ಕಡಿದಾಳ್ ಪ್ರಕಾಶ್ ರ ‘ಕಟ್ಟುವ ಹಾದಿಯಲ್ಲಿ’ ಪುಸ್ತಕ ಬಿಡುಗಡೆ…

ಟಿ ಕೆ ಆರ್

‘ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ ” – ಕಡಿದಾಳ್ ಪ್ರಕಾಶ್ ರ ‘ಕಟ್ಟುವ ಹಾದಿಯಲ್ಲಿ’ ಪುಸ್ತಕ ಬಿಡುಗಡೆಗೊಳಿಸಿ ಅಭಿಪ್ರಾಯಪಟ್ಟ ಡಾ.ಓ.ಎಲ್. ನಾಗಭೂಷಣ

‘ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ”. ಪುಸ್ತಕದ 28 ಅಧ್ಯಾಯಗಳಲ್ಲಿ ನೂರಾರು ಜನರ ಶ್ರಮವನ್ನು ದಾಖಲಿಸಲಾಗಿದೆ‌. ಕುವೆಂಪು ಅವರ ಕವಿತೆಗಳ ಸಾಲುಗಳನ್ನು ನಾವೆಲ್ಲ ಕೇಳಿದ್ದರೂ, ಈ ಪುಸ್ತಕದಲ್ಲಿ ಈ ಕವಿತೆಗಳಿಗೆ ಕಲ್ಪಿಸಲಾಗಿರುವ ವಿಶೇಷ ಸ್ಥಾನಗಳಿಂದಾಗಿ ಇದು ಇನ್ನೂ ಹೆಚ್ಚು ಹತ್ತಿರವಾಗುತ್ತದೆ. ಹೀಗಾಗಿ ಇದು ಕುವೆಂಪು ಅವರ ಕುರಿತ ಪುಸ್ತಕವೂ ಹೌದು ಎಂದು ಮೈಸೂರಿನ ಖ್ಯಾತ ವಿಮರ್ಶಕ ಡಾ. ಓ.ಎಲ್. ನಾಗಭೂಷಣ ಸ್ವಾಮಿ ಅವರು ಅಭಿಪ್ರಾಯಪಟ್ಟರು.

ಕುಪ್ಪಳಿ ರಾಷ್ಟ್ರ ಕವಿ ಕುವೆಂಪು ಪ್ರತಿಷ್ಟಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಕಡಿದಾಳಿನ ಮನೆಯಂಗಳದಲ್ಲಿ ನ.11 ರಂದು ಸಂಜೆ ಕಡಿದಾಳ್ ಪ್ರಕಾಶ್ ಅವರು ಬರೆದಿರುವ ಕುವೆಂಪು ಪ್ರತಿಷ್ಟಾನ : ಉಗಮ- ವಿಕಾಸದ ಕುರಿತ ‘ಕಟ್ಟುವ ಹಾದಿಯಲ್ಲಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಓ.ಎಲ್. ನಾಗಭೂಷಣ ಅವರು, ಒಂದು ಮಿತವಾದ, ಹಿತವಾದ ಯಾವುದೇ ಉತ್ಪ್ರೇಕ್ಷೆಯಿಲ್ಲದ ಬರಹ ಇಲ್ಲಿದೆ ಎಂದು ಹೇಳಿದರು.

ಕುವೆಂಪು ಅವರು ಅನಿಕೇತನರಾದ ದಿನವೇ ಈ ಪುಸ್ತಕದ ಬಿಡುಗಡೆಯ ಅವಕಾಶ ಸಿಕ್ಕಿರುವುದು ಮತ್ತು ತನ್ನ ಬಾಲ್ಯದಲ್ಲಿ ಅಪ್ಪ ತಂದು ಕೊಟ್ಟ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರು ಬರೆದಿರುವ ‘ಪಂಜರವಳ್ಳಿಯ ಪಂಜು’ ಪುಸ್ತಕವನ್ನು ಓದಿ ಖುಷಿಪಟ್ಟ ಕಡಿದಾಳು ಗ್ರಾಮಕ್ಕೆ ಇದೇ ಮೊದಲ ಭೇಟಿ ನೀಡುವ ಅವಕಾಶ ಸಿಕ್ಕಿರುವುದು ತನ್ನ ಸುದೈವವೆಂದು ಭಾವಿಸುವುದಾಗಿ ಹೇಳಿದ ನಾಗಭೂಷಣ ಸ್ವಾಮಿ ಅವರು, ಕುವೆಂಪು ಅವರು ಜಾಸ್ತಿ ತಿರುಗಾಡಿದವರಲ್ಲ. ಆದರೆ ಮನಸ್ಸನ್ನು ಒಂದೇ ಕಡೆ ನೆಲೆ ಮಾಡಿಕೊಂಡು ಬೇರು ಬಿಟ್ಟು ಇಲ್ಲಿಯ ಪರಿಸರದ ಸಂಗತಿಗಳನ್ನು ಮತ್ತು ತಮ್ಮ ಪ್ರತಿಭೆಯನ್ನು ಸಾಹಿತ್ಯದ ಮೂಲಕ ನಾಲ್ಕೂ ದಿಕ್ಕುಗಳಿಗೂ ಚಾಚಿದ ಮಹಾ ಲೇಖಕ ಎಂದು ಹೇಳಿದರು.
ಕುವೆಂಪು ಅವರು ಭಾಷೆಗೆ ತಿರುವು ಕೊಟ್ಟು ಹೊಸದೊಂದು ಕಣ್ಣು ಕೊಟ್ಟ ಯುಗದ ಕವಿಯಾಗಿದ್ದಾರೆ. ತಾನು ವಿದ್ಯಾರ್ಥಿಯಾಗಿದ್ದಾಗ ಕುವೆಂಪು ಕುರಿತು ತಮ್ಮ ಮೇಷ್ಟ್ರುಗಳು ಒಲವು ಹೊಂದಿಲ್ಲದಿದ್ದರೂ, ಕುವೆಂಪು ಅವರ ‘ ಅಜ್ಜಯ್ಯನ ಅಭ್ಯಂಜನ’ದಂತಹ ಬರಹವನ್ನು ಓದಿ ಬಹಳಷ್ಟು ಪ್ರಭಾವಿತನಾಗಿದ್ದೆ ಎಂದು ನಾಗಭೂಷಣ ಸ್ವಾಮಿ ನುಡಿದರು.

ಇಂದು ಕನ್ನಡ ಮುದುಕರ ಕನ್ನಡವಾಗುತ್ತಿದ್ದು, ಹೊಸ ತಲೆಮಾರಿನವರು ಕನ್ನಡದಿಂದ ದೂರವಾಗುತ್ತಿರುವ ಬಗ್ಗೆ ಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಲೇಖಕ ಡಾ.ಕೆ. ಪುಟ್ಟಸ್ವಾಮಿ ಅವರು ಮಾತನಾಡಿ ಕುವೆಂಪು ಅವರು ಯೋಚನಾ ಲಹರಿಗೆ ತಿರುವು ಕೊಟ್ಟವರು ಎಂದರಲ್ಲದೆ, ಪ್ರತಿಷ್ಟಾನವನ್ನು ಕಟ್ಟುವಲ್ಲಿ ಪ್ರಕಾಶ್ ಅವರು ನಿರ್ವಹಿಸಿದ ಕಾಳಜಿ ಪರಿಶ್ರಮವನ್ನು ಪ್ರಶಂಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರ ಕವಿ ಕುವೆಂಪು ಪ್ರತಿಷ್ಟಾನದ ಪ್ರಭಾರ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಅವರು, ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರ ಪ್ರಾಮಾಣಿಕತೆ ಮತ್ತು ಬದ್ದತೆಯನ್ನು ಉದಾಹರಣೆಗಳೊಂದಿಗೆ ಸ್ಮರಿಸಿದರು. ಹಾಗೆಯೇ ಕುವೆಂಪು ಅವರು ಸೈದ್ದಾಂತಿಕವಾಗಿ ತೆಗೆದುಕೊಳ್ಳುತ್ತಿದ್ದ ದಿಟ್ಟ ನಿಲುವುಗಳನ್ನು ಶ್ಲಾಘಿಸಿದರು. ಅರಮನೆಗೆ ಬಂದು ಪಾಠ ಮಾಡಬೇಕೆಂಬ ಮಹಾರಾಜರ ಆದೇಶವನ್ನು ಕುವೆಂಪು ಧಿಕ್ಕರಿಸಿದ್ದರು. ಆದರೆ ಇಂದು ತಮಗೆ ತೊಂದರೆಯಾಗುತ್ತದೆಯೆಂದರೆ ಅನುಕೂಲ ಸಿಂಧು ಧೋರಣೆ ಅನುಸರಿಸುವುದನ್ನು ಕಾಣುತ್ತೇವೆ. ಹೀಗಾಗಿಯೇ ಈಗಿನ ಪರಿಸ್ಥಿತಿ ಅವಲೋಕಿಸಿದಾಗ ಕುವೆಂಪು, ಲಂಕೇಶ್, ಅನಂತಮೂರ್ತಿ, ಚಂದ್ರಶೇಖರ ಪಾಟೀಲರು, ತೇಜಸ್ವಿಯಂತವರು ಇರಬೇಕಾಗಿತ್ತು ಎಂದು ಅನಿಸುತ್ತದೆ ಎಂದರು.

ಕುವೆಂಪು ಪ್ರತಿಷ್ಟಾನ ಕಟ್ಟುವಲ್ಲಿ ಪ್ರಕಾಶರ ಪರಿಶ್ರಮವನ್ನು ನೆನಪು ಮಾಡಿಕೊಂಡು ಅವರನ್ನು ಶಂಕರ್ ಶ್ಲಾಘಿಸಿದರಲ್ಲದೆ, ಪ್ರಕಾಶ್ ಅವರು ಪ್ರತಿಷ್ಟಾನದ ಕಾರ್ಯದರ್ಶಿಯಾಗಿರುವುದರಿಂದಲೇ ಅವರು ಚೆನ್ನಾಗಿ ನಿರ್ವಹಿಸುತ್ತಾರೆ ಎನ್ನುವ ಕಾರಣದಿಂದಾಗಿಯೇ ಪ್ರಭಾರ ಅಧ್ಯಕ್ಷರಾಗಲು ಒಪ್ಪಿಕೊಂಡೆ ಎಂದು ತಿಳಿಸಿದರು.

ಶ್ರೀಮತಿ ಶ್ರೀರಾಮ್ ಪ್ರಾರ್ಥಿಸಿದರು. ಕಡಿದಾಳ್ ಪ್ರಕಾಶ್ ಸ್ವಾಗತಿಸಿ, ಪುಸ್ತಕ ಬರೆಯಲು ಕಾರಣವಾದ ಅಂಶಗಳನ್ನು ಪ್ರಾಸ್ತಾವಿಕವಾಗಿ ಹೇಳಿದರು. ಪ್ರತಿಷ್ಟಾನದ ಕೋಶಾಧ್ಯಕ್ಷ ಮನದೇವ್ ವಂದಿಸಿದರು. ಲೇಖಕ ನೆಂಪೆ ದೇವರಾಜ್ ಸೊಗಸಾಗಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಪ್ರಕಾಶ್ ಕುಟುಂಬದ ಸದಸ್ಯರು ಕಲ್ಪನಾ ಪ್ರಕಾಶ್ ದಂಪತಿಯನ್ನು ಸನ್ಮಾನಿಸಿದರು.

‍ಲೇಖಕರು Admin

November 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: