರಾಯವನ್ನು ಯೋಚಿಸಿ ತಿಳಿಸಬೇಕೆಂದು ನನಗಾಗಿ ಕೊಂಡು ತಂದಿದ್ದ ಕುಂಚವೊಂದನ್ನು ಉಡುಗೊರೆಯಾಗಿ ನೀಡಿ,  ನಿಮ್ಮ ಉತ್ತರವೂ ಹೌದು ಎಂದಾದಲ್ಲಿ ಈ ಕುಂಚದಿಂದ ನೀವು ಬಿಡಿಸುವ ಮೊದಲ ಚಿತ್ರ ನನ್ನಂಥದ್ದೇ ಓರ್ವ ಸುಂದರಿಯದ್ದಾಗಿರಬೇಕು ಎಂದು ಹೇಳಿ ಹೊರಟು ಹೋದಳು.

ಆ ಕುಂಚದಿಂದ ನಾನು ಬಿಡಿಸಿದ ಮೊದಲ ಚಿತ್ರವೇ ಈ ಅಪ್ರತಿಮ ಸುಂದರಿಯದು ಎಂದ ಆ  ಕಲಾವಿದ.

ನೀವು ಚಿತ್ರ ಬಿಡಿಸಿಕೊಂಡು ಕಾಯುತ್ತಾ ಕುಳಿತಿರಿ. ಆದರೆ ಅವಳು ಬರಲೇ ಇಲ್ಲ ಅಲ್ಲವೆ ? ಮುಂದಿ‌ನದು ನನಗೆ ಪೂರ್ತಿಯಾಗಿ ತಿಳಿದಿದೆ ಎನ್ನುವಂತೆ ಹೇಳಿದೆ.

ಇಲ್ಲ, ಅವಳು ಬಂದಳು. ಈ ಚಿತ್ರವನ್ನು ನೋಡಿದವಳೇ ರೋಮಾಂಚನಗೊಂಡು, ನನ್ನನ್ನು ತಬ್ಬಿ ಮುದ್ದಾಡಿದಳು. ಈ ಚಿತ್ರವನ್ನಂತೂ ತಾಸುಗಟ್ಟಲೆ ದಿಟ್ಟಿಸಿ ನೋಡಿದಳು. ನಾನೂ ಕೂಡ ಅಪ್ಪಟ ಪ್ರೇಮಿಯಂತೆಯೇ ಭಾವಿಸತೊಡಗಿದೆ. ಅವಳು ಆಗಾಗ ಬರುತ್ತಿದ್ದಳು. ಹೊಸ  ಹೊಸ ಚಿತ್ರಗಳನ್ನು ನೋಡಿ ಖುಷಿಪಟ್ಟು ಹೋಗುತ್ತಿದ್ದಳು.

ಹೀಗೆ ಬಂದಾಗ ಒಮ್ಮೆ ಈ ಅಪ್ರತಿಮ ಸುಂದರಿಯ ಚಿತ್ರ ನನಗಾಗಿ ರಚಿಸಿದ್ದು ಎಂಬುದೇನೋ ಹೌದು ಆದರೆ ಇದು ನನ್ನಂತೆ ಯಾಕಿಲ್ಲ ? ಇದರ ಹಿಂದಿನ ರೂಪದರ್ಶಿ ಯಾರು? ಎಂದು ಕೇಳಿದಳು. ಅದಕ್ಕೆ ನಾನು ಕಲಾವಿದನಿಗೆ ಒಂದು ಒಳಗಣ್ಣು ಇರುತ್ತದೆ. ಅಲ್ಲಿ ಕಂಡಿದ್ದನ್ನು ಆತ ಚಿತ್ರಿಸುತ್ತಿರುತ್ತಾನೆ. ಅದನ್ನೆಲ್ಲ ಕೇಳಬಾರದು ಎಂದಿದ್ದೆ. ಅವಳೂ ನಕ್ಕು ಸುಮ್ಮನಾಗಿದ್ದಳು. ಮತ್ತೆ ಆ ವಿಷಯವಾಗಿ ಏನನ್ನೂ ಕೇಳಿರಲಿಲ್ಲ. ಎಲ್ಲವೂ ಸರಿಯಾಗಿತ್ತು.

ಇನ್ನೇನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆವು. ಅಷ್ಟರಲ್ಲಿ ಒಂದು ದಿನ ಇಲ್ಲಿಗೆ ಬಂದು, ಒಂದು ವಿಡಿಯೋ ತಂದು ನನ್ನ ಮುಖದ ಮೇಲೆ ಬಿಸಾಕಿ ಚಿತ್ರಗಳಿಗೆ ಭಾವಗಳು ಮಾತ್ರ ಇರುತ್ತವೆ ಅಂದುಕೊಂಡಿದ್ದೆ. ಆದರೆ, ದೇಹಗಳೂ ಇರುತ್ತವೆ ಎಂಬುದನ್ನು ಅರಿತಿರಲಿಲ್ಲ ಎಂದು ಹೇಳಿ ಹೊರಟು ಹೋದಳು.

 

ಯಾಕೆ ? ಯಾವ ಚಿತ್ರಕ್ಕೆ ಆಕೆ ಹಾಗೆ ಹೇಳಿದಳು? ಆ ವಿಡಿಯೋದಲ್ಲಿ ಏನಿತ್ತು ?

ಅದರಲ್ಲಿ ನನ್ನ ಮತ್ತು ಈ ಚಿತ್ರದ ಸರಸ ರೆಕಾರ್ಡ್ ಆಗಿತ್ತು

ಏನಂದ್ರಿ ? ಎಂದು ಕೇಳುವಾಗ ಕೋಪ ಮತ್ತು ಆಶ್ಚರ್ಯ ನನ್ನಲ್ಲಿತ್ತು.

ಹೌದು ಸರ್. ಆಕೆ ಬಂದು ಮೊದಲ ಬಾರಿ ಈ ಚಿತ್ರ ನೋಡಿ ಹೋದ ರಾತ್ರಿಯಿಂದ ಒಂದು ವಿಚಿತ್ರ ನಡೆಯಿತು. ಆ ಚಿತ್ರ ನನ್ನೊಂದಿಗೆ ಮಾತಾಡಲು ಶುರು ಮಾಡಿತು. ಇಡೀ ದಿನ ಚಿತ್ರ ಶಾಲೆಗೆ ಬಂದು ಆ ಚಿತ್ರವನ್ನು ಮೆಚ್ಚಿ ಮಾತಾಡಿದ್ದವರ ಬಗ್ಗೆ ನನ್ನ ಬಳಿ ಹೇಳತೊಡಗಿತು. ತನ್ನನ್ನು ಅಪ್ರತಿಮ ಸುಂದರಿಯಾಗಿ ಚಿತ್ರಿಸಿರುವುದಕ್ಕೆ ತಾನೆಷ್ಟು ಋಣಿ ಎಂದು ಹೇಳುತ್ತಿತ್ತು.

ಅದೊಂದು ಹೊಸ ಹೆಣ್ಣಿನ ಧ್ವನಿ. ನಾನು ಅದುವರೆಗೂ ಕೇಳಿರದ ಧ್ವನಿ ಅದು. ಹಾಗಂತ ಅದು ಭಯಾನಕವಾದ ಅನುಭವವೇನೂ ಆಗಿರಲಿಲ್ಲ. ರಾತ್ರಿಯ ಪ್ರಶಾಂತತೆಯಲ್ಲಿ ಅದು ನನ್ನೊಂದಿಗೆ ನವಿರಾದ ಮಾತುಗಳನ್ನಾಡತೊಡಗಿತು.ಇಂಥದ್ದೇ ಮಾತುಗಳ ನಡುವೆ ಒಂದು ದಿನ, ನಾನು ನಿನ್ನನ್ನು ಮದುವೆಯಾಗಬೇಕು ಎಂದಿತು. ಇದೆಂಥ ವಿಚಿತ್ರ ಬೇಡಿಕೆ ಎಂದುಕೊಂಡೆ.

ಆದರೆ ಆ ಚಿತ್ರ ಪ್ರತಿ ರಾತ್ರಿ ನನ್ನನ್ನು ಇದೇ ಬೇಡಿಕೆಯಿಂದ ಪೀಡಿಸತೊಡಗಿತು. ನನ್ನ‌ನ್ನು ಚಿತ್ರಿಸಿದವನು ನೀನೇ ತಾನೆ ? ಅಂದರೆ ನನ್ನ ದೇಹದ ಇಂಚಿಂಚು ನಿನಗೆ ಪರಿಚಯವಿದೆ ಅಲ್ಲವೆ ? ಹೀಗಾಗಿ ನೀನಲ್ಲದೆ ನನ್ನನ್ನು ಮತ್ಯಾರು ಮದುವೆಯಾಗಬೇಕು ಹೇಳು ? ಎಂಬ ವಾದ ಮುಂದಿಟ್ಟಾಗ ನಾನು, ನಿನಗೆ ದೇಹವೇ ಇಲ್ಲ, ಫೋಟೋ ಫ್ರೇಮಿನಲ್ಲಿರುವ ನೀನು ಕೇವಲ ನನ್ನ ಕಲ್ಪನೆ ಮಾತ್ರ. ಹೀಗಿರುವಾಗ ನಾನು ನೀನು ಮದುವೆಯಾಗುವುದು  ಹೇಗೆ ಸಾಧ್ಯ? ಎಂದೆ.

ನಾನು ನಿನ್ನದೇ ಕಲ್ಪನೆ‌ ಎಂದ ಮೇಲೆ, ನಾನು ನಿನ್ನೊಳಗೇ ಇದ್ದೇನೆ ಎಂದರ್ಥವಲ್ಲವೆ ? ಬೇಕಾದರೆ ಅದನ್ನು ಈಗಲೇ ಪರೀಕ್ಷೆ ಮಾಡಿ ನೋಡೋಣ. ಪ್ರಯತ್ನಿಸು. ನಿನ್ನ ತೋಳುಗಳನ್ನು ಚಾಚು ಎಂದಿತು. ನಾನು ತೋಳುಗಳನ್ನು ಚಾಚಿದೆ. ಎರಡು ಮೃದುವಾದ ಕೈಗಳು ನನ್ನನ್ನು ತಬ್ಬಿಕೊಂಡವು. ಆ ಚಿತ್ರವನ್ನು ನೋಡಿದೆ. ಜೀವ ಬಂದಂತಿತ್ತು. ನಿಧಾನಕ್ಕೆ ಬೆನ್ನಿಗಾಗಿ ಹುಡುಕಾಡಿದವು ನನ್ನ ಬಾಹುಗಳು. ಹೆಣ್ಣೊಬ್ಬಳ ಕೋಮಲವಾದ ಬೆನ್ನು ಸವರಿದ ಅನುಭವವಾಯ್ತು.

ನನ್ನ  ಮುಖದ ಮೇಲೆ ಕೈಯೊಂದು ಓಡಾಡಿದಂತಾಯಿತು. ಸುಮ್ಮನಿದ್ದೆ. ಕೈಗಳು ಮುಂದುವರೆದವು. ನನ್ನ ಕೈಗಳೂ ಒಂದು  ದೇಹವನ್ನು ಬಳಸಿದವು. ಮುಖ ಸ್ಪಷ್ಟವಾಗುತ್ತಿರಲಿಲ್ಲ. ದೇಹದ ಪರಿಚಯವೂ ಸಿಗುತ್ತಿರಲಿಲ್ಲ. ಕಣ್ಮುಂದೆ ಆ ಚಿತ್ರದ ಮುಗ್ಧ ಭಾವವೊಂದು ಮೂಡುತ್ತಿತ್ತು ಅಷ್ಟೇ.  ಇದೊಂದು ಭ್ರಮೆಯೇನೋ ಎಂದುಕೊಂಡೆ. ಮರುದಿನವೂ ಹಾಗೆ ಆಯಿತು.

ನಂತರ ಪ್ರತಿ‌ದಿ‌ನ ಹಾಗೆಯೇ ಆಯಿತು. ನಾನು ಅತ್ಯುತ್ಸಾಹದಿಂದ ರಾತ್ರಿಗಾಗಿ, ಆ ಚಿತ್ರ ನನ್ನೊಂದಿಗೆ ಮಾತು ಆರಂಭಿಸುವ, ಸೇರುವ ಸಮಯಕ್ಕಾಗಿ ಕಾಯತೊಡಗಿದೆ. ನಮ್ಮ ಮದುವೆ ಯಾವಾಗ ? ಎಂದು ಒಂದು ದಿನ ಆ ಚಿತ್ರ ಕೇಳಿತು. ನಾನು ಆ ಪ್ರಶ್ನೆಯೇ ಕೇಳಿಲ್ಲವೆಂಬಂತೆ ಪ್ರತಿ ರಾತ್ರಿಯ ಹಾಗೆ ಆ ದೇಹವನ್ನು ಸೇರುವುದರಲ್ಲಿ ನಿರತನಾಗಿದ್ದೆ…

ಇದಾದ ಮರುದಿ‌ನವೇ ಅವಳು ಬಂದು ನನ್ನ ಚಿತ್ರಶಾಲೆಯಲ್ಲಿ ಆಕೆ ರಹಸ್ಯವಾಗಿ ಇರಿಸಿದ್ದ ಸಿಸಿಟಿವಿ ಕ್ಯಾಮರಾವನ್ನು ನನ್ನ‌ ಮುಂದೆಯೇ ತೆಗೆದು ಪ್ರತಿ ರಾತ್ರಿಯ ನನ್ನ ಈ ವಿಚಿತ್ರ ವರ್ತನೆಯನ್ನು ನನಗೆ ತೋರಿಸಿ, ಚಿತ್ರಗಳಿಗೆ ಭಾವಗಳು ಮಾತ್ರ ಇರುತ್ತವೆ ಎಂದುಕೊಂಡಿದ್ದೆ. ಆದರೆ ದೇಹಗಳೂ ಇರುತ್ತವೆಂದು ಅರಿತಿರಲಿಲ್ಲ.

ನೀನು ಬಿಡಿಸುವ ಚಿತ್ರಗಳನ್ನು ಮಾತ್ರ ನೋಡಿದ್ದ ನನಗೆ ಅವುಗಳು ಸೃಷ್ಟಿಯಾಗುವ ಸಮಯವನ್ನು, ಆಗೆಲ್ಲ ನಿನ್ನ ವರ್ತನೆ ಹೇಗಿರುತ್ತದೆಂಬುದನ್ನೂ ಸೆರೆಹಿಡಿಯಬೇಕು ಅದನ್ನು ವೈರಲ್ ಮಾಡಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ನಿನಗೆ ಹೇಳದೆ ಕ್ಯಾಮರಾ ಇಟ್ಟಿದ್ದೆ. ಆದರೆ ಇದರಿಂದ ಇಂಥದ್ದೊಂದು ಅಸಹ್ಯ ಬಹಿರಂಗವಾದೀತು ಎಂದೆಣಿಸಿರಲಿಲ್ಲ ಎಂದು ಹೇಳಿ ಹೊರಟು ಹೋದಳು. ಮತ್ತೆ ಆಕೆ ಬರಲೇ ಇಲ್ಲ.

ಆಕೆ ಮಾತ್ರ ಅಲ್ಲ … ಆ ಚಿತ್ರದಲ್ಲಿದ್ದ ರೂಪಸಿಯೂ ಆ ರಾತ್ರಿಯಿಂದ ನನ್ನೊಡನೆ ಮಾತಾಡಲೇ ಇಲ್ಲ. ಅವಳ ಮಾತಾಗಲೀ, ದೇಹವಾಗಲೀ ಆ ದಿನದಿಂದ ನನ್ನನ್ನು ಸಂಪರ್ಕಿಸಿಯೇ ಇಲ್ಲ. ಆ ಚಿತ್ರದಲ್ಲಿ ಏನಾದರೂ ಬದಲಾವಣೆಯಾಗಿದೆಯಾ ಎಂದು ನೋಡುತ್ತೇನೆ. ಏನೊಂದೂ ತೋಚುತ್ತಿಲ್ಲ.

ಆ ಧ್ವನಿ , ಆ ದೇಹದ ಪರಿಚಯ ನನಗಲ್ಲದೆ ಮತ್ಯಾರಿಗಿದೆ ? ಪ್ರಪಂಚದಲ್ಲಿ ಯಾವ ಕಲಾವಿದನಿಗೆ ತಾನು ಬಿಡಿಸಿದ ಚಿತ್ರವನ್ನು ವರಿಸುವ ಅವಕಾಶ ಸಿಕ್ಕಿದ್ದಿತು ಅಲ್ಲವೆ ? ಹಾಗಾಗಿ ಆ ಚಿತ್ರವನ್ನು ಮಾರಾಟಕ್ಕಿಟ್ಟಿಲ್ಲ. ಆದರೆ ಅದು ಈ ಚಿತ್ರಶಾಲೆಗೆ ಬಂದವರನ್ನು ಆಕರ್ಷಿಸುತ್ತದೆ. ಆದ್ದರಿಂದಲೇ ಇಲ್ಲೇ ಇಟ್ಟುಕೊಂಡಿದ್ದೇನೆ.

ಈ ಅಸಂಗತ ಮತ್ತು ಅಸಮಾನ್ಯ ವೃತ್ತಾಂತ ಕೇಳಿದ ನನಗೆ ಚಿತ್ರಗಳಿಗೆ ಭಾವಗಳ ಜೊತೆ ದೇಹಗಳೂ ಇದ್ದಿದ್ದರೆ ಎಂಬ ಯೋಚನೆ ಬಹುಕಾಲ ಕಾಡಿತ್ತು.  ಜೊತೆಗೆ ಅವಳು ವಿಡಿಯೋ ಕೊಟ್ಟು ಹೋದ ದಿನದಿಂದಲೇ ಈ ಚಿತ್ರದ ಮಾತುಗಳೂ ನಿಂತು ಹೋದದ್ದೇಕೆ ? ಕಲಾವಿದನ ಕುಂಚದಲ್ಲಿ ಹುಟ್ಟುವ ಚಿತ್ರಗಳು, ಅಭಿಮಾನಿಯ ಮನಸ್ಸೂರೆಗೊಂಡ ಚಿತ್ರಗಳು ಮತ್ತು ಸಿಸಿಟಿವಿಯು ಸೆರೆಹಿಡಿಯುವ ಚಿತ್ರಗಳು – ಇವೆಲ್ಲವೂ ಒಂದೇ ಆಗಿರುವುದಿಲ್ಲ ಯಾಕೆ ? ಎಂಬುದನ್ನು ಯೋಚಿಸುತ್ತಲೇ ಇದ್ದೇನೆ.

‍ಲೇಖಕರು avadhi

November 2, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: