ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕತೆ ಮುಗಿದು ಹೋಗಿದೆ

ಪ್ರವೀಣ

ಮಾಲ್ಡೀವ್ಸ್ ನಿಂದ

ಕತೆಯೆಲ್ಲ ಮುಗಿದು ಹೋಗಿದೆ
ಇನ್ನು ಬಗೆಯುವುದೇನಿದ್ದರೂ ಮಣ್ಣು
ಮಣ್ಣಿನಲ್ಲಿ ಸುಳಿದಾಡುವ ಜಿಗುಟು ಹುಳುಗಳು.
 
ಬೇರೆ ದಿನವಾಗಿದ್ದರೆ ನಾನು ಇಷ್ಟು ನಿರಾಳ ಇರುತ್ತಿರಲಿಲ್ಲ,
ಸದಾ ಒಂದಿಲ್ಲೊಂದು ಕ್ರಿಮಿಕೀಟಗಳು
ನನ್ನ ತಲೆಯಲ್ಲಿ ಗಿಜಿಗುಡುತ್ತಿದ್ದವು,
ಎಷ್ಟೋ ದಿನಗಳ ಬಳಿಕ ಇಂದು
ತಲೆಗೆ ಪತಪತನೆ ಎಣ್ಣೆ ಸುರಿದುಕೊಂಡು
ಗಡಿಬಿಡಿಯಿದ್ದರೂ ಚೆನ್ನಾಗಿ ಶಾಂಪೂ ಹಾಕಿ
ಮೈಯೆಲ್ಲ ಉಜ್ಜಿಕೊಂಡು ತಲೆ ಶಾಂತವಾಗುವವರೆಗೆ
ನೀರು ಹುಯ್ದುಕೊಂಡು ಸ್ನಾನ ಮಾಡಿದ್ದೆ.
ಮೇಲಾಗಿ ರಾತ್ರಿಯೆಲ್ಲ ಮಳೆ ಸುರಿದಿದ್ದಕ್ಕೆ
ರಸ್ತೆಯೆಲ್ಲ ತಂಪು ತಂಪಾಗಿತ್ತು ಈ ಮಾರ್ಚ್ ನ ಬಿಸಿಲಿನಲ್ಲೂ.

ಗಾಳಿಗೆ ಅದುರುವ ಆಕಾಶ
ನೀರಿಗೆ ಬೆದರುವ ಜಿಂಕೆ
ಹೂವುಗಳ್ಯಾಕೋ ಮೊಗ್ಗಿನಲೇ ಕಮರಿ ಹೋಗುತ್ತಿದ್ದವು
ಸೂರ್ಯನಿಗೆ ನಿತ್ರಾಣ, ಸಮುದ್ರಕ್ಕೆ ಸುಸ್ತು
ದೃಷ್ಟಿ ಕಳೆದುಕೊಂಡು ದಿಶಾಹೀನ ಹಾರುತ್ತಿರುವ ಬೆಳ್ಳಕ್ಕಿ ಸಾಲು.
 
ಇದೀಗ ಬಂದ ಸುದ್ದಿ;
ಕೊಲೆಯಾದ ಮನಸ್ಸುಗಳಿಗೆಲ್ಲ ರಕ್ತಬೀಜಾಸುರನ
ವರ್ಣತಂತುಗಳ ಕಸಿಕಾರ್ಯ ಭರ್ಜರಿ ಸಾಗುತ್ತಿದೆ.
ಆಯುಧ ತಯಾರಕರ ಶೇರು ಬೆಲೆ ಉಲ್ಬಣದ ಕಾರಣ
ಶೇರು ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗಾಢವಾಗಿ ತಬ್ಬುವ ಬಳ್ಳಿಗಳೆಲ್ಲ ನೆತ್ತರು ಒಸರುತ್ತ
ನೆಟ್ಟಗೆ ನಿಂತ ಮರಗಳ ಬೇರು ಸಡಿಲಾಗಿ ಜೋತು ಬಿದ್ದಿವೆ.
 
ಕತೆ ಮುಗಿದ ಮೇಲೆ ನೀತಿ ಹೇಳುತ್ತೀರಿ
ಅರ್ಥವಾಗುವುದೇ ಇಲ್ಲ.
ಮೊದಲೇ ಹೇಳಿದ್ದರೆ ಕತೆಯನ್ನಾದರೂ ತಿರುಚಬಹುದಿತ್ತು.
 
ನಮ್ಮನೆಯ ಹೊಸಿಲಿಗೆ ಹೊರಹೋಗಲೆಂದು
ಬಿಟ್ಟ ತೂಬಿನಿಂದ ನೆರೆಯ ನೀರು ಮನೆ ಮುಳುಗಿಸುತ್ತಿದೆ.
ನೀರೆತ್ತಿ ಎತ್ತಿ ಎಸೆದು ಕೈಗಳು ಸೇದು ಹೋಗಿವೆ
ಮೊದಲು ತೂತು ಮುಚ್ಚುವ ಯೋಚನೆ ಯಾರಿಗೂ ಇಲ್ಲ.
 
ಗಳಗಳನೆ ಅತ್ತು ಬಿಡುವಾ ಎಂದರೆ
ಒತ್ತಿ ಬರುತ್ತಿರುವ ಕುಹಕ ನಗೆಯನ್ನು ತಡೆಯುವ ದಾರಿ ಗೊತ್ತಿಲ್ಲ.
ಕುಡಿಯುವುದನ್ನು ಬಿಟ್ಟು ಬಿಡುವಾ ಎಂದರೆ
ಸೆಳೆದುಕೊಳುತಿರುವ ನಿನ್ನ ಸೌಂದರ್ಯಕೆ ಪರದೆ ಸಿಗುತ್ತಿಲ್ಲ.
 
ಕೇಂದ್ರವಿಲ್ಲದ ವೃತ್ತಾಂತವನು ಕತೆ ಎಂದು ಹೇಳಿ
ಎಷ್ಟು ಜನರನ್ನು ಯಾಮಾರಿಸಿದ್ದಾರೋ?
ಉಳಿಯುವುದು ಬಗೆಯುವುದೊಂದೇ ಕೆಲಸ
ಬಳಿಯುವುದು ಹೆಚ್ಚಾಗಿ ನೆಲಕೆ ಚೆಲ್ಲಿದ ಅನ್ನ.

‍ಲೇಖಕರು G

12 July, 2013

3 Comments

  1. ಇಂದ್ರಕುಮಾರ್ ಎಚ್.ಬಿ.

    ಚೆನ್ನಾಗಿದೆ.

  2. vinayak.shanbag

    Uttamavagide

  3. vijayalakshmi

    chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading