ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸುಗಂಗಳ ಚದುರೆ ಚೆಂದುಟಿಯ ಮೊಗ್ಗು

 

 

 

ಸರೋಜಿನಿ ಪಡಸಲಗಿ

 

 

 

 

ಮುಸುಕುತಿಹ ಮುಸ್ಸಂಜೆಯ ಹೊಂಬಣ್ಣದಲಿ
ನಿಗೂಢ ಮೌನ ತನ್ನ ಗೂಡು ಮಾಡಿದೆ
ಆ ಮೌನ ಕೊಂಚ ಸರಿದು ಅಲ್ಲಿ ಬೆಳಕು ಕಂಡೀತೇ
ಎಂದು ಹಣಕಿಇಣುಕಿ ಕದ್ದು ಮುಚ್ಚಿ ನೋಡಿದೆ

ಹಕ್ಕಿ ಕೊರಳ ಗಂಧರ್ವಗಾನ ಇಲ್ಲಿ ಕೇಳದಾಗಿದೆ
ತಿಂಗಳನ ಸುಳಿವೇ ಇಲ್ಲದೇ ತಾರಕೆಯು ಮಬ್ಬಾಗಿದೆ
ಬೆಪ್ಪಾಗಿ ನಿಂದ ಮರಬಳ್ಳಿ ತೊನೆಯದಾಗಿದೆ
ರಮ್ಯತೆಯ ಕಳಚಿಕೊಂಡು ಬರಡು ಬರಡಾಗಿದೆ

ಬಾನ ತುಂಬಿದ ಬೈಗಿನ ಕೆಂಬಾರೆ ಹೊಳಪು ಮಾಸಿದೆ
ಅಲ್ಲಲ್ಲಿ ನಸುಗಪ್ಪ ಮೋಡಛಾಯೆಯೊಂದು ತೋರಿದೆ
ಇಳೆಯ ಕದಪಿನ ಅರುಣರಾಗ ಹೇಗೋ ಮಾಯವಾಗಿದೆ
ಸುತ್ತ ಮುತ್ತ ಮಬ್ಬುಗತ್ತಲೆ ಕೈಚಾಚಿ ತಬ್ಬಿಕೊಂಡಿದೆ ಬಾಚಿ ತಬ್ಬಿಕೊಂಡಿದೆ

ಥಟ್ಟನೇ ಪಡುವಣದ ಮೊಗದಿ ಹೊನ್ನ ಮಿಂಚೊಂದು ಮಿಂಚಿದೆ
ನಸುಗತ್ತಲಲಿ ಮುಳುಗಿ ಮಿಂದ ಧರೆಯ ವದನ ಮಿರುಗಿದೆ
ಸುಳಿಯುತಿಹ ಸುಳಿಗಾಳಿ ಯಲಿ ವೀಣೆಯೊಂದು ಝೇಂಕರಿಸಿದೆ
ನವರಂಗಿನ ಮುಸ್ಸಂಜೆ ಮೆಲ್ಲ ಮೆಲ್ಲ ಮತ್ತೇರಿಸಿದೆ ಮೆಲ್ಲನೆ ಮತ್ತೇರಿಸಿದೆ

ನೀಲನಭವ ಚುಕ್ಕಿ ಚಂದ್ರಮರ ಹಾಸ ಬೆಳಗಿದೆ
ತಂಬೆಳಕು ತಿಳಿಯಾಗಿ ಕೆಂಬಣ್ಣದಲಿ ಬೆರೆಯುತಿದೆ
ಕನಸುಗಂಗಳ ಚದುರೆ ಚೆಂದುಟಿಯ ಮೊಗ್ಗು
ಅರಳಿ ನಿಂತಿದೆ
ಗೂಢ ಮೌನದಿ ಮಧುರ ಸಂಧ್ಯರಾಗದ ಸೆಲೆಯೊಡೆದಿದೆ

ಜೀವ ಜೀವವ ಮೀಟಿದೆ

‍ಲೇಖಕರು Avadhi GK

23 January, 2018

1 Comment

  1. Sarojini Padasalgi

    ಧನ್ಯವಾದಗಳು ಅವಧಿ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading