ಸದಾಶಿವ್ ಸೊರಟೂರು
ನಾವು ಕತ್ತಲೆಯನ್ನು
ದೂರುತ್ತೇವೆ
ಅದೇ ಕತ್ತಲೆಯ ಒಡಲೊಳಗಿಂದ
ಬೆಳಕು ಹುಟ್ಟುತ್ತದೆ
ಎಂದು ನಮಗೆ ತಿಳಿಯುವುದೇ ಇಲ್ಲ
ನಾವು ದೀಪವಾಗಲು
ಹವಣಿಸುತ್ತೇವೆ
ಆದರೆ ನಮ್ಮನ್ನು ನಾವು
ಸುಟ್ಟುಕೊಳ್ಳಲು ಯಾವತ್ತೂ
ಸಿದ್ದರಿರುವುದಿಲ್ಲ

ದೀಪ ಹಚ್ಚಿ ಸಂಭ್ರಮಿಸುವ
ನಾವು
ತನ್ನನ್ನೇ ಸುಟ್ಟುಕೊಂಡ
ಬತ್ತಿಯ ಕರುಕನ್ನು ನೋಡುವುದಿಲ್ಲ
ನಾನು ಎಂಬ ಗದ್ದಲದಲ್ಲೇ
ಮುಳುಗಿರುವ ಜಗತ್ತಿಗೆ
ಸದ್ದೇ ಮಾಡದೇ ತಣ್ಣಗೆ
ಉರಿದು ಬೆಳಕು ಕೊಡುವ
ದೀಪದ ಗುಣ ಅರಿವಾಗುವುದೇ ಇಲ್ಲ
ದೀಪದಿಂದ ದೀಪ ಬೆಳಗುತ್ತದೆ
ಬೆಳಕಿನಿಂದ ಮತ್ತಷ್ಟು ಬೆಳಕು
ಈಗ ಮಾನವೀಯತೆದೆ ಪ್ರಶ್ನೆ
ಒಬ್ಬೊಬ್ಬನು ಒಂದೊಂದು
ನಡು ದ್ವೀಪ!

ಪರಸ್ಪರ ತಾಡಿಸಿದರಷ್ಟೇ
ಬೆಂಕಿ ಹೊತ್ತಿಕೊಳ್ಳುವುದಿಲ್ಲ
ಪ್ರೀತಿಯ ವಿಳಾಸಬೇಕು
ಒಬ್ಬೊರನ್ನೊಬ್ಬರು
ಅಪ್ಪಿಕೊಂಡರಷ್ಟೇ ಸಾಲದು
ಒಲವಿನ ಸೆಲೆಯಿರಬೇಕು
ಬೆಳಕೇ ಇಲ್ಲದೆ ನಡೆಯಬಹುದು
ಆದರೆ ಕನಸುಗಳಾದರೂ ಬೇಕು
ಒಂದಾದರೂ ಕನಸು ಮೂಡಲು
ಕಣ್ಣಿನೊಳಗೊಂದು ದೀಪ
ಉರಿಯಬೇಕು






0 Comments