ಕನ್ನಡಕ್ಕೆ ಮತ್ತೊಂದು ಗರಿ ʻಹದಿನೇಳೆಂಟುʼ

ಕುಮಾರ ಬೇಂದ್ರೆ

ಕನ್ನಡದ ಪ್ರಯೋಗಾತ್ಮಕ ಚಲನಚಿತ್ರಗಳು ಇಂದು ಇತರ ಎಲ್ಲ ಭಾಷೆಯ ಚಿತ್ರಗಳನ್ನು ಮೀರಿ ಎಷ್ಟೊಂದು ಸಶಕ್ತವಾಗಿ ರೂಪುಗೊಳ್ಳುತ್ತಿವೆ ಎಂಬುದಕ್ಕೆ ಪ್ರಸಕ್ತ ಸಾಲಿನ ಭಾರತೀಯ ಪನೋರಮಾ ಸ್ಪರ್ಧೆಗೆ ಆಯ್ಕೆಯಾಗಿರುವ ಕನ್ನಡದ ʻಹದಿನೇಳೆಂಟುʼ ಚಿತ್ರ ನಿದರ್ಶನವಾಗಿದೆ! ಗೋವಾದ ಪಣಜಿಯಲ್ಲಿ ನವೆಂಬರ್‌ ೨೦ರಿಂದ ೨೮ರ ವರೆಗೆ ನಡೆಯಲಿರುವ ೫೩ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆರಂಭಿಕ ಚಿತ್ರವಾಗಿ ಪ್ರದರ್ಶನವಾಗಲಿದೆ!

ಈ ಹಿಂದೆ ʻಪಿಂಕಿ ಎಲ್ಲಿ?ʼ ಎಂಬ ಸಾಮಾಜಿಕ ಕಾಳಜಿ ಹೊಂದಿದ ಅತ್ತ್ಯುತ್ತಮ ಚಿತ್ರ ನಿರ್ದೇಶನ ಮಾಡಿ, ಹಲವು ದೇಶಗಳ ಪ್ರತಿಷ್ಠಿತ ಚಿತ್ರೋತ್ಸವಗಳ ಮನ್ನಣೆ ಸೇರಿದಂತೆ ೧೩ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದ ನಿರ್ದೇಶಕ ಪೃಥ್ವಿ ಕೋಣನೂರ್‌ ಅವರು ಈಗ ʻಹದಿನೇಳೆಂಟುʼ ಎಂಬ ಸಂವೇದನಾಶೀಲ, ಸಾಮಾಜಿಕ ಕಾಳಜಿಯುಳ್ಳ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.

ʻಹದಿನೇಳೆಂಟುʼ ಚಿತ್ರದ ಮಹತ್ವ ಅರಿಯುವ ಮುನ್ನ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆ ತಿಳಿಯಬೇಕು. ಈ ಚಿತ್ರತ್ಸೋವವನ್ನು ಕೇಂದ್ರ ಸರ್ಕಾರ ಅಧೀನದ ಎನ್‌ಎಫ್‌ಡಿಸಿ (National Film Devalpment Corporation) ಪ್ರತಿ ವರ್ಷ ಗೋವಾದಲ್ಲಿ ಆಯೋಜಿಸುತ್ತದೆ. ಇದರಲ್ಲಿ ಎರಡು ಸ್ಪರ್ಧಾ ವಿಭಾಗಳಿರುತ್ತವೆ. ಒಂದು, ಜಾಗತಿಕ ಚಲನಚಿತ್ರ ಸ್ಪರ್ಧಾವೇದಿಕೆ ಮತ್ತೊಂದು, ಭಾರತೀಯ ಚಲನಚಿತ್ರಗಳ ಸ್ಪರ್ಧಾ ವೇದಿಕೆ ʻಪನೋರಮಾʼ. ದೇಶದ ಹತ್ತಾರು ಭಾಷೆ ಮತ್ತು ಪ್ರಾಂತಗಳಲ್ಲಿ ಪ್ರತಿ ವರ್ಷ ನಿರ್ಮಾಣವಾಗುವ ನೂರಾರು ಪ್ರಯೋಗಾತ್ಮಕ ಚಲನಚಿತ್ರಗಳು ಭಾರತೀಯ ಪನೋರಮಾ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಗಾಗಿ ಬರುತ್ತವೆ. ಈ ಆಯ್ಕೆಯ ಹಂತವನ್ನು ದಾಟಿ ಸ್ಪರ್ಧೆಗೆ ಆಯ್ಕೆಯಾಗುವ ಆಯಾ ಪ್ರಾದೇಶಿಕ ಭಾಷೆಯ ಚಿತ್ರಗಳು ಕೆಲವೇ ಕೆಲವು ಮಾತ್ರ. ಈ ಚಿತ್ರಗಳು ಇನ್ನುಳಿದ ಎಲ್ಲ ಚಿತ್ರಗಳ ಗಟ್ಟಿತನವನ್ನು ಮೀರಿದ ಶ್ರೇಷ್ಟ ಚಿತ್ರಗಳೇ ಆಗಿರಬೇಕು. ಸಾಮಾಜಿಕ ಕಾಳಜಿ, ಪ್ರಯೋಗಶೀಲತೆ, ವಾಸ್ತವಿಕ ಪ್ರಜ್ಞೆ, ನೈಜ ಚಿತ್ರಣ, ತಾಂತ್ರಿಕ ಗುಣಮಟ್ಟ, ಮೌಲ್ಯಗಳನ್ನು ಎತ್ತಿಹಿಡಿಯುವ ಸಂವೇದನಾಶೀಲವಾದ ಅಪರೂಪದ ಕಥಾನಕಗಳೇ ಆಗಿರಬೇಕು. ಈ ಎಲ್ಲ ಗುಣಗಳನ್ನು ಒಳಗೊಂಡ ಕನ್ನಡದ ಅಪರೂಪದ ಎರಡು ಚಿತ್ರಗಳು ಈ ಬಾರಿಯ ಭಾರತೀಯ ಪನೋರಮಾಕ್ಕೆ ಆಯ್ಕೆಯಾಗಿವೆ. (ʻಹದಿನೇಳೆಂಟುʼ ಮತ್ತು ʻನಾನು ಕುಸುಮಾʼ) ಈ ಎರಡು ಚಿತ್ರಗಳ ಪೈಕಿ ಪೃಥ್ವಿ ಕೋಣನೂರು ಅವರು ನಿರ್ದೇಶಿಸಿ ನಿರ್ಮಾಣ ಮಾಡಿರುವ ʻಹದಿನೇಳೆಂಟುʼ ಚಿತ್ರ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಈ ಬಾರಿಯ ಚಿತ್ರೋತ್ಸವದ ಆರಂಭಿಕ ಪ್ರದರ್ಶನದ ಚಿತ್ರವಾಗಿ ತನ್ನ ಶ್ರೇಷ್ಟತೆಯನ್ನು ಮೆರೆದು ಕನ್ನಡದ ಹಿರಿಮೆಯನ್ನು ಇನ್ನೂ ಹೆಚ್ಚಿಸಿದೆ. ಈ ಮೂಲಕ ಭಾರತೀಯ ಚಿತ್ರಗಳಲ್ಲಿ ಕನ್ನಡದ ಆಸ್ಮಿತೆ ಮತ್ತು ಗಟ್ಟಿತನವನ್ನು ಎತ್ತಿ ಹಿಡಿದಿದೆ. ಇದು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ವಿಚಾರ.

ಹಾಗಾದರೆ ʻಹದಿನೇಳೆಂಟುʼ ಚಿತ್ರದ ಗಟ್ಟಿತನದ ಹಿನ್ನೆಲೆ ಏನು? ಈ ಚಿತ್ರದ ಕತೆಯ ಮಹತ್ವ ಏನು ಮತ್ತು ʻಹದಿನೇಳೆಂಟುʼ ಎಂಬ ವಿಭಿನ್ನ ಶಿರ್ಷಿಕೆಯ ವೈಶಿಷ್ಟ್ಯವಾದರೂ ಏನು ಎಂಬುದನ್ನು ತಿಳಿಯಲೇಬೇಕು!

ಒಂದು ಕಾಲೇಜಿನ ಪಿಯು ಎರಡನೇ ವರ್ಷದಲ್ಲಿ ಓದುತ್ತಿರುವ ಎರಡು ಯುವ ಮನಸ್ಸುಗಳು ದೀಪಾ ಮತ್ತು ಹರಿ. ಹರಿ ಸುಶಿಕ್ಷಿತ ಮತ್ತು ಉನ್ನತ ಸಮುದಾಯದ ಹಿನ್ನೆಲೆ ಇರುವ ಮನೆತನದ ಯುವಕ. ದೀಪಾ ಕಡುಬಡ ಕುಟುಂಬದಲ್ಲಿ ತಾಯಿಗೆ ಮೂರನೇ ಹೆಣ್ಣು ಸಂತಾನವಾಗಿ ಹುಟ್ಟಿ ಕೊಳಗೇರಿಯಲ್ಲಿ ಬೆಳೆದ ಕೆಳವರ್ಗದ ಯುವತಿ. ಓದು ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡುವ ಮಹತ್ವಾಕಾಂಕ್ಷೆ ಹೊಂದಿದವಳು. ಇವಳ ತಾಯಿ ಗಂಡನನ್ನು ಕಳೆದುಕೊಂಡ ಮೇಲೆ ಶಾಲೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತ ಈ ಮೂವರು ಹೆಣ್ಣುಮಕ್ಕಳ ಬದುಕು ಕಟ್ಟಿ ಬೆಳೆಸಿದವಳು. ಅದರಲ್ಲೂ ಗಂಡನ ಆಶಯದಂತೆ ಕಿರಿಯ ಮಗಳಾದ ದೀಪಾಳನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದವಳು. ಹೀಗೆ ಕೊಳಗೇರಿಯಲ್ಲಿ ಬೆಳೆದಿದ್ದರೂ ಆಧುನಿಕತೆಯ ಗುಣಗಳನ್ನು ಅಳವಡಿಸಿಕೊಂಡಿದ್ದ ದೀಪಾ ಮತ್ತು ಎಲ್ಲ ಸೌಲಭ್ಯಗಳನ್ನು ಹೊಂದಿದ್ದ ಸಿರಿವಂತ ಮನೆತನದ ಯುವಕ ಹರಿ ವಯೋಸಹಜವಾಗಿ ಆಕರ್ಷಿತರಾಗುತ್ತಾರೆ. ಈ ಆಕರ್ಷಣೆ ಮುಂದುವರಿದು ಇಬ್ಬರನ್ನೂ ಯಾವ ಮಟ್ಟಕ್ಕೆ ಕೊಂಡೊಯ್ಯಿತು ಎಂಬುದನ್ನು ಪರಿಣಾಮಕಾರಿಯಾಗಿ ಹೇಳುವ ಮೂಲಕ ಪ್ರೇಕ್ಷಕರನ್ನು ಗಂಭೀರವಾಗಿ ಹಿಡಿದಿಟ್ಟುಕೊಳ್ಳುವುದೇ ಈ ಚಿತ್ರದ ಗುಣಾತ್ಮಕ ಶಕ್ತಿ.

ಹದಿ ವಯಸ್ಸಿನ ಆಕರ್ಷಣೆ, ದೈಹಿಕ ವಾಂಛೆ ಮತ್ತು ಜಗತ್ತನ್ನು ಬೆರಳ ತುದಿಗೆ ತಂದು ನಿಲ್ಲಿಸಿರುವ ಮೊಬೈಲ್‌ ಫೋನು ಇಂದಿನ ಯುವಸಮುದಾಯವನ್ನು ಯಾವರೀತಿ ಆವರಿಸಿಕೊಂಡು ಒಂದು ಹಂತದಲ್ಲಿ ಅವರ ಇಡೀ ಬದುಕನ್ನೇ ಕಸಿದುಕೊಳ್ಳಬಲ್ಲದು ಎಂಬುದನ್ನು ಚಿತ್ರ ಅತ್ಯಂತ ಕುತೂಹಲಕಾರಿಯಾಗಿ ಮತ್ತು ನೈಜವಾಗಿ ಕಟ್ಟಿಕೊಟ್ಟಿದೆ.

ಪರಸ್ಪರ ಇಷ್ಟಪಡುತ್ತಿದ್ದ ದೀಪಾ ಮತ್ತು ಹರಿ ವಯೋಸಹಜವಾದ ಅನಿಯಂತ್ರಿತ ಕಾಮಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ದೇಹ ಹಂಚಿಕೊಂಡರು. ಆದರೆ ಓದಿ ಭವಿಷ್ಯ ರೂಪಿಸಿಕೊಳ್ಳುವ ವಯಸ್ಸಿನಲ್ಲಿ ಹೀಗೆ ದಾರಿ ತಪ್ಪಿದರೆ ಮುಂದೇನಾಗಬಹುದು ಎಂಬುದರ ಯೋಚನೆ ಅವರಲ್ಲಿ ಇರಲಿಲ್ಲ. ದೈಹಿಕವಾಗಿ ಬೆರೆಯುವ ಇಚ್ಛೆ ಅವರಿಗಿತ್ತು. ಅದಕ್ಕಾಗಿ ಎಲ್ಲರೂ ಹೋದ ಮೇಲೆ ಆ ಕಾಲೇಜಿನ ಉಪನ್ಯಾಸಕ ಕೊಠಡಿಯ ಬಾಗಿಲು, ಕಿಟಕಿ ಮುಚ್ಚಿ ಅಲ್ಲೇ ಬೆರೆಯುವ ಸಾಹಸ ಮಾಡಿದರು. ಅದರೊಂದಿಗೆ ವಿವೇಕ ಕಳೆದುಕೊಂಡು ತಮಾಷೆಗಾಗಿ ಆ ದೃಶ್ಯವನ್ನು ತಮ್ಮ ಮೊಬೈಲ್‌ ಫೋನಲ್ಲಿ ಚಿತ್ರೀಕರಿಸಿಕೊಂಡರು. ಅಲ್ಲಿಗೆ ಇಬ್ಬರ ಪ್ರೇಮ-ಕಾಮದ ಹಂಬಲವೇನೊ ತೀರಿತು. ಅಲ್ಲಿಂದ ಮುಂದೇನಾಯಿತು ಎಂಬುದೇ ಕಥೆಯ ಗಂಭೀರ ಹರಿವು.

ಹರಿ ಒಬ್ಬ ಸದ್ಗುಣಿ ಯುವಕನೇ ಆಗಿದ್ದರೂ ಅರಿವಿನ ಕೊರತೆಯಿಂದ ಆ ವಿಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿ ಅದು ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಂಡ. ಅಲ್ಲಿಗೆ ಸುಮ್ಮನಾಗದೇ, ತನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ತನ್ನ ದೇಹವನ್ನೇ ಹಂಚಿಕೊಂಡ ದೀಪಾಳಿಗೆ ಅದರಿಂದ ಏನಾದೀತು ಎನ್ನುವ ವಿವಚನೆಯೂ ಇಲ್ಲದೆ ಆ ವಿಡಿಯೋವನ್ನು ಒಬ್ಬ ಫೇಸ್‌ಬುಕ್‌ ಸ್ನೇಹಿತನೊಂದಿಗೆ ಹಂಚಿಕೊಂಡ! ಹದಿ ವಯಸ್ಸಿನ ಇಂತಹ ಹುಚ್ಚಾಟಗಳು ಮೊಬೈಲ್‌ ಫೋನು ಎಂಬ ಮಾಯಾಂಗನೆಯೊಂದಿಗೆ ಸೇರಿ ಇಬ್ಬರ ಭವಿಷ್ಯಕ್ಕೇ ಕುತ್ತು ತರುವ ಸ್ಥಿತಿಗೆ ಹೋಗುವ ಇಲ್ಲಿನ ಕಥನದ ಹರಿವು ಬೆರಗುಗೊಳಿಸುತ್ತದೆ.

ದೀಪಾ ಆ ದೃಶ್ಯವನ್ನು ತನ್ನ ಫೋನಿನಲ್ಲಿ ಚಿತ್ರಿಸಿಕೊಂಡಿದ್ದಳು. ಅದನ್ನು ಹರಿಯ ಫೋನಿಗೆ ಕಳಿಸಿದ್ದಳು. ಅವನು ಸ್ನೇಹಿತರಿಗೆ ತೋರಿಸಿದ್ದಲ್ಲದೇ ಫೇಸ್‌ಬುಕ್‌ ಸ್ನೇಹಿತನೊಂದಿಗೆ ಹಂಚಿಕೊಂಡ. ಆ ಸ್ನೇಹಿತ ಇವನಿಗೆ ಗೊತ್ತಾಗದಂತೆ ಅದನ್ನು ಫೋರ್ನ್‌ ವೆಬ್‌ಸೈಟ್‌ಗೆ ಹಾಕಿಸಿದ… ಕಡೆಗೆ ಇದೆಲ್ಲ ಜಗಜ್ಜಾಹೀರಾಗಿ ಈ ಘಟನೆ ಇಬ್ಬರ ಕುಟುಂಬಗಳೂ ಸೇರಿ ಇಡೀ ಕಾಲೇಜಿನಲ್ಲೇ ತಲ್ಲಣ ಸೃಷ್ಟಿಯಾಯಿತು! ಇನ್ನೇನು ರಾಷ್ಟ್ರೀಯ ಮಟ್ಟದ ಕ್ರೀಡೆಗೆ ಆಯ್ಕೆಯಾಗಿ ಕಡಿಮೆ ಶುಲ್ಕದಲ್ಲಿ ಇಂಜಿನಿಯರಿಂಗ್‌ ಸೀಟ್‌ ಗಿಟ್ಟಿಸಿಕೊಳ್ಳಬೇಕು. ಕಷ್ಟದ ಬದುಕಿನಲ್ಲೂ ದುಡಿದ ಹಣವನ್ನು ತನ್ನ ಶಿಕ್ಷಣಕ್ಕಾಗಿ ವ್ಯಯಿಸಿ ಕಲಿಸುತ್ತಿದ್ದ ತಾಯಿಗೆ ಆಸರೆ ಆಗಬೇಕು ಎಂಬ ಕನಸು ಹೊಂದಿದ್ದ ದೀಪಾಳ ವಿರುದ್ಧ ಕಾಲೇಜು ಕಮೀಟಿ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿತು. ಪೊಲೀಸು, ತನಿಖೆ, ವಿಚಾರಣೆ ಎಂದು ಆರಂಭವಾಗಿ ಕಡೆಗೆ ದೀಪಾ ಕೋರ್ಟಿನ ಕಟಕಟೆಗೆ ಬಂದು ನಿಲ್ಲುವಂತಾದಾಗ; ದಾಖಲೆಗಳ ತಪ್ಪಿನಿಂದ ಅವಳಿಗೆ ಆಗಲೇ ಹದಿನೆಂಟು ತುಂಬಿವೆ ಎಂಬುದು ಬಹಿರಂಗವಾಯಿತು. ಹರಿಗೆ ಮಾತ್ರ ಇನ್ನೂ ಹದಿನೇಳು ವರ್ಷ. ಹಾಗಾಗಿ ಇವನು ಅಪ್ರಾಪ್ತ, ಅವಳು ಪ್ರಾಪ್ತೆ ಎಂಬುದು ಸಾಬೀತಾಯಿತು! ಅದೂ ಅಲ್ಲದೇ ಆ ದೃಶ್ಯವನ್ನು ಅವಳೇ ತನ್ನ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದಾಳೆ ಎಂಬುದೂ ಸಾಬೀತಾಗಿತ್ತು! ಅಂದರೆ ಅಪ್ರಾಪ್ತ ಹುಡುಗನನ್ನು ಪ್ರಾಪ್ತ ಯುವತಿಯೊಬ್ಬಳು ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ ಎಂಬ ಕಾನೂನು ದೃಷ್ಟಿಯ ವ್ಯಾಖ್ಯಾನ ಜಾರಿಯಾಗಿ, ಅವಳ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಲು ದಾರಿ ಸಿಕ್ಕಿತು. ಈ ಹಂತದಲ್ಲಿ ದೀಪಾ ಕೋರ್ಟಿನ ಕಟಕಟೆಯಲ್ಲಿ ನಿಂತಾಗ ಪ್ರತಿವಾದಿ ವಕೀಲ, “ನಿನ್ನ ವಯಸ್ಸೆಷ್ಟು?” ಎಂದು ಕೇಳಿದಾಗ ಅವಳು, “ಹದಿನೆಂಟು!” ಎನ್ನುತ್ತಾಳೆ… ಈ ಹಂತದಲ್ಲಿ ಚಿತ್ರ ಇನ್ನೂ ಇದೆ ಎಂದು ಪ್ರೇಕ್ಷಕ ಗಂಭೀರವಾಗಿ ಕಣ್ಣರಳಿಸಿ ನೋಡುತ್ತಿರುವಾಗಲೇ ಅಲ್ಲಿಗೆ ಮುಗಿದೇಬಿಡುತ್ತದೆ! ಮತ್ತು ಪ್ರೇಕ್ಷನಲ್ಲಿ ಎದೆಯಲ್ಲಿ ಬೆಳೆಯಲು ಆರಂಭಿವಾಗುತ್ತದೆ. ಇದೇ ಅಲ್ಲವೇ ಪ್ರೇಕ್ಷನನ್ನು ಕಾಡುವ ಶ್ರೇಷ್ಟ ಚಿತ್ರಕ್ಕಿರುವ ಗುಣಲಕ್ಷಣ.

ಹರಿಗೆ ಹದಿನೇಳು, ದೀಪಾಳಿಗೆ ಹದಿನೆಂಟು ಎರಡೂ ಸೇರಿ ʻಹದಿನೇಳೆಂಟುʼ ಆಯಿತು. ಇದೇ ʻಹದಿನೇಳೆಂಟುʼ ಶೀರ್ಷಿಕೆಯ ಸ್ವಾರಸ್ಯ. ಚಿತ್ರದ ಇಡೀ ಆಶಯವನ್ನು ಒಂದೇ ಶಬ್ದದಲ್ಲಿ ಬಿಂಬಿಸುವ ಈ ಶೀರ್ಷಿಕೆ ಕೂಡ ವಿಶಿಷ್ಟವಾದುದು. ತಾಂತ್ರಿಕ ವಿಷಯಗಳನ್ನು ಗಮನಿಸುವುದಾದರೆ ಸಹಜ ಅಂಶಗಳಿಗೆ ಒತ್ತುಕೊಡುವ ಛಾಯಾಗ್ರಹಣ, ಸಿಂಕ್‌ ಸೌಂಡ್‌ ಬಳಕೆ, ಚಿತ್ರದ ಯಾವುದೇ ಭಾಗದಲ್ಲೀ ಸಂಗೀತ ಬಳಸದೇ ನೈಜತೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಎಲ್ಲ ಕಲಾವಿದರು ದೃಶ್ಯಗಳನ್ನು ಕಣ್ಣಮುಂದೆ ತರುವಂತೆ ಸಹಜವಾಗಿ ಅಭಿನಯಿಸಿದ್ದಾರೆ.

ಇಂದಿನ ಯುವ ಸಮುದಾಯ ಯಾವದಿಕ್ಕಿನಲ್ಲಿ ಹೊರಟಿದೆ? ಅವರ ಆಸಕ್ತಿ, ಅಭಿರುಚಿಗಳು ವಿಕೃತಗೊಂಡ ಹಿನ್ನೆಲೆಯಲ್ಲಿ ಇಡೀ ಸಾಮಾಜಿಕ ವ್ಯವಸ್ಥೆ ಹೇಗೆಲ್ಲ ದಾರಿ ತಪ್ಪುತ್ತಿದೆ? ಇದರಿಂದ ನಮ್ಮ ಶೈಕ್ಷಣಿಕ ವ್ಯವಸ್ಥೆ ಯಾವ ರೀತಿ ಅದ್ವಾನಗೊಂಡು ವಿದ್ಯಾಮಂದಿರಗಳಾದ ಕಾಲೇಜುಗಳು ಹೇಗೆ ವಿರೂಪಗೊಂಡಿವೆ? ಅಲ್ಲಿ ಕೆಲಸ ಮಾಡುವ ಉಪನ್ಯಾಸಕರು ಎಂತೆಂಥ ಸಮಸ್ಯೆ ಆತಂಕಗಳನ್ನು ಅನುಭವಿಸುತ್ತಿದ್ದಾರೆ? ಎನ್ನುವಂತಹ ಹಲವು ಸಂಕೀರ್ಣ ಮತ್ತು ಸೂಕ್ಷ್ಮ ವಿಚಾರಗಳನ್ನು ನಿರ್ದೇಶಕರು ತರ್ಕಕ್ಕೆ ಒಳಪಡಿಸಿದ್ದಾರೆ. ಇದೇ ಕಾರಣಕ್ಕೆ ಈ ಚಿತ್ರ ಪ್ರೇಕ್ಷಕರೂ ಸೇರಿದಂತೆ ಚಿತ್ರಪಂಡಿತರು, ವಿಮರ್ಶಕರ ಮನ್ನಣೆಗೆ ಪಾತ್ರವಾಗುತ್ತದೆ. ಒಂದು ನೈಜ ಕತೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ತೆರೆಗೆ ತರುವುದು ಕಠಿಣ ಕೆಲಸ. ಆದರೆ ಪ್ರತಿಭಾವಂತ ನಿರ್ದೇಶಕರಾದ ಪೃಥ್ವಿ ಕೋಣನೂರು ಅವರು ಅದನ್ನು ಸರಳವಾಗಿ ನಿರ್ವಹಿಸಿ ಯಶಸ್ವಿಯಾಗಿದ್ದಾರೆ.

ಅವರ ಈ ಶ್ರಮದ ಫಲವಾಗಿ ಇಂಥವೊಂದು ಚಿತ್ರ ಕನ್ನಡ ಮತ್ತು ಕನ್ನಡಿಗರನ್ನು ಪ್ರತಿನಿಧಿಸಿ ಭಾರತೀಯ ಪನೋರಮಾ ಸ್ಪರ್ಧೆಯಲ್ಲಿ ಮುಂಚೂಣಿಗೆ ಬಂದು, ಚಿತ್ರೋತ್ಸವದ ಆರಂಭಿಕ ಚಿತ್ರವಾಗಿ ಪ್ರದರ್ಶನ ಕಾಣುತ್ತಿರುವುದು ಅಭಿಮಾನ ಮೂಡಿಸಿದೆ. ನವೆಂಬರ್‌ ೨೧ರಂದು ಬೆಳಗ್ಗೆ ಈ ಚಿತ್ರ ಪ್ರದರ್ಶನವಿದೆ. ಪಣಜಿಯಲ್ಲಿ ನಡೆಯುವ ಚಿತ್ರೋತ್ಸವಕ್ಕೆ ಹೋಗುವ ಪ್ರೇಕ್ಷಕರು ಚಿತ್ರವನ್ನು ಆಸ್ವಾದಿಸಬಹುದು.

‍ಲೇಖಕರು Admin

November 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: