
ಗಿರೀಶ ಜಕಾಪುರೆ
ಗಜಲ್
ಹೊತ್ತಲ್ಲದ ಹೊತ್ತಲ್ಲಿ ಬಂದು ನಿನ್ನ ನೆನಪು ಕಾಡುವುದೇಕೆ?
ಮರೆತೆನೆಂದರೂ ಮರೆಯಲು ಬಿಡದೇ ಹೀಗೆ ಕಾಡುವುದೇಕೆ?
ಎದೆಹಾಲು ಕುಡಿಸಿದೆ, ತೂಗಿ ಜೋಗುಳವನೂ ಹೇಳಿದೆ
ಮತ್ತೆ ಎಳೆಗೂಸು ರಚ್ಚೆ ಹಿಡಿದು ಹೀಗೇ ಕಾಡುವುದೇಕೆ?
ಇಡೀ ದೇಹ ರೂಹ ತುಂಬಿದೆ ನಿನ್ನ ವಿರಹದ ನಿಗಿ ನಿಗಿ ಕೆಂಡ
ತಂಗಾಳಿಯಲಿ ಬಂದು ಕೊರೆವ ಚಳಿ ಹೀಗೇ ಕಾಡುವುದೇಕೆ?

ಇಳಿಹೊತ್ತಲಿ ಏನಾಗುತ್ತದೋ ನಾನೂ ಕವಿಯಾಗುತ್ತೇನೆ
ಕತ್ತಲಾಗುತ್ತಲೇ ಗಾಲಿಬ್ ನನ್ನ ಮೈಹೊಕ್ಕು ಕಾಡುವುದೇಕೆ?
ಹಿಂಸರಿಯಲು ಬಿಡದೆ, ಮುಂದುವರಿಯಲೂ ಬಿಡದೇ
ನನ್ನ ನೆರಳು ನನ್ನ ಕಾಲಡಿ ಸಿಲುಕಿ ಹೀಗೆ ಕಾಡುವುದೇಕೆ?
ಬರುವುದಿದ್ದರೆ ಬಂದು ಒಮ್ಮೆ ಬಿಗಿದಪ್ಪಿಕೊಂಡು ಬಿಡು ‘ಜೀವ’
ಎದುರಾಗಿ ಮರೆಯಾಗಿ ನೀನು ಹೀಗೆ ಕಾಡಿ ಕಾಡುವುದೇಕೆ?







0 Comments