ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕದ್ದು ಮುಚ್ಚಿ ಉಸಿರಾಡಿ..

ಇಲ್ಲ..

-ಪ್ರತಿಭಾ ನಂದಕುಮಾರ್

ಪರೀಕ್ಷೆ ಬರೆಯಲು ಹೋಗುವುದಿಲ್ಲ
ದಾರಿಯಲ್ಲಿ ಅತೃಪ್ತ ಕಾಮಿಯೊಬ್ಬ ಕತ್ತು ಕುಯ್ಯಬಹುದು

ರಾತ್ರಿ ಊಟ ಮುಗಿಸಿ ವಾಕಿಂಗ್ ಹೋಗುವುದಿಲ್ಲ
ಕ್ಯಾಂಪಸ್ ಒಳಗೇ ರೇಪಿಸ್ಟ್ ಗಳು ಸುಳಿದಾಡುತ್ತಿರಬಹುದು

ಅಪ್ಪಅಮ್ಮ ನೋಡಿದವನನ್ನು ಮದುವೆಯಾಗುವುದಿಲ್ಲ
ವಿಷದ ಇಂಜೆಕ್ಷನ್ ಚುಚ್ಚಿ ಕೊಲ್ಲಬಹುದು

ಪ್ರೀತಿಸಿ ನಂಬಿ ಧೈರ್ಯವಾಗಿ ಜೊತೆಗಿರುವುದಿಲ್ಲ
ಯಾವ ಗಳಿಗೆಯಲ್ಲೋ ಗೆಳೆಯ ಶತ್ರುವಾಗಬಹುದು

ಮಲಗಿದ್ದಲ್ಲೇ ಮಚ್ಚು ಬೀಸಿ ಶವವಾಗಿಸಬಹುದು
ಮೂವತ್ತಾರು ತುಂಡುಗಳಾಗಿಸಿ ಫ್ರಿಡ್ಜಿನಲ್ಲಿಡಬಹುದು

ಯಾರನ್ನೂ ಕುರಿತು ಏನನ್ನೂ ಹೇಳುವುದಿಲ್ಲ
ಕಂಡರಾಗದವರು ಎಕ್ಕಡದಲ್ಲಿ ಇಕ್ಕಬಹುದು.

ಕತ್ತಲೆಯಲ್ಲಿ ಕದ್ದು ಮುಚ್ಚಿ ಉಸಿರಾಡಿ
ಒದ್ದವರ ಪಾದಗಳಿಗೆ ಅಡ್ಡಬಿದ್ದು
ಉಗಿದವರ ನೋಡಿ ನಸುನಕ್ಕು ಒರೆಸಿಕೊಂಡು
ತುಳಿದವರ ಮನೆಗೆ ಹಾಲು ಹಾಕಿ

ಹೌದು ನಾನು ಅದಕ್ಕೇ ಲಾಯಕ್ಕೆಂದು
ಸುಮ್ಮನಿರುತ್ತೀನಿ ಮುಚ್ಚಿಕೊಂಡಿರುತ್ತೀನಿ
ದನಿ ಎತ್ತದೇ ಸಹಿಸಿಕೊಂಡು ತೆಪ್ಪಗಿರುತ್ತೀನಿ
ಮಾನಾಪಮಾನಗಳು ನಿನಗುಂಟು ಎನಗಿಲ್ಲ

ಅಂತ ಹಾಡಿಕೊಂಡು ಕುಣಿಯುತ್ತೀನಿ ಅಂತ ಏನಾದರೂ….

‍ಲೇಖಕರು Admin

18 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading