ಕಥನ ಕವಿತೆ
ಫಕೀರ
ನಾನೊಂದು ಕತೆ ಬರೆದಿದ್ದೆ
ಸೊಪ್ಪು ಮಾರುವ ಕನ್ನಡ ಕುಮಾರನಿಗೂ
ಹೂವು ಮಾರುವ ತಮಿಳು ಸೆಲ್ವಿಗೂ
ನಡುವೆ ಇದ್ದ ಪ್ರೀತಿ ಪ್ರೇಮ ತೆಯ
ಕತೆ ಎಂದೋ ಬರೆದಾಗಿತ್ತು
ಕಥೆ ಬರೆದು ಮುಗಿಸಿದರೂ
ಅವರಿಬ್ಬರು ಮಾತ್ರ ನನ್ನಲ್ಲೇ ಇದ್ದಾರೆ
ನನ್ನ ಬಿಟ್ಟು ಹೋಗಿರಿ ಎಂದರೂ ಕೇಳುತ್ತಿಲ್ಲ
ಬಿಟ್ಟು ಹೋಗಲು ಇಬ್ಬರಿಗೂ ಮನಸಿಲ್ಲ
ನನ್ನಲ್ಲೇ ಇದ್ದಾರೆ ಬಾಡಿಗೆ ಹಿಡಿದು
ನನ್ನ ಮನೆಯಲ್ಲೇ ವಾಸಿಸುತ್ತಿದ್ದಾರೆ
ನನ್ನ ಮನೆ ಈಗ ನನಗೆ ಬಯಲು
ಕಥೆ ಬರೆದ ನನಗೀಗ
ಅವರನ್ನು ಸಾಕುವ ಹೆಚ್ಚುವರಿ ಕೆಲಸ
ಯಾಕಾದರೂ ಅವರ ಕತೆ ಬರೆದೆನೋ?
ಒಳಗುದಿಯ ನೋವು ಜೊತೆಯಲ್ಲೇ
ಸೊಪ್ಪು ಮಾರುತ್ತಿದ್ದ ಕನ್ನಡ ಕುಮಾರ
ಈಗ ಅಡುಗೆಮನೆಯಲ್ಲಿ ಸೊಪ್ಪು ಹೆಚ್ಚುತ್ತಿದ್ದಾನೆ
ಹೂವು ಮಾರುತ್ತಿದ್ದ ತಮಿಳು ಸೆಲ್ವಿ
ಈಗ ದೇವರ ಕೋಣೆ ಸೇರಿಕೊಂಡಿದ್ದಾಳೆ.
ನನ್ನ ಬೆಡ್ರೂಮ್ ಈಗ ಅವರ ಕೋಣೆ
ನನ್ನ ಮೆತ್ತನೆಯ ಕುರ್ಲಾನು ಹಾಸಿಗೆ-ದಿಂಬು
ಬೆಚ್ಚನೆಯ ಕಾಶ್ಮೀರಿ ಚಾದರ, ಕೊಲ್ಲಾಪುರದ ಕಂಬಳಿ
ಮಾನ-ಸನ್ಮಾನದ ಶಾಲು ಹೊದಿಕೆಗಳು
ಮಾರುದ್ದದ ಕನ್ನಡಿ ಎಲ್ಲವೂ
ಈಗ ಅವರ ಬೆಡ್ರೂಮ್ನ ಆಸ್ತಿಗಳು
ಕತೆಗಾರನ ಪಾಲಿಗೆ ಒಲಿದಿದ್ದು ಇಷ್ಟೇ
ಒಂದು ಚಾಪೆ ಇನ್ನೊಂದು ಬೆಡ್ಶೀಟು…

ಸದ್ಯ ಮನೆಯಲ್ಲಿರುವ ಅತಿಥಿಗಳು
ನನ್ನ ಕತೆಯ ಪಾತ್ರಗಳೇ!
ನಾನು ಸೃಷ್ಟಿಸಿದ ಕೂಸುಗಳು ಅವು
ಆದರೂ
ಅವರು ಅತಿಥಿ ದೇವೋಭವ ಅಲ್ಲವೇ!
