ಕಡಲು ಕರೆದಂತೆ..

                                                                                                ಅಲಕಾ ಜಿತೇಂದ್ರ 
Sea (2)‘ಇವತ್ತು ಬೀಚ್ ಗೆ ಹೋಗುವಾ’, ಮಕ್ಕಳ ಪ್ರತಿ ವಾರದ ಕೋರಿಕೆ. ಈಗಂತೂ ಈ ಕೊಲ್ಲಿ ರಾಷ್ಟ್ರದಲ್ಲಿ ಬೇಸಿಗೆ ರಜಾ. ಇಡೀ ದಿನ ನಾಲ್ಕು ಗೋಡೆಗಳೊಳಗೆ ಕೊಳೆತಂತ ಭಾವ. ಹಾಗಾಗಿ ಕಡಲತೀರದ ಮರಳಿನ ಆಟ ಮುದುಡಿದ ಪುಟಾಣಿ ಮನಸುಗಳನ್ನು ಅರಳಿಸುವುದಂತೂ ಸತ್ಯ.
ಅಂತೂ ಮಕ್ಕಳ ಕೋರಿಕೆಯ ಮೇರೆಗೆ ಈ ಬಾರಿಯೂ ಹೊರಟಿತು ನಮ್ಮ ಸವಾರಿ ಕಡಲತಡಿಗೆ. ಆದರೆ ಈ ಬಾರಿಯ ಕಡಲು ಮೂರು ವಾರಗಳ ಮೊದಲು ನೋಡಿದಂತೆ ಇರಲಿಲ್ಲ. ಈ ಕೊಲ್ಲಿಯ ಕಡಲಿಗೆ ನಮ್ಮೂರ ಕಡಲಿನ ಭೋರ್ಗರೆತವಿರುವುದಿಲ್ಲ. ನೊರೆನೊರೆಯಾದ ಹಾಲಿನಂಥ ದೊಡ್ಡ ದೊಡ್ಡ ಅಲೆಗಳೂ ಇರುವುದಿಲ್ಲ. ಅಬ್ಬರವಿಲ್ಲದ ಒಂಥರಾ ನೀರಸ ಕಡಲು.
ಆ ದಿನವಂತೂ ಅದು ಮೌನಕ್ಕೆ ಶರಣಾದ ಭಗ್ನ ಪ್ರೇಮಿಯಂತೆ, ಧ್ಯಾನಮಗ್ನ ಯೋಗಿಯ ಸ್ಠಿರಚಿತ್ತದಂತೆ, ಜೀವನಾಸಕ್ತಿಯೇ ಇಲ್ಲದ ಆಲಸಿಯಂತೆ, ನಮ್ಮನ್ನು ನೋಡಿಯೂ ನೋಡದಂತಿರುವ ಅಪರಿಚಿತನಂತೆ ಭಾಸವಾಗಿತ್ತು. ಅದರೆದುರು ಎಷ್ಟು ಹೊತ್ತು ಕೂತಿದ್ದರೂ ನನ್ನೂರ ಕಡಲು ನೀಡುವ ಸಾಂತ್ವನ, ಆತ್ಮೀಯತೆ ಇಲ್ಲಿ ಸಿಗದೇ ಮನಸ್ಸು ಮುದುಡಿತ್ತು.
ಭಾವಗಳ ಹಂಚಿಕೊಳ್ಳುವ ಬಯಕೆ ನನಗೆ; ಕಡಲು ಸ್ಪಂದಿಸಿರಲಿಲ್ಲ. ತೀರದುದ್ದಕ್ಕೂ ಹರಡಿದ್ದ ಸುಂದರ ಕಪ್ಪೆಚಿಪ್ಪುಗಳನ್ನು ಮಕ್ಕಳೊಂದಿಗೆ ಆರಿಸಿಕೊಂಡು ಭಾರವಾದ ಮನಸ್ಸಿನೊಂದಿಗೆ ಹಿಂತಿರುಗಿದ್ದೆ. ಸುಂದರ ಗಾಜಿನ ಬಾಟಲಿಯೊಳಗೆ ಕೂಡಿಟ್ಟ ಕಪ್ಪೆಚಿಪ್ಪುಗಳು ಹೊರಗೆ ಬರಲೂ ಹವಣಿಸದೆ ಸುಂದರ ಬದುಕಿನ ಮುಸುಕಿನೊಳಗೆ ಬಂಧಿಯಾದ ನನ್ನ ಕನಸುಗಳಂತೆ ಕಂಡವು.
ಮತ್ತೊಂದು ಭೇಟಿಗೆ  ಅದೇ ಕಡಲು ಸ್ವಲ್ಪ ಭಿನ್ನವಾಗಿತ್ತು. ಅಂದಿನಷ್ಟು ಕಪ್ಪೆಚಿಪ್ಪುಗಳು ಕಾಣಲಿಲ್ಲ, ಬದಲಾಗಿ ರಾಶಿ ರಾಶಿ ಸುರುಳಿ ಚಿಪ್ಪಿನ ಮೃದ್ವಂಗಿಗಳು( sea snails) ಕಾಲಿಟ್ಟಲ್ಲೆಲ್ಲಾ ಕಾಣಿಸುತ್ತಿದ್ದವು. ಕಡಲಿನ ಧ್ಯಾನ ಮುಗಿದಂತೆ ತೋರಲಿಲ್ಲ.
Seaಆದರೆ ಈ ಸಲದ ಕಡಲು  ನನಗೆ ಆಶ್ಚರ್ಯವನ್ನುಂಟು ಮಾಡಿತು. ನಿನ್ನೂರಿನ ಕಡಲಿಗಿಂತ ನಾನೇನು ಕಮ್ಮಿಯೆಂದು ನನಗೇ ಸವಾಲೆಸೆದಂತಿತ್ತು. ತನ್ನೊಳಗಿನ ಆಲಸ್ಯವನ್ನೆಲ್ಲಾ ತೊರೆದು ಉಲ್ಲಾಸದಿಂದ ಜಿಗಿಯುತ್ತಾ, ನೊರೆನೊರೆಯಾಗಿ, ಅಲೆಅಲೆಯಾಗಿ ಬಂದು ಪಾದಗಳಿಗೆ ಕಚಗುಳಿಯಿಟ್ಟಿತು. ನನ್ನೊಳಗಿನ ಬೇಸರವನ್ನೆಲ್ಲಾ ತೊಳೆದು, ಆತ್ಮೀಯ ಆಲಿಂಗನ ನೀಡಿ, ಬಾ ನಿನ್ನ ಭಾವಗಳ ಕರಗಿಸಿ ನನ್ನೊಂದಿಗೆ ನೀರಾಗು ಎಂದು ಕರೆದಂತೆ ಭಾಸವಾಯಿತು.
ಒಂದರ ಹಿಂದೊಂದು ಅಬ್ಬರಿಸುತ್ತಾ ಬರುವ ಅಲೆಗಳು ಕಾಲಿಗಪ್ಪಳಿಸುವ ರೀತಿಗೆ ಮಕ್ಕಳೂ ಖುಷಿಪಟ್ಟವು. ‘ಎಲಾ ಕಡಲೇ!, ದಿನಕ್ಕೊಂದು ಮುಖವಾಡ ಧರಿಸುವ ಮಾನವನ ವಿದ್ಯೆ ನೀನ್ಯಾವಾಗ ಕಲಿತೆ?’ ಕೇಳಬೇಕೆನಿಸಿತು. ತಲೆ ಎತ್ತಿ ಸುತ್ತ ನೋಡಿದೆ. ಮುಸ್ಸಂಜೆಯ ಸೂರ್ಯ ಜಾರಿ, ಮಬ್ಬುಗತ್ತಲೆ ಕವಿಯುತ್ತಿತ್ತು.  ಕಡಲಿನ ಮಧ್ಯದಲ್ಲೆಲ್ಲೊ ತೈಲ ಹಡಗುಗಳ ದೀಪಗಳು ಬೆಳಗುತ್ತಿದ್ದವು.
ಮರಳ ಮೇಲೆ ಅಲ್ಲಲ್ಲಿ ಅನಾಗರಿಕರು ಎಸೆದ ಖಾಲಿ ಪೆಪ್ಸಿ ಬಾಟಲಿಗಳು, ಪ್ಲಾಸ್ಟಿಕ್ ಗಳು, ಥೇಟ್ ನಮ್ಮೂರಿನಂತೆ. ಬೆಕ್ಕು, ಪಾರಿವಾಳಗಳ ಹೆಜ್ಜೆ ಗುರುತುಗಳು ಒದ್ದೆ ಮರಳಲ್ಲಿ ಸುಂದರ ಚಿತ್ತಾರ ಮೂಡಿಸಿದ್ದವು. ಪುಟ್ಟ ಮಗುವೊಂದನ್ನು ನೀರಿನಲ್ಲಿ ಆಡಲು ಬಿಟ್ಟ ತಾಯಿಯೊಬ್ಬಳು ಸ್ಮಾರ್ಟ್ ಫೋನಿನೊಳಗೆ ಮುಳುಗಿದ್ದಳು. ಸುಂದರ ಕಡಲಿನ ಪಿಸುಮಾತನ್ನು ಕೇಳುವ ಭಾಗ್ಯ ಅವಳಿಗಿಲ್ಲವೆಂದುಕೊಂಡು ಮನೆಯತ್ತ ಹೆಜ್ಜೆ ಹಾಕಿದೆ. ಹಿಂತಿರುಗಿ ನೋಡಿದಾಗ, ‘ಮತ್ತೊಮ್ಮೆ ಬಾ’, ಎಂದು ಕಡಲು ಕರೆದಂತಾಯಿತು.
ಅಲ್ಲೇ ಎಲ್ಲಿಂದಲೋ ಬಂದಂತೆ ನನ್ನೂರ ಕಡಲ ತೀರದ ಮೀನಿನ ವಾಸನೆಯು ಚುರುಮುರಿಗೆ ಬೆರೆಸಿದ ತೆಂಗಿನೆಣ್ಣೆಯ ಹಸಿವಾಸನೆಯೊಂದಿಗೆ ಸೇರಿ ನನ್ನ ಆಘ್ರಾಣದೊಳಗಿಳಿದು ನಾಡಿಗಳೊಳಗೆಲ್ಲಾ ಹರಿದು ಅದ್ಯಾವುದೋ ಅವ್ಯಕ್ತ ಭಾವವೊಂದು ನನ್ನೊಳಗೆ ಸುಳಿದಂತಾಯಿತು.

‍ಲೇಖಕರು admin

August 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Anonymous

    Tumba chennegide alaka…. Ninna sahitya dharege dhanyavadagalu… Nanna gelatiya kadala tadiya vismaya loka nannannu kooda Kuwaitige karedoydantittu

    ಪ್ರತಿಕ್ರಿಯೆ
  2. Jaya

    Really happy read this pure kannada..
    kannada padagala jodane tumba chennagide…keep going…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: