ಕದ್ದು ತಂದ ಮಾಲನ್ನು ಕೂಗಿ ಕೂಗಿ ಮಾರುವ ಪರಿ

ಬಿ ಎಸ್ ಪಾಟೀಲ

ಕರೋನಾ ಹಿನ್ನೆಲೆಯಲ್ಲಿ‌ ಗೂಡಿನಲ್ಲೇ ಬೀಡು ಬಿಟ್ಟಿರುವ ನಾವು ಸದ್ಯಕ್ಕೆ ಓದು ಮತ್ತು ಬರಹ‌ಕ್ಕೆ ಹೆಚ್ಚು ಸೀಮಿತವಾಗಿದ್ದೇವೆ. (ಎಲ್ಲರೂ ಅಲ್ಲ, ಅದರ ರುಚಿಯಿರುವವರು ಮಾತ್ರ) ಹೀಗೆಯೇ ಗೆಳೆಯ ಸಾಹಿತಿ, ಉಪನ್ಯಾಸಕ, ಆಕಾಶವಾಣಿ ಹಾಗೂ ದೂರದರ್ಶನ ವರದಿಗಾರ ಡಾ.ಕೆ ಎನ್. ದೊಡ್ಡಮನಿ‌ಯವರು ತಮ್ಮ ಓದುವ ಸಮಯದಲ್ಲಿ ಉದ್ಭವಿಸಿದ ವಿಚಾರಗಳನ್ನು‌ ನನಗೆ ಕಳಿಸಿದರು. ಅವರ ಆ ವಿಚಾರಗಳು ನನ್ನ ಈ ಬರವಣಿಗೆ ಮೂಡಿ ಬರಲು ಕಾರಣವಾಯ್ತು.

ಇಲ್ಲಿ ಅವರದೇ ಸಾಲುಗಳನ್ನು‌ ಮೊದಲು ತಮ್ಮ ಓದಿಗೆ ಇಟ್ಟು, ನಂತರ ಅದರ ಸುತ್ತ ಒಂದಿಷ್ಟು ನನ್ನ ವಿಚಾರಗಳನ್ನು‌ ಮಂಡಿಸುವೆ. ಏಕೆಂದರೆ ಹೇಳಲೇಬೇಕು ಎಂಬ ತುಡಿತ ನನ್ನಲ್ಲಿ ಉದ್ಭವಿಸಿದೆ.. ಓದಿ

‘ಸೃಜನಶೀಲತೆಯು ಸ್ವಂತಿಕೆಯನ್ನು ಅವಲಂಬಿಸಿದೆ. ಸ್ವಂತಿಕೆಯ ಬಂಡವಾಳ ಇಲ್ಲದವ ಬೇರೆ ಮನೆಯಿಂದ ಕದ್ದು ತಂದ ಮಾಲನ್ನು ಮಾರುಕಟ್ಟೆಯ ಜಾಣ್ಮೆ ಅರಿತು, ಇದೆಲ್ಲ ತನ್ನದೆಂದು ಹೇಳಿ ಹೇಳಿ ಕೂಗಿ ಕೂಗಿ ಕರೆದು ಮಾರುತ್ತಾನೆ. (ಈ ಮಾಲು ಅವನದಲ್ಲ, ಕದ್ದು ಬೇರೆಯವರದು ತಂದಿದ್ದಾನೆ ಎಂದು ತನಿಖಾ ಸ್ವಭಾವದವರು ಪತ್ತೇ ಹಚ್ಚಿದರೆ ಕದ್ದ ಕಳ್ಳನ ಮನಸ್ಸು ಕ್ರಿಮಿನಲ್ ಜಾಡು ಹಿಡಿಯುತ್ತದೆ.)

ಇದು ಸೃಜನಶೀಲತೆಯ ಸ್ವಂತಿಕೆ ಮತ್ತು ಪರಾವಲಂಬಿಯ ರೀತಿ.

ಸ್ವಂತ ಸೃಜನಶೀಲ ಶಕ್ತಿಯು ಸಮುದಾಯದ ಜನತೆಯ ಧ್ವನಿಯಾಗಿರುತ್ತದೆ. ಸ್ವಂತಿಕೆಯ ಮೂಲಕ ಜನತೆಯ ಬದುಕಿನ ಅಂತರಂಗದ ತುಡಿತಕ್ಕೆ ಒಳಪಟ್ಟವನು ಆ ನೆಲದ ಬದುಕಿನ ಅಂತರಂಗ ಧ್ವನಿಸ್ಪೋಟಗೊಳಿಸುತ್ತಾನೆ. ಆ ಸ್ಪೋಟದಲ್ಲಿ ಸತ್ಯಗಳು ಬಯಲಲ್ಲಿ ಬೆತ್ತಲಾಗುತ್ತವೆ. ಇದು ಮುಂದಿನ ಪರಿವರ್ತನೆಗೆ ನಾಂದಿಯಾಗುತ್ತದೆ. ಸಾಹಿತ್ಯ – ಸಾಂಸ್ಕೃತಿಕ ವಲಯದಲ್ಲಿ ಈ ಬಗೆಯ ಸ್ಫೋಟಕತ್ವಕ್ಕೆ ಆದ್ಯತೆ ನೀಡಿದರೆ ಹೊಸತನ ತೆರೆದುಕೊಳ್ಳುತ್ತದೆ. ಎಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲವೋ ಗಟಾರ ನೀರವೇ ತೀರ್ಥವಾಗಿರುತ್ತದೆ.

ಯಾರಲ್ಲಿ ಈ ಸ್ವಂತಿಕೆಯ ಧ್ವನಿಸ್ಪೋಟಕ ಶಕ್ತಿ ಇರುವುದಿಲ್ಲವೋ ಆತ ಬೇರೆ ಗಿಡದ ಟೊಂಗೆಗೆ ನೇತಾಡಿ, ಕೊನೆಗೆ ಅದೇ ಟೊಂಗೆಗೆ ಉರುಳು ಹಾಕಿಕೊಂಡು ಸಾಯುತ್ತಾನೆ. ಇಂಥ ಮಾನಸಿಕತೆಯನ್ನು ಸೃಜನಶೀಲ ಎಂದು ಬಿಂಬಿಸುವುದು ಕೆಟ್ಟ ಮಾನಸಿಕತೆಯ ವೈಶಾಲ್ಯತೆಯ ಸೂಚಕವಾಗುತ್ತದೆ.’

ಓದುಗರೇ ಈ ಮೇಲಿನ ಸಾಲುಗಳು ನನ್ನ ವಿಚಾರಗಳನ್ನು ಬಡಿದೆಬ್ಬಿಸಿದವು. ಅದನ್ನು ಈ ಮುಂದೆ ಓದಿ…

ಸ್ವಂತ ಮಾಲು ಮಾರುವವರು ಇಂದು ಅದೆಷ್ಟು ಜನ ಇದ್ದಾರೆ ಹೇಳಿ. ದಿನಕ್ಕೆ ಒಮ್ಮೆಯಾದರೂ ತುಂಬಿದ ಮಾರುಕಟ್ಟೆಗಳಿಗೆ ತಾವು ಹೋಗಿರುತ್ತೀರಿ. ಹಾಗೆ  ಹೋದಾಗ ಅಲ್ಲಿ ಬಾಗವಾನರಾರು (ರೈತರ ಮಾಲನ್ನು ಹರಾಜಿನಲ್ಲಿ ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರಲು ಕೂತವರು), ರೈತರಾರು (ತಾವು ಬೆಳೆದುದನ್ನು ತಾವೇ ಮಾರುವವರು) ಎಂದು‌ ಗೊತ್ತಾಗದೇ ಒದ್ದಾಡಿದ ಅನುಭವ ತಮಗಿದೆ.

ರೈತನ ಮಕ್ಕಳಾದ ತಾವೇ ಗೊಂದಲದಲ್ಲಿ ಬೀಳುವಿರಿ. ಇನ್ನು ಅನ್ಯ ಕೊಳ್ಳುಗರ ಮಾತೇನು? ಯಾಕೆ ಹಾಗಾಯ್ತು ಅಂತಾ ಗೊತ್ತೇ? ಅಂತಹ ಮಾರಾಟ ತಂತ್ರಗಾರಿಕೆಯನ್ನು‌ ರೂಡಿಸಿಕೊಂಡ ಬಾಗವಾನರು ತಮ್ಮನ್ನು ಅಷ್ಟು ಯಾಮಾರಿಸಿ ಬಿಡುತ್ತಾರೆಂದರೆ, ಇವರೇ ರೈತರೇನೋ ಎಂದುಕೊಂಡು ಅವರ ಮಾತಿಗೆ ಮರುಳಾಗಿ ಹೇಳಿದಷ್ಟು ದುಡ್ಡುಕೊಟ್ಟು ತೂಕದಲ್ಲೂ ಮೋಸ ಮಾಡಿಸಿಕೊಂಡು ಮನೆಗೆ ಬರುತ್ತೇವೆ. ನಾವೆಂತಹ ಮೂರ್ಖರು?

ಮನೆಗೆ ಬಂದಾಗಲೇ ಗೊತ್ತಾಗೋದು ತಾವು ತಂದ ಮಾಲು ಬಾಗವಾನರ ಹತ್ತಿರ ತಂದಿದ್ದೋ ಅಥವಾ ರೈತರ ಹತ್ತಿರ ತಂದಿದ್ದೋ ಅಂತ. ನಿಮ್ಮ ಮನೆಯವರು (ಹೆಂಡತಿ) ಅದನ್ನು ನೋಡಿದಾಕ್ಷಣ ನಿಮಗೆ ಉಗುಳಿ ಉಳ್ಳಿಗಡ್ಡಿ ಕಟ್ಟಿದಾಗಲೇ ‘ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ ಭಾಸುರಾಂಗ ಶ್ರೀ ವಾಸುಕಿಶಯನನ ಸಾಸಿರ ನಾಮವ ಲೇಸಾಗಿ ಪಠಿಸದೆ’ ಎಂಬ ದಾಸವಾಣಿ ಪಠಿಸುವುದೊಂದೇ ತಮಗೆ ಉಳಿದಿರುವ ಕೆಲಸ. ತನಿಖಾ ಸಂಸ್ಥೆಯಲ್ಲಿ‌ ಕೆಲಸ ಮಾಡುವವರ ದೃಷ್ಟಿಕೋನವೇ ಬೇರೆ ಆಗಿರುತ್ತದೆ. ಅವರ ಮೂಗಿನ ವಾಸನೆಯೇ ಬೇರೆ ಅಗಿರುತ್ತದೆ. ಕ್ಷಣ ಮಾತ್ರದಲ್ಲಿ ಮೂಲವನ್ನು ಜಾಲಾಡಿಸಿ ಸತ್ಯ ಹೊರಗೆಡವುತ್ತಾರೆ.

ಇವತ್ತು ಸಾಹಿತ್ಯ ಕ್ಷೇತ್ರದಲ್ಲೂ ಇದೇ ಆಗಿದೆ. ಕೆಲವರು ಅಲ್ಲಿ ಇಲ್ಲಿ ಎಲ್ಲೋ ಕದ್ದು ತಂದು ಇದ್ದಕ್ಕಿದ್ದಂತೆ ಬರೆಯಲು ಆರಂಭಿಸುತ್ತಾರೆ. ಅವರ ಯಾವ ಪರಿ ಕ್ಲಿಕ್ ಆಗುತ್ತಾರೆ ಎಂದರೆ ಕೆಲವೇ ದಿನಗಳಲ್ಲಿ ಅವರ ಹೆಸರು ರಾರಾಜಿಸತೊಡಗುತ್ತದೆ. ಪ್ರಕಟಣೆಗೆ ಕುಳಿತಿರುವ ಸಾಹಿತ್ಯದ ಬಗೆಗಿನ ಗಂಧ ಗಾಳಿ ಗೊತ್ತಿಲ್ಲದ ಜನರ ಅಜ್ಞಾನವೇ ಅವರನ್ನು ಆ ಪರಿಗೆ ಬೆಳೆಸಿಬಿಡುತ್ತದೆ. ವರ್ಷಾನುಗಟ್ಟಲೇ ಓದಿ, ಅದ್ಯಯನ ಮಾಡಿ, ದೇಶ ನೋಡಿ ಅನುಭವಿಸಿ ಬರೆಯುವ ಜನರನ್ನು ಯಾರೂ ಲೆಕ್ಕಿಸುವುದೇ ಇಲ್ಲ. ಇಂದೋ ನಿನ್ನೆಯೋ ದಿಢೀರೆಂದು ಹುಟ್ಟಿಕೊಂಡ ಸ್ವಂತಿಕೆಯ ಬಂಡವಾಳವಿಲ್ಲದ ಬರಹಗಾರರು ಎಲ್ಲಿಂದಲೋ ಕದ್ದುತಂದ ಮಾಲನ್ನು ಮಾರುಕಟ್ಟೆಯ ಕೊಳ್ಳುಗರ (ಓದುಗರ) ಹೃದಯದ ನಾಡಿ ಮಿಡಿತ ಅರ್ಥೈಸಿಕೊಂಡು ವಿವಿಧ ತಂತ್ರಗಾರಿಕೆಯನ್ನು ಬಳಸಿ ಕೂಗಿ ಕರೆದು ಮಾರಾಟ ಮಾಡಿ ಬಿಡುತ್ತಾರೆ.

