ಪ್ರವೀಣ್ ಕೆ
ಆಚೆಗೇನೂ ಇಲ್ಲ
ಬೀದಿಯಲ್ಲಿ ಬಿದ್ದ ಅನಾಥ ಹೆಣ
ಮುಟ್ಟಿದರೆ ನೊಣಕ್ಕೂ ಮೈಲಿಗೆ, ಹೆಣಕ್ಕೂ
ಹಾದು ಹೋಗುವ ಮರುಳು ಜಗ
ಲೊಚಗುಡುತ್ತ ಮರುಗುತ್ತ
ಕನಿಕರಿಸುತ್ತ ಸಿಟ್ಟಿರುವವರನ್ನೆಲ್ಲ
ಬೈದು ಮುಂದೆ ಸಾಗುತ್ತದೆ
ಪರಿಚಯದ ಆಳ ಅಳೆದು
ಅಳುವ ಎತ್ತರಿಸುವ ಯಾರೂ ಇಲ್ಲದೇ
ಕೆಲವೊಮ್ಮೆ ಹೆಣಗಳ ಎದೆಯ ನೀವಿದರೆ
ಶಾಕು ಕೊಟ್ಟರೆ ಮತ್ತೆ ಹೃದಯ ಬಡಿದುಕೊಳ್ಳುತ್ತದಂತೆ
(ಬಡಿವ ಹೃದಯ ಹೊತ್ತವರಿಗೆ ಏನು ಚಿಕಿತ್ಸೆಯೋ?)
ಹೆಣದ ಮುಖದ ಮೇಲೆ
ಬದುಕ ಮೃಗ ಪಳಗಿಸಿದ ಮಂದಹಾಸ,
ಬಂಧವಿಮುಕ್ತ ನೆಮ್ಮದಿ

ಅಷ್ಟಕ್ಕೂ ಸೂರ್ಯ ಕೂಡ ಪಥ
ಸೈರಿಸಲಾಗದೇ ಉರಿಯುತ್ತದೆ
ಚಂದ್ರ ಅದೂ ಆಗದೆ ಆಳುತ್ತದೆ.
ಸಾವು ನಿರಾತಂಕ ನಿರ್ಭಯ ನಿರ್ವಸ್ತ್ರ
ಗೆಳತಿಯಂತೆ ಬಂದು
ತಬ್ಬಿಕೊಳ್ಳುತ್ತದೆ.
ಕನಿಕರ ಬೇಕಿರುವುದು ಹೆಣಕ್ಕಲ್ಲ
ಅಳುವವರಿಗೆ
ಅನಾಥ ಹೆಣ ಬಿದ್ದಲ್ಲೇ ಬಿದ್ದು
ಕೊಳೆತು ಉಬ್ಬತೊಡಗಿತ್ತು
ಉಬ್ಬುತ್ತ ಉಬ್ಬುತ್ತ ರಸ್ತೆಯಗಲ ತುಂಬಿಕೊಂಡು
ಒಂದು ರಾತ್ರಿ ಮಟಾಮಾಯವಾಯಿತು
ಅಬ್ಬಾ ಎಂದು ನಿಟ್ಟುಸಿರ ಬಿಡುವುದರೊಳಗೆ
ರಸ್ತೆಯಿಂದ ಮಾಯವಾದ ಹೆಣದ ಬಿಂಬ
ಎಲ್ಲೆಲ್ಲೂ ರಾರಾಜಿಸತೊಡಗಿತು
ಮನೆ ಮನೆಗಳಲ್ಲಿ ಅಂಗಡಿ ಪಂಗಡಿಗಳಲ್ಲಿ
ಮಾಲು ಮೈದಾನ ಶಾಲೆ ಬೀಚು
ಕಚೇರಿ ಹೂದೋಟ ವಿಧಾನಸಭೆ ಹಾರುವ ಧ್ವಜ
ಹೊಳೆಯುವ ಕತ್ತಿ ತುಳಿಯುವ ಕಾಲು
ತೆರೆದ ಎಲ್ಲ ಕಣ್ಣುಗಳಲ್ಲಿ
ಹಠಾತ್ತನೆ ಒದಗುವ ನಗುವಿನಲ್ಲಿ
ಗೋಡೆಗೆ ಅಂಟಿಸಿದ ಚೀಟಿಗಳಲ್ಲಿ
ಪ್ರಖರ ಸುಡುವ ಸೂರ್ಯನಲ್ಲಿ
ಮುಪ್ಪಾನು ಮುದುಕನ ಮೌನದಲ್ಲಿ
ಟೇಬಲ್ಲು ಒರೆಸುವ ಎಳೆಗೈಗಳಲ್ಲಿ
ಅಲ್ಲಿ ಇಲ್ಲಿ ಎಲ್ಲೆಲ್ಲಿ
ಆಚೆಗೇನೂ ಇಲ್ಲ ಎನ್ನುವುದು
ಎಂಥ ಸುಂದರ ಕಲ್ಪನೆ






Chennagide …