ನೋವಿದ್ದರೂ ನಗಬೇಕು
ಮಾತಿದ್ದರೂ ಮೌನವಾಗಿರಬೇಕು
ನೋವಿದ್ದರೂ ನುಂಗಬೇಕು
ಬಿಸಿತುಪ್ಪದ ಬೆಪ್ಪ ನಾನು
ಗಂಟಲಿನಲ್ಲಿ ಕಡುಬು ಇಟ್ಟುಕೊಂಡು
ಹಸಿದು ಕೂತಿದ್ದೇನೆ
ಈಗ ನನ್ನ ಮನೆಯಲ್ಲೇ ನಾನೇ ಅನಾಥ
ಕಥೆಗಾರನ ಮನೆಯ ಕಥೆಯ
ಯಾರಿಗೆ ಹೇಳುವುದು?
ಮನೆಗೆ ಬೇಕಾದ ದಿನಸಿ ರೇಷನ್ನು-ಹಣ್ಣು ತರಕಾರಿ
ಹಾಲು-ತುಪ್ಪ, ಹೂವು-ಸೊಪ್ಪು
ಎಲ್ಲದರ ಹೊಣೆ ಈಗ ನನ್ನದು
ಕತೆಯಲ್ಲಿ ಮೈಮುರಿದು ದುಡಿಯುತ್ತಿದ್ದ ಪಾತ್ರಗಳು
ಈಗ ಮನೆಯಲ್ಲಿ ಸೋಮಾರಿಗಳಾಗಿವೆ.
ಇಲ್ಲದ ಗಿಂಬಳ, ತಿಂಗಳ ಸಂಬಳ
ನಂಬಿದವನಿಗೆ ಇದೆಂಥಾ ಪಾಡು?
ಏಳುನಿದ್ದೆಯ ಸುಖಪುರುಷ ಈಗ
ಮೂರು ರಾತ್ರಿಯ ನಿದ್ದೆಗೆ ಶರಣಾಗಿರುವ
ನನ್ನ ಕಥೆಯೇ ಈಗ ನನಗೆ ದೊಡ್ಡದು
ಈಗೀಗ ಕತೆ ಬರೆಯಲು ಹೆದರಿಕೆ
ಬೇತಾಳನಂತಿರುವ ಆ ಎರಡು ಪಾತ್ರಗಳು
ಜೊತೆಯಲ್ಲಿದ್ದು ಕಿರಿಕಿರಿ ಕೊಡುವಾಗ
ಹೊಸ ಕತೆಯ ಪಾತ್ರಗಳು ಇನ್ನೂ
ಹೊಟ್ಟೆಯಲ್ಲೇ ಇವೆ
ಸಿನಿಮಾ ನಟಿಯಾದ ದೇವಯಾನಿ
ಮೂರು ಬಿಟ್ಟು ಊರಿಗೆ ದೊಡ್ಡವನಾದ ರೌಡಿ ಮಾದೇಶ
ಕಬಾಬ್ ಅಂಗಡಿಯ ಮುಸ್ತಾಫಾ
ಹುಲಿಯೂರಿನ ಪೈಲ್ವಾನ ಮಾರ್ತಾಂಡ
ಗಂಡುಭೀರಿ ಮೀನಾಚಾರಿ
ಹೂವಿನಕೊಪ್ಪಲಿನ ಶಾನುಭೋಗ ಶೇಷಪ್ಪ
ಪೀಠ ತೊರೆದು ಸಂಸಾರಿಯಾದ ಗಿರಿವರ ಸ್ವಾಮೀಜಿ
ಕಾಮನಗಲ್ಲಿಯ ಕುಂಟ ನಾಗಪ್ಪ
ಒಂದೇ ಎರಡೇ ಇನ್ನೂ ಹಲವು ಪಾತ್ರಗಳು
ಹಳೆ ಕಥೆಯ ವ್ಯಥೆಯೇ ಹೀಗಿರಲು
ಹೊಸ ಕತೆಗಳ ಪಾತ್ರಗಳಿಂದ ಬದುಕುವುದುಂಟೇ?
ಪೈಲ್ವಾನ ಮಾರ್ತಾಂಡ, ರೌಡಿ ಮಾದೇಶ, ಕಬಾಬ್ ಮುಸ್ತಾಫಾ
ನನ್ನನ್ನು ಸುಮ್ಮನೇ ಬಿಡುವರೇ?
ತಮ್ಮನ್ನು ಹುಟ್ಟಿಸಿದ ಕತೆಗಾರರೆಂದು ಗೌರವಿಸುವರೇ?
ನಂಬಿಕೆ ಯಾಕೋ ಕಾಣುತ್ತಿಲ್ಲ
ಬದುಕುವ ಆಸೆ ನನಗೆ ಇನ್ನೂ ಇದೆ
ಹೇಗೆ ಹೇಳಲಿ?
ಕಥೆಗಾರನ ಕತೆಯೇ ಈಗ ದೊಡ್ಡ ವ್ಯಥೆ!

ತಿಂಗಳು ಕಳೆಯಿತು ದಿನಗಳು ಉರುಳುತ್ತಿವೆ
ಕತೆಗಾರನ ಮನೆ-ಮನದಿಂದ
ಕುಮಾರ ಮತ್ತು ಸೆಲ್ವಿ
ಇನ್ನೂ ಹೋಗುವಂತೆ ಕಾಣುತ್ತಿಲ್ಲ
ಹಗಲು ಕನ್ನಡ ಭಾಷೆ
ರಾತ್ರಿ ತಮಿಳು ಭಾಷೆ
ಮಕ್ಕಳಾಟವೋ ಬಯಲಾಟವೋ
ಅರಿವಾಗುತ್ತಿಲ್ಲ
ಒಲೆಯಲ್ಲಿದ್ದ ಉರಿ ಈಗ ಮನದಲ್ಲಿ
ಧಗಧಗನೆ ಉರಿಯುತಿದೆ
ಮನೆಯಲ್ಲಿದ್ದವರ ಜೊತೆ
ಹೊಸಬರು ಹೊಂದಿಕೊಳ್ಳುವರೇ ಈಗ?
ಹೊಟ್ಟೆಯಲ್ಲಿದ್ದವರು ಸಹಜವಾಗಿ
ದೊಡ್ಡವರಾಗುತ್ತಿದ್ದಾರೆ
ಅಬಾರ್ಷನ್ ಮಾಡಿಸಿಕೊಳ್ಳಲೇ?
ಯಾಕೋ ಮತ್ತೆ ಪಾಪಪ್ರಜ್ಞೆಯ ಭಯ
ಬೇಡದ ಚಿಂತೆಯನು ಅಂಟಿಸಿಕೊಂಡು
ಕೂತಿರುವೆ ಏಕಾಂಗಿಯಾಗಿ
ಮಾತಿಲ್ಲ ಕತೆಯಿಲ್ಲ ಊರವರ ಜೊತೆ…
ಇರುಳು ಓಡುತ್ತಿದೆ
ಮಾತು ಮೌನವಾಗುತ್ತಿದೆ
ಕತೆಗಾರನ ಗರ್ಭವೂ ದಿನದಿಂದ ದಿನಕೆ
ಬೆಳೆಯುತ್ತಲೇ ಇದೆ
ಎದೆಬಡಿತದ ನಗಾರಿ ಜೋರಾಗಿಯೇ ಇದೆ
ಆಕಳು ತಾನಾಗೇ ಹಾಲು ಕೊಟ್ಟರೆ ಕುಡಿದವರಿಗೆ ಅಮೃತ
ಹಿಂಡಿಸಿಕೊಳ್ಳದೇ ಹಾಗೆ ಇಟ್ಟುಕೊಂಡರೆ ಅದಕೆ ವಿಷ
ಪೆನ್ನು ಹಾಳೆ ಹಿಡಿದು ಹೊಸ ಕಥೆ ಬರೆಯಲು
ಕತೆಗಾರ ಮತ್ತೆ ಸಿದ್ಧನಾಗಿಹನು
ಹೆರಿಗೆಯ ಕ್ಷಣಗಳು
ಹತ್ತಿರದಲ್ಲಿವೆ
ಹುಟ್ಟುವ ಮಕ್ಕಳಲ್ಲಿ ಅಮೃತ ಕುಡಿಸುವರೆಷ್ಟೋ!
ವಿಷ ಹಾಕುವರೆಷ್ಟೋ?
ಯಾಕೋ
ಕಥೆಗಾರನ ಕಥೆ
ಮುಗಿಯದಂತೆ ಕಾಣದು.






Super