ಇಂದು ಇಂತಹ ಬರಹಗಾರರೇ ದೊಡ್ಡಮಟ್ಟದ ಬರಹಗಾರರಾಗಿ ನೈಜಾನುಭವದ ಮೇಲೆ ಬರೆಯುವವರ ನೆತ್ತಿಯ ಮೇಲೆ ಕೈಯಾಡಿಸುತ್ತಿದ್ದಾರೆ. ಇದೆಂತಹ ವಿಪರ್ಯಾಸ ಅಲ್ಲವೇ? ನಿರಂತರ ಅದ್ಯಯನಶೀಲ ಬರಹಗಾರನಿಗೆ ದಿಢೀರ ಬರಹಗಾರರ ಒಳಮರ್ಮ ಅರ್ಥವಾಗಲು ಬಹಳ ಸಮಯ ಬೇಕಾಗುವುದಿಲ್ಲ. ಇದೆಲ್ಲ ಗೊತ್ತಿದ್ದೂ ಆತ ಬಾಯಿ ಮುಚ್ಚಿ ಕೂಡ್ರುವ ಸ್ಥಿತಿ. ದಿಢೀರ ಸಾಹಿತಿಯ ಜನ್ಮ ಜಾಲಾಡಲು ಹೋದಿರೋ ಅವನ ಕ್ರಿಮಿನಲ್ ವರಸೆ ಆರಂಭವಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಅವನು ಈಗಾಗಲೇ ಅಲ್ಲಿ ಇಲ್ಲಿ ಕೊಟ್ಟು ತೆಗೆದುಕೊಳ್ಳುವ ಮೂಲಕ ವ್ಯವಹಾರ ಕುದುರಿಸಿ ಬೆಳೆದು ನಿಂತಾಗಿರುವುದರಿಂದ ತಮ್ಮ ದೂರಿಗಲ್ಲಿ ಬೆಲೆ ಇರುವುದಿಲ್ಲ. ಇದು ಸದ್ಯದ ಪರಿಸ್ಥಿತಿ. ಇಂದಿನ ಅದೆಷ್ಟೋ ಮುದ್ರಣ ಮಾದ್ಯಮಗಳು‌ ಅಂತಹವರನ್ನು ನೀರು ಗೊಬ್ಬರ ಹಾಕಿ ಬೆಳೆಸಿಬಿಟ್ಟಾಗಿದೆ. ಈಗ ನಮ್ಮದೇನಿದ್ದರೂ ಬಾಯಿ ಮುಚ್ಚಿಕೊಂಡು ಇರಬೇಕಾಗಿರುವುದಷ್ಟೇ.

ಇದು ಒಂದೆಡೆಯ ವಿಚಾರವಾದರೆ ಇನ್ನೊಂದು ಮಗ್ಗುಲಿಗೆ ಹೊರಳಿ ಗಂಭೀರವಾಗಿ‌ ವಿಚಾರ ಮಾಡಲೇಬೇಕಾದ ಇನ್ನೊಂದು ವಿಚಾರವಿದೆ. ಹೀಗೆ ಕದ್ದು ತಂದ ಮಾಲನ್ನು ಮಾರುವ ಇಂತಹ ಬರಹಗಾರರಿಂದ ಜನತೆಯ ಬದುಕಿನ ಅಂತರಂಗದ ತುಡಿತವನ್ನು ದ್ವನಿ ಸ್ಪೋಟಗೊಳಿಸಲು ಸಾದ್ಯವೇ ಇಲ್ಲ. ಮೂಲ ಬರಹಗಾರನ ಬರಹದ ಜಾಡಿನಲ್ಲಿ ಇದ್ದುದು ಅವನ ಕಾಲದ ಮತ್ತು‌ ಅವನು ವಾಸಿಸಿದ ಆ ಸ್ಥಳದ ಜನತೆಯ ತುಡಿತವಾಗಿರುತ್ತದೆ. ಅದು ಆಗಲೇ ಔಟ್ ಡೇಟೆಡ್ ಆಗಿದೆ. ಅದಕ್ಕೆ ಇನ್ನೊಮ್ಮೆ ಧ್ವನಿ‌ಕೊಡುವ ಅವಶ್ಯಕತೆ ಇಲ್ಲ. ಮೇಲಾಗಿ ಅಂತಹದ್ದೊಂದು ಸಮಸ್ಯೆ ಅಥವಾ ತುಡಿತ ನಮ್ಮಲ್ಲಿ‌ ಇಲ್ಲದೇ ಹೋದಾಗ ಈ ನೆಲದಲ್ಲಿ ಬಂದು ಸ್ಪೋಟಿಸಿ ವಿನಾಕಾರಣ ಹೆದರಿಸುವುದಾದರೂ ಏಕೆ. ಇದು ಅರ್ಥವಾಗದು. ದೂರದ ಪ್ರಕಟಣಾ ಪುರುಷರಿಗೆ ಇದು ಅರ್ಥವಾಗದೇ ಹೋಗುತ್ತದೆ. ಅರ್ಥವಾದರೂ ಅವರು ಅದರ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಾರರು.

ಹೀಗೆ ಕೇವಲ ಬ್ರ್ಯಾಂಡೆಡ್ ಲೇಖಕರಿಗೇ ಮನ್ನಣೆ ನೀಡುತ್ತಾ ಹೋದರೆ ನಮ್ಮ‌ ಈ ನೆಲದ ವಾಸನೆ ಓದುಗರ ಮೂಗಿಗೆ ಬಡಿಯುವುದಾದರೂ ಹೇಗೆ ಎಂಬುದೇ ನನ್ನ ಪ್ರಶ್ನೆ. ಎಲ್ಲ ನೆಲದ ವಾಸ್ತವ ಕಟುಸತ್ಯಗಳು ಎಲ್ಲರೆದಿರು ಬೆತ್ತಲಾಗಿ ನಿಲ್ಲಬೇಕು ಎಂದರೆ ಎಲ್ಲ ನೆಲದ ಬರಹಗಾರರಿಗೆ ಮನ್ನಣೆ ನೀಡಲೇಬೇಕು. ಅಂದಾಗ ಮಾತ್ರವೇ ಪರಿವರ್ತನೆ ಸಾದ್ಯವಾಗಿ ಹೊಸತನ ಮೂಡಲು ಸಾದ್ಯ. ಇದಕ್ಕೆ ಅವಕಾಶವೀಯದೇ ಹೋದರೆ ಬಿಸ್ಲೇರಿ ಬಾಟಲ್ ನಲ್ಲಿ ಚರಂಡಿ ನೀರು ಹಾಕಿಕೊಟ್ಟರೂ ಕುಡಿಯಲೇಬೇಕಾದ ಸ್ಥಿತಿ ಓದುಗರಿಗೆ ಬಂದೊದಗುವುದು. ಇಂತಹ ಇಂದಿನ ಮನೋದೋರಣೆಯೇ ಇಂದು ಸೃಜನಶೀಲ ಎಂದು ಕರೆಯಿಸಿಕೊಳ್ಳುತ್ತಿರುವುದು ಕೆಟ್ಟು ಹೋದ ನಮ್ಮ ಮಾನಸಿಕತೆಗೆ ಕನ್ನಡಿ ಹಿಡಿಯುತ್ತದೆ.

‍ಲೇಖಕರು Avadhi

May 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಬಹಳ ಉಚಿತವಾದ ಬರವಣಿಗೆ. ಸಮಯೋಚಿತ ಅಂದರೂ ತಪ್ಪಿಲ್ಲ.. ಬರಹಗಾರರ ಕೈ ಒಬ್ಬರ ಜೇಬಿನೊಳಗೆ ಮತ್ತೊಬ್ಬರದ್ದಿರುತ್ತದೆ ಎಂಬಂತಹ ವಿಚಾರವನ್ನು ನವೋದಯ ಕಾಲದ ಹಿರಿಯ ಬರಹಗಾರರು ಹಲವರು ಚರ್ಚಿಸಿದ್ದರೆಂದು ಓದಿದ ನೆನಪಿದೆ.
    ಪ್ರಸ್ತುತ ಗಟ್ಟಿ ಓದಿನ ತಳಪಾಯವಿಲ್ಲದ, ವಿಚಾರಕ್ಕೇನೂ ಬೆಲೆಯಿಲ್ಲದ, ಸಂಜೆ ಹೊತ್ತಿಗೆ ಮೂರ್ನಾಲ್ಕು ಮೊಳ ನೇಯ್ದು ತರುವವರಿಗೆ ಮನ್ನಣೆ ಎನ್ನುವುದು ನಿಜವಾದರೂ…. ಓದುಗರಿಗೆ ಸತ್ವ ಉಳ್ಳ ಬರಹಗಳೂ ಆಗಾಗ್ಗೆ ದಕ್ಕುತ್ತಿರುವುದೂ ಸುಳ್ಳಲ್ಲ.

    ಈಗೀಗ ಮುದ್ರಣ ಮಾಧ್ಯಮಗಳು ಗುಂಪುಗಾರಿಕೆಯನ್ನು ಗುಪ್ತವಾಗಲ್ಲದೆ, ರಾಜಾರೋಷವಾಗಿಯೇ ನಡೆಸಿಕೊಂಡು ಬರುತ್ತಿರುವಾಗ ಒಳ್ಳೆಯ ಓದುಗನಿಗೆ ಒಳ್ಳೆಯ ಬರಹವೇ ಸಿಗಬೇಕೆನ್ನುವುದು ಹೇಗೆ ಸಾಧ್ಯ? ಒಂದು ನಿರಾಳತೆ ಎಂದರೆ, ಆನ್ಲೈನ್ ವೇದಿಕೆಗಳು ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವುದು. ಹಾಗೆಯೇ ಓದುಗರಿಗೂ ಬರಹಗಾರರಿಗೂ ಒಂದು ಸಂಬಂಧವನ್ನು ಶೀಘ್ರವೇ ಕೊಡಮಾಡುತ್ತಿರುವುದು.
    ದಿಢೀರ್ ಸಾಹಿತ್ಯ ಅಜೀರ್ಣವಾಗಿ, ಗಟ್ಟಿ ಸತ್ವ್ತಭರಿತ ಸಾಹಿತ್ಯ ಕಾಲಕಾಲಕ್ಕೂ ಉಳಿದು ಬಂದಿದೆ . ಬರುತ್ತದೆ. ಅಷ್ಟರವರೆಗೆ ಓದುಗರು ಸಂಯಮಿಗಳೂ ಆಯ್ಕೆಯಲ್ಲಿ ಜಾಣರೂ ಆಗಬೇಕಾಗುತ್ತದೆ. ಆಗ ಮತ್ತೊಬ್ಬರ ಸೃಜನಶೀಲತೆಯನ್ನು ತಿರುಚಿ ಮುರುಚಿದರೂ ಅಂತಹ ಪ್ರಚ್ಛನ್ನ ಬರಹಗಾರರು ಬಣ್ಣಗೇಡಿಯೂ ಮುಖೇಡಿಯೂ ಆಗುತ್ತಾರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: