“The Song of Lawino”, by OkotP’Bitek
-ವಿಜಯರಾಘವನ್ ರಾಮ್ ಕುಮಾರ್
ಆ ಬಿಳಿಯರ ಸೇರಿ ನನ್ನ ಗಂಡ ಬಹಳ ಬಹಳ ಓದಿಕೊಂಡುಬಿಟ್ಟ
ಅವನು ಎಲ್ಲವನ್ನೂ ಓದಿಬಿಟ್ಟಿದ್ದ, ಅಧ್ಯಯನಶೀಲನಾಗಿ
ಅವನು ಬಿಳಿಯರಷ್ಟೇ ಓದಿದವನಾಗಿದ್ದ
ಆದರೆ ಓದು ಅವನಿಗೆ ಮಾಡಿದ್ದೇನು?
ಅದು ಅವನನ್ನು ಅವನ ಜನರಿಂದಲೇ
ಕಿತ್ತೊಯ್ದುಬಿಟ್ಟಿತು. ಅವನೊಂದು ಬೇರಿರದ ಮರದಂತಾದ
ಅವನಲ್ಲಿ ಆತುರವೊಂದು ತುಂಬಿಕೊಂಡಿದೆ
ಅಚೋಲಿಯುದ್ದಕ್ಕೂ ಸಾಗಿ ಸಾಗಿ ಅವನು ಹೇಳುತ್ತಾನೆ
ಕಪ್ಪುಜನರ ಆಚರಣೆಗಳೆಲ್ಲವೂ ಕಪ್ಪಾಗಿಯೇ ಇವೆ
ಏಕೆಂದರೆ ಅವನ ಕಣ್ಣುಗಳು ಸಿಡಿದುಹೋಗಿವೆ
ಅವನು ಕಪ್ಪು ಕನ್ನಡಕಗಳನ್ನು ಧರಿಸುತ್ತಾನೆ
ಅವನ ಮನೆಯಲ್ಲಿ ಎಲ್ಲವೂ ಕಾಡುಗಪ್ಪು
ನನ್ನ ಗಂಡನ ಮನೆಯಲ್ಲಿದೆ ಒಂದು ಅರಣ್ಯದಷ್ಟು ಪುಸ್ತಕಗಳು
ಅವುಗಳಲ್ಲಿ ಹಲವು ಬೃಹತ್ ಕೃತಿಗಳು ಟಿಡೋ ಮರಗಳಂತೆ
ಅವುಗಳಲ್ಲಿ ಹಲವು ಪುರಾತನವಾದವು ಕಿತ್ತುಬರುತ್ತಿರುವ ತೊಗಟೆಯಂತೆ
ಅವುಗಳ ರಕ್ಷಾಕವಚ ಕಿತ್ತು ಉದುರಿಬೀಳುತ್ತಿದೆ
ಕಡುವಾಸನೆಯವು, ತೆಳ್ಳಗಿರುವವೂ, ಮೃದುವಾದವೂ ಇವೆ
ಇನ್ನು ಕೆಲವು, ಅವುಗಳ ಬೆನ್ನು ಪೋಯ್ ಮರದ ಕಾಂಡದ ಹಾಗಿದೆ ಕಲ್ಲಿನಂತೆ
ಹಸಿರು ಬಣ್ಣದವು ಕೆಲವು, ರಕ್ತಕೆಂಪಿನವು ಕೆಲವು
ಕಪ್ಪು ಮತ್ತು ಎಣ್ಣೆಯಾದಂತೆ ಇರುವ ಉಳಿದವು
ಅವುಗಳ ಬೆನ್ನು ಹೊಳೆಯುತ್ತಲಿದೆ
ಮರದ ಮೇಲೆ ಸಿಂಬೆ ಸುತ್ತಿ ಒರಗಿರುವ
ವಿಷಪೂರಿತ ಒರೋರೋ ಹಾವಿನಂತೆ
ಕೆಲವಕ್ಕೆ ಚಿತ್ರಗಳಿವೆ. ಅವುಗಳ ಹಿಂದಿನ ಪುಟದಲ್ಲಿ
ಅವು ಮಾಟಗಾರರಂತೆ ತೋರುವ ಸತ್ತ ಹೆಣ್ಣುಗಂಡುಗಳ ಮುಖಗಳು
ಮುಖಕ್ಷೌರ ಮಾಡಿಕೊಳ್ಳದ ಅಹಂಕಾರದ ಡೊಳ್ಳುಹೊಟ್ಟೆಯ ಗಂಡುಗಳ
ಇಲ್ಲವೇ ಕೆನ್ನೆ ಬತ್ತಿದ, ಕಳಾಹೀನ, ಪ್ರತೀಕಾರದ ವಿಷ ಮುಖದಗಲ
ಹರಡಿಕೊಂಡ ಹೆಣ್ಣುಗಳ ಚಿತ್ರಗಳವು; ಎಂದೋ ಸತ್ತವರದು
ನನ್ನ ಗಂಡನ ಡೆಸ್ಕ್ ಮೇಲೆಲ್ಲ ಹೆದರಿಸುವ ಪೇಪರು ಹಾಳೆಗಳು ಹರಡಿದೆ
ಅವು ಉಳಿದ ಮರಗಳನ್ನು ಬಲಿತೆಗೆದುಕೊಳ್ಳುವ
ಎಲ್ಲೆಲ್ಲಿಯೋ ಹರಿದುಹೋದ ಕಾಡಿನ ಅತಿದೊಡ್ಡ ಹಂಬುಗಳಂತೆ
ಅಥವಾ ಕಿಟುಬಾ ಮರದಂತೆ
ಕೆಲವು ಕಡೆಯಂಚಿನಲ್ಲಿವೆ. ಮತ್ತಷ್ಟು ಅಂಗಾತ ಮಲಗಿವೆ
ಎಲ್ಲವೂ ಕಲೆತುಹೋಗಿದೆ
ಒರಾಕ್ ನೃತ್ಯದಲ್ಲಿ ತಲ್ಲೀನ ಯುವ ಮಂದಿಯ ಕಾಲುಗಳಂತೆ
ಅವುಗಳು ಒಟ್ಟಾಗಿ ಕಲಸಿಹೋಗಿವೆ
ಆ ಅಗಮ್ಯ ಅರಣ್ಯದಲ್ಲಿ ಮರವೇರುವ ಅಗಾಧ ಬಳ್ಳಿಮರಗಳಂತೆ
ನನ್ನ ಗಂಡನ ಮನೆ ಒಂದು ಬಲುದೊಡ್ಡ ಪುಸ್ತಕಗಳ ಕಾಡು
ಅದು ಕಾಡುಗಪ್ಪು ಅಲ್ಲಿ ಎಲ್ಲವೂ ಜವುಗು
ಬಿಸಿಯಾದ, ದಪ್ಪನೆಯ, ವಿಷಪೂರಿತ ಅನಿಲ
ಅಲ್ಲಿನ ನೆಲದಿಂದ ಎದ್ದು ಒಳಗೆ ತೂರುತ್ತಿರುವ
ತೇವಾಂಶದ ಗಾಳಿಯಲ್ಲಿ ಬೆರೆತುಹೋಗುತ್ತಿದೆ.
ಎಲೆಗಳ ಮೇಲೆ ಮಳೆಹನಿಗಳು ನಿಲ್ಲಿತ್ತಲಿವೆ
ಉಸಿರು ಕಟ್ಟಿ ಸತ್ತುಹೋಗುತ್ತೀಯ ಅಲ್ಲಿ ನಿಂತರೆ ಬಹಳ ಕಾಲ
ಅದು ನಿನ್ನ ಮೂಗನ್ನು, ನಿನ್ನ ನಾಲಗೆಯನ್ನೂ ಹಾಳುಮಾಡುತ್ತದೆ
ಎಷ್ಟೆಂದರೆ ನೀನು ಆ ಮನೋಲ್ಲಾಸಗೊಳಿಸುವ ಎಳ್ಳೆಣ್ಣೆಯ ಪರಿಮಳವನ್ನು
ಇನ್ನೆಂದೂ ಸುಖಿಸಲಾರೆ ಅಥವಾ ಮಲಕ್ವಾಂಗ್ನ ರುಚಿಯನ್ನು ಮತ್ತೆಂದೂ ಸವಿಯಲಾರೆ
ಟಿಪ್ಪಣಿ
Acholi (also Acoli) is a Luo Nilotic ethnic group from Northern Uganda
From “The Song of Lawino”, by OkotP’Bitek, translated from
Acholiinto French by Frank and Henriette Gauduchon and published in the Unesco Collection by Editions Présence Africaine, Paris and Dakar (1983) under the title LaChansonde Lawino.






ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ ಸರ್… ಬಿಳಿಯರು ಅವನನ್ನು ತಮ್ಮ ಓದಿನಲ್ಲಿ ಹೇಗೆ ಸೇರಿಸಿಕೊಂಡರು? “ಮಾಟಗಾರರಂತೆ ಕಾಣುವ ಸತ್ತ ಗಂಡು ಹೆಣ್ಣುಗಳ
ಮುಖಗಳು” ತುಂಬಾ ಇಷ್ಟವಾಯ್ತು.
Fine poem.Next it keeps him away from wife,family and finally from himself!
Excellent poem introduced to us via excellent translation! Your translation is so good, readers enjoy it as much as the original! Expect many more from you!