ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸನ್ನೆ ಮರೆತದ್ದು..

ಪ್ರೊ ಅಕ್ಷಯ ಆರ್ ಶೆಟ್ಟಿ

ಅಂಚು

ಮೊಡವೆಗಳು ಕಳೆದು, ನೆರಿಗೆಗಳು ಕಾಣಲು ಎಳಸಿದ್ದು…
ಲಿಪ್ಸ್ಟಿಕ್ ಜಗವ ಒಂದೆರಡು ಗುಳಿಗೆಗಳು ಆವರಿಸಿದ್ದು…
ಬಳಕು ಬಳ್ಳಿ ಸುತ್ತಳತೆಯಾಗಿ ಮಾರ್ಪಟ್ಟದ್ದು…
ಸೌಂದರ್ಯದ ಕಣ್ಣು ಮನಸ್ಸಿನಾಳವ ಬಗೆದದ್ದು…
ಕನಸು ಕಂಗಳು ಕನಸನ್ನೆ ಮರೆತದ್ದು…
ಮತ್ತೇನಿಲ್ಲ,
ನಾನು ತಲುಪಿದ್ದು…
ನಲವತ್ತರ ಅಂಚು!

ಹೌದು,
ಮದುವೆ ಸಂಸಾರ ನಿಜದಿ ಬಂಧನವೇ ಆದದ್ದು!
ಈ ಪಯಣ ಏಕಾಂಗಿ ಎಂದು ತಿಳಿವಿಗೆ ನಿಲುಕಿದ್ದು-
ನಗು-ಅಳು ಒಂದೇ ನಾಣ್ಯದ್ದು
ಯೌವನ ಕ್ಷಣಿಕದ್ದು
ಬದುಕು ಈ ಕ್ಷಣದ್ದು, ಅಷ್ಟೆ – ಎಂದರಿವಿಗೆ ಬಂದದ್ದು!

ಒಹ್!
ಒಂದೇ ಎರಡೇ
ಎಷ್ಟೊಂದು ಜ್ಞಾನಪುಂಜ, ನನ್ನೊಳಗೆ?
ಇಪ್ಪತ್ತು ವರ್ಷಗಳ ತರಗತಿ ಕಲಿಸೇ ಇರಲಿಲ್ಲ
ಬದುಕು ಕಲಿಸಿದ ಈ ಇಪ್ಪತ್ತು ಸಂವತ್ಸರಗಳನು!
ಹಾಗಾಗಿಯೇ,
ನನ್ನಮ್ಮ, ಅವಳಮ್ಮ, ಮುತ್ತಜ್ಜಿ…
ಬದುಕೇ ಬದುಕಿದರಲ್ಲ…!

ಮತ್ತೆ, ನನಗೇಕೆ –
ಏಕೆ?
ಇಷ್ಟುಕಾಠಿಣ್ಯ
ಇಷ್ಟು ಗೊಂದಲ!
ಅರಿವಿದ್ದೂ ಕಳೆದು ಹೋದುದರ ಬಯಕೆ!
ಕ್ಷಣಿಕತೆಯ ಬಸಿರಲ್ಲಿ ಸಂಜೀವಿನಿಯ ತಹತಹಿಕೆ?
ಸಂಬಂಧಗಳ, ಚೌಕಟ್ಟೊಳಗೆ ಉಳಿಸುವ ಭ್ರಾಂತಿ!
ಮತ್ತೂ ಬೇಕೆನಿಸುವ… ಮುಷ್ಟಿ ಪ್ರೀತಿ!!!!

ಓದು ಮುಂದುವರೆದಿದೆ – ತತ್ವಜ್ಞಾನ, ಮಾನವ ವಿಜ್ಞಾನ
ಎಲ್ಲಾದರೂ ದಕ್ಕಬಹುದೇ
ಕೊಂಚ ಅಜ್ಞಾನ!
ಕೊನೆ ಮೊದಲಿಲ್ಲದ ಜಿಜ್ಞಾಸೆಗಳ ಕಳೆಯಲು…
ಮತ್ತೊಮ್ಮೆ,
ಬದುಕಲು
ಕನಸುಗಳಿಲ್ಲದ
ಆಕಾಂಕ್ಷೆಗಳೇ ಉಳಿಯದ
ಬದುಕು ರೂಪಿಸಲು…!
ಬಂದಂತೆ ಬದುಕಲು,
ಕಳೆದಂತೆ, ಕಳೆಯಲು…
ಬೇಕಿದೆ, ಕೊಂಚ ಅ-ಜ್ಞಾನ …!

‍ಲೇಖಕರು Admin

29 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading