‘ಮೂಕಜ್ಜಿಯ ಕನಸುಗಳು’ ಶೇಷಾದ್ರಿಯ ಶ್ರೇಷ್ಠ ಸಿನಿಮಾ

ಸತೀಶ್ ಚಪ್ಪರಿಕೆ 

ಏನು ಹೇಳಬೇಕೋ, ಅದನ್ನು ಹೇಳುವ ಮೊದಲು ನಿಮ್ಮೆಲ್ಲರ ಬಳಿ ಒಂದಿಷ್ಟು ಪ್ರಾಮಾಣಿಕ ನಿವೇದನೆ.

ಹಿಂದೆ ಯಾವಾಗಲೋ ‘ಪ್ರಜಾವಾಣಿ’ಯಲ್ಲಿ ಚಲನಚಿತ್ರಗಳ ಬಗ್ಗೆ ಒಂದೋ ಎರಡೋ ಲೇಖನಗಳನ್ನು ಬರೆದಿದ್ದೆ. ನಂತರದ ದಿನಗಳಲ್ಲಿ ‘ದಿ ಸಂಡೇ ಇಂಡಿಯನ್’ ಪತ್ರಿಕೆಗಾಗಿ ಒಂದಿಷ್ಟು ಚಲನಚಿತ್ರ ನಟರ ಸಂದರ್ಶನ ಮಾಡಿದ್ದೆ. ಉಳಿದಂತೆ, ಇದುವರೆಗೆ ಯಾವುದೇ ಚಲನಚಿತ್ರಗಳನ್ನು ನಾನು  ವಿಮರ್ಶಿಸಿಲ್ಲ.

ಹಾಗೆಂದ ಕೂಡಲೇ ನಾನು ಚಲನಚಿತ್ರಗಳ ದ್ವೇಷಿಯೆಂದಲ್ಲ ಅಥವಾ ಚಲನಚಿತ್ರದ ಭಾಷ್ಯದ ಅರಿವು ಇಲ್ಲ ಎಂದಲ್ಲ. ಯಾವುದೇ ಭಾಷೆಗೆ ಸೀಮಿತವಾಗದೇ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡುವ ಹುಚ್ಚು ನನಗಿದೆ. ಈಗಲೂ ‘ರೋಷಮನ್’ನಿಂದ ಹಿಡಿದು ‘ಗಾಡ್ಫಾದರ್’ ಚಲನಚಿತ್ರಗಳನ್ನು ಬೇಜಾರಾದಗಲೆಲ್ಲ ನೋಡುತ್ತಲೇ ಇರುತ್ತೇನೆ. ಏಕಾಂಗಿಯಾಗಿ ಚಲನಚಿತ್ರಗಳನ್ನು ನೋಡುತ್ತ  ವಿಮರ್ಶಿಸಿಕೊಳ್ಳುತ್ತಾ ಬದುಕುವ ಒಂಟಿಜೀವಿ ನಾನು.

ಶೇಷಾದ್ರಿ ನನ್ನ ಆತ್ಮೀಯ ಗೆಳೆಯ. ಆದರೆ, ಇದುವರೆಗೆ ನಾನು ಯಾವುದೇ ಮುಲಾಜಿಲ್ಲದೇ ವೈಯಕ್ತಿಕ ಮಟ್ಟದಲ್ಲಿಯೇ ಅವರೆಲ್ಲ ಸಿನಿಮಾಗಳ ಬಗ್ಗೆ ಅವರ ಬಳಿಯೇ ನನ್ನ ಪ್ರಾಮಾಣಿಕ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಕೆಲವೊಮ್ಮೆ ಅತ್ಯಂತ ಕಟುವಾಗಿ! ಸೃಜನಶೀಲ ನೆಲೆಯಲ್ಲಿನ ಆ ಎಲ್ಲ ಭಿನ್ನಾಭಿಪ್ರಾಯಗಳ ನಡುವೆಯೂ ನಮ್ಮಿಬ್ಬರ ನಡುವೆ ಮುಕ್ತವಾದ, ಪ್ರಾಮಾಣಿಕವಾದ ಮತ್ತು ಅತ್ಯಂತ ಪ್ರೀತಿ-ವಿಶ್ವಾಸ-ಗೌರವದ ವೈಯಕ್ತಿಕ ಸಂಬಂಧವಿದೆ. ನಮ್ಮಿಬ್ಬರ ನಡುವೆ ಯಾವುದೇ ವ್ಯಾವಹಾರಿಕ ಸಂಬಂಧ ಇಲ್ಲ.

ಮೇಲಿನ ಮೂರು ಅಂಶಗಳನ್ನು ನಿಮ್ಮ ಮುಂದೆ ನಿವೇದಿಸಿಕೊಂಡೆ ‘ಮೂಕಜ್ಜಿಯ ಕನಸುಗಳು’ ಚಲನಚಿತ್ರದ ಬಗ್ಗೆ ನನ್ನ ಅಭಿಪ್ರಾಯ ತಿಳಿಸುವ ಧೈರ್ಯ ಮಾಡುತ್ತಿದ್ದೆನೆ. ‘ಮುನ್ನುಡಿ’ಯಿಂದ ಹಿಡಿದು ಈ ಚಲನಚಿತ್ರದವರೆಗೆ ಶೇಷಾದ್ರಿ ಅವರ ಎಲ್ಲ ಚಲನಚಿತ್ರಗಳನ್ನು ಬಹಳ ಕುತೂಲಹದಿಂದ ವೀಕ್ಷಿಸಿದವನು ನಾನು. ಇನ್ನು ‘ವಿಮುಕ್ತಿ’, ‘ಬೆಟ್ಟದ ಜೀವ’ ಮತ್ತು ‘ಮೂಕಜ್ಜಿಯ ಕನಸುಗಳು’ ಚಲನಚಿತ್ರಗಳ ಜೊತೆ ಬೇರೆ-ಬೇರೆ ಕಾರಣಗಳಿಂದ ನಾನೂ ಕೂಡ ಥಳುಕು ಹಾಕಿಕೊಂಡಿವನು. ಜೊತೆಗೆ, ನನ್ನ ‘ದೇವಕಾರು’ ಲೇಖನ ಆಧರಿಸಿ ಶೇಷಾದ್ರಿ ಅದೇ ಹೆಸರಿನ ಒಂದು ಸಾಕ್ಷ್ಯಚಿತ್ರ ಕೂಡ ಮಾಡಿದ್ದರು. ನಾವಿಬ್ಬರೂ, ಚಿತ್ರೀಕರಣ ತಂಡದೊಂದಿಗೆ ಕಾಳಿಯ ದಡದ ‘ದೇವಕಾರು’ ಎಂಬ ಪುಟ್ಟ ಹಳ್ಳಿಯಲ್ಲಿ ಎರಡು-ಮೂರು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೆವು. ಆ ಸಾಕ್ಷ್ಯಚಿತ್ರ ‘ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಪ್ರದರ್ಶನಗೊಂಡಿತ್ತು.

‘ವಿಮುಕ್ತಿ’ ಕೈಗೆತ್ತಿಕೊಳ್ಳುವ ಮೊದಲು ಶೇಷಾದ್ರಿ, ಲಕ್ಷೀಪತಿ ಕೋಲಾರ ಮತ್ತು ನಾನು ವಾರಣಾಸಿಗೆ ಭೇಟಿ ನೀಡಿ ಅಲ್ಲಿನ ಮುಕ್ತಿ ಭವನ ಹಾಗೂ ಘಾಟ್ಗಳಲ್ಲಿ ತಿರುಗಾಡಿ ಬಂದಿದ್ದೆವು. ಅ ಸಂದರ್ಭದಲ್ಲಿ ನಾನು ನವದೆಹಲಿಯಲ್ಲಿ ಬೇರೂರಿದ್ದೆ. ಶೇಷಾದ್ರಿ ಅಲ್ಲಿಗೆ ಬಂದು ನಾವಿಬ್ಬರೂ ರೈಲಿನಲ್ಲಿ ವಾರಣಾಸಿಗೆ ತಲುಪಿದ್ದೆವು. ಲಕ್ಷ್ಮೀಪತಿ ನೇರವಾಗಿ ಬೆಂಗಳೂರಿನಿಂದ ವಾರಣಾಸಿಗೆ ಬಂದಿದ್ದರು. ನಾವೂ ಮೂವರು ಮೂರು ದಿನಗಳ ಕಾಲ ಅಲ್ಲಿ ‘ಮುಕ್ತಿಧಾಮ’ದ ನಡುವೆ ಕನಸು ಕಟ್ಟಿದ್ದೆವು.

‘ಬೆಟ್ಟದ ಜೀವ’ ಮಾಡುವ ಮೊದಲು ಶೇಷಾದ್ರಿಗೆ ‘ದಯವಿಟ್ಟು ಈ ಯೋಜನೆ ಕೈಗೆತ್ತಿಕೊಳ್ಳಬೇಡಿ’ ಎಂದು ಸಲಹೆ ನೀಡಿದವರ ಪೈಕಿ ನಾನೂ ಒಬ್ಬ. ಆದರೆ, ಈ ‘ನಗು ಮೊಗದ, ಮೌನಮಾರಿ’ ನಮ್ಮೆಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಮತ್ತೊಂದು ರಾಷ್ಟ್ರ ಪ್ರಶಸ್ತಿ ಬಾಚಿಕೊಂಡರು.

ಇನ್ನು ‘ಮೂಕಜ್ಜಿಯ ಕನಸುಗಳು’ ಚಲನಚಿತ್ರ ಮಾಡುವ ತಯಾರಿಯಲ್ಲಿದ್ದೇನೆ ಎಂದು ಶೇಷಾದ್ರಿ ದೂರವಾಣಿ ಕರೆಯೊಂದರ ಸಂದರ್ಭದಲ್ಲಿ ಹೇಳಿದಾಗ, “ನಿಮಗೇನು ತಲೆ ಕೆಟ್ಟಿದೆಯಾ?” ಎಂದು ನೇರವಾಗಿಯೇ ಕೇಳಿದ್ದೆ. ಮೂಲತಃ ಕೋಟ ಶಿವರಾಮ ಕಾರಂತರ ನೆರೆ ಊರಿನವನೇ ಆಗಿರುವ ನಾನು ‘ಮೂಕಜ್ಜಿಯ ಕನಸುಗಳು’ ಕೃತಿಯನ್ನು ಕನಿಷ್ಠ ಹತ್ತು ಬಾರಿ ಓದಿದವ. ಕುತೂಹಲದ ವಿಷಯವೆಂದರೆ ನಾನು ಹುಟ್ಟಿದ ವರ್ಷ 1968ರಲ್ಲಿಯೇ ‘ಮೂಕಜ್ಜಿಯ ಕನಸುಗಳು’ ಪ್ರಕಟವಾಗಿದ್ದು! ನನಗೆ ಬುದ್ಧಿ ಬಂದ ದಿನದಿಂದ ಕಾರಂತರಿಗೆ ಮೂಕಜ್ಜಿ ಎಲ್ಲಿ ಸಿಕ್ಕಳು ಎಂಬ ಬಗ್ಗೆ ಕೂಡ ಒಂದು ಕುತೂಹಲಕಾರಿ ಕಥೆಯನ್ನು ಕೇಳುತ್ತಲೇ ಬೆಳೆದವನು ನಾನು.

ನಾನು ಹುಟ್ಟಿದ್ದು ಆಗಿನ ಕುಂದಾಪುರ ತಾಲ್ಲೂಕಿನ ನಾಗೂರಿನಲ್ಲಿ. ಅಲ್ಲಿಂದ ಐದಾರು ಕಿಲೋಮೀಟರ್ ದೂರದಲ್ಲಿಯೇ ಉಳ್ಳೂರು ಎಂಬ ಗ್ರಾಮವೊಂದಿದೆ. ಆ ಉಳ್ಳೂರಿನಲ್ಲಿ ಮೂಕಜ್ಜಿ ಜೀವಂತವಾಗಿದ್ದರು ಮತ್ತು ಕಾರಂತರು ಸ್ವತಃ ಆಕೆಯನ್ನು ಭೇಟಿಯಾಗಿದ್ದರು ಎಂಬ ಮಾತುಗಳು ಕೇಳಿದ್ದೆ. ಉಳ್ಳೂರಿನಲ್ಲಿ ಬದುಕಿದ್ದ ಮೂಕಜ್ಜಿಗೂ ‘ಕಾರಂತರ ಮೂಕಜ್ಜಿ’ಯಂತೆಯೇ ಅತಿಶಯ ಶಕ್ತಿಯಿತ್ತು ಎಂಬ ಮಾತುಗಳು ಈಗಲೂ ನಮ್ಮೂರಿನ ಸುತ್ತಮುತ್ತ ಜೀವಂತವಾಗಿವೆ.

ಒಂದರ್ಥದಲ್ಲಿ ‘ಮೂಕಜ್ಜಿ’ಯೊಂದಿಗೆಯೇ ನಾನೂ ಕೂಡ ಬೆಳೆದಿದ್ದೆ. ನನಗೆ ವಿವಿಧ ಕಾಲಘಟ್ಟದಲ್ಲಿ ವಿವಿಧ ಸಂವೇದನೆಗಳನ್ನು ನೀಡಿದ್ದ ಆ ಕೃತಿಯ ಅಗಲ-ಆಳದ ಅರಿವು ಇದ್ದುದ್ದರಿಂದಲೇ ಶೇಷಾದ್ರಿ ಬಳಿ, “ನಿಮಗೆ ತಲೆ ಕೆಟ್ಟಿದೆಯಾ?” ಎಂದು ಕೇಳಿದ್ದು. ಮೇಲ್ನೋಟಕ್ಕೆ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ಒಂದು ಚಲನಚಿತ್ರವಾಗುವ ಕಥೆಯೇ ಇಲ್ಲ! ಹಾಗಂತ ನಾನು ಬಲವಾಗಿ ನಂಬಿದ್ದೆ. ಯಾವುದೇ ಒಂದು ಚಲನಚಿತ್ರ ಒಡಮೂಡಬೇಕಿದ್ದರೆ ಒಂದಾದ ಮೇಲೆ ಮತ್ತೊಂದು ದೃಶ್ಯಗಳು ಕೂಡಿ ಬರಬೇಕು. ನನ್ನ ಸೀಮಿತ ಜ್ಞಾನದ ಪ್ರಕಾರ ‘ಮೂಕಜ್ಜಿಯ ಕನಸುಗಳು’ ಕೃತಿಯನ್ನು ಆಧರಿಸಿ ಅಂತಹ ಒಂದಾದ ಮೇಲೆ ಒಂದು ದೃಶ್ಯ ಪೋಣಿಸುವುದು ಅಸಾಧ್ಯ ಎಂದುಕೊಂಡಿದ್ದೆ.

ಎಂದಿನಂತೆಯೇ ಎಲ್ಲರ ಅಭಿಪ್ರಾಯಗಳನ್ನು ನಗುಮೊಗದಿಂದಲೇ ಸ್ವೀಕರಿಸಿ, ತನ್ನದೇ ಆದ ನಿರ್ಧಾರಕ್ಕೆ ಬಂದಿದ್ದ ಶೇಷಾದ್ರಿ ಅವರ ಹಾದಿಯಲ್ಲಿ ಮೌನವಾಗಿ ಮುಂದುವರಿದಿದ್ದರು. ಅವರಿಂದ ಮತ್ತೊಂದು ಕರೆ ಬಂತು. “ಮೂಕಜ್ಜಿ ಪಾತ್ರಕ್ಕೆ ನಿಮ್ಮ ದೃಷ್ಟಿಯಲ್ಲಿ ಯಾರು ಸೂಕ್ತ?”

“ಬಿ.ಜಯಶ್ರೀ” ಒಂದು ಕ್ಷಣ ಕೂಡ ವ್ಯಯ ಮಾಡದೇ ನಾನು ಹೇಳಿದ ಹೆಸರು.

“ಜಯಶ್ರೀ ಅವರ ಹೆಸರನ್ನು ಬಿಟ್ಟು ಬೇರೆ ಯಾವುದೇ ಹೆಸರು ನಿಮ್ಮ ಮನಸ್ಸಲ್ಲಿ ಮೂಡುತ್ತಿಲ್ಲವೇ?” ಎಂದು ಶೇಷಾದ್ರಿ ಕೇಳಿದರು.

‘ಮೂಕಜ್ಜಿ’ಯೊಂದಿಗೇ ಹುಟ್ಟಿ ಬೆಳೆದ ನನಗೆ ಬಿ.ಜಯಶ್ರೀ ಬಿಟ್ಟು ಬೇರೆ ಯಾರೂ ಆ ಪಾತ್ರಕ್ಕೆ ನ್ಯಾಯ ಒದಗಿಸಲಾರರು ಎನ್ನುವುದು ಮೊದಲಿನಿಂದಲೇ ಸ್ಪಷ್ಟವಾಗಿತ್ತು.

ಅದಾದ ಮೇಲೆ ನಮ್ಮಿಬ್ಬರ ನಡುವೆ ಮಾತುಕತೆ ನಡೆದಿರಲಿಲ್ಲ. ನಾಲ್ಕೈದು ದಿನಗಳ ಹಿಂದೆ ಭಾನುವಾರ ಸಂಜೆ ‘ಮೂಕಜ್ಜಿ ಕನಸುಗಳು’ ವಿಶೇಷ ಪ್ರದರ್ಶನದ ಆಹ್ವಾನ ಬಂತು.

“ಬೆಂಗಳೂರಿನಲ್ಲಿ ಇದ್ದರೆ ಬರುತ್ತೇನೆ” ಎಂಬ ಸಂದೇಶ ಕಳುಹಿಸಿ ಸುಮ್ಮನಾಗಿದ್ದವ, ಕುತೂಹಲ ತಡೆಯಲಾರದೆ ಭಾನುವಾರ ಸಂಜೆಯ ಪ್ರದರ್ಶನಕ್ಕೆ ಹೋದೆ.

ಹೋದೆ ಮತ್ತು ಧನ್ಯನಾದೆ!

‘ಮೂಕಜ್ಜಿಯ ಕನಸುಗಳು’ ಚಲನಚಿತ್ರದ ಮೊದಲ ದೃಶ್ಯವೇ ನನ್ನನ್ನು ಮಂತ್ರಮುಗ್ಧನಾಗಿಸಿತು. ಮತ್ತೊಬ್ಬ ಗುರುಸಮಾನ ಹಿರಿಯ ಗೆಳೆಯ, ಭಾರತದ ಪ್ರಮುಖ ಸಿನೆಮಾಟೋಗ್ರಾಫರ್ ಜಿ.ಎಸ್.ಭಾಸ್ಕರ್ ಅವರು ಮೂಕಜ್ಜಿಗೆ ನೆರಳು ನೀಡಿದ ಆಲದಮರವನ್ನು ದೃಶ್ಯಕಾವ್ಯವಾಗಿಸಿದ ರೀತಿ! ಅದ್ಭುತ. ಈ ಚಲನಚಿತ್ರದ ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೆ ಕಥೆಯ ಭಾಗವಾಗಿ ನಿಲ್ಲುವ, ಎಲ್ಲಕ್ಕೂ ಸಾಕ್ಷ್ಯವಾಗುವ ಆ ಆಲದಮರ ಒಂದು ಸಂಕೇತವಾಗಿ ಬಳಕೆಯಾದ ರೀತಿ… ಅದನ್ನು ಬಳಸಿಕೊಂಡ ರೀತಿ ಅನನ್ಯ. ‘ಟಾಪ್ ಆಂಗಲ್’ನಲ್ಲಿ ಆಲದ ಮರವನ್ನು ತೋರಿಸಿದ ರೀತಿ, ಬದುಕಿನ ಆಳ-ಅಗಲ-ವಿಸ್ತಾರದ ಪ್ರತೀಕ ಎನ್ನಬಹುದು. ಭಾಸ್ಕರ್ ನಿಮ್ಮ ಮೂರನೇ ಕಣ್ಣು ಸದಾ ತೆರೆದಿರಲಿ ಗುರುಗಳೇ!

‘ಮುನ್ನುಡಿ’ಯಿಂದ ಹಿಡಿದು ‘ಬೇಟಿ’ವರೆಗೆ ಶೇಷಾದ್ರಿ ಹಲವು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಆದರೆ, ಆ ಹತ್ತೂ ಚಿತ್ರಗಳಲ್ಲಿ ಒಂದಲ್ಲಾ ಒಂದು ಸಣ್ಣ ಕೊರತೆಯನ್ನು ಚಲನಚಿತ್ರದ ವಿದ್ಯಾರ್ಥಿಗಳು, ವಿಮರ್ಶಕರು ಕಂಡು ಹುಡುಕುವ ಅವಕಾಶಗಳಿವೆ. ಆದರೆ, ‘ಮೂಕಜ್ಜಿಯ ಕನಸುಗಳು’ ಚಲನಚಿತ್ರದಲ್ಲಿ ಅಂತಹ ಯಾವುದೇ ಅವಕಾಶಗಳು ಸುಲಭವಾಗಿ ಲಭ್ಯವಾಗುವುದಿಲ್ಲ. ಒಂದರ್ಥದಲ್ಲಿ ಇದು ಪರಿಪೂರ್ಣ ಕಲಾಕೃತಿ.

ಚಲನಚಿತ್ರದ ಕೇಂದ್ರ ಬಿಂದು ಮೂಕಜ್ಜಿಯಿಂದ ಹಿಡಿದು ಅವರ ಮರಿಮೊಮ್ಮಗಳು ಚಂದ್ರವರೆಗೆ ಪ್ರತಿಯೊಂದು ಪಾತ್ರಕ್ಕೆ ಶೇಷಾದ್ರಿ ಮತ್ತು ತಂಡ ಆಯ್ಕೆ ಮಾಡಿಕೊಂಡ ನಟರು ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಈ ಮಾತು ಜಯಶ್ರೀ, ಅರವಿಂದ ಕುಪ್ಲಿಕರ್, ನಂದಿನಿ ವಿಟ್ಲ, ರಾಜೇಶ್ವರಿ ಮರ್ಮಾರ್, ಪ್ರಗತಿ ಪ್ರಭುವಿಂದ ಹಿಡಿದು ಶ್ಲಾಘಾ ಸಾಲಿಗ್ರಾಮ ಎಂಬ ಪುಟ್ಟ ಬಾಲಕಿಯವರೆಗೆ ಎಲ್ಲರಿಗೂ ಸಲ್ಲುತ್ತದೆ. ನಿರ್ದೇಶಕರು ಕಥೆ ಹೇಳಲು ಬಳಸಿಕೊಂಡ ವಿನೂತನ ತಂತ್ರಗಳ ಜೊತೆಗೆ ಪ್ರತಿಯೊಬ್ಬ ಕಲಾವಿದರೂ ಆಯಾ ಪಾತ್ರದ ಅವಿಭಾಜ್ಯ ಅಂಗವಾಗಿ ನಿಂತಿದ್ದೆ ಈ ಚಲನಚಿತ್ರದ ಯಶಸ್ಸಿಗೆ ಮೂಲ ಕಾರಣ. ಜೊತೆಗೆ ಚಿತ್ರೀಕರಣ ನಡೆಸಿದ ಸೂಕ್ತ ಸ್ಥಳ ಮತ್ತು ಪರಿಸರ ಕೂಡ ಚಿತ್ರಕ್ಕೆ ಜೀವ ತುಂಬಿದೆ. ಬಿ.ಎಸ್. ಕೆಂಪರಾಜು ಕೂಡ ಚಾಕಚಕ್ಯತೆಯಿಂದ ಕತ್ತರಿ ಹಾಕಿದ್ದರಿಂದ ಎಲ್ಲಿಯೂ ಅನಗತ್ಯ ದೃಶ್ಯಗಳು ಉಳಿದುಕೊಂಡಿಲ್ಲ.

ಭಾನುವಾರ ‘ಮೂಕಜ್ಜಿಯ ಕನಸುಗಳು’ ಚಲನಚಿತ್ರ ನೋಡುವವರೆಗೆ ನನಗೊಂದು ಬಹಳ ದೊಡ್ಡ ಆತಂಕವಿತ್ತು. ಅದೇನೆಂದರೆ ಶೇಷಾದ್ರಿ ಅಪ್ಪಿ-ತಪ್ಪಿ ಕುಂದಾಪುರ ಕನ್ನಡ ಬಳಸದೇ, ಗ್ರಾಂಥಿಕ ಅಥವಾ ಬೆಂಗಳೂರಿನ ಕನ್ನಡ ಬಳಸಿದರೇ? ಎನ್ನುವ ಬಹುದೊಡ್ಡ ಆತಂಕ. ಈ ನಿಟ್ಟಿನಲ್ಲಿ ‘ಮುನ್ನುಡಿ’ಯಿಂದ ಹಿಡಿದು ‘ಬೇಟಿ’ವರೆಗೆ ಶೇಷಾದ್ರಿ ಹೆಚ್ಚಿನೆಲ್ಲ ಸಂದರ್ಭಗಳಲ್ಲಿ ಸ್ವಲ್ಪ ಎಡವಿರುವ ಇತಿಹಾಸವಿದೆ. ಆದರೆ, ‘ಮೂಕಜ್ಜಿಯ ಕನಸುಗಳು’ ಚಲನಚಿತ್ರದಲ್ಲಿ ಅಪ್ಪಟ ಕುಂದಾಪುರ ಕನ್ನಡ ಬಳಸಿ ಶೇಷಾದ್ರಿ ಗೆದ್ದು ಬಿಟ್ಟಿದ್ದಾರೆ. ಮೂಕಜ್ಜಿಯಿಂದ ಹಿಡಿದು ಚಂದ್ರಾವರೆಗೆ ಪ್ರತಿಯೊಂದು ಸ್ಥಳೀಯ ಪಾತ್ರಗಳು ಕುಂದಾಪುರ ಕನ್ನಡ ಬಳಸಿದ ಪರಿಣಾಮವಾಗಿಯೇ ಈ ಚಲನಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಆಪ್ತವಾಗಿ ಮೂಡಿ ಬಂದಿದ್ದು. ಕಥೆಗೊಂದು ಆಳ ದಕ್ಕಿರುವುದು.

ಎಲ್ಲಕ್ಕಿಂತ ಮುಖ್ಯವಾಗಿ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಚಲನಚಿತ್ರವಾಗಿಸುವ ಯತ್ನದಲ್ಲಿ, ಒಬ್ಬ ಕಥೆಗಾರ-ನಿರ್ದೇಶಕನಾಗಿ ಶೇಷಾದ್ರಿ ಚಿತ್ರದಲ್ಲಿನ ಆಲದಮರದಷ್ಟೇ ಎತ್ತರ-ವಿಶಾಲವಾಗಿ ಬೆಳೆದು ನಿಂತಿರುವುದು ಸ್ಪಷ್ಟವಾಗುತ್ತದೆ. ಚಿತ್ರದ ಮೊದಲ ದೃಶ್ಯದಲ್ಲಿಯೇ ಪ್ರೇಕ್ಷಕನನ್ನು ತನ್ನೊಳಗೆ ಸೆಳೆದುಕೊಳ್ಳುವ ಈ ‘ಆಲದಮರ’ ಕೊನೆಯ ದೃಶ್ಯದವರೆಗೆ ಅದರ ನೆರಳಿನಿಂದ ಪ್ರೇಕ್ಷಕನನ್ನು ಹೊರಗೆ ಹೋಗಲು ಬಿಡುವುದಿಲ್ಲ. ತೆರೆಯ ಮೇಲಿನ ದೃಶ್ಯವನ್ನು ಒಬ್ಬ ಪ್ರೇಕ್ಷಕನಾಗಿ ಹೊರನಿಂತು ನೋಡುತ್ತಿದ್ದೇವೆ ಎಂದು ಯಾವ ಕ್ಷಣದಲ್ಲಿ ಕೂಡ ಭಾಸವಾಗದೇ ಇರುವುದು ಈ ಚಿತ್ರದ ಯಶಸ್ಸಿಗೆ ಹಿಡಿದ ಕೈಗನ್ನಡಿ.

