ಕಥೆ ಎಂಬ 'ಬೇಲಿ ಹೂ

ಸಧ್ಯದಲ್ಲೇ ನಿಶಾ ಗೋಪಿನಾಥ್ ಅವರ ಎರಡು ಕೃತಿಗಳು ಬೆಳಕು ಕಾಣಲಿವೆ. ‘ನೀಲಿ ನಕ್ಷತ್ರ’ ಹಾಗೂ ‘ಬೇಲಿ ಹೂ’ 

ಬೇಲಿ ಹೂ ಕೃತಿಗೆ ಸಂಧ್ಯಾರಾಣಿ ಅವರು ಬರೆದ ಮುನ್ನುಡಿ ಇಲ್ಲಿದೆ 

sandhyarani

ಎನ್ ಸಂಧ್ಯಾರಾಣಿ

ಸಾಧಾರಣವಾಗಿ ನಮ್ಮೆಲ್ಲರ ಸಾಹಿತ್ಯ ಯಾನ ಪ್ರಾರಂಭವಾಗಿದ್ದು ಸಣ್ಣಕಥೆಗಳಿಂದ.

ಅಜ್ಜಿ ಹೇಳುತ್ತಿದ್ದ ರಾಜ ರಾಣಿಯರ ಕಥೆಗಳು, ಅಮೇಲೆ ಅಕ್ಷರ ಅಕ್ಷರ ಜೋಡಿಸಿಕೊಂಡು ಓದುತ್ತಿದ್ದ ಚಂದಮಾಮ, ಬಾಲಮಿತ್ರದ ಸಣ್ಣ ಕಥೆಗಳು, ತಿಂಡಿ ತಿನ್ನುವಾಗ, ಶಾಲಾ ಕಾಲೇಜಿನಿಂದ ಬಂದ ಕೂಡಲೇ, ಪಕ್ಕದ ಮನೆ ಆಂಟಿ ದೊಡ್ಡ ಮನಸ್ಸು ಮಾಡಿ ಕೊಟ್ಟಾಗ ಅವಸರವಸರವಾಗಿ ಓದುತ್ತಿದ್ದ ಸುಧಾ, ತರಂಗ, ಪ್ರಜಾಮತ, ಮಯೂರು, ತುಷಾರಗಳ ಕಥೆಗಳು, ಭಾನುವಾರಕ್ಕಾಗಿ ಕಾದು ಸಾಪ್ತಾಹಿಕದಲ್ಲಿ ಓದುತ್ತಿದ್ದ ವಾರದ ಕಥೆಗಳು ಇತ್ಯಾದಿ. ಈ ಕಥೆಗಳು ನಮಗೇ ಗೊತ್ತಿಲ್ಲದಂತೆ ನಮ್ಮೊಳಗೆ ಒಂದು ಪ್ರಪಂಚವನ್ನು ಕಟ್ಟಿಕೊಡುತ್ತಾ ಬಂದವು.

ಕಥೆಗಳು ಕಟ್ಟಿಕೊಟ್ಟ ಆ ಪ್ರಪಂಚ ನಮ್ಮ ಒಳಜಗತ್ತನ್ನು ಇಂದಿಗೂ ಪೋಷಿಸುತ್ತಿವೆ.  ಆ ಕಥೆಗಳ ಪ್ರಪಂಚ ನಮ್ಮ ಆ ಎಲ್ಲಾ ನೆನ್ನೆಗಳನ್ನೂ, ನೆನಪುಗಳನ್ನೂ ಒಣಗದಂತೆ ಕಾಪಾಡುತ್ತಿವೆ.  ಬಾಲ್ಯದಲ್ಲಿ ಕಂಡ ಅದ್ಯಾವುದೋ ಮುಖ, ಯಾವುದೋ ಒಂದು ಮಾತು, ಯಾವುದೋ ತಿರುವಿನಲ್ಲಿ ಎದುರಾದ ನಗು-ಅಳು-ನಿಟ್ಟುಸಿರು ಎಲ್ಲವನ್ನೂ ಅವು ನಮ್ಮಲ್ಲಿ ಉಳಿಸಿದೆ.  ಕಥೆಗಳನ್ನು ಓದಲು ಯಾವುದೇ ಸಿದ್ಧತೆಯ ಅಗತ್ಯ ಇಲ್ಲ, ಓದಿದ ಮೇಲೆ ಅಸ್ಪಷ್ಟ ಚಿತ್ರದ ಪೂರ್ಣ ಕಲ್ಪನೆ ಮಾಡಿಕೊಳ್ಳಲು ನಾವು ತಡಕಬೇಕಿಲ್ಲ.  ಅತ್ಯಂತ ಸಹಜವಾಗಿ ಅವು ನಮ್ಮೊಳಗೆ ಒಂದಾಗುತ್ತಾ ಹೋಗುತ್ತದೆ.  ಸಣ್ಣಕಥೆಗಳು ಕವನಗಳಂತೆ ತೀವ್ರತೆ ಬಯಸುವುದಿಲ್ಲ, ಕಾದಂಬರಿಗಳಂತೆ ದೀರ್ಘನಿಷ್ಠೆಯ ಕರಾರು ಹಾಕುವುದಿಲ್ಲ, ಕೈಗೆತ್ತಿಕೊಂಡಾಗ ಕೇಕೆಹೊಡೆದು ಮಾತನಾಡಿ, ನೆಲಕ್ಕೆ ಇಳಿಸಿದರೆ ಮತ್ತೆ ಕೈಗೆತ್ತಿಕೊಳ್ಳುವವರೆಗೂ ತನ್ನ ಪಾಡಿಗೆ ತಾನು ಆಟವಾಡುವ ಮಗುವಿನಂತೆ ಸಣ್ಣಕಥೆ.

nisha-cover1ಒಂದು ಸಣ್ಣಕಥೆ ಹೀಗೇ ಇರಬೇಕು ಎನ್ನುವ ನಿಯಮವಿಲ್ಲ.  ಅದು ಒಂದು ಪೂರ್ಣ ಕಥಾನಕವಾಗಿರಬಹುದು, ಕಥಾನಕದ ಒಂದು ಭಾಗವಾಗಿರಬಹುದು ಅಥವಾ ಕಥಾನಕದ ಒಂದು ಚಿತ್ರವೂ ಸಹ ಆಗಿರಬಹುದು.  ಅದು ವಾಸ್ತವವೋ ಅವಾಸ್ತವವೋ ಎನ್ನುವುದು ಮುಖ್ಯವಲ್ಲ, ಕಥೆಯನ್ನು ಕಥೆ ಬರೆಯುವವರು ಅದನ್ನು ಎಷ್ಟು ಮನವೊಪ್ಪಿಸುವ ಹಾಗೆ ಹೇಳಬಲ್ಲರು ಎನ್ನುವುದೇ ಮುಖ್ಯ.  ಕಥೆಯ ಕೊನೆಗೆ ತಿರುವಿರಬಹುದು ಅಥವಾ ತಿರುವಿನೊಂದಿಗೇ ಒಂದು ಕಥೆ ಪ್ರಾರಂಭವಾಗಬಹುದು.  ಅಲ್ಲಿ ಅನೇಕ ಪಾತ್ರಗಳಿರಬಹುದು ಅಥವಾ ಒಂದು ಪಾತ್ರವೇ ಅಲ್ಲಿ ಕಥೆಯಾಗಬಹುದು, ಓದುಗರನ್ನು ಅದು ಎಷ್ಟರಮಟ್ಟಿಗೆ ಆವರಿಸಿಕೊಳ್ಳುತ್ತದೆ ಎನ್ನುವುದು ಮುಖ್ಯ. ಕಥೆಗಾರರ ಒಂದು ಕಥೆಯನ್ನು ಬಿಡಿಯಾಗಿ ಓದಿದಾಗ ಅದು ನಮ್ಮನ್ನು ಒಳಗೊಳ್ಳುವ ರೀತಿಯೇ ಬೇರೆ, ಆ ಕಥೆಗಾರರ ಹಲವಾರು ಕಥೆಗಳನ್ನು ಒಟ್ಟಿಗೇ ಓದಿದಾಗ ಅದು ನಮಗೆ ಕಟ್ಟಿಕೊಡುವ ಚಿತ್ರಣವೇ ಬೇರೆ. ಆ ಓದು ಕಥೆಗಳ ಬಗ್ಗೆ, ಕಥೆಗಾರರ ಜೀವನ ದೃಷ್ಟಿಯ ಬಗ್ಗೆ, ಜೀವನ ಪ್ರೀತಿಯ ಬಗ್ಗೆ ಒಂದು ಪೂರ್ಣಚಿತ್ರವನ್ನು ಕಟ್ಟಿಕೊಡುತ್ತದೆ.  ಈ ಅರಿವಿನೊಂದಿಗೆ ನಾನು ನಿಶಾ ಗೋಪಿನಾಥ್ ಅವರ ’ಬೇಲಿ ಹೂ’ ಪುಸ್ತಕವನ್ನು ಕೈಲಿ ಹಿಡಿದುಕೊಂಡು ಕುಳಿತಿದ್ದೇನೆ.

ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ.  ಈ ಎಲ್ಲಾ ಕಥೆಗಳ ಹಿಂದೆ ಇರುವ ಒಂದು ಸಾಮಾನ್ಯ ತಂತು ಎಂದರೆ ನಿಶಾ ಅವರ ಸಾಮಾಜಿಕ ಕಳಕಳಿ. ಮೊದಲು ಕಥಾವಸ್ತುವಿನ ಆಯ್ಕೆಯನ್ನು ಗಮನಿಸೋಣ.  ಇಡೀ ಸಂಕಲನದ ಕಥೆಗಳನ್ನು ನೋಡಿದರೆ ಈ ಕಥೆಗಳ ಹಿಂದೆ ನಿಶಾ ಗೋಪಿನಾಥ್ ಅವರ ಆರ್ದ್ರ ಮನಸ್ಸು ಕೆಲಸ ಮಾಡುತ್ತಿದೆ ಅನ್ನಿಸುತ್ತದೆ.  ಅವರು ನಿಲ್ಲುವುದು ದಮನಿತರ ಜೊತೆ, ನಿರಾಕರಣಗೊಂಡವರ ಜೊತೆ, ಒಂಟಿ ಉಳಿದವರ ಜೊತೆ.  ಇಲ್ಲಿ ದಮನಿತರನ್ನು ನಾವು ಎರಡು ನೆಲೆಯಲ್ಲಿ ನೋಡುತ್ತೇವೆ.

ಮೊದಲನೆಯದು ಜಾತಿಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಳಗೆ ತಳ್ಳಲ್ಪಟ್ಟ ದಲಿತರು, ಇನ್ನೊಂದು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕೆಳಗೆ ತಳ್ಳಲ್ಪಟ್ಟ ಮಹಿಳೆಯರು. ಅದು ಮಂಜುನಾಥ ಆಗಿರಬಹುದು, ಹೆಸರೇ ಇಲ್ಲದ ಆ ಅಲೆಮಾರಿ ತಂಡದ ಹುಡುಗಿ ಆಗಿರಬಹುದು, ಕಥೆಯುದ್ದಕ್ಕೂ ನಮ್ಮ ಕಣ್ಣೆದುರು ಬರದೆಯೇ ಕಾಡುವ ನೀಲಕ್ಕ ಆಗಿರಬಹುದು ಅಥವಾ ಕಲಾ ಆಗಿರಬಹುದು. ನಿಶಾ ಅವರಿಗೆ ಆ ಎಲ್ಲಾ ಪಾತ್ರಗಳ ನಿಟ್ಟುಸಿರು ತಾಕುತ್ತದೆ, ಮೌನ ತಾಕುತ್ತದೆ, ಬೇಗುದಿ ತಾಕುತ್ತದೆ.  ಆ ಎಲ್ಲಾ ಪಾತ್ರಗಳಿಗೆ ಅವರು ದನಿಯಾಗ ಹೊರಡುತ್ತಾರೆ.  ಹಾಗೆ ದನಿಯಾಗುವಾಗ ಆ ದನಿ ಎಲ್ಲೂ ಅಬ್ಬರವಾಗದಂತೆ ಅವರು ಎಚ್ಚರ ವಹಿಸುತ್ತಾರೆ.  ಉದಾಹರಣೆಗೆ ’ಕಾಣೆಯಾದ ಗೆಳತಿ’ ಕಥೆ.  ಇಲ್ಲಿ ನಿಶಾ ಅವರು ಪ್ರಥಮ ಪ್ರಯೋಗದಲ್ಲಿ ಕಥೆಯನ್ನು ಬರೆದರೂ ತಾವು ಕಲಾ ಆಗುವುದಿಲ್ಲ, ಕಲಾಳ ಗೆಳತಿ ಆಗುತ್ತಾರೆ.  ಆ ಮೂಲಕ ಅವರು ಭಾವಾತಿರೇಕ ಆಗಬಹುದಾಗಿದ್ದ ಕಥೆಯನ್ನು ತಣ್ಣನೆಯ ದನಿಯಲ್ಲಿ ಹೇಳುತ್ತಾ ಅದರ ವಿಷಾದವನ್ನು ಮತ್ತಷ್ಟು ಆಳವಾಗಿಸುತ್ತಾರೆ. ಆ ವಿಷಾದ ಎಷ್ಟು ಆಳವಾದುದೆಂದರೆ ಕಥೆಯ ಕೊನೆಯ ಹೊತ್ತಿಗೆ ಅವರೇ ನಿರ್ಮಿಸಿದ ಕಥಾ ಹಂದರದೊಳಗೆ ಅವರೇ ಹೆಜ್ಜೆಯಿಟ್ಟು ’ನಿಮಗೇನಾದರೂ ನನ್ನ ಗೆಳತಿ ಸಿಕ್ಕಿದರೆ ಹೇಳಿ, ಅಥವಾ ನಿಮ್ಮಲ್ಲೂ ಇಂಥಹ ಅನೇಕ ಗೆಳತಿಯರು ಇರಬಹುದು, ಅಂಥವರ ಸಹಾಯಕ್ಕೆ ಧಾವಿಸಿ ದಯವಿಟ್ಟು…’ ಎಂದು ನಿಟ್ಟುಸಿರಾಗಿಬಿಡುತ್ತಾರೆ.

ಇನ್ನು ಕಥೆಯ ತಂತ್ರದ ದೃಷ್ಟಿಯಿಂದ ನೋಡಿದರೆ ಇವರ ಬಹಳಷ್ಟು ಕಥೆಗಳು ಒಂದು ದಿಕ್ಕಿನ ಲೀನಿಯರ್ ನಿರೂಪಣೆಯನ್ನೇ ಮೈಗೂಡಿಸಿಕೊಂಡಿವೆ.  ತಂತ್ರದ ದೃಷ್ಟಿಯಿಂದ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.  ತಮಗೆ ಅನ್ನಿಸಿದ್ದನ್ನು, ತಾವು ಕಂಡದ್ದನ್ನು ಪ್ರಾಮಾಣಿಕವಾಗಿ ಹೇಳಬೇಕು ಎನ್ನುವುದೇ ಅವರ ತುಡಿತವಾಗಿದೆ. ಆದರೆ ಈ ಸಂಕಲನದ ’ಜಾತ್ರೆಯ ಹೆಣ’  ಕಥೆ ಇವರ ಇತರ ಕಥೆಗಳಿಗಿಂತ ಭಿನ್ನ.  ಇಲ್ಲಿ ಕಥೆ ವಿವಿಧ ದಿಕ್ಕುಗಳಲ್ಲಿ ಮತ್ತು ವಿವಿಧ ದಿಕ್ಕುಗಳಿಂದ ಚಲಿಸುತ್ತದೆ.  ಕಥೆಯನ್ನು ಮುಗಿಸುವಾಗ ನಿರೂಪಕಿ ಜಾತ್ರೆಯ ಹೂ ಆಗಬೇಕಿದ್ದ  ತನ್ನ ಗೆಳತಿ ಲಕ್ಷ್ಮಿ ಜಾತ್ರೆಯ ಹೆಣವಾಗಿದ್ದನ್ನು ವಿವರಿಸುತ್ತಾ ಹೋಗುತ್ತಾಳೆ.  ಅಲ್ಲಿ ಕಥೆಯಲ್ಲಿನ ವಿಡಂಬನೆ ಅತ್ಯಂತ ಸೂಚ್ಯವಾಗಿಡುತ್ತಾರೆಯೇ ಹೊರತು ಅವರು ಅದನ್ನೊಂದು ವಾಚ್ಯ ಖಂಡನೆಯನ್ನಾಗಿಸುವುದಿಲ್ಲ. ಗೆಳತಿ ನೆಮ್ಮದಿಯಾಗಿರಲಿ ಎಂದು ನಿರೂಪಕಿ ಕೈಗೊಳ್ಳುವ ಕ್ರಮವೇ ಗೆಳತಿಯನ್ನು ಬಾವಿಗೆ ನೂಕುವುದನ್ನು ಹೇಳುವ ಈ ಕಥೆಯಲ್ಲಿನ ’ಮೌನ’ ಈ ಕಥೆಯನ್ನು ಗೆಲ್ಲಿಸುತ್ತದೆ.  ಅವರ ಇನ್ನೊಂದು ಕಥೆ ’ಜೀತದಾಳು’.  ಇಲ್ಲಿ ನಿಶಾ ಅವರು ಯಾವುದೇ ಸಿದ್ಧಮಾದರಿಯನ್ನಿಟ್ಟುಕೊಂಡು ’ರುದ್ರೇಶ್’ ಅನ್ನು ಖಳನಾಯಕನನ್ನಾಗಿಸಿ ಚಿಕ್ಕತಾಯಮ್ಮನನ್ನು ಬಲಿಪಶುವಾಗಿಸುವುದಿಲ್ಲ.  ಕಥೆಯನ್ನು ಹಾಗೇ ಬೆಳೆಯಲು ಬಿಡುತ್ತಾರೆ. ಕಥೆ ಮುಗಿಯುವಾಗ ಅವರು ರಾಮಯ್ಯನಿಗೆ ಕೊಡುವ ಘನತೆ ವಿಶೇಷವಾದದ್ದು.

nisha-cover2ನಿಶಾ ಗೋಪಿನಾಥ್ ಅವರ ಕಥಾವಸ್ತುವನ್ನು, ಕಥಾ ತಂತ್ರವನ್ನು ಮೆಚ್ಚುತ್ತಲೇ ಇಲ್ಲಿ ಇನ್ನೊಂದು ಮಾತು ಹೇಳಬೇಕು.  ಕಥೆಯಲ್ಲಿ ಎರಡು ಭಾಗಗಳಿರುತ್ತವೆ, ಮೊದಲನೆಯದು ಸನ್ನಿವೇಶವನ್ನು ಗ್ರಹಿಸುವುದು.  ಇಲ್ಲಿ ಕಥೆಗಾರರ ’ನೋಡುವ’ ಮತ್ತು ’ಕಾಣುವ’ ಎರಡೂ ಶಕ್ತಿಗಳೂ ಕೆಲಸ ಮಾಡಬೇಕಾಗುತ್ತದೆ.  ಯಾವುದೇ ಘಟನೆಯನ್ನು ಸಮಗ್ರವಾಗಿ ಮತ್ತು ಒಂದು ಅಂತರದಿಂದ ಕತೆಗಾರರು ನೋಡಬೇಕಾಗುತ್ತದೆ.  ತಾನೇ ಆ ಆವರಣದೊಳಕ್ಕೆ ಹೋಗಿ ಕೂತಾಗ ಘಟನೆಯ ವಿವರಗಳನ್ನು ಸಮಗ್ರವಾಗಿ ಗ್ರಹಿಸುವುದು ಕಷ್ಟವಾಗುತ್ತದೆ.  ಕಥೆಯ ಆಗುವಿಕೆಯಲ್ಲಿ ಮುಂದಿನ ಭಾಗ ನಿರೂಪಣೆಯದು.  ತಾನು ಗ್ರಹಿಸಿದ ಕಥೆಯನ್ನು ಕಥೆಗಾರರು ಎಷ್ಟು ಮನಮುಟ್ಟುವಂತೆ ಮತ್ತು ಮನ ಒಪ್ಪಿಸುವಂತೆ ಹೇಳಬಲ್ಲರು ಎನ್ನುವುದನ್ನು ಈ ಎರಡನೆಯ ಭಾಗ ನಿರ್ಧರಿಸುತ್ತದೆ.

ಈ ನಿಟ್ಟಿನಿಂದ ನೋಡಿದಾಗ ನಿಶಾ ಅವರ ಕಥೆಗಳಲ್ಲಿ ಅವರು ಸ್ವಲ್ಪ ಅಂತರ ಕಾಯ್ದುಕೊಂಡು ವಿಷಯಗಳನ್ನು ಗ್ರಹಿಸಬೇಕು ಅನ್ನಿಸುತ್ತದೆ.  ಅವರೇ ಆ ಕಥೆಯ ಆವರಣದೊಳಕ್ಕೆ ಹೆಜ್ಜೆಯಿಕ್ಕುವುದರಿಂದ ತಮಗೆ ತಪ್ಪೆಂದು ಕಂಡದ್ದನ್ನು ಪಾತ್ರಗಳ ಬದಲು ಅವರೇ ಹೇಳಿಬಿಡುತ್ತಾರೆ.  ಅವರ ಈ ಕಳಕಳಿ ಪ್ರೇಮವನ್ನು ಸಾಮಾಜಿಕ ನ್ಯಾಯದ ಜರೂರತ್ತಿನಂತೆ ಪರಿಗಣಿಸಲಾಗುವುದಿಲ್ಲ ಎನ್ನುವುದನ್ನು ಗಮನಿಸುವುದಿಲ್ಲ.  ’ಬೇಲಿಯ ಹೂ’ ಕಥೆಯಲ್ಲಿ ಮಂಜುನಾಥ ಪ್ರೀತಿಸುತ್ತಿದ್ದಾನೆ ಎನ್ನುವ ಒಂದೇ ಕಾರಣಕ್ಕೆ ಗೀತಾ ಅವನನ್ನು ಪ್ರೀತಿಸಬೇಕಾಗಿಲ್ಲ ಎನ್ನುವುದನ್ನು ಅವರ ಮನಸ್ಸು ಗಣನೆಗೆ ತೆಗೆದುಕೊಳ್ಳದಷ್ಟು ಅವರು ಮಂಜುನಾಥನನ್ನು ವಹಿಸಿಕೊಂಡು ನಿಂತುಬಿಡುತ್ತಾರೆ.  ಕಥೆಗಳು ಒಂದು ನಿರ್ಣಾಯಕ ಘಟ್ಟ ತಲುಪಬೇಕಾದರೆ ಅವಕ್ಕೆ ಸಾವಯವವಾಗಿ ಲಭಿಸಿದ ಒಂದು ಲಯ ಇರುತ್ತದೆ, ಅದು ತಾನಾಗೇ ಕಳಿತ ಹೆಣ್ಣಿನ ನಿಧಾನ.  ನಿಶಾ ತಮ್ಮ ಕಥೆಗಳು ತಾವಾಗೇ ಈ ನಿಧಾನವನ್ನು ರೂಢಿಸಿಕೊಳ್ಳಲು ಬಿಡಬೇಕು ಎನ್ನುವ ಒಂದು ಕಿವಿಮಾತನ್ನು ಇಲ್ಲಿ ಹೇಳಲು ಇಚ್ಛಿಸುತ್ತೇನೆ.

ನಾನು ಈ ಕಥೆಗಳನ್ನು ಒಬ್ಬ ವಿಮರ್ಶಕಿಯಾಗಿ ಓದಿಲ್ಲ, ಒಬ್ಬ ಓದುಗಳಾಗಿ ಇವುಗಳನ್ನು ನನ್ನದಾಗಿಸಿಕೊಂಡಿದ್ದೇನೆ.  ಆ ಪಾತ್ರಗಳ ಜೊತೆಯಲ್ಲಿ ಸಮಯ ಕಳೆದಿದ್ದೇನೆ, ಅವುಗಳನ್ನು ಕೇಳಿಸಿಕೊಂಡಿದ್ದೇನೆ.  ಒಡಲೊಳಗೆ ಕಂದಮ್ಮನನ್ನು ಹೊತ್ತುಕೊಂಡಿರುವ ನಿಶಾ ಇನ್ನೊಂದು ಮಗುವನ್ನು ಈ ಪುಸ್ತಕದ ರೂಪದಲ್ಲಿ ಹೆರುತ್ತಿದ್ದಾರೆ.  ಆ ಪುಟ್ಟ ಅಮ್ಮನಿಗೆ ಶುಭಹಾರೈಸುತ್ತಾ ನಿಶಾ ಅವರ ಈ ’ಬೇಲಿ ಹೂ’ ಎಲ್ಲರ ಮನೆಯ ಅಂಗಳದ ಹೂ ಆಗಲೆಂದು ಹಾರೈಸುತ್ತೇನೆ.

‍ಲೇಖಕರು Admin

December 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: