ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದುಗರೊಬ್ಬರು ಕೊಟ್ಟ ಈ ಪ್ರಶಸ್ತಿ ಪತ್ರ…

ಎ ಆರ್ ಮಣಿಕಾಂತ್

ಕಳೆದ ಭಾನುವಾರ, ಬೆಳಗ್ಗೆ ಹತ್ತೂವರೆ. ‘ಮತ್ತೆ ಹಾಡಿತು ಕೋಗಿಲೆ’ ಪುಸ್ತಕದ ಬಂಡಲ್ ಗಳು ಎಲ್ಲಾ ಊರುಗಳಿಗೂ ಹೋಗಿದ್ದಾವಾ? ಪುಸ್ತಕ ಓದುಗರಿಗೆ ಇಷ್ಟ ಆಗುತ್ತಾ? ಓದುಗರು ಏನಂತಾರೋ ಏನೋ ಅನ್ನುವ ಗೊಂದಲದಲ್ಲಿ ನಾನಿದ್ದಾಗಲೇ ಫೋನ್ ರಿಂಗಾಯಿತು. ಆ ತುದಿಯಲ್ಲಿ ಇದ್ದವರು ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿಯವರು. ನಾನು ಹಲೋ ಸಾರ್… ಅನ್ನುತ್ತಿದ್ದಂತೆಯೇ ಅವರು ಕೇಳಿದರು: ‘ಇನ್ನೂ ಬುಕ್ಸ್ ತಂದು ಕೊಟ್ಟಿಲ್ಲ ನೀವು, ಎಲ್ಲಿದ್ದೀರಿ? ಬೇಗ ಬುಕ್ಸ್ ತಗೊಂಡು ಬನ್ನಿ. ಬೆಳಗಿನಿಂದ ಆಗಲೇ ೩ ಜನ ಬಂದು ವಿಚಾರಿಸಿಕೊಂಡು ಹೋದರು….’
ಮುಂದಿನ ಅರ್ಧಗಂಟೆಯಲ್ಲಿ ಪುಸ್ತಕಗಳೊಂದಿಗೆ ಅಂಕಿತ ಬುಕ್ ಶಾಪ್ ನಲ್ಲಿದ್ದೆ. ಈಗ ಜಸ್ಟ್ ಐದು ನಿಮಿಷದ ಹಿಂದೆ ಒಬ್ರು ಹೋದರು ನೋಡಿ ಅಂದರು ಪ್ರಕಾಶ್ ಕಂಬತ್ತಳ್ಳಿ.

ನಾಲ್ಕಾರು ನಿಮಿಷ ಅದೂ ಇದೂ ಮಾತಾಡಿ ಹೊರಟು ನಿಂತಾಗ ಕಂಬತ್ತಳ್ಳಿ ಅವರು ಹೇಳಿದರು:’೧೦ ನಿಮಿಷ ಇಲ್ಲೇ ಇರಿ. ಜೊತೆಯಲ್ಲಿ ಕಾಫಿ ಕುಡಿಯೋಣ. ನಿಮ್ಮ ಅಭಿಮಾನಿ ಒಬ್ಬರು ಬರ್ತಾರೆ. ಆಗಲೇ ಬುಕ್ ಕೇಳಿಕೊಂಡು ಬಂದು, ಹೊರಗೆ ಹೋಗಿದ್ದಾರೆ… ಇನ್ನೇನು ಬರ್ತಾರೆ…’
ಇದಾಗಿ ಐದು ನಿಮಿಷ ಕಳೆದಿಲ್ಲ, ಆಗಲೇ ಇಬ್ಬರು ಮಹಿಳಾ ಪೊಲೀಸರು ಬುಕ್ ಶಾಪ್ ಗೆ ಬಂದರು. ಅವರಲ್ಲಿ ಒಬ್ಬರು- ‘ಬಂತಾ ಸರ್ ಬುಕ್?’ ಅಂದವರೇ, ಹೊಸ ಬುಕ್ ತಗೊಂಡೇ ಬಿಟ್ಟರು. ಅವರಿಗೆ ಬುಕ್ ಕೊಡುವ ಮುನ್ನ- ‘ಮಣಿಕಾಂತ್ ಕೂಡ ಇಲ್ಲೇ ಇದ್ದಾರೆ ನೋಡಿ’ ಅಂದರು ಪ್ರಕಾಶ್ ಕಂಬತ್ತಳ್ಳಿ. ಅಷ್ಟೆ: ಆ ಪೊಲೀಸ್ ಹೆಣ್ಣುಮಗಳ ಕಂಗಳು ಮಿಂಚಿದವು. ಆಕೆ ಹೇಳಿದರು: ‘ಸರ್…ನಮಸ್ಕಾರ. ನನ್ನ ಹೆಸರು ಸಿಂಧು ಅಂತ… ನಿಮ್ಮ ಎಲ್ಲಾ ಬುಕ್ಸ್ ಓದಿದ್ದೀನಿ. ನಿಮ್ಮ ಬುಕ್ಸ್ ನನ್ನಲ್ಲಿ ತುಂಬಾ ಬದಲಾವಣೆ ತಂದಿವೆ.

ವಿಶೇಷವಾಗಿ ‘ಅಪ್ಪ ಅಂದ್ರೆ ಆಕಾಶ’ ನನ್ನ ಫೇವರಿಟ್ ಬುಕ್. ಅದನ್ನು ಓದಿದ ಮೇಲೆ ನಮ್ಮ ತಂದೆಯನ್ನು ಇನ್ನೂ ಹೆಚ್ಚಾಗಿ ಅರ್ಥ ಮಾಡಿಕೊಂಡೆ ಸರ್. ನಿಮ್ಮ ಪುಸ್ತಕದಲ್ಲಿ ನಮ್ಮ ತಂದೆಯನ್ನು ಕಂಡೆ. ಅಂಥದೊಂದು ಪುಸ್ತಕ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್