ಒಂದೇ ಒಂದು ಕ್ಷಣ ಕೂಡ ನಾನೀಗ ಚಿತ್ರಮಂದಿರದಲ್ಲಿ ಕೂತಿದ್ದೇನೆ ಮತ್ತು ತೆರೆಯ ಮೇಲೆ ಚಲನಚಿತ್ರವೊಂದನ್ನು ವೀಕ್ಷಿಸಿದ್ದೇನೆ ಎಂದು ನನಗನ್ನಿಸಲಿಲ್ಲ. ಬದಲಾಗಿ ಎಲ್ಲೋ ಆಲದಮರದ ನೆರಳಲ್ಲಿ ನಿಂತು ಮೂಕಜ್ಜಿಯೊಂದಿಗೆ ನಾನೂ ಕಥೆಯ ಭಾಗವಾಗಿದ್ದೇನೆ ಎನ್ನುವ ಭಾವನಾಲೋಕದಲ್ಲಿ ಮುಳುಗಿ ಹೋಗಿದ್ದೆ. ಯಾವುದೇ ಒಬ್ಬ ಪ್ರೇಕ್ಷಕನನ್ನು ಈ ರೀತಿ ತನ್ನದಾಗಿಸಿಕೊಳ್ಳುವ ಯತ್ನದಲ್ಲಿ ಚಲನಚಿತ್ರವೊಂದು ಯಶಸ್ವಿಯಾದರೆ, ಅದಕ್ಕಿಂತ ದೊಡ್ಡ ಯಶಸ್ಸು ಬೇರೊಂದಿಲ್ಲ.

ಗೆಳೆಯ ಶೇಷಾದ್ರಿ… ಅಲ್ಲಾ, ಕನ್ನಡದ ಹೆಮ್ಮೆಯ ನಿರ್ದೇಶಕ ಪಿ.ಶೇಷಾದ್ರಿ ಅವರೇ ನಿಮಗೆ ನೂರಕ್ಕೆ 98 ಅಂಕಗಳು! ನಿನ್ನೆ ರಾತ್ರಿ ಚಿತ್ರ ಮುಗಿಯುವುದಕ್ಕಿಂತ ಮೊದಲೇ ನಿಮಗೆ ಕಳುಹಿಸಿದ ಸಂದೇಶದಲ್ಲಿ ನೂರಕ್ಕೆ 100 ಅಂಕಗಳನ್ನು ಕೊಟ್ಟಿದ್ದೆ. ಕ್ಷಮಿಸಿ ಈಗ 2 ಅಂಕಗಳನ್ನು ಕಳೆದಿದ್ದೇನೆ. ಏಕೆಂದರೆ, ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವ ನೀವಿನ್ನೂ ನನಗೆ ಮರು ಸಂದೇಶ ಕಳುಹಿಸಿಲ್ಲ!

ಉಳಿದೆಲ್ಲ ಗೆಳೆಯರೇ ತಪ್ಪದೇ ಸಿನಿಮಾ ಮಂದಿರಗಳಿಗೆ ಹೋಗಿ ‘ಮೂಕಜ್ಜಿಯ ಕನಸುಗಳು’ ಚಲನಚಿತ್ರವನ್ನು ವೀಕ್ಷಿಸಿ. ಇಲ್ಲವಾದಲ್ಲಿ ನೀವೊಂದು ಅತ್ಯದ್ಭುತ ಅನುಭವವನ್ನು ಕಳೆದುಕೊಳ್ಳುತ್ತೀರಿ! ಯಾವುದೇ ಕಾರಣಕ್ಕೆ ಈ ರಸಾನುಭವವನ್ನು ಕಳೆದುಕೊಳ್ಳಬೇಡಿ.

‍ಲೇಖಕರು Avadhi

April 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Purushothama Bilimale

    ಚಿತ್ರ ನೋಡುವ ಹಾಗೆ ಮಾಡಿದ್ದೀರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: