-ಸಂಯುಕ್ತಾ ಪುಲಿಗಲ್
ಕಿವಿಗೊಟ್ಟು ಕೇಳು
ಈ ಕಿಟಕಿಯ ಸರಳುಗಳು
ಈ ಕೊರಕಲು ಗೋಡೆಗಳು
ಮಾತನಾಡುತ್ತಿವೆ – ಕಥೆ ಹೇಳುತ್ತಿವೆ!
ತಾತ-ಮುತ್ತಾತರ ಕಾಲ
ಈ ಬಿರುಕುಗಳಲ್ಲಿ
ಹರಳುಗಟ್ಟಿವೆ
ಗಮನಗೊಡು!
ಮುತ್ತಜ್ಜಿ ಸೀರೆಯಂಚು
ಮೊದಲ ಬಾರಿ ನೆನೆದದ್ದು,
ಮುತ್ತಾತನ ಗಂಟಲಿಗೆ
ಮನೆ ಮಂದಿ ನಡುಗಿದ್ದು!
ಅಂಗಳದ ತುಂಬೆಲ್ಲ
ಮಕ್ಕಳ ನಗು ಹರಡಿದ್ದು,
ಕಾಲನಾಟದ ದಾಳಕ್ಕೆ
ಚೆಲ್ಲಾಪಿಲ್ಲಿಯಾದದ್ದು!
ವಿವಿದೆಡೆ ಹರಡಿ
ಬೆಳೆದು ಭದ್ರವಾದದ್ದು,
ಮಾಸಲು ಗೋಡೆಯ ನೆರಳಲ್ಲಿ
ಕತೆಗಳ ಬುತ್ತಿ ಹೆಣೆದದ್ದು!
ನಮ್ಮಂತೆಯೇ
ಕಥೆ ಕೇಳುತ್ತಾ, ಕಥೆಯಾಗುತ್ತಾ,
ನನ್ನ-ನಿನ್ನ ಅಮ್ಮಂದಿರು
ಇಲ್ಲೇ ಹರಟಿ ಬೆಳೆದದ್ದು!
ಈಗ..
ಬಾ ಇಲ್ಲೇ ಕೂರೋಣ,
ಈ ಮಾಗಿದ ಸಂದಿನ
ಚಿಗುರೆಲೆಯ ಮೇಲೆ
ನಮ್ಮ ಚಿತ್ತಾರ ಬಿಡಿಸೋಣ!






0 Comments