ಕಡಿದಾಳು ಶಾಮಣ್ಣ ಕಂಡಂತೆ..

ಡಾ ಬಿ ಆರ್ ಸತ್ಯನಾರಾಯಣ ಅವರು ಸಂಪಾದಿಸಿರುವ ‘ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ’ ಕೃತಿಯಿಂದ ಆಯ್ದ ಲೇಖನ

ಕಡಿದಾಳು ಶಾಮಣ್ಣ

ಚಿತ್ರ: ರಾಮು

ಪುಸ್ತಕ  ಫೋಟೋ ಕೃಪೆ: ಬಿ ಆರ್ ಸತ್ಯನಾರಾಯಣ

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ರೀ ಅಲಿಗೆ ಪುಟ್ಟಯ್ಯನಾಯಕರ ಹೆಸರನ್ನು ಕೇಳದವರೇ ಇಲ್ಲ, ಪರಿಚಯ ಇಲ್ಲದವರೇ ಇಲ್ಲ. ಕಾರಣ ಉತ್ತಮ ಕೃಷಿಕರು, ಸ್ನೇಹ ಜೀವಿ ಮತ್ತು ಕುವೆಂಪುರವರಿಗೆ ತುಂಬಾ ಪರಿಚಯಸ್ತರಾಗಿದ್ದವರು. ಅವರ ಮನೆಗೆ ಹೋಗಿ ಅವರ ಆತಿಥ್ಯವನ್ನು ಸ್ವೀಕರಿಸದವರೇ ಇಲ್ಲ ಎನ್ನಬಹುದು. ಅಪ್ಪಟ ಗಾಂಧಿವಾದಿಗಳಾಗಿದ್ದ ಸರಳ ಹಾಗೂ ಸೂಕ್ಷ್ಮಮತಿಯಾಗಿ ಬದುಕಿದವರು. ನೋಡುವುದಕ್ಕೆ ಗಿಡ್ಡನೆಯ ಸದಾ ನಗುಮೊಗದವರಾಗಿದ್ದರು.

ಕುವೆಂಪುರವರ ಪರಿಚಯವಿದ್ದವರಿಗೆಲ್ಲ ಅಲಿಗೆ ಪುಟ್ಟಯ್ಯನಾಯಕರನ್ನೂ ಚೆನ್ನಾಗಿಯೇ ತಿಳಿದುಕೊಂಡಿರುತ್ತಾರೆನ್ನುವುದು ಸಾಧಾರಣವಾದ ವಿಚಾರವಾಗಿತ್ತು. ಶ್ರೀ ನಾಯಕರು ತಮ್ಮ ಮನೆಯಲ್ಲಿ ದೊಡ್ಡ ಪುಸ್ತಕ ಭಂಡಾರವನ್ನು ಇಟ್ಟಿದ್ದರು. ಮತ್ತೂ ತುಂಬಾ ಓದುವ ಹವ್ಯಾಸ ಇಟ್ಟುಕೊಂಡಿದ್ದರು. ಅವರ ಮನೆಯ ಮಹಡಿಯಲ್ಲಿ ಹಿಂದಿನ ತಾಳೆಯ ಗರಿಗಳ ಕಟ್ಟುಗಳನ್ನು ಸಂಗ್ರಹಿಸಿ ಕೂಡಿಟ್ಟಿದ್ದರು. ಯಾರಾದರೂ ವಿದ್ವಾಂಸರು ಕುಪ್ಪಳಿಗೆ ಕುವೆಂಪುರವರ ಜೊತೆಗೆ ಬಂದರೆ ಅವರನ್ನು ತಾವು ತಮ್ಮ ಮನೆಗೆ ಕರೆದೊಯ್ದು ಈ ಹಳೆಯದಾದ ಓಲೆಯ ಗರಿ ಗ್ರಂಥಗಳನ್ನು ತೋರಿಸಿ, ಅದು ಯಾವ ವಿಷಯಕ್ಕೆ ಸಂಬಂಧಿಸಿದ್ದೆಂದು ತಿಳಿದುಕೊಳ್ಳುವ ಕುತೂಹಲದವರಾಗಿದ್ದರು. ಆಗಾಗ ತಮ್ಮ ಮನೆಯಲ್ಲಿ ಮಹಾಭಾರತ, ರಾಮಾಯಣವನ್ನು ಗಮಕಿಗಳಿಂದ ವಾಚನ ಮಾಡಿಸಿ ತಾವೂ ಕೇಳಿ ಸುತ್ತಮುತ್ತ ಇರುವವರಿಗೂ ಕೇಳಿಸುವ ಹವ್ಯಾಸ ಇದ್ದವರಾಗಿದ್ದರು. ಒಂದು ಸಾರಿ ಶ್ರೀ ಹೊಸಬಾಳೆ ಸೀತಾರಾಮರಾಯರನ್ನು ಕರೆಸಿ ಅವರಿಂದ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿಸಿದ್ದನ್ನು ನಾನೂ ಕೇಳಿದ್ದೇನೆ. ಇವರ ಮನೆಯಲ್ಲಿ ಈ ರೀತಿಯಾದ ಸಾಂಸ್ಕೃತಿಕ ಕಾರ್ಯಕ್ರಮ ಆಗಾಗ ನಡೆಯುತ್ತಲೇ ಇರುತ್ತಿತ್ತು.

ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ನನಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು, ಡಾ|| ಸುಜನರವರು ಮತ್ತು ಪೂರ್ಣಚಂದ್ರ ತೇಜಸ್ವಿಯವರು ನನ್ನ ಜೊತೆ ಕುಪ್ಪಳಿಗೆ ಬರುವುದಾಗಿ ತಿಳಿಸಿದರು. ನಾನೊಂದು ಅಭಿಪ್ರಾಯವನ್ನು ಹೇಳಿದೆ. ಅದು ಏನೆಂದ್ರೆ, ಮೊದಲು ಕಡಿದಾಳಿಗೆ ತಲುಪುವುದು ಅಲ್ಲೊಂದು ದಿನ ಉಳಿದು ನಂತ್ರ ಶುಂಠೀಕಟ್ಟೆ, ಗಿಣಿಯ, ಆಲೆಮನೆ ಅಲ್ಲಿಂದ ಮುಂದೆ ಸಿಗುವುದೇ ಅಲಿಗೆ ಪುಟ್ಟಯ್ಯನಾಯಕರ ಮನೆ. ಕಡಿದಾಳಿಂದ ಅಲಿಗೆ ಕೇವಲ ಎರಡು ಗಂಟೆಯ ನಡುಗೆಯ ಕಾಡಿನ ಒಳ ದಾರಿಯಾಗಿತ್ತು. ಆ ದಾರಿಯಲ್ಲಿ ಹೋದರೆ ಯಾವ ಟಾರು ರಸ್ತೆಗಳೂ ಸಿಗದೇ ಪೂರ್ಣ ಕಾಡಿನ ಮಧ್ಯೆ ಹಳ್ಳ, ಕಣಿವೆ, ಸಣ್ಣ ಸಣ್ಣ ಗುಡ್ಡ ಹತ್ತಿಳಿಯುತ್ತ, ಎಚ್ಚರಿಕೆಯಿಂದ ಇಂಬಳಗಳು ಕಾಲಿಗೆ ಹತ್ತಿ ರಕ್ತ ಹೀರದಂತೆ ದಾರಿ ಉದ್ದಕ್ಕೂ ಎದುರಾಗುವ ಕಾಡುಕೋಳಿ, ಕೆಂದಳಿಲು, ಕಾಜಾಣ ಕನಿಷ್ಟ ಇವಂತೂ ಖಾತ್ರಿ ನೋಡಲು ಸಿಗುತ್ತವೆಂದು ನಾನು ತೇಜಸ್ವಿ ಆಸೆ ಮಾಡಿಕೊಂಡು ನಮ್ಮ ಗುರುಗಳನ್ನು ಕರೆದುಕೊಂಡು ಕಡಿದಾಳಿಗೆ ಹೋದೆವು.

ಕಡಿದಾಳಿನಿಂದ ಅಲಿಗೆ ಪುಟ್ಟಯ್ಯನಾಯಕರ ಊರಿಗೆ ಹೊರಟೆವು. ಮೊದಲು ದಾರಿಯಲ್ಲಿ ಸಿಗುವುದು ನನ್ನ ಸೋದರ ಮಾವನವರ ಮನೆ ಶುಂಠೀಕಟ್ಟೆ. ಮಾವನವರ ಹೆಸರು ವೆಂಕ್ಟಯ್ಯಗೌಡ್ರು ಎಂದು. ಅವರಿಗೆ ವಯಸ್ಸಾಗಿತ್ತು. ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಅವರ ಮನೆ ಹತ್ತಿರದಲ್ಲೇ ಅಲಿಗೆಗೆ ಒಳ ದಾರಿ ಇರುವುದರಿಂದ ವೆಂಕ್ಟಯ್ಯಗೌಡ್ರ ಮನೆ ಪಕ್ಕದಲ್ಲೇ ಹೋಗಬೇಕಾಗಿತ್ತು. ನಮ್ಮನ್ನು ಕಂಡವರೆ ಅವರೇ ದಾರಿಗೆ ಬಂದು ಮಾತನಾಡಿಸಿ ಇವರೆಲ್ಲ ಯಾರೆಂದು ನನ್ನನ್ನು ಕೇಳಿದರು. ಭಯಂಕರವಾಗಿ ಕೂಗಿ ವಿಷಯ ತಿಳಿಸಿದೆ. ನಮ್ಮ ಗುರುಗಳೆಲ್ಲರ ಹಾಗೂ ತೇಜಸ್ವಿಯ ಪರಿಚಯವನ್ನೂ ತಿಳಿಸಿದೆ.

ತಕ್ಷಣ ‘ಓ ನಮ್ಮ ಕುಪ್ಳಿ ಪುಟ್ಟಪ್ಪನ ಮನೆ ಕಡೆ ಹೋಗುತ್ತಿದ್ದೀರ? ಎಂದ್ರು. ಹಾಗೇ ಮುಂದುವರಿದು, ಪುಟ್ಟಪ್ಪ ದೊಡ್ಡ ಪದವಿ ಪಡೆದಿದ್ದೆಲ್ಲ ಸರಿ, ಒಂದು ಅಮಲ್ದಾರಿಯೋ, ಸೇಕ್ದಾರಿಕೆಗೋ ಸೇರಿಕೊಂಡಿದ್ದರೆ ಚೆನ್ನಾಗಿರ‍್ತಿತ್ತು. ಪುಸ್ತಕ ಬರೆದರೆ ಹೊಟ್ಟೆ ತುಂಬುತ್ತದೆಯೇನ್ರೋ?’ ಎಂದು ಕೇಳಿದರು ಜೊತೆಗೆ ಹಿಂದಿರುಗಿ ವಾಪಸ್ ಹೋಗಬೇಕಾದ್ರೆ ಮನೆಗೆ ಬಂದು ಕಾಪಿ ಕುಡುದು ಹೋಗಿ. ಈಗ ಹೆಂಗಸರೆಲ್ಲ ಹಡ್ಡೆಕಡೆ ದರಗು ತರಕ್ಕೆ ಹೋಗಿದ್ದಾರೆ. ಮನೇಲಿ ಕಾಫಿ ಮಾಡಕು ಯಾರೂ ಇಲ್ಲ ಎಂದರು. ತೇಜಸ್ವಿ ನನಗೆ ನಿಧಾನಕ್ಕೆ ಇದು ಯಾವ ಪ್ರಾಣಿ ಮಾರಾಯಿರ? ಮುಂದೆ ಬೇಗ ಕಾಲು ಹಾಕಿ ಇವರ ಸಾವಾಸ ಸಾಕು’ ಎಂದರು. ಹಾಗೇ ಎಲ್ಲರೂ ಮುಂದುವರಿದೆವು. ನನಗೆ ಒಳಗೊಳಗೇ ನಮ್ಮ ಗುರುಗಳೆಲ್ಲ ಏನಂದುಕೊಂಡ್ರೇನೋ ಎಂದು ಮನಸ್ಸಿನಲ್ಲಿ. ಕೇವಲ ಲಂಗೋಟಿ ಕಟ್ಟಿಕೊಂಡಿದ್ದ ಅನಾಗರಿಕ ಮಾವನವರಿಗೆ ಬಯ್ದುಕೊಳ್ಳುತ್ತಾ ಸರ ಸರ ಮುಂದೆ ಕಾಲು ಹಾಕಿದೆ. ಆಗಲೇ ಕುವೆಂಪುರವರು ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ದೊಡ್ಡ ಹೆಸರು ಮಾಡಿದ್ದರು. ಶುಂಠೀಕಟ್ಟೆ ಮಂದ ಕಿವಿಯ ವೆಂಕಟೆಗೌಡ್ರು ಯಾವ ಕಾಲದಲ್ಲಿದ್ದಾರೆಂದು ಅಂದುಕೊಳ್ಳುತ್ತ ದಾರಿ ನೋಡುತ್ತ ಮೌನವಾಗಿ ನಡೆಯತೊಡಗಿದೆವು.

ಅಲಿಗೆ ಪುಟ್ಟಯ್ಯನಾಯಕರ ಮನೆಗೆ ಮೊದಲು ಗಿಣಿಯ ಎಂಬ ಒಂದು ಊರು. ಅಲ್ಲೊಂದು ಬ್ರಾಹ್ಮಣರ ಮನೆ ಸಿಕ್ಕುತ್ತದೆ. ಅವರ ಮನೆ ಹತ್ತಿರದಲ್ಲೇ ನಾವು ಹೋಗುತ್ತಿರುವಾಗ ಅಲ್ಲಿಯ ಭಟ್ಟರೊಬ್ಬರು ದೂರದಿಂದ ನಮ್ಮನ್ನು ನೋಡಿದವರು ಹತ್ತಿರ ಬಂದು, ಅವರ ಮನೆಗೆ ಒಂದು ನಿಮಿಷವಾದರೂ ಕೂತೆದ್ದು ಹೋಗಬೇಕೆಂದು ಕರೆದುಕೊಂಡು ಹೋದರು. ಇದೆಲ್ಲ ಮಲೆನಾಡಿನವರ ರಿವಾಜು ಎಂದ್ರೆ ಉಪಚಾರ ಮಾಡುವ ಪದ್ಧತಿ. ಅವರು ಕಾಫಿ ಮಾಡಿಸುತ್ತೇನೆ ಕುಡಿದುಕೊಂಡೇ ಮುಂದೆ ಹೋಗಬೇಕೆಂದು ಹಠ ಮಾಡಿದರು. ಶ್ರೀ ಶಿವರುದ್ರಪ್ಪನವರು, ಗಿಣಿಯದ ಭಟ್ಟರು ತುಂಬಾ ಹಠಮಾಡಿದ್ದರಿಂದ ಒಂದೈದು ನಿಮಿಷ ಅವರ ಮನೆಯಲ್ಲಿ ಕುಳಿತುಕೊಂಡು ನಂತರ ಮುಂದೆ ಹೋಗೋಣವೆಂದು ಎಲ್ಲರೂ ತೀರ್ಮಾನಿಸಿ ಭಟ್ಟರ ಮನೆಯ ಜಗುಲಿಯ ಮೇಲೆ ಹೋಗಿ ಕುಳಿತೆವು. ಭಟ್ಟರು ಕುಡಿಯಲು ನೀರು ತಂದುಕೊಟ್ಟರು. ನಂತ್ರ ಅವರ ಪದ್ಧತಿಯಂತೆ ಹರಿವಾಣದಲ್ಲಿ ಎಲೆ ಅಡಿಕೆ ತಂದು ಕೊಟ್ಟರು. ಅವರು ಮೊದಲೇ ಬಾಯಿ ತುಂಬಾ ತಾಂಬೂಲವನ್ನು ಹಾಕಿಕೊಂಡಿದ್ದರಿಂದ ನಮ್ಮಗಳಿಗೂ ತಾಂಬೂಲವನ್ನಾದರೂ ಹಾಕಿ ಎಂದು ಮಲೆನಾಡಿನ ಉಪಚಾರ ಮಾಡಿದರು. ಶಿವರುದ್ರಪ್ಪನವರಿಗೆ ಎಲೆ ಅಡಿಕೆ ಸುಣ್ಣ ಹಾಕಿದರೆ ನಾಲಿಗೆ ಸುಟ್ಟು ತುಂಬಾ ತೊಂದ್ರೆ ಆಗುತ್ತದೆ. ಬೇಡವೇ ಬೇಡವೆಂದರೂ ಭಟ್ಟರು ಹಠ ಮಾಡಿದ್ದರಿಂದ ಎಲೆ ಅಡಿಕೆ ಹಾಕಿದರು. ತಕ್ಷಣ ಮುಖ ಕೆಂಪಗೆ ಮಾಡಿಕೊಂಡು ನಾಲಿಗೆ ಎಲೆ ಅಡಿಕೆ ಜೊತೆ ಸುಣ್ಣ ಹಾಕಿದ್ದರಿಂದ ಬಾಯಿಸುಟ್ಟಂತಾಗಿ ಎದ್ದು ಹೋಗಿ ಉಗುಳಿದರು. ಶ್ರೀ ನಾರಾಯಣ ಶೆಟ್ಟರು, ತೇಜಸ್ವಿ, ನಾನು ಅದರ ಸಹವಾಸಕ್ಕೇ ಹೋಗದಿದ್ದರಿಂದ ಯಾವ ತೊಂದ್ರೆಗೂ ಒಳಗಾಗಲಿಲ್ಲ. ಭಟ್ಟರೆ ಬರ‍್ತೀವಿ ಎಂದು ಎದ್ದು ಹೊರಟೆವು. ಶಿವರುದ್ರಪ್ಪನವರ ಮುಖವೆ ಕೆಂಪಾಗಿತ್ತು. ನನಗೆ ಚೆನ್ನಾಗಿ ಬೈದರು. ಏನು ಮಾಡುವುದು ಸಾರ್ ಮಲೆನಾಡಿನ ಕಡೆ ಇದೊಂದು ಪದ್ಧತಿ. ನೀವು ಯಾಕೆ ಎಲೆಅಡಿಕೆ ಹಾಕಿದಿರಿ?’ ಎಂದು ನಾವೆಲ್ಲ ಕೇಳಿದಾಗ ‘ನಿಮ್ಮ ಸಹವಾಸ ಮಾರಾಯ ಇನ್ನೆರಡು ದಿನ ಊಟವನ್ನೂ ಸರಿಯಾಗಿ ಮಾಡಲಿಕ್ಕಾಗುವುದಿಲ್ಲವೆಂದು’ ಸಿಟ್ಟಿನಿಂದ ಹೇಳಿದರು. ಅಲ್ಲಿಂದ ಸ್ವಲ್ಪ ದೂರದಲ್ಲೇ ಅಲಿಗೆ ಪುಟ್ಟಯ್ಯನಾಯಕರ ಮನೆ ಸಿಕ್ಕಿತು. ಅಲ್ಲಿ ಕೈಕಾಲು ತೊಳೆದುಕೊಂಡು ಊಟದ ಹೊತ್ತಾಗಿದ್ದರಿಂದ ಊಟ ಮಾಡಿದೆವು. ಪುಟ್ಟಯ್ಯನಾಯಕರು ಸಿಕ್ಕಾಬಟ್ಟೆ ಸಿಹಿ ಅಡಿಗೆ ಮಾಡಿಸಿದ್ದರಿಂದ ನಾರಾಯಣ ಶೆಟ್ಗಟರಿಗೆ ಊಟ ಸರಿ ಹೋಗಲಿಲ್ಲ. ಕುಪ್ಪಳಿಗೆ ಹೋಗುವಷ್ಟರಲ್ಲಿ ಬೇದಿ ಹತ್ತಿಕೊಂಡು ಸುಸ್ತಾದರು.

ಶಿವರುದ್ರಪ್ಪನವರು ಪುಟ್ಟಯ್ಯನಾಯಕರ ಆತಿಥ್ಯ ಸ್ವೀಕರಿಸಿದ ನಂತ್ರ ತಕ್ಷಣ ಕುಪ್ಪಳಿಗೆ ಹೋಗಿ ಸೇರಿಕೊಂಡು ಬಿಡೋಣ ಮಾರಾಯ ಎಂದು ಹಠ ಮಾಡಿದ್ದರಿಂದ ಎಲ್ಲರೂ ಪುಟ್ಟಯ್ಯನಾಯಕರು, ಅವರ ಮನೆಯಲ್ಲೇ ಅವತ್ತು ಉಳಿದುಕೊಂಡು ನಾಳೆ ಕುಪ್ಪಳ್ಳಿಗೆ ಹೋಗಿ ಎಂದರೂ ಕೇಳದೆ ಅಲ್ಲಿಂದ ಹೊರಟೇ ಬಿಟ್ಟೆವು. ಈ ರೀತಿ ನನ್ನ ಮತ್ತು ತೇಜಸ್ವಿಯವರ ಜೊತೆ ಕುಪ್ಪಳಿ ನೋಡಲು ಬಂದು ಅಲಿಗೆ ಪುಟ್ಟಯ್ಯನಾಯಕರ ಮಲೆನಾಡಿನ ಆತಿಥ್ಯಕ್ಕೆ ಸಿಕ್ಕಿ ನಲುಗಿದವರೆಂದರೆ ಜಾನಪದ ವಿದ್ವಾಂಸ ಜೀ.ಶಂ.ಪರಮಶಿವಯ್ಯ. ಕಲಾವಿದ ಪಿ.ಆರ್. ತಿಪ್ಪೇಸ್ವಾಮಿ, ಜಾನಪದ ಸಂಗ್ರಾಹಕರಾದ ಕ.ರಾ.ಕೃ., ಡಾ|| ಶಾಮಸುಂದರ ಮುಂತಾದವರುಗಳೆಲ್ಲ ನೆನಪಾಗುತ್ತಾರೆ. ಅಲಿಗೆ ಪುಟ್ಟಯ್ಯನಾಯಕರ ಆತಿಥ್ಯ ಮಾಡುವ ವಿಷಯದಲ್ಲಿ ಮತ್ತೊಂದು ವಿಶೇಷವೆಂದರೆ ಒದಗೆ ನೀರಿನ ಸ್ನಾನ, ನಿರಂತರವಾಗಿ ಅವರ ಬಚ್ಚಲಿಗೆ ಅಡಿಕೆ ಒದಗೆಯುವ ಮೂಲಕ ಬಂದು ಬೀಳುವ ನೀರನ್ನು ತಾಂಬ್ರದ ಹಂಡೆಗೆ ತುಂಬಿಸಿ ದೊಡ್ಡ ಒಲೆಗೆ ಬೆಂಕಿ ಹಾಕಿ ನೀರು ಕಾಯಿಸಿ ಮನೆಗೆ ಬಂದ ನೆಂಟರಿಗೆ ಮೊದಲೆ ಬಿಸಿ ನೀರ ಅಭ್ಯಂಜನ ಮಾಡಿಸಿ ನಂತ್ರ ಏನಿದ್ದರೂ ಊಟ. ಪುಟ್ಟಯ್ಯನಾಯಕರು ಇರುವವರೆಗೂ ಈ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದರು. ಅಲಿಗೆ ಪುಟ್ಟಯ್ಯನಾಯಕರು ನೆನಪಾದಾಗಲೆಲ್ಲ ಅವರ ಸ್ಪೆಷಾಲಿಟಿಗಳೆಲ್ಲ ನೆನಪಾಗುತ್ತವೆ.

ಸದ್ಯದಾರಿಯಲ್ಲಿ ಹಳ್ಳಗಳು ಹರಿಯುತ್ತಿದ್ದರಿಂದ ಬೇದಿ ಹತ್ತಿಕೊಂಡ ನಾರಾಯಣ ಶೆಟ್ರಿಗೆ ತೊಂದ್ರೆಯಾಲಿಲ್ಲ. ಕುಪ್ಪಳಿ ಸೇರಿಕೊಂಡು ನಮಗೆ ಗೊತ್ತಿಲ್ಲದಂತೆ ಕಾಲಿಗೆ ಹತ್ತಿಕೊಂಡ ಇಂಬಳ (ಸಣ್ಣ ಜಾತಿಯ ಜಿಗಣೆ) ಗಳನ್ನು ತೆಗೆದುಕೊಂಡು ಆ ಸಣ್ಣ ಗಾಯಗಳಿಗೆ ಕುಪ್ಪಳಿ ಶೇಷಪ್ಪಗೌಡರು ಕೊಟ್ಟ ಗಿಡಮೂಲಿಕೆ ಔಷಧ ಹಚ್ಚಿಕೊಂಡು ರಾತ್ರಿ ಊಟದ ಹೊತ್ತಿನವರೆಗೂ ಕುಪ್ಪಳಿ ಮನೆಯ ಉಪ್ಪರಿಗೆಯಲ್ಲಿ ಮಲಗಿಕೊಂಡೆವು. ಶಿವರುದ್ರಪ್ಪನವರಿಂದ ಮತ್ತು ನಾರಾಯಣಶೆಟ್ಟರಿಂದ ನಾನು ತೇಜಸ್ವಿ ಸರಿಯಾಗಿ ಬೈಸಿಕೊಂಡೆವು. ನಂತರ ಅವರ ಗುರುಗಳಾದ ಕುವೆಂಪುರವರ ಮನೆ ಕವಿಶೈಲ, ಸಿಬ್ಬಲಗುಡ್ಡೆ, ಮನೆಯ ಮುಂದಿನ ಗಗನಚುಂಬಿ ಕಾಡು ಇವೆಲ್ಲಾ ನೋಡಿ ಸಂತೋಷ ಪಡುವ ಸಂಭ್ರಮದಲ್ಲಿ ಹಿಂದಿನ ದಿನದ ಕಡಿದಾಳಿಂದ ಬಂದ ಒಳದಾರಿಯ ಹಿಂಸೆಗಳೆಲ್ಲ ಮಾಯವಾಯ್ತು. ಕುವೆಂಪುರವರ ಸಾಹಿತ್ಯದಲ್ಲಿ ಓದಿಕೊಂಡಿದ್ದ ಎಲ್ಲಾ ಸ್ಥಳಗಳನ್ನು ಮನಸಾರೆ ನೋಡಿ ಸಂತೋಷಪಟ್ಟು ಎರಡು ದಿನಗಳನ್ನು ಅಲ್ಲೇ ಕಳೆದು ಅಲ್ಲಿಂದ ಬಸ್ಸಿನಲ್ಲಿ ತೀರ್ಥಹಳ್ಳಿಗೆ ಬಂದು ತುಂಗಾ ನದಿಯ ರಾಮತೀರ್ಥ, ಕಲ್ಲುಸಾರವನ್ನೂ ನೋಡಿಕೊಂಡು ಶಿವಮೊಗ್ಗಕ್ಕೆ ಬಂದು ರೈಲು ಹತ್ತಿ ಮೈಸೂರು ಸೇರಿದೆವು. ಮೊಟ್ಟ ಮೊದಲು ಅವರ ಗುರುಗಳಾದ ಕುವೆಂಪುರವರ ಮನೆ, ಆ ಪರಿಸರವನ್ನೆಲ್ಲಾ ಕಣ್ಣಾರೆ ನೋಡಿ ತುಂಬಾ ಸಂತೋಷಪಟ್ಟಿದ್ದರು. ನಮ್ಮ ಒಳ ದಾರಿಯಲ್ಲಿ ನಡೆದು ಬರುವಾಗ ಜಿಗಣೆ ಅಥವಾ ಇಂಬಳದಿಂದ ಕಡಿಸಿಕೊಂಡ ನಂಜಿನ ಗಾಯದ ತುರಿಕೆ ನಿಧಾನ ವಾಸಿಯಾಯಿತು. ದಾರಿಯುದ್ದಕ್ಕೂ ಅನುಭವಿಸಿದ ಮಲೆನಾಡು ಆತಿಥ್ಯದ ಹಿಂಸೆ ಎಲ್ಲಾ ಮರೆತು ಹೋಗಿತ್ತು. ಈಗಲೂ ಶಿವರುದ್ರಪ್ಪನವರು, ಈ ತೇಜಸ್ವಿ ಮತ್ತು ಶಾಮಣ್ಣ ಮೊದಲು ಕುಪ್ಪಳ್ಳಿ ತೋರಿಸಿದ್ದವರು ಎಂದು ಸಮಯ ಬಂದಾಗ ಹೇಳುವುದನ್ನು ಮರೆಯೋದಿಲ್ಲ.

೧೯೬೫ನೇ ಇಸವಿಯ ಸುಮಾರಿನಲ್ಲಿ ನಾನು ಕಡಿದಾಳಿನಲ್ಲಿದ್ದಾಗ ಹಾರೋಗೊಳಿಗೆಯಲ್ಲಿ ಊರಿನವರು ಗಣೇಶನ ಹಬ್ಬವನ್ನು ನಡೆಸುವಾಗ ನಾನೂ ಅವರ ಜೊತೆ ಸೇರಿಕೊಳ್ಳುತ್ತಿದ್ದೆ. ನಾನಾಗ ಬಸವಾನಿ ಹೈಸ್ಕೂಲಿನಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ಪ್ರತಿ ವರ್ಷ ಗೌರಿಹಬ್ಬದ ಸಮಯ ಗಣಪತಿ ಕೂರಿಸಿ ಹಾರೋಗೊಳಿಗೆಯಲ್ಲಿ ಎರಡು ಮೂರು ದಿನ ಮನರಂಜನೆಯ ಕಾರ್ಯಕ್ರಮ ನಡೆಸುತ್ತಿದ್ದೆವು. ಆಗ ತೇಜಸ್ವಿಯವರ ‘ಯಮಳ ಪ್ರಶ್ನೆ’ ಲಂಕೇಶರ ‘ತಂಗಿಗೊಂದು ಗಂಡುಕೊಡಿ’ ನಾಟಕಗಳನ್ನು ಪ್ರಯೋಗಾರ್ಥ ಆಡುತ್ತಿದ್ದೆವು. ಜೊತೆಗೆ ಬೇರೆ ನಾಟಕಗಳನ್ನು ಆಡುತ್ತಿದ್ದೆವು. ಈ ನಾಟಕಗಳ ಪ್ರಯೋಗಕ್ಕೆ ಅಲಿಗೆ ಪುಟ್ಟಯ್ಯನಾಯಕರನ್ನು ದೇವಂಗಿ ಡಿ.ಟಿ. ಚಂದ್ರಶೇಖರ್ ಅವರನ್ನು ಮುಖ್ಯ ಅತಿಥಿಗಳಾಗಿ ಕರೆಯುತ್ತಿದ್ದೆವು. ಜೊತೆಗೆ ತೀರ್ಥಹಳ್ಳಿ ಜವುಳಿ ರಾಘವರಾವ್, ಬ್ರಹಸ್ಪತಿವಾಣಿ ದೇವಣ್ಣರಾವ್ ಮುಂತಾದವರನ್ನು ಆಹ್ವಾನಿಸುತ್ತಿದ್ದೆವು. ಆಶ್ಚರ್ಯವೆಂದ್ರೆ ಆಗಲೇ ೭೦ ವರ್ಷ ದಾಟಿದ ಅಲಿಗೆ ಪುಟ್ಟಯ್ಯನಾಯಕರು ಅಲ್ಲಿಂದ ಒಳದಾರಿಯಲ್ಲೇ ನಡೆದುಕೊಂಡು ನಾವಾಡುತ್ತಿದ್ದ ಪ್ರಯೋಗಿಕ ನಾಟಕಗಳನ್ನು ನೋಡಿಕೊಂಡು ಪ್ರಶಂಸಿಸಿ ಹೋಗುತ್ತಿದ್ದರು. ಅದರಿಂದ ನಮ್ಮೂರ ನಾಟಕದ ಹುಡುಗರು ಸ್ಫೂರ್ತಿಗೊಂಡು, ಪ್ರತಿ ವರ್ಷ ಗಣಪತಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಊರಿನವರಿಗೆ ಮನರಂಜನೆ ಕೊಡುತ್ತಿದ್ದರು. ಆ ದಿನಗಳಲ್ಲಿ ನಮ್ಮ ತಂದೆಯವರೂ ಸಹ ನಮ್ಮ ಹುಡುಗರ ಜೊತೆ ಸೇರಿಕೊಂಡು ‘ಎಚ್ಚಮನಾಯಕ’ ನಾಟಕವನ್ನೂ ಆಡುತ್ತಿದ್ದರು. ಅವರೇ ಎಚ್ಚಮನಾಯಕ ಪಾತ್ರವನ್ನು ಹಾಕುತ್ತಿದ್ದರು. ಅಲಿಗೆ ಪುಟ್ಟಯ್ಯನಾಯಕರು ದೇವಂಗಿ ಡಿ.ಟಿ. ಚಂದ್ರಶೇಖರ್, ತೀರ್ಥಳ್ಳಿ ಜವುಳಿ ರಾಘವರಾವ್, ಬೃಹಸ್ಪತಿವಾಣಿ ದಿನಪತ್ರಿಕೆಯ ದೇವಣ್ಣ, ಶಂಕರರಾವ್, ಬಳಗಟ್ಟೆ ಲಕ್ಷ್ಮಣ ಮುಂತಾದವರ ಪಾತ್ರ ಮುಖ್ಯವಾಗಿತ್ತು. ಊರಿನ ಶಾಲೆಯ ಎದುರು ಜಿಂಕ್‌ಶೀಟ್ ಮಾಡು’ ಮಾಡಿ ಆಡುತ್ತಿದ್ದ ಉಮೇದು ಇತ್ತು. ಈಗಿನ ಯುವಕರು ವಿದ್ಯಾವಂತರಾಗಿ ಅನುಕೂಲಸ್ಥರಾಗಿದ್ದರೂ ಸರಿಯಾದ ಮುಖಂಡತ್ವದ ಕೊರತೆಯಿಂದ ಊರಲ್ಲಿ ಯಾವ ಕಾರ್ಯಕ್ರಮವೂ ನಡೆಯುತ್ತಿಲ್ಲ ಎಂದನ್ನಿಸುತ್ತದೆ. ಶ್ರೀ ಕಡಿದಾಳು ಮಂಜಪ್ಪನವರ ಹೆಸರಿನಲ್ಲಿ ಸುಸಜ್ಜಿತ ಸಭಾಭವನ ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸುಸಜ್ಜಿತವಾದ ವ್ಯವಸ್ಥೆ ಮಾಡಿಕೊಟ್ಟರೂ ಈಗಿನ ಯವಕರು ಯಾವ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಮಾಡುತ್ತಿಲ್ಲ. ಕಾಲ ಬದಲಾಗಿದೆ ಎಂದು ಮಾತ್ರ ಹೇಳಿಕೊಳ್ಳಬಹುದಾಗಿದೆ

ಅಲಿಗೆ ಪುಟ್ಟಯ್ಯನಾಯಕರ ಮನೆಗೆ ಆ ದಿನಗಳಲ್ಲಿ ದೂರ ದೂರದ ಊರುಗಳಿಂದ ವಿದ್ಯಾವಂತರು, ಕಲಾವಿದರು ಬಂದು ಹೋಗುತ್ತಿದ್ದುದನ್ನು ನಾನು ಚೆನ್ನಾಗಿ ಬಲ್ಲೆ. ಪುಟ್ಟಯ್ಯನಾಯಕರು ಯಾವ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡದಿದ್ದರೂ ಮೈಸೂರು ವಿಶ್ವವಿದ್ಯಾನಿಲಯ, ಬೆಂಗಳೂರು, ಧಾರವಾಡ ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚು ಕಡಿಮೆ ಅಲಿಗೆ ಪುಟ್ಟಯ್ಯನಾಯಕರ ಪರಿಚಯ ಇಲ್ಲದವರು ಇರಲಿಲ್ಲ. ವಿದ್ಯಾವಂತರು, ಕಲಾವಿದರು, ಸುಸಂಸ್ಕೃತರ ಜೊತೆ ಸಂಪರ್ಕದಿಂದಿರಲು ತುಂಬಾ ಇಷ್ಟಪಡುತ್ತಿದ್ದರು. ಕುವೆಂಪುರವರು ಮೈಸೂರಿನ ಅವರ ಸ್ವಂತ ಮನೆಯಲ್ಲಿ ನೆಲೆಸಿದ ನಂತರ ಸಂಸಾರ ಹೂಡಿದ ನಂತರ ಊರಿನ ಕಡೆ ಬಂದು ಉಳಿಯುವುದು ಕಡಿಮೆಯಾಯಿತು. ಅಪರೂಪಕ್ಕೆ ರಜಾ ದಿನಗಳಲ್ಲಿ ಬಂದು ಹೋಗುತ್ತಿದ್ದರು. ಆ ಸಮಯದಲ್ಲಿ ತಮ್ಮ ಕೃತಿ ರಚನೆಗೆ ಅವಶ್ಯಕವಾಗಿ ಬೇಕಾಗುವ ತನಗೆ ಮರೆತು ಹೋದ ಮಲೆನಾಡಿನ ಕಡೆಯ ಮಾಹಿತಿಗಳೇನಾದರೂ ಬೇಕಾಗಿದ್ದರೆ ಅವರು ಮೊದಲು ಪತ್ರ ಬರೆಯುತ್ತಿದ್ದದ್ದು ಗೆಳೆಯರಾದ ಅಲಿಗೆ ಪುಟ್ಟಯ್ಯನಾಯಕರಿಗೆ, ಯಾವ ಮಾಹಿತಿ ಬೇಕಿದ್ದರೂ (ತಮ್ಮ ಕೃತಿ ರಚನೆಗೆ) ಬೇರೆಯವರಿಂದ ತಿಳಿದುಕೊಳ್ಳುತ್ತಿರಲಿಲ್ಲವಂತೆ. ಅಂತಹ ಮಾಹಿತಿಗಳನ್ನು ಅಲಿಗೆ ಪುಟ್ಟಯ್ಯನಾಯಕರು ಪತ್ರಮುಖೇನ ತಿಳಿಸುತ್ತಿದ್ದರಂತೆ ಅದಕ್ಕೆ ಕಾರಣ ಅಲಿಗೆ ಪುಟ್ಟಯ್ಯನಾಯಕರಲ್ಲಿ ಕುವೆಂಪುರವರಿಗಿದ್ದ ನಂಬಿಕೆಯೇ ಕಾರಣವೆಂದು ನಾನು ತಿಳಿದಿದ್ದೇನೆ. ಈ ವಿಚಾರವನ್ನು ದೇವಂಗಿ ದಿ|| ಚಂದ್ರಶೇಖರ್‌ರವರೂ ಹೇಳುತ್ತಿದ್ದರು. ಈ ವಿಚಾರವನ್ನು ನನ್ನೊಂದಿಗೂ ಪುಟ್ಟಯ್ಯನಾಯಕರು ಹೇಳಿದ್ದುಂಟು.

ಕೊನೆಯಲ್ಲಿ ೫.೪.೨೦೧೨ರಂದು ಕಡಿದಾಳು ಶಾಮಣ್ಣನವರು ಕುಪ್ಪಳಿಯಲ್ಲಿ ನನಗೆ (ಸತ್ಯನಾರಾಯಣ) ನೀಡಿದ ಒಂದೆರಡು ಮಾಹಿತಿಗಳು.

* ಅವತ್ತಿನ ಕಾಲಕ್ಕೆ ಮಲೆನಾಡಿನಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಸಾಕಷ್ಟು ಪ್ರಯೋಗಗಳನ್ನು ಪುಟ್ಟಯ್ಯನಾಯಕರು ಮಾಡಿದ್ದರು. ಮೀನು ಸಾಕಿದ್ದರು. ಕೃಷಿಯ ವಿಷಯದಲ್ಲಿ ನಮಗೆ ಅವರೇ ಗುರುಗಳೂ ಸಹ. ಪುಟ್ಟಯ್ಯನಾಯಕರನ್ನು ನಾನೂ ತೇಜಸ್ವಿ ಎಲ್ಲಾ ಗುರುಗಳೆ ಎಂದೇ ಕರೆಯುತ್ತಿದ್ದೆವು. ಆದರೆ ಅದು ಅವರಿಗೆ ಇಷ್ಟ ಆಗುತ್ತಿರಲಿಲ್ಲ.

* ಒಮ್ಮೆ ಪುಟ್ಟಯ್ಯನಾಯಕರು ಉದಯರವಿಗೆ ಬಂದಿದ್ದಾಗ ಶಾಮಣ್ಣನವರೂ ಜೊತೆಯಲ್ಲಿದ್ದರಂತೆ. ನಾಯಕರ ಮಾಂಸಾಹಾರ ಸೇವನೆಯ ಬಗ್ಗೆ ಗೊಂದಲದಲ್ಲಿದ್ದ ಕುವೆಂಪು ಅವರು ಶಾಮಣ್ಣನವರನ್ನು ಪಕ್ಕಕ್ಕೆ ಕರೆದು, ‘ನಾಯಕರು ಮಾಂಸಾಹಾರ ತೆಗೆದುಕೊಳ್ಳುತ್ತಾರೆಯೆ?’ ಎಂದಾಗ, ಶಾಮಣ್ಣ ‘ಹೋ, ತೆಗೆದುಕೊಳ್ಳುತ್ತಾರೆ’ ಎಂದುಬಿಟ್ಟರಂತೆ. ಮಾಂಸಾಹಾರದ ಜೊತೆಗೆ, ಸಿಹಿಯನ್ನೂ ಕುವೆಂಪು ಅವರು ಮಾಡಿಸಿದ್ದರು. ಅಂದು ಊಟಕ್ಕೆ ಕುಳಿತಾಗ ಪುಟ್ಟಯ್ಯನಾಯಕರು ಪಕ್ಕಾ ಸಸ್ಯಹಾರಿಗಳು ಎಂದು ತಿಳಿಯುತ್ತದೆ. ಕುವೆಂಪು ಅವರು ಶಾಮಣ್ಣನವರ ಕಡೆ ನೋಡಿದರಂತೆ! ಆಗ ಶಾಮಣ್ಣ, ‘ಅವರು ತಿನ್ನುವುದಿಲ್ಲ ಎಂದು ನಾನು ಹೇಳಿದ್ದರೆ, ನಮಗೂ ಈ ಪುಳಿಚಾರೆ ಗತಿಯಾಗುತ್ತಿತ್ತು’ ಎಂದರಂತೆ. ಆಗ ಕುವೆಂಪು ಅವರು ನಗುತ್ತ, ಹಾಗಾದರೆ ಈಗ ಎಲ್ಲವನ್ನೂ ನೀನೇ ಖಾಲಿ ಮಾಡು ಎಂದಿದ್ದರಂತೆ.

ಕೃತಿ : ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ

ಸಂಪಾದಕರು : ಡಾ. ಬಿ.ಆರ್. ಸತ್ಯನಾರಾಯಣ

ಪ್ರಕಾಶಕರು : ದೇಸಿ ಪುಸ್ತಕ, ವಿಜಯನಗರ, ಬೆಂಗಳೂರು

‍ಲೇಖಕರು avadhi

May 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: