ಉದಯಕುಮಾರ ಹಬ್ಬು
ಕನಕ ಕಪ್ಪು
ಕೃಷ್ಣ ಕಪ್ಪು
ಅಂತರ
ಏನಿದೆ?
ಕೃಷ್ಣ ಒಳಗೆ
ಕನಕ ಹೊರಗೆ
ಇದು ಸಹಜ ಎಂದು
ಎಲ್ಲಿ ಹೇಳಿದೆ?
ಅವ ದನ ಕಾದ
ಇವ ಕುರಿ ಕಾದ
ಕಾಯುವುದೇ ವೃತ್ತಿ.
ಅವನು ಹಾಡಿದ
ಇವನು ಕೊಳಲನೂದಿದ
ಕನಕನ ಮನೆಗೆ ಕೃಷ್ಣ ಹೋದ
ಅಲ್ಲಿ ತಿಂದ ರಾಗಿ ರೊಟ್ಟಿ
ಕೃಷ್ಣ ತಂದ ಬೆಣ್ಣೆ ಮುದ್ದೆ
ರೊಟ್ಟಿಯ ಮೇಲೆ ತಟ್ಟಿ

ಕೃಷ್ಣನ ಮನೆಗೆ ಕನಕ ಹೋದ
ರಾಗಿ ಮುದ್ದೆ ಹಿಡಿದು
ದ್ವಾರಪಾಲಕರು ತಡೆದರು
ಅವನನ್ನು ಹಿಡಿದರು
ದೊಣ್ಣೆಯಿಂದ ರಾಗಿ ಮುದ್ದೆ ಬಿದ್ದು
ಏನಿದೇನಿದು ಏನಾಗಿದೆ ಇವರಿಗೆ?
ನನ್ನ ಗೆಳೆಯ ಎಲ್ಲಿ ಇರುವ ನೋಡಬೇಕಿದೆ
ಕೃಷ್ಣನ ಮನೆಬಾಗಿಲು ಕಾಯುತಿರುವ ಇಂದಿಗೂ
ದಾರಿ ಕಾಯುತ್ತಲೆ ಇರುವ, ಬಾಗಿಲನು ತೆರೆದು
ಸೇವೆಯನು ಕೊಡು ಹರಿಯೆ,
ಭಜನೆ ಮಾಡುತಲೆ ಇರುವ, ಕನಕ ನಿತ್ಯ ವಿರಹಿ
ಬಯಲಿನಲ್ಲಿ ಸೇರಬಹುದು ಕೃಷ್ಣ-ಕನಕ
ಇಬ್ಬರೂ ದನ ಕಾಯುತ, ಕುರಿ ಕಾಯುತ
ಅವನು ಹಾಡುತ, ಇವನು ಕೊಳಲನೂದುತ






What a poem!! ಎಷ್ಟೊಂದು ಅರ್ಥಗಳು … ಕನಕ ಹಾಡುತ್ತ ಕೃಷ್ಣ ಕೊಳಲನೂದುತ್ತ ಬಯಲಲ್ಲಿ ತಿರುಗಬೇಕಾದವರು …
ಚಂದದ ಕವಿತೆ