ಕನ್ನಡ-ಅಸ್ಸಾಂ: ಹೊಸ ಶಕಾರಂಭ…

ಈಕ್ಷಿತಾ ಸತ್ಯನಾರಾಯಣ

2020ನೇ ಸಾಲಿನ ಜ್ಞಾನಪೀಠ ಪುರಸ್ಕಾರ ಹಿರಿಯ ಅಸ್ಸಾಮಿ ಶ್ರೀ ನೀಲಮಣಿ ಪುಕಾನ್‌ ಅವರಿಗೆ ದೊರೆತಿದೆ. 2017ರಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಅವರಿಗೆ ಮತ್ತು ಮತ್ತೊಬ್ಬ ಅಸ್ಸಾಮಿ ಲೇಖಕ ಹೊಮೆನ್‌ ಬೋರ್ಗಹೈನ್‌ ಅವರಿಗೆ ದೊರೆತಾಗ, ಅವರಿಬ್ಬರ ಬಗ್ಗೆ ಒಂದು ಪರಿಚಯಾತ್ಮಕ ಲೇಖನ ಬರೆಯುವ ಅವಕಾಶ ನನಗೆ ದೊರೆತಿತ್ತು. ಅದರ ಒಂದು ಭಾಗ ಇಲ್ಲಿದೆ. (ಶ್ರೀ ನೀಲಮಣಿ ಪುಕಾನ್‌ ಮತ್ತು 2021ರ ಜ್ಞಾನಪೀಠ ಪುರಸ್ಕಾರ ಪಡೆದಿರುವ ಕೊಂಕಣಿ ಭಾಷೆಯ ದಾಮೋದರ ಮೌಜೋ ಅವರಿಗೆ ಶುಭಾಶಯಗಳು)

ಮಾಹಿತಿ ಕೃಪೆ : ಬೆಂಗಾಳಿ ಬರಹಗಾರ

‘ಜ್ಞಾನಪೀಠ ಪ್ರಶಸ್ತಿ ಮಹತ್ ಕೃತಿಗಳನ್ನು ಸೃಷ್ಟಿಸುವುದಿಲ್ಲವಾದರೂ ಸೃಷ್ಟಿಯಾದ ಮಹತ್ ಕೃತಿಗಳನ್ನು ಮರೆಯಿಂದ ಹೊರಗೆ ಬೆಳಕಿಗೆ ತಂದು, ಬಹುಜನರ ಕಣ್ಣಿಗೆ ಅದು ಬೀಳುವಂತೆ ಮಾಡಿ, ಬೇರೆ ಬೇರೆ ಭಾಷೆಯ ಸಹೃದಯರ ಗಮನವನ್ನು ಅದರತ್ತ ಸೆಳೆಯುವ ಮಹೋಪಕಾರ ಮಾಡುವುದರಲ್ಲಿ ಸಂದೇಹವಿಲ್ಲ.’

ಇವು, ಡಿಸೆಂಬರ್ ೨೦, ೧೯೬೮ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಿ ಮಾಡಿದ ಭಾಷಣ ’ಬಹುಜಿಹ್ವಾ ಭಾರತಿಗೆ ಐಕ್ಯತೆಯ ಆರತಿ’ಯಲ್ಲಿ ಕುವೆಂಪು ಹೇಳಿರುವ ಮಾತುಗಳು. ಇದು ಎಲ್ಲ ಪ್ರಶಸ್ತಿಗಳಿಗೂ ಅನ್ವಯಿಸುವ ಮಾತೇ ಆಗಿದೆ. ಇಂದಿನ ಜಾತಿ, ಮತ, ಪಕ್ಷ, ರಾಜಕೀಯಗಳಿಂದ ಹೊರತುಪಡಿಸಿ, ಪ್ರಶಸ್ತಿ ಪುರಸ್ಕಾರಗಳಿಂದ ಒದಗಬಹುದಾದ ಧನಾತ್ಮಕ ಲಾಭವನ್ನು ಮಾತ್ರ ಪರಿಗಣಿಸಬೇಕಾಗಿದೆ.

ಜ್ಞಾನಪೀಠ ಮಾಡುತ್ತಿರುವ ಸಕಾರ್ಯವನ್ನು ಹಲವಾರು ಪ್ರಶಸ್ತಿಗಳು ಮಾಡುತ್ತಿವೆ. ಕಾಲ, ದೇಶ, ಭಾಷೆಗಳನ್ನು ಮೀರಿದ ಬಾಂಧವ್ಯವನ್ನು ಬೆಸೆಯುವಲ್ಲಿ ಪ್ರಶಸ್ತಿಗಳ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ವ್ಯಾಪಿಸುತ್ತಿರುವ ’ಕುವೆಂಪು ರಾಷ್ಟ್ರೀಯ ಪುರಸ್ಕಾರ’ವೂ ಒಂದಾಗಿದೆ.೨೦೧೭ನೆಯ ಸಾಲಿನ ಪುರಸ್ಕಾರವು ಅಸ್ಸಾಂ ಸಾಹಿತಿಗಳಾದ ಪ್ರೊ. ನೀಲಮಣಿ ಫೂಕನ್ ಮತ್ತು ಹಿಮೆನ್ ಬೊರ್ಗಹೈನ್ ಅವರಿಗೆ ಸಂದಿರುತ್ತದೆ.

ಅಸ್ಸಾಂ ಕಣಿವೆಗೂ ನಮ್ಮ ಮಲೆನಾಡಿಗೂ ಭೌಗೋಳಿಕವಾಗಿ ಸಾಕಷ್ಟು ಸಾಮ್ಯತೆಯಿದೆ. ಬೆಟ್ಟ, ಕಾಡು, ಕಣಿವೆ, ಮಳೆ, ಹಸಿರು, ಕಷ್ಟಸಹಿಷ್ಣು ಜನತೆ, ಪ್ರಕೃತಿಯೊಡನೆ ಬೆರೆತುಹೋಗಿರುವ ಜನಜೀವನ ಎಲ್ಲವೂ ನಮ್ಮ ಮಲೆನಾಡನ್ನೇ ನೆನಪಿಸಿದರೆ ಆಶ್ಚರ್ಯಪಡಬೇಕಿಲ್ಲ. ಕರ್ನಾಟಕದಂತೆ ಅಸ್ಸಾಂ ಕೂಡಾ ಮಿನಿಭಾರತದಂತೆಯೆ ಇದೆ. ಇಲ್ಲಿ ಶರವಾತಿ, ತುಂಗ, ಭದ್ರೆಯರಿದ್ದರೆ, ಅಲ್ಲಿ ಬ್ರಹ್ಮಪುತ್ರ ನದಿಯಿದೆ. ಇಲ್ಲಿ ಅಡಕೆಯಂತೆ ಅಲ್ಲಿ ಟೀ ಜನರ ಅವಿಭಾಜ್ಯ ಅಂಗವಾಗಿದೆ.

ನೆಲಮೂಲ ಸಂಸ್ಕೃತಿಯ ಬೆರಗು ಬಿನ್ನಾಣಗಳು ಇಲ್ಲಿಯಂತೆ ಅಲ್ಲಿಯೂ ಮೆದಳೆದಿವೆ. ಇಂತಹ, ದೂರದ ಅಸ್ಸಾಮಿನ ಸಾಹಿತಿಗಳಿಬ್ಬರಿಗೆ ಕನ್ನಡದ ಮಹಾಕವಿಯೊಬ್ಬರ ಹೆಸರಿನ ರಾಷ್ಟ್ರೀಯ ಪುರಸ್ಕಾರ ದೊರೆತಿರುವುದು ಈ ಎರಡೂ ಪ್ರದೇಶಗಳನ್ನು ಸಂಸ್ಕೃತಿಗಳನ್ನು ಮಾನಸಿಕವಾಗಿ ಮತ್ತಷ್ಟು ಹತ್ತಿರಕ್ಕೆ ತಂದಂತಾಗಿದೆ.ಅಸ್ಸಾಂ ಸಾಹಿತ್ಯಲೋಕದ ಮಹತ್ವದ ಹಾಗೂ ತಲೆಮಾರುಗಳನ್ನು ಪ್ರಭಾವಿಸಿದ ಪ್ರಾಧ್ಯಾಪಕ, ಶಿಕ್ಷಣ ತಜ್ಞ ಹಾಗೂ ಕವಿ ಶ್ರೀ ನೀಲಮಣಿ ಫೂಕನ್ (Nilmani Phookan) ಹುಟ್ಟಿದ್ದು ೧೯೩೩ರಲ್ಲಿ.

ಗೋಲಘಾಟ್ ಜಿಲ್ಲೆಯ ದೆರ್‍ಗಾವನ್ ಎಂಬ ಗ್ರಾಮದಲ್ಲಿ ಜಿನಿಸಿದ ನೀಲಮಣಿಯವರು, ಗುವಾಹಟಿಗೆ ಬಂದು ಗುವಾಹಟಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು, ಗುವಾಹಟಿಯ ಆರ್ಯ ವಿದ್ಯಾಪೀಠ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿ ನಿವೃತ್ತಿ ಹೊಂದುವವರೆಗೂ ಅಲ್ಲಿಯೇ ಕೆಲಸ ಮಾಡಿದವರು. ಇದು ಒಂದು ರೀತಿಯಲ್ಲಿ ತಪಸ್ಸು. ಕುವೆಂಪು ಮೈಸೂರಿಗೆ ಅಂಟಿಕೊಂಡಂತೆ, ನೀಲಮಣಿಯವರು ಗುವಾಹಟಿಗೇ ಅಂಟಿಕೊಂಡವರು. ಹಿರಿಯ ಕವಿ, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ನೀಲಮಣಿ ಫೂಕನ್ (ಸೀನಿಯರ್) ಅವರದು ಅಸ್ಸಾಮಿನಲ್ಲಿ ಚಿರಪರಿಚಿತ ಹೆಸರಾಗಿದ್ದುದರಿಂದ, ಶ್ರೀಯುತರು ’ನೀಲಮಣಿ ಫೂಕನ್ ಜ್ಯೂನಿಯರ್’ ಎಂದೇ ಪ್ರಸಿದ್ಧರಾಗಿದ್ದಾರೆ.

೧೯೫೦ರಿಂದಲೂ ಕಾವ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನೀಲಮಣಿಯವರು ವಿಶ್ವಪ್ರಜ್ಞೆಯ ಕವಿಋಷಿ. ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶದಲ್ಲಿ ಪ್ರತಿಪಾದಿತವಾಗುವ ಮನುಜಮತ, ವಿಶ್ವಪಥ, ಸರ್ವೋದಯ ಸಮನ್ವಯ, ಪೂರ್ಣದೃಷ್ಟಿ ಈ ತತ್ವಗಳು ಶ್ರೀಯುತರ ಕೃತಿಗಳಲ್ಲೂ ಬಿಂಬಿತವಾಗಿರುವುದು, ಆಶ್ಚರ್ಯದ ಜೊತೆಗೆ ಇವುಗಳ ಮಹತ್ವವನ್ನೂ ಮನಗಾಣಿಸುತ್ತವೆ.

ನೀಲಮಣಿಯವರು,Surya Henu Nami Ahe Ei Nodiyedi (The sun is said to come descending by this river), Gulapi Jamur Lagna ಮತ್ತು Kobita ಮೊದಲಾದ ಕೃತಿಗಳಿಂದ ಹಾಗೂ ಜಪಾನೀ ಮತ್ತು ಯುರೋಪಿಯನ್ ಕವಿತೆಗಳ ಅನುವಾದಗಳಿಂದ ಅಸ್ಸಾಂ ಕಣಿವೆಯಲ್ಲಿ ಮನೆಮಾತಾಗಿದ್ದಾರೆ. ೧೯೮೧ರಲ್ಲಿ, ಶ್ರೀಯುತರ ಕವಿತ (Kobita ) ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ, ೧೯೯೦ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಗೌರವ ದೊರೆತಿರುತ್ತವೆ.

‍ಲೇಖಕರು Admin

December 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: