ಸಾವಿನ ಮರ್ಮ
ನಾಗೇಶ್ ಗುಬ್ಬಿ

ಒಂದು
ಸಾವೇ ನೀ ಸಾವಿರ ಸಲ ಬಾ ಎಂದೆ
ಗೋಗರೆದೆ, ಕಿರುಚಿದೆ, ಚೀರಾಡಿದೆ
ಊಹೂಂ ಮಿಸುಕುತ್ತಿದೆ ದೇಹ
ಮುಲುಕುತ್ತಿದೆ ಮನ; ಉಸಿರಾಡುತ್ತಿದೆ ಜೀವ
ಎರಡು
ಹೊಸ ಉಪಾಯ ಹೂಡಿದೆ
ಜಾರಿ ಮಾಡಿ ಕುಣಿದಾಡಿದೆ
ನುಂಗಿದೆ ಮಾತ್ರೆ ನಿದ್ದೆಗೆಂದು
ನಂತರ ಹೋದರಾಯಿತು ಸ್ವರ್ಗಕ್ಕೆಂದು
ಎಲ್ಲ ವಾಂತಿ; ಮನ ವಿಬ್ರಾಂತಿ
ಮೂರು
ಪರಿಪರಿ ಬೇಡಿದೆ ಎದೆಎದೆ ಬಡಿದೆ
ಓ ಸಾವೇ ನೀ ನನ್ನ ಗೆಳೆಯ ಬಾರೋ
ಬಂದೆನಗೆ ಚಿರಶಾಂತಿ ತಾರೋ
ಬರಲಿಲ್ಲ ಆಸಾಮಿ
ಕರೆದರೂ ಬಾರದ ಅಪರೂಪ ನೆಂಟ
ನಾಲ್ಕು
ಅವ ಬರಲಿಲ್ಲ
ಬದುಕಲ್ಲಿ ವಿಶ್ವಾಸವಿಟ್ಟೆ
ಸಾವು ಕರೆವುದ ಬಿಟ್ಟೆ
ಸಾಧಿಸಿ ತೋರಿಸಲು ಪಣ ತೂಟ್ಟೆ
ಅರೆ ಗೆಳೆಯನೀಗ ಬಂದೇ ಬಿಡುವುದೇ!
ಇಲ್ಲ ಬರಲಾರೆ ನಾ ಬದುಕಬೇಕು
ಐದು
ಕೇಳಲಿಲ್ಲ ಅವ ಒದ್ದು ಎಳೆದೊಯ್ದ
‘ನೀ ಕರೆದಾಗ ಪುರುಸೊತ್ತಿರಲಿಲ್ಲ ಮಾರಾಯ
ಇದೀಗ ವಿರಾಮವಿದೆ;ಆರಾಮಾಗಿ ನಡಿ’
ಇಲ್ಲ…ಬರಲಾರೆ ಬಿಟ್ಟುಬಿಡು ದಮ್ಮಯ್ಯ
ಹೇಳಲಾಗಲಿಲ್ಲ…!
ಪ್ರಾಣವಿರದ ದೇಹದಲ್ಲಿ ತ್ರಾಣವಿರಲಿಲ್ಲ






0 Comments