ತೇಜಾವತಿ ಡಿ ಹುಳಿಯಾರ
ಸ್ಮೃತಿಯ ಗರ್ಭ ಹರಿದು
ಅರೆಬರೆ ರೂಪ ತಾಳಿ
ನೀನು
ಎದುರಿಗೆ ನಿಂತಾಗ
ಮನಸು ಎಚ್ಚರಗೊಂಡು
ಭಾವನೆಯಲಿ ಚಂದಿರ ಬಿಂಬ ಕಂಡಾಗ
ನನ್ನ ಕಣ್ಣು
ನಿನ್ನ ನೋಡಿತು ಮಿದುಳು ಅರಿಯಿತು ಹೃದಯ ನುಡಿಯಿತು
ನನ್ನ ಮೈಟೊಕಾಂಡ್ರಿಯದಿ
ಖುಷಿ ತುಮುಲ ಉನ್ಮಾದ ಉದ್ವೇಗಗಳ ತುಂಬಿ
ಹೊರಭಾಷಿಗನಾದರೂ
ನನ್ನ ಭಾವ ಭಾಷೆಗೆ ಹತ್ತಿರವಾದ ನೀನಿಗ
ಹುರುಪು ತುಂಬಿದೆ ಕಾತುರ ತುಂಬಿದೆ ಆತುರ ತುಂಬಿ ಹೋದೆ

ನೀನಿಗ
ನನ್ನೆದೆಗೆ ಸರಕಾಗಿರುವೆ
ಭಾವನೆಗಳ ಕೇಂದ್ರಬಿಂದುವಾದೆ
ಚಿಂತೆಗೂ ಚಿಂತನೆಗೂ ಒಂದೇಯಾಗಿರುವೆ
ಕನವರಿಕೆಯ ಕವಿತೆಗೆ ಶಬ್ದವಾಗಿರುವೆ
ಮತ್ತೀಗ
ಕಣ್ಣಂಚಿನಲಿ ಸೆರೆಯಾದ ನಿನ್ನ ನೋಡುವ ವಾಂಛೆ
ಗುರಿಯ ಸದಾಶಯ ಹುಡುಕಿ
ನಡೆಯುತ್ತೇನೆ
ನಡೆಯುತ್ತಲೇ ಇರುವೆ
ಬಾಚಿ ಅಪ್ಪಿಕೊಳ್ಳುವ ಎದೆ ಸಿಗುವರೆಗೂ
ನನ್ನೆದೆ ಮೇಲೆ ನಿನ್ನ ಸಾವಿರ ರೇಖೆಗಳ ಪೋರ್ಟ್ರೇಟ್ ಮೂಡುವರೆಗೂ






0 Comments