ಗಾರ್ಗ್ಯ
ಧ್ರುವಗಳನು ಜತೆಗೊಳಿಸುವ
ಛಲದಲೊಪ್ಪಿದವರು
ಜಲದ ಬಿಂದುವ ಹುಡುಕಿ
ಜಗದ ದಾಹವ ಕಳೆವ
ಮಾತು ಕೊಟ್ಟು
ಜತೆ ತಂದ ಕೈಚೀಲವನ್ನೂ ಇಲ್ಲೇ ಬಿಟ್ಟು
ಎಲ್ಲಿ ಹೋದರು ಅವರು?
ಸುಮ್ಮನೆ ತೇಲಿ ಹೋದವು ಮೋಡಗಳು
ಎಲ್ಲಿಗೆ ಹೋದವು ಅವು?
ಹಕ್ಕಿ ಬಾಂದಳದಲ್ಲಿ ಚೆಲ್ಲಿದ ಗರಿ
ತೇಲುತ್ತಾ ತೇಲುತ್ತಾ ತೇಲುತ್ತಾ
ಕಣ್ಣಾಚೆಗಾಯಿತು
ಎಲ್ಲಿಗದು ಹೋಯಿತು?
ಎಷ್ಟೆಲ್ಲ ಆಕಾಶಗಳು ಬಂದಿಳಿದೊ
ಮನಕೇಕೆ ಬಾರಲಿಲ್ಲ?
ಚಂದಿರನ ನಗುವಲ್ಲಿ ತಾರೆಗಳ ಕೇಕೆಯಲಿ
ಅರಮನೆಯು ಮೀಯುವಾಗ
ಅಂತಃಪುರದಲ್ಲೇಕೆ ಮನಸುಗಳು ಅನುಗೊಳ್ಳಲಿಲ್ಲ?
ಹೇಳುತ್ತೀರಾ ಭಾಗವತರೆ
ಎಂದು ಕೇಳುವಾಗ-
ಅರೆ! ಭಾಗವತರೆಲ್ಲಿ ಚೌಕಿಯಿಂದ?





’ಸುಮ್ಮನೆ ತೇಲಿ ಹೋದವು…’ ಆ ಇಡೀ ಪದ್ಯ ಇಲ್ಲದಿದ್ದರೂ ನಡೆಯುತಿತ್ತು ಅಂತ ಅನಿಸಿತು. ನಂತರದ ಪದ್ಯ ಹಾಗು ಮೊದಲ ಪದ್ಯಗಳ ನಡುವೆ ಇದು ಸ್ವಲ್ಪ ಸಡಿಲಾದ ಹಾಗಾಯಿತು. ಅಥವ ನನ್ನ ಗ್ರಹಿಕೆ ಸರಿಯಿಲ್ಲ 🙂
ನಗುವಲ್ಲಿ ಅಂತ ಇರುವುದರ ಬದಲು ನಗುವಿನಲಿ ಅಂತಿದ್ದರೆ ನವಿರಾಗುತ್ತಿತ್ತು ಅಲ್ಲವ?.
ಖಾಲಿ ಚೌಕಿಯನ್ನು ಉಳಿಸಿ ಹೋದ ಕೊನೆಯ ಸಾಲು ಹಿಡಿಸಿತು.
-ವಿಕ್ರಮ ಹತ್ವಾರ