ಎಚ್ ಎಸ್ ವಿ ಕಾಲಂ: ನಾನ್ "ಖುಷಿಃ" ಕುರತೇ ಕಾವ್ಯಂ…

ತಾವರೆಯ ಬಾಗಿಲು-೧೩

ಋಷಿಯಲ್ಲದವನು ಕಾವ್ಯವನ್ನು ಸೃಷ್ಟಿಸಲಾರ ಎಂಬುದು ನಮಗೆಲ್ಲಾ ಗೊತ್ತಿರುವ ಜನಜನಿತ ಹೇಳಿಕೆ.(ನಾನೃಷಿಃ ಕುರತೇ ಕಾವ್ಯಂ).

ಕಾವ್ಯವೆಂಬುದು ಹುಡುಗಾಟವಲ್ಲ; ಅದೊಂದು ತಪಸ್ಸು! ಇದು ಗಂಭೀರ ಕವಿಯೊಬ್ಬರ ಅಂಬೋಣ. ಸರಿ. ಈ ಮಾತನ್ನೂ ಮಾನ್ಯ ಮಾಡೋಣ. ಆದರೆ ಗಹನವಾದದ್ದನ್ನು ಮಾತ್ರ ಆರಾಧಿಸುತ್ತಾ ಲಲಿತವಾದದ್ದನ್ನು ನಾವು ಕಡೆಗಣಿಸಬಾರದಲ್ಲ.

avadhi-hsv-columnಬೇಂದ್ರೆ, ಕುವೆಂಪು, ಅಡಿಗ ನಮಗೆ ಹೇಗೆ ಬೇಕೋ ಹಾಗೇ ಪಾ.ವೆಂ, ವಿ.ಜಿ.ಭಟ್ಟ, ಎಚ್.ಎಸ್.ಬಿಳಿಗಿರಿಯೂ ನಮಗೆ ಬೇಕು. ಕನ್ನಡದ ಕಾವ್ಯದ ಸ್ಪೆಕ್ಟ್ರಂ ಸಮಗ್ರವಾಗಿ ನಮಗೆ ದಕ್ಕಬೇಕಾದರೆ ನಾನಾ ಸ್ತರದ ಕಾವ್ಯ ನಮ್ಮ ಗ್ರಹಿಕೆಗೆ ಒದಗಲೇ ಬೇಕು. (ಈ ಸ್ಪೆಕ್ಟ್ರಂ ಎಂಬ ಮಾತು ನನ್ನ ಮನ ಹೊಕ್ಕದ್ದು ಎಚ್.ಎಸ್.ಆರ್ ಅವರ ಒಂದು ಪ್ರಬಂಧದ ಮೂಲಕ). ಯಾವಾಗಲೂ ನಾವು ಘನ ಗಂಭೀರ ಮುಖಮುದ್ರೆಯಲ್ಲಿ ಗುಹಾಗರ್ಭಧ್ವನಿಯನ್ನೇ ಹೂಂಕರಿಸುತ್ತಾ ಕೂಡುವುದಕ್ಕಾಗುವುದಿಲ್ಲ. ಹಾಗೆ ಮಾಡುತ್ತಾ ಕೂತರೆ ಮಕ್ಕಳ ಚಿನ್ನಾಟವನ್ನು ನಾವು ಆನಂದಿಸುವುದಕ್ಕೇ ಆಗುವುದಿಲ್ಲ! ಭಾರವಾದದ್ದು ಹೇಗೋ ಹಾಗೇ ಹಗುರವಾದದ್ದೂ ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜಿ.ಎಸ್.ಎಸ್. ಒಮ್ಮೆ ಲಕ್ಷ್ಮಣರಾವ್ ಕಾವ್ಯದ ಬಗ್ಗೆ ಮಾತಾಡುತ್ತಾ ಹೇಳಿದ ಒಂದು ಮಾತು ನೆನಪಾಗುತ್ತಿದೆ. ಋಷಿಯಲ್ಲದವನು ಹೇಗೆ ಕಾವ್ಯ ಸೃಷ್ಟಿಸಲಾರನೋ ಹಾಗೇ ಖುಷಿಯಿಲ್ಲದವನೂ ಕಾವ್ಯ ಸೃಷ್ಟಿಸಲಾರ!

ಇನ್ನೂ ಒಂದು ವಿಚಿತ್ರವಿದೆ. ಕೆಲವೊಮ್ಮೆ ಗಹನ ಕವಿ ತನ್ನ ಧ್ವನಿಯನ್ನ ತಾನೇ ಅಣಕಿಸುತ್ತಾ ಹಗುರವೂ ಕಚಕುಳಿಯಿಡುವಂಥದ್ದೂ ಆದ ಚೇಷ್ಟೆಯ ಕಾವ್ಯವನ್ನು ರಚಿಸಬಹುದು! ಹಕ್ಕಿ ಹಾರುತಿದೆ ನೋಡಿದಿರಾ ಎಂಬ ತಮ್ಮ ಗಂಭೀರ ಕವಿತೆಯನ್ನು ಬೆಕ್ಕು ಹಾರುತಿದೆ ನೋಡಿದಿರಾ ಎಂದು ಬೇಂದ್ರೆಯೇ ಅಣಕಿಸಿ ಬರೆದ ಅಣಕುವಾಡಿನಂತೆ! ಪ್ರತಿ ಹಾಡಿಗೂ ಒಂದು ಅಣಕವಾಡು ಸಾಧ್ಯ! ಈ ಮನಸ್ಸೆಂಬ ಹಕ್ಕಿಯ ಹಾರಾಟದ ರೇಂಜ್ ಬಡಪಟ್ಟಿಗೆ ಗಮನಕ್ಕೆ ಬರುವಂಥದ್ದಲ್ಲ!

ಅಣಕುವಾಡು ಅಂದಕೂಡಲೇ ನನಗೆ ವೈ.ಎನ್.ಕೆ ನೆನಪಿಗೆ ಬರುತ್ತಾರೆ! ಕರುಣಾಳು ಬಾ ಬೆಳಕೆ ಎಂಬ ಬಿ.ಎಂ.ಶ್ರೀ ಅವರ ಕವಿತೆಯನ್ನು ಓದದವರೂ, ಕೇಳದವರು ಯಾರಿದ್ದಾರೆ?! ಮನಸ್ಸನ್ನು ಕರಗಿಸುವಂಥ ಸಹಜ ನುಡಿಗಾರಿಕೆಯ ಈ ಆರ್ತ ಪ್ರಾರ್ಥನೆಯನ್ನು ವೈ.ಎನ್.ಕೆ ಅಣಕಕ್ಕೆ ಗುರಿಪಡಿಸಿದ್ದು ಹೀಗೆ!

ಕರುಣಾಳು
ಬಾ
ಒಳಕೆ
ಮಸುಕಿದೀ
ಪಬ್ಬಿ
ನಲಿ
ಕೈ
ಹಿಡಿದು
ಕುಡಿಸೆನ್ನನು

(ಮೂಲ ಕವಿತೆ ಹೀಗಿದೆ:
ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ, ಮನೆ ದೂರ, ಕನಿಕರಿಸಿ
ಕೈ ಹಿಡಿದು ನಡೆಸೆನ್ನನು)

ಅ ರಾ ಮಿತ್ರ ನಮ್ಮ ನಡುವಿನ ಘನ ವಿದ್ವಾಂಸರಲ್ಲಿ ಒಬ್ಬರು! ಅವರು ಹಾಸ್ಯೋತ್ಪಾದನ ವಿಚಕ್ಷಣಮತಿಯೂ ಹೌದು!
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ!
ಕೂಗಿದರು ಧ್ವನಿ ಕೇಳಲಿಲ್ಲವೇ ನರ-ಹರಿಯೆ!
ನರಹರಿ ಎಂಬ ಪದವನ್ನು ಒಡೆದು, ನರ-ಹರಿ ಎಂದು ಹಲ್ಲು ಗಿಂಜಿ ಮಿತ್ರ ತಮ್ಮ ಭಾಷಣದಲ್ಲಿ ನರ ಹರಿದುಕೊಂಡಾಗ ಉಂಟಾಗುವ ಹಾಸ್ಯದ ಅನುಭೂತಿ ಅಸಾಮಾನ್ಯವಾದುದು!

ನಾಡಿಗೇರ ಕೃಷ್ಣರಾಯರು ನಮ್ಮ ಪ್ರಸಿದ್ಧ ಹಾಸ್ಯ ಲೇಖಕರು. ನಾನು ವಿದ್ಯಾರ್ಥಿಯಾಗಿದ್ದಾಗ ಅವರ ಒಂದು ಭಾಷಣ ಕೇಳಿದೆ!
ಎಲ್ಲಿರುವೆ ತಂದೆ ಮಾರುತಿ? ಎಂಬ ಪ್ರಸಿದ್ಧವಾದ ಪುರಂದರದಾಸರ ಹಾಡು ನಮಗೆಲ್ಲಾ ಪರಿಚಿತವಾಗಿರುವಂಥದ್ದೇ! ಅದನ್ನು ಕೃಷ್ಣರಾಯರು ಅಣಕಿಸಿದ್ದು ಹೀಗೆ:
ಎಲ್ಲಿಂದ ರವೆ ತಂದೆಯೊ ಮಾರುತಿ?
ಮನೆ ಮಾರುತಿ!
ಹೊಲ ಮಾರುತಿ!
ಇದ್ದಬದ್ದದ್ದೆಲ್ಲ ಮಾರುತಿ!

***

designಕವಿತೆಯನ್ನು ಮಾತ್ರವಲ್ಲ ಕವಿಯೇ ಕವಿಯನ್ನು ಸದಭಿರುಚಿಯ ತಮಾಷೆಗೆ ಒಳಪಡಿಸುವ ಅದೆಷ್ಟೋ ಉದಾಹರಣೆಗಳು ನೆನಪಾಗುತ್ತಿವೆ. ಹಿರಿಯ ಲೇಖಕರಾದ ವಿ ಸೀ ತಮ್ಮ ಕವಿತೆಗಳಲ್ಲಿ ಎಷ್ಟು ಎಂಬುದಕ್ಕೆ ಅದರ ಹಳೆಯ ರೂಪವಾದ ಏಸು ಎಂಬುದನ್ನು ಕೆಲವು ಬಾರಿ ಬಳಸುತ್ತಿದ್ದರು! ವಿ ಸೀ ಅವರಿಗೆ ಪರಮ ಪ್ರಿಯರಾಗಿದ್ದ ಕೆ.ಎಸ್.ನರಸಿಂಹಸ್ವಾಮಿ ಒಮ್ಮೆ ವಿ ಸೀ ಅವರನ್ನು ಹಾಸ್ಯಮಾಡಿದರಂತೆ. ನಿಮ್ಮ ಹೊಸಕವಿತೆಯಲ್ಲಿ ಎಷ್ಟು ಮಂದಿ ಏಸುಗಳು ಬಂದಿದ್ದಾರೆ!? ಹಾಗೇ ಪುತಿನ ಸಲಿಕೆ ಎಂಬ ಹಳೆಯ ರೂಪವನ್ನು ತಮ್ಮ ಹಾಡಿನಲ್ಲಿ ಬಳಸಿದಾಗ ಪುತಿನ ಕಾವ್ಯದಲ್ಲಿ ಬಿಡಿ! ಸಲಿಕೆ, ಗುದ್ದಲಿ, ಹಾರೆ ಎಲ್ಲವೂ ಧಾರಾಳವಾಗಿ ಬರುತ್ತವೆ! ಎಂದು ಒಬ್ಬರು ಹಾಸ್ಯಮಾಡಿದರಂತೆ!

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು?
ನಮ್ಮೂರು ಹೊನ್ನೂರೊ, ನಿಮ್ಮೂರು ನವಿಲೂರೊ
ಚೆಂದ ನಿನಗಾವುದೆಂದು?

“ಅಲ್ಲಯ್ಯಾ! ನಮ್ಮ ನರಸಿಂಹಸ್ವಾಮಿಗೆ ಅವರ ಕನಸಲ್ಲೂ ಹೆಂಡತಿಯೇ ಬರುತ್ತಾಳಲ್ಲ! ಕನಸಲ್ಲಾದರೂ ನೆರೆಮನೆಯ ಚೆಲುವೆ ಕಾಣಿಸಬಾರದೆ?”-ಎಂದು ಪುತಿನ ಹಾಸ್ಯ ಮಾಡಿದ್ದುಂಟು! ಈ ನವುರು ಹಾಸ್ಯದಲ್ಲಿ ಮೆಚ್ಚುಗೆಯೂ ಇದೆ! ಟೀಕೆಯೂ ಇದೆ! ತುಂಟತನವೂ ಇದೆ!
ಪಾಠ

ವರ್ಡ್ಸ್ವರ್ತ್ ಗೋತ್ರದ ಕವಿಗಣ
ಬೀಟ್ನಿಕ್ ಕವಿ ಗ್ರಿಗರಿ ಕಾರ್ಸೋಗೆ ಆದೇಶಿಸಿತು:
“ತಮ್ಮ ಒಳಗಣ್ಣು ತೆರೆ, ಬರೆ,
ಬರೀ ಬಾಳಿನ ಗೋಳು ಗೊಂದಲ ವಾಸ್ತವತೆಗೆ
ಗುಲಾಮನಾಗುವುದ ತೊರೆ

ನಿಸರ್ಗದ ನೋಟ
ಕಲಿಸಲಿ ಪಾಠ
ನೋಡೀ ಮರವ, ಬದುಕಿನ ಹೊಲೆಯಿಲ್ಲ
ಉಪಕಾರಿ ಉಪದ್ರವಿಯಲ್ಲ
ಆನಂದವನುಭವಿಸು, ಸಲಿಸು ಧನ್ಯತೆ”

ಮುಂದಿದ್ದ ಮೇಜು ಕುಟ್ಟಿ ನುಡಿದ ಕಾರ್ಸೊ:
“ಅಂಥ ಸಾಧು ವೃಕ್ಷಕ್ಕೆ
ಇದೇ ನಾವು ತೋರಿದ ಕೃತಜ್ಞತೆ”

ನಿಸಾರ್ ಅಹಮದ್ ಅವರು ಮೇಜಿನ ಮೇಲೆ ಬರೆದ ಜಬರ್ದಸ್ತಾದ ಒಂದು ಕವಿತೆ ಇದು. ಅಲ್ಲಿ ಮೇಜು ಒಂದು ಇಮೇಜಾಗಿ ಪ್ರಯೋಗಗೊಂಡಿದೆ. ವೈ.ಎನ್.ಕೆ ಅವರ ಚೇಷ್ಟೆಯ ಬುದ್ಧಿ ಈ ವಾಸ್ತವದಲ್ಲೇ ಒಂದು ಚಮತ್ಕಾರದ ಪನ್ನನ್ನು ಸೃಷ್ಟಿಸುತ್ತದೆ. ನಿಸಾರ್ ಅವರ ಕವಿತೆಗಳಲ್ಲಿ ಮೇಜುಗಳೂ ಇಮೇಜುಗಳಾಗುತ್ತವೆ!

ಹಕ್ಕಿ ಹಾರುತಿದೆ ನೋಡಿದಿರಾ? ಎಂಬ ಪದ್ಯವನ್ನು ಬರೆದು ಸಹಸ್ರಾರು ಕನ್ನಡಿಗರನ್ನು ಮಂತ್ರಮುಗ್ಧರನ್ನಾಗಿ ಮಾಡಿದ ಬೇಂದ್ರೆ ಬೆಕ್ಕು ಹಾರುತಿದೆ ನೋಡಿದಿರಾ? ಎಂದು ತಮ್ಮ ಗಹನಗಂಭೀರ ಕವಿತೆಯನ್ನು ತಾವೇ ಹಗುರಗೊಳಿಸಿ ಬರೆದ ಅಣಕವಾಡು ಶ್ರೇಷ್ಠವಾದ ಅಣಕುವಾಡುವಿನ ಮಾದರಿಯಂತಿದೆ. ಹಾಗೆ ತಮ್ಮ ಮಹತ್ವದ ರಚನೆಯನ್ನ ತಾವೇ ಅಣಕಿಸುವುದಕ್ಕೆ ಅದ್ಭುತವಾದ ಒಂದು ನಿರ್ಲಿಪ್ತಿ ಬೇಕಾಗುವುದು. ಅದು ಬೇಂದ್ರೆಯನ್ನು ಬಿಟ್ಟು ಬೇರೆ ಕವಿಗಳಲ್ಲಿ ಕಾಣುವುದು ವಿರಳ. ವ್ಯಂಗ್ಯ ಸುಲಭ; ಆತ್ಮವ್ಯಂಗ್ಯ ಕಡುಕಷ್ಟ. ಅದಕ್ಕೆ ಅಪಾರವಾದ ಆತ್ಮವಿಶ್ವಾಸ ಮತ್ತು ಅನಾದೃಶವಾದ ಆತ್ಮವಿರತಿ ಎರಡೂ ಬೇಕಾಗುತ್ತದೆ! ಬೆಕ್ಕಿನ ಹಾರಾಟದ ಒಂದು ಸಣ್ಣ ಝಲಕ್ ಗಮನಿಸಿ:

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದುದನು ಕುಡಿದೂ ಕುಡಿದು
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ?
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ?

***
dundi on slideಹೊಸ ಕವಿಗಳಲ್ಲಿ ಓದಲೇ ಬೇಕಾದಂಥ ಅಣಕುವಾಡು ಬರೆದವರು ಚುರುಕು ಕವಿ (ಯಾರು ಚುಟುಕು ಕವಿ ಎಂದವರು?) ಡುಂಡಿರಾಜ. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನುವಂತಿರಬೇಕು. ನುಡಿಯೊಳಗಾಗಿ ನಡೆಯದಿದ್ದಡೆ ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲ ಸಂಗಮದೇವ?. ಬಸವಣ್ಣನವರ ಸುಂದರವೂ ಸುವಿಖ್ಯಾತವೂ ಆದ ಈ ನುಡಿಮೀಮಾಂಸೆಯ ವಚನವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಡುಂಡಿರಾಜ ಬರೆದ ಈ ಅಣಕುವಾಡನ್ನು ಗಮನಿಸಿ.

ಕುಡಿದರೆ ವಾಸನೆ ಬಾರದಂತಿರಬೇಕು
ಕುಡಿದರೆ ಕಣ್ಣು ಕೆಂಪಾಗದಂತಿರಬೇಕು
ಕುಡಿದರೆ ನಾಲಗೆ ತೊದಲದಂತಿರಬೇಕು
ಕೈಕಾಲು ಅತ್ತಿತ್ತ ಕದಲದಂತಿರಬೇಕು
ಕುಡಿದದ್ದು ತಲೆಗೆ ಏರದಂತಿರಬೇಕು
ಏರಿದರೂ ಏರಿದ್ದು ತೋರದಂತಿರಬೇಕು
ಕುಡಿದಿದ್ದೇ ಮರೆತು ಹೋಗದಂತಿರಬೇಕು
ಸ್ವತಂತ್ರವಾಗಿ ನಿಮ್ಮ ಮನೆಗೇ ಹೋಗುವಂತಿರಬೇಕು
ಮನೆಗೆ ಹೋಗಿ ಕುಡಿದರೂ ಕುಡಿಯಲಿಲ್ಲವೆಂದಡೆ
ಮಡದಿ ಮೆಚ್ಚಿ ಅಹುದಹುದೆನಬೇಕು.

ಇಂಥ ಚೆಲುವಾದ ಅಣಕುವಾಡುಗಳನ್ನು ಓದಿದಾಗ ನನಗನ್ನಿಸುತ್ತೆ: ಸಾಲುದೀಪದ ಬೆಳಕಲ್ಲಿ ಝಗಝಗಿಸುವ ಮೂಲವಿಗ್ರಹದ ಹಿಂದೆ ಸಾವಿರಾರು ನೆರಳುಗಳು….!

‍ಲೇಖಕರು Admin

December 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Sarojini Padasalagi

    ” ಕಾವ್ಯ ಎನ್ನುವುದು ತಪಸ್ಸು ” ಎಂದು ಹೇಳುತ್ತ ಲಲಿತ ಕವನಗಳ ಸೌಂದರ್ಯವನ್ನೂ , ಲಾಲಿತ್ಯವನ್ನೂ ಸುಲಲಿತವಾಗಿ ,ತಾವರೆಯ ಬಾಗಿಲನ್ನು ತೆರೆದಷ್ಟೇ ನಾಜೂಕಾಗಿ ಹೇಳಿರುವ ರೀತಿ ಅನುಪಮ .ಅವನ್ನ ಸಹಜವಾಗಿ ಮಕ್ಕಳ ಚಿನ್ನಾಟಕ್ಕೆ ಹೋಲಿಸಿರುವುದು ಸುಂದರ.ತಮ್ಮ ಬಗ್ಗೆಯೇ ವಿಡಂಬನಾತ್ಮಕವಾಗಿ ಬರೆಯಲು ಬೇಕಾದ ನಿರ್ಲಿಪ್ತತೆ ದೊಡ್ಡ ಜೀವಿಗಳಿಗೇ ಸಾಧ್ಯ.ಅದೇ ರೀತಿ ಕವಿಗಳ ಸದಭಿರುಚಿಯ ತಮಾಷೆ , ಅಣಕುವಾಡುಗಳು ಮನಕ್ಕೆ ಮುದವೀಯುತ್ತವೆ ಮಕ್ಕಳ ಚಿನ್ನಾಟದ ಥರ.ಮನಕ್ಕೆ ನಾಟುವಂತೆ ಬರೆದ ಎಚ್.ಎಸ್. ವಿ. ಯವರ ಶೈಲಿಗೆ ಏನ್ಹೇಳಲಿ ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: