ಕನಸುಗಳಿಂದ, ಕನಸುಗಳಿಗಾಗಿ ಮತ್ತು ಕನಸುಗಳೊಟ್ಟಿಗೆ..

7

ಏಪ್ರಿಲ್ 23 ಷೇಕ್ಸ್ ಪಿಯರ್ ಹುಟ್ಟಿದ ಮತ್ತು ಇಲ್ಲವಾದ ದಿನ.

ಈ ಸಂದರ್ಭದಲ್ಲಿ ‘ಅವಧಿ’ಯ ಪರಿಚಿತ ಬರಹಗಾರ, ಲಿಬ್ಯಾದಲ್ಲಿ ಸಾಕಷ್ಟು ವರ್ಷ ಅಧ್ಯಾಪನ ಮಾಡಿದ, ಆ ಕುರಿತು ಪ್ರವಾಸ ಕಥನವನ್ನೂ ಬರೆದಿರುವ ಉದಯ ಇಟಗಿ ಅವರ ಹೊಸ ಮಾಲೆಯನ್ನು ಏಳು ಕಂತುಗಳಲ್ಲಿ ಪ್ರಕಟಿಸಿದ್ದೇವೆ. ಇದು ಕೊನೆಯ ಕಂತು.

ಆತ್ಮೀಯ ಬರಹಕ್ಕಾಗಿ ಉದಯ ಇಟಗಿ ಅವರಿಗೆ ಧನ್ಯವಾದಗಳು.

ಉದಯ್ ಇಟಗಿ

ನಿನ್ನೆಯ ಸಂಚಿಕೆಯಿಂದ………

ಇರಲಿ. ಇಷ್ಟೆಲ್ಲಾ ಹೇಳಿದ ಮೇಲೆ ನನ್ನ ಮೂರು ಮಕ್ಕಳ ಬಗ್ಗೆ ಹೇಳಲೇಬೇಕು.  ಸೂಸನ್ ಮತ್ತು ಜುಡಿತ್ ಎಂಬ ಎರಡು ಹೆಣ್ಣುಮಕ್ಕಳು ನನಗೆ. ಹ್ಯಾಮ್ನೆಟ್ ಎಂಬುವ ಗಂಡುಮಗ. ಅವನು ಹನ್ನೊಂದು ವರ್ಷದವನಿರುವಾಗಲೇ ಪ್ಲೇಗ್ ಬಂದು ಸತ್ತುಹೋದ. ಹೀಗಾಗಿ ಅವನೊಟ್ಟಗಿನ ನೆನಪುಗಳು ಅಷ್ಟಕ್ಕಷ್ಟೇ. ಸೂಸನ್ ನನ್ನ ಮತ್ತು ಷೇಕ್ಸ್ ಪಿಯರ್ ನ ಮೊದಲ ಮಿಲನದಲ್ಲಿಯೇ ಹುಟ್ಟಿದಾಕೆ. ಸೂಸನ್ ಜಾಣೆ, ಬುದ್ಧಿವಂತೆ, ಲೋಕಜ್ಞಾನವಿದ್ದಾಕೆ. ವ್ಯವಹಾರದಲ್ಲಿ ತುಂಬಾ ಚುರುಕು. ಅವಳನ್ನು ನೋಡಿದರೆ ಏನೋ ಒಂಥರಾ ಖುಶಿ ನನಗೆ! ಅವಳು ಯಾವಾಗ್ಲೂ ಹೇಳೋಳು; ನನ್ನ ಗಂಡನ ನಾಟಕದಲ್ಲಿನ ಸ್ತ್ರೀ ಪಾತ್ರಗಳಿಗೆ ಬಹಳಷ್ಟು ಅನ್ಯಾಯವಾಗಿದೆ, ಅವಮಾನವಾಗಿದೆ, ಮಾನನಷ್ಟ ಆಗಿದೆಯೆಂದು. ಒಂದೋ ಅವರ ಪ್ರಾಮಾಣಿಕತೆಯನ್ನು ಅಥವಾ ಪಾತಿವ್ರತ್ಯವನ್ನು ವೈಭವಿಕರಿಸಿ ಅವರನ್ನು ಪೀಠದ ಮೇಲೆ ಕೂರಿಸುತ್ತಿದ್ದ. ಇಲ್ಲವೇ ಅವರ ದಾಂಪತ್ಯ ನಿಷ್ಟೆಯನ್ನು ಪ್ರಶ್ನಿಸುತ್ತಾ ಅವರನ್ನು ತುಚ್ಛವಾಗಿ ಕಾಣುತ್ತಿದ್ದ.

ಅವನ ದೃಷ್ಟಿಯಲ್ಲಿ ಹೆಣ್ಣೆಂದರೆ ಗಂಡಸಿನ ಕೈಗೊಂಬೆ ಮತ್ತು ಹೆಂಗಸರೆಂದರೆ ದೇವತೆಯರು ಅಥವಾ ಹಾದರಗಿತ್ತಿಯರು ಅಷ್ಟೇ! ನಂಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದಿರೋದರಿಂದ ಇವುಗಳ ಬಗ್ಗೆ ನಂಗೇನೂ ಅಷ್ಟಾಗಿ ತಿಳಿಯುವದಿಲ್ಲ. ನಾವು ಬದುಕಿದ ಕಾಲಘಟ್ಟಾನು ಹಾಗಿತ್ತಲ್ಲ? ಹೆಣ್ಣನ್ನು ತುಚ್ಛವಾಗಿ ಕಾಣುತ್ತಿದ್ದ ಕಾಲವದು. ಈಗ್ಲೂ ಹೆಚ್ಚೇನೂ ಬದಲಾವಣೆಯಾಗಿಲ್ಲ! ಆ ಮಾತು ಬೇರೆ! ಇನ್ನು ಇದರಿಂದಾಚೆ ಅವನು ಹೇಗೆ ತಾನೆ ಭಿನ್ನವಾಗಿ ಬರೆಯಬಹುದಿತ್ತು? ಎಂದು ನಾನು ಅವಳನ್ನು ಸಮಾಧಾನಪಡಿಸುತ್ತಿದ್ದೆ. ಇವಳಿಗೆ ಎಲಿಜಿಬೆಥ್ ಎನ್ನುವ ಮುದ್ದಾದ ಮಗಳಿದ್ದಳು. ಅವಳನ್ನು ಅವಳ ಅಪ್ಪ-ಅಮ್ಮ ಒಳ್ಳೆ ಕಡೆ ಕೊಟ್ಟು ಮದುವೆ ಮಾಡಿದ್ದರು. ಆದರೆ ಅವಳಿಗೆ ಮಕ್ಕಳಾಗಲಿಲ್ಲ.  

ಜುಡಿತ್ ನನ್ನ ಕಿರಿಮಗಳು: ಒರಟು, ಒಡ್ಡಿ, ಪೆದ್ದಿ. ಅವಳಕ್ಕನಿಗಿಂತ ಎರಡು ವರ್ಷ ಚಿಕ್ಕವಳು. ಆದರೆ ಇವಳೇ ಅಕ್ಕನಂತೆ ಕಾಣುತ್ತಿದ್ದಳು. ಅವಳಿಗೆ ಬರೆಯುವ ಸಾಮರ್ಥ್ಯವಿದ್ದರೂ ಬರೆಯಲಿಲ್ಲ. ಏಕೆಂದರೆ ಬರೀತಾ ಬರೀತಾನೆ ಅವರಪ್ಪ ಕುಟುಂಬದಿಂದ ಹೊರಗೆ ಉಳಿದುಬಿಟ್ಟ ಎನ್ನುವುದು ಅವಳ ಅಭಿಪ್ರಾಯವಾಗಿತ್ತು. ಪಾಪ, ಅವಳಿಗೆ ಜೀವನ ಅಷ್ಟೊಂದು ಸುಖಕರವಾಗಿರಲಿಲ್ಲ. ಮೂವತ್ತೊಂದರವರೆಗೆ ಅವಳು ಮದುವೆಯಾಗಲಿಲ್ಲ. ಆದರೆ ಮದುವೆಯಾದಾಗ ಅವಳ ಆಯ್ಕೆ ಅಷ್ಟು ಸರಿಯಾಗಿರಲಿಲ್ಲ. ಸ್ವಲ್ಪೇ ದಿನದಲ್ಲಿ ಆ ಮದುವೆ ಮುರಿದುಬಿತ್ತು. ಹೀಗಾಯ್ತಲ್ಲಾ ಅಂತಾ ನಮಗೆಲ್ಲಾ ತುಂಬಾ ಬೇಜಾರಾಯಿತು. ಅಷ್ಟೊತ್ತಿಗಾಗಲೇ ಅವಳಿಗೆ ಮೂರು ಜನ ಮಕ್ಕಳಾಗಿದ್ದರು; ಷೇಕ್ಸ್ ಪಿಯರ್ ಕ್ವ್ಯೆನಿ, ರಿಚ್ಚರ್ಡ್ ಕ್ವ್ಯೆನಿ ಮತ್ತು ಥಾಮಸ್ ಕ್ವ್ಯೆನಿ. ಆದರೆ ಅದೇಕೋ ಷೇಕ್ಸ್ ಪಿಯರ್ ನ ಮೊಮ್ಮಕ್ಕಳು ಯಾರೂ ಮಕ್ಕಳನ್ನೇ ಮಾಡಿಕೊಳ್ಳಲಿಲ್ಲ. ಅಥವಾ ಅವರಿಗೆ ಮಕ್ಕಳೇ ಆಗಲಿಲ್ವೋ? ಅಲ್ಲಿಗೆ ಇವರೆಲ್ಲರ ಸಾವಿನ ನಂತರ ಷೇಕ್ಸ್ ಪಿಯರ್ ನ ಸಂತಾನ ನಿಂತುಹೋಯಿತು.

ಮಿ. ಷೇಕ್ಸ್ ಪಿಯರ್ ತನ್ನ ಕೊನೆ ದಿನಗಳನ್ನು ಕಳೆಯಲು ಸ್ಟ್ರ್ಯಾಟ್ ಫೋರ್ಡಿಗೆ ಬಂದ. ಕೈಯಲ್ಲಿ ಸಾಕಷ್ಟು ಹಣವಿತ್ತು. ಅದು ಅವನು ಬರೆದಿದ್ದುದರಿಂದ ಗಳಿಸಿದ್ದು. ಕುಡಿಯುವುದನ್ನು ಹೇಗೋ ಬಿಟ್ಟಿದ್ದ. ಆದರೆ ಊರಿಗೆ ವಾಪಾಸಾದ ಮೇಲೆ ಮತ್ತೆ ಕುಡಿಯತೊಡಗಿದ. ಬಹುಶಃ, ತನ್ನ ಎರಡನೇ ಮಗಳು ಜುಡಿತ್ ಳ ಬಾಳು ಮೂರಾಬಟ್ಟಿಯಾಗಿದ್ದು ಇದಕ್ಕೆ ನೆಪವಾಗಿರಬೇಕು. ನೆಪವಷ್ಟೆ. ಕಾರಣವಲ್ಲ. ಹಾಗಂತ ಅವನ ಆರೋಗ್ಯದಲ್ಲಿ ಹೇಳಿಕೊಳ್ಳುವಂತ ವ್ಯತ್ಯಾಸವೇನೂ ಆಗಿರಲಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನಮ್ಮನ್ನೆಲ್ಲ ಬಿಟ್ಟುಹೋದ. ನಾವ್ಯಾರು ಅವನು ಇಷ್ಟು ಬೇಗ ಸಾಯುತ್ತಾನೆಂದು ಎಣಿಸಿರಲಿಲ್ಲ.

ಕನಸುಗಳಿಂದ, ಕನಸುಗಳಿಗಾಗಿ ಮತ್ತು ಕನಸುಗಳೊಟ್ಟಿಗೆ ಬದುಕಿದವ ಅವ. ಮಹಾನ್ ಲಂಪಟನಾಗಿದ್ದ. ಹೆಣ್ಣುಬಾಕನಾಗಿದ್ದ. ಆದರೆ ಸದೃಢನಾಗಿರಲಿಲ್ಲ. ಹಾಸಿಗೆಯಲ್ಲಿ ಅವನು ಉತ್ಸಾಹದಿಂದ ಪುಟಿಯುತ್ತಿದ್ದನೇ ಹೊರತು ಅದಕ್ಕೆ ಬೇಕಾದ ಸಾಮರ್ಥ್ಯ ಅವನಲ್ಲಿರಲಿಲ್ಲ. ನನ್ನನ್ನೂ ಸೇರಿ ಅವನು ಯಾವತ್ತೂ ಯಾವ ಹೆಣ್ಣನ್ನೂ ತೃಪ್ತಿಪಡಿಸಲಿಲ್ಲವೆಂದೇ ನನ್ನ ಭಾವನೆ. ಈ ಹೆಣ್ಣುಬಾಕರಿಗೆಲ್ಲಾ ಒಂದು ಭ್ರಮೆ ಇರುತ್ತದೆ. ನಾನು ಅಷ್ಟು ಹೆಣ್ಣುಗಳೊಟ್ಟಿಗೆ ಮಲಗಿದೆ. ಇಷ್ಟು ಹೆಣ್ಣುಗಳೊಟ್ಟಿಗೆ ಆಟವಾಡಿದೆ ಎಂದು. ಆದರೆ ವಾಸ್ತವದಲ್ಲಿ ಅವರು ಯಾವ ಹೆಣ್ನನ್ನೂ ತೃಪ್ತಿಪಡಿಸಿರುವುದಿಲ್ಲ. ಆದರೆ ಅದನ್ನೊಂದು ಪ್ರತಿಷ್ಟೆಯ ವಿಷಯವನ್ನಾಗಿ ಮಾಡಿಕೊಂಡು ತಿರುಗುತ್ತಿರುತ್ತಾರೆ ಅಷ್ಟೇ!  Dirty devils! ಅದರಲ್ಲೂ ಈ ಲೇಖಕರು, ಕವಿಗಳು, ನಾಟಕಕಾರರು ಇದ್ದಾರೆ ನೋಡಿ. ಅವರು ಪುಸ್ತಕದಲ್ಲಿ ಮಾತ್ರ ವಿಜೃಂಭಿಸುತ್ತಾರೆ. ಹಾಸಿಗೆಯಲ್ಲಿ ಬೇಗನೆ ಮುದುರಿಕೊಂಡುಬಿಡುತ್ತಾರೆ.

ಷೇಕ್ಸ್ ಪಿಯರ್ ನಿಗೆ ಓಡಿ ಹೋಗಲು ನಾನು ಬೇಕಿತ್ತು. ಮತ್ತೆ ಬಂದು ಸೇರಲು ನಾನು ಬೇಕಿತ್ತು. ನಾನವನಿಗೆ ಅಲ್ಫಾ, ಬೀಟಾ, ಒಮೆಗಾ ಎಲ್ಲವೂ ಆಗಿದ್ದೆ. ಆರಂಭವಾಗಿದ್ದೆ, ಅಂತ್ಯವಾಗಿದ್ದೆ. ಅವನ ಕೊನೆಯ ಐದು ವರ್ಷಗಳನ್ನು ನನ್ನೊಟ್ಟಿಗೆ ಕಳೆದ. ಎಲ್ಲಿ ತನ್ನ ಜೀವನವನ್ನು ಆರಂಭಿಸಿದ್ದನೋ ಅಲ್ಲೇ ಮುಗಿಸಿದ.

ನಾನು ಅತ್ತೆ, ಅತ್ತೆ, ಮನದುಂಬಿ ಅತ್ತೆ. ನನ್ನ ಮತ್ತು ಅವನ ನಡುವೆ ಅಂತರವಿದ್ದರೂ ಯಾಕೋ ಅವನ ಇಲ್ಲದಿರುವಿಕೆಯನ್ನು ನನಗೆ ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಸಾಯುವ ಮುನ್ನ ತಾನು ಮಾಡಬೇಕಾದ ಜವಾಬ್ದಾರಿಗಳನ್ನೆಲ್ಲ ಮಾಡಿಮುಗಿಸಿದ್ದ. ಏಪ್ರೀಲ್ 23, 1616 – ಅದು ಅವನ ಐವತ್ತೆರಡನೇ ಹುಟ್ಟುಹಬ್ಬ. ಅಂದೇ ಅವನನ್ನು ಸಾವು ಎಳೆದೊಯ್ದಿತ್ತು.

Dead Mr. Shakespeare

My bad husband.

The darling.

ನನಗೆ ಒಮ್ಮೊಮ್ಮೆ ಅನಿಸುತ್ತೆ; ಅವನು ಕಿವುಡನಾಗಿ ನಾನು ಕುರುಡಿಯಾಗಿದ್ದರೆ ಬಹುಶಃ ನಾವಿಬ್ಬರೂ ಸುಖ ಜೀವನ ನಡೆಸಿರುತ್ತಿದ್ದೆವೆನೋ!

ನನ್ನ ತೋಳಲ್ಲಿ ಸಾಯುವ ಮೊದಲು ಮಿಸ್ಟರ್ ಷೇಕ್ಸ್ ಪಿಯರ್ ವಿಲ್ ನಲ್ಲಿ ಕೊನೆಯ ವಾಕ್ಯವೊಂದನ್ನು ಸೇರಿಸಿದ: “I gave unto my wife my second-best bed with the furniture.” ಹಾಗಾದರೆ ಆ ಇನ್ನೊಂದು ಹಾಸಿಗೆಯ, the best bedನ ಕತೆಯಲ್ಲಿ ಬರುವ ಪಾತ್ರ ಯಾವುದು? ಅವನ ಗೆಳೆಯನೇ? ಅಥವಾ ನನಗೂ ನಿಮಗೂ ಗೊತ್ತಿಲ್ಲದ ಇನ್ನೊಂದು ಹೆಣ್ಣಿನದೇ? ಅಥವಾ ಅವನ ಸಾನೆಟ್ ಗಳಲ್ಲಿ ಬರುವ ’ಕಪ್ಪು ಸುಂದರಿ’ಯಾಗಿರಬಹುದೆ? ಇನ್ಯಾರಿರಬಹುದು? ಗೊತ್ತಿಲ್ಲ.

ನೀವು ಗಂಡಸರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕ್ತಾನೆ ಇರ್ತೀರಿ. ನಾವು ಹೆಂಗಸರು ಅವಕ್ಕೆಲ್ಲಾ ಉತ್ತರ ಹುಡುಕ್ತಾನೇ ಬದುಕು ಸವೆಸಿ ಬಿಡ್ತೀವಿ.

(ನಿಟ್ಟುಸಿರು ಬಿಡುತ್ತಾ) ಒಟ್ಟಿನಲ್ಲಿ ಮನುಷ್ಯರನ್ನು ಜಾಸ್ತಿ ಬಗೆದು ನೋಡಬಾರದು ಕಣ್ರೀ! ಬಗೆದಷ್ಟು ಕೊನೆಗೆ ಉಳಿಯುವದು ಬರೀ ಶೂನ್ಯ ಮಾತ್ರ! ಅದರಲ್ಲೂ ಗಂಡಂದಿರನ್ನಂತೂ ಬಗೆದು ನೋಡಲೇಬಾರದು. ಬಗೆದರೆ ಹೊಲಸು ಜಾಸ್ತಿ! ದುರ್ನಾತ! ಜೀವನ ಪೂರ್ತಿ ಆ ದುರ್ನಾತ ಕುಡ್ಕೊಂಡೇ ಇರಬೇಕು. ಸುಖವಿರಲ್ಲ ಕಣ್ರೀ!

(ಹೀಗೆ ಹೇಳುತ್ತಾ ಅವಳು ಗೋರಿಯೆಡಗೆ ನಡೆದುಹೋಗುತ್ತಾಳೆ.  ಹಿನ್ನೆಲೆಯಲ್ಲಿ ಮೇಳವೊಂದು ಕೆಳಗಿನ ಸುನಿತವನ್ನು ಹಾಡುತ್ತಾ ಹೋಗುತ್ತದೆ.)

ಒಲಿದ ಮನಗಳ ಮಿಲನಕಿಲ್ಲ  ತಡೆ, ಇದೆಯೆನಲು

ಒಪ್ಪುವವ ನಾನಲ್ಲ, ಒಲವು ಒಲವೇ ಅಲ್ಲ

ಮತ್ತೊಂದಕೆಂದು ಹೊರಳಿದರೆ, ಇಲ್ಲವೆ ಒಂದು

ಬದಲಿತೆಂದನ್ನೊಂದು ಕದಲಿದರೆ, ಛೇ,, ಇಲ್ಲ

ಬಿರುಗಾಳಿಯಲ್ಲು ಕಂಪಿಸದೆ ನಿಲ್ಲುವದು  ಅದು

ಸ್ಥಿರವಾದ ಜ್ಯೋತಿ, ಕಡಲಲ್ಲಿ ಕುರುಡಲೆಯುವಾ………

/ಮುಕ್ತಾಯ//

‍ಲೇಖಕರು Avadhi Admin

April 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Lalitha Siddabasavaiah

    ಕಾಲ್ಪನಿಕವೋ, ವಾಸ್ತವವೋ ಆ ಜಿಜ್ಞಾಸೆಯನ್ನು ನೆನಪಿಸಿಕೊಳ್ಳಲು ಆಸ್ಪದವೀಯದಷ್ಟು ಆಸಕ್ತಿಯಿಂದ ಓದಿಸಿಕೊಳ್ಳುವ ಸರಣಿ ಇದು. ಅವಧಿ ಮತ್ತು ಉದಯ್ ಈರ್ವರಿಗೂ ಆಭಾರಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: