ಯಮುನಾ ಗಾಂವ್ಕರ್
ಚಂದ್ರನಾ ಕಟ್ಟಿ ತಾರೆಂದ ಪುಟ್ಟಿಗೆ
ಅರ್ಧ ಚಂದಿರನ ಕೊಂಬು ತಾ ಬಾಗಿ ಬರುತಿದೆ
ಹಗ್ಗ ಹರಿತದ ಜಗ್ಗುವ ನೋವಿಗೆ
ಚಂದಿರನೇ ಸಂತೈಸುತ ತಾ ಓಡಿ ಬಂದ
ಇತ್ತಲೋ,
ಗುಬ್ಬಿಮರಿಗಳು ಗೂಡು ಸೇರುತ್ತಿಲ್ಲ ನೋಡು
ನೆನೆದು ಹೋಗಿದೆ ಶುಭ್ರ ವಸ್ತ್ರವೆಲ್ಲ
ಹಿಂಡಿದರೂ ಆರದ ರಕ್ತ ನೀರು
ಓ ಚಂದಿರನೆ ಬೆಳ್ದಿಂಗಳ ನಯವಾಗಿ ಹಾಸಿಹೋಗು
ಛೇ, ಯಾಕೋ,
ಹರ್ಷದ ಪಟಾಕಿಯಲ್ಲ, ಸಿಡಿಲಬ್ಬರವದು
ಗೊತ್ತಿಲ್ಲ ಆ ಪಟಪಟ ಪುಟಿಯುವ ಪುಟಾಣಿಗೆ
ನಿನ್ನೆಯ ಜೊತೆಯಾಟದವರೆಲ್ಲ ಬಿದ್ದುಕೊಂಡಿದ್ದಾರೆ
ಹೊದ್ದು ಮಲಗಿದ್ದಾರೆ
ಬಾ ಚಂದಿರ, ಗಾಯಗಳ ಮಾಸಲು ಮುಲಾಮು ತಾ
ಬೇಗ ಬಾ,
ಹೆಣದ ಮುಂದಣ ಕೊನೆಯ ಜಿಗಿತಕೆ
ಓ ಚಂದಿರನೇ ಸಾಥ್ ಕೊಡು ಅಮ್ಮನಿಗೆ
ತುತ್ತು ಅನ್ನವ ಬಾಯ್ಗಿಕ್ಕುವಾಗ ಜೊತೆಗಿರು..
ಅಮ್ಮನೊಡನೆ ನೀನೇ ಮಗುವಾಗು ಚಂದಿರಾ






0 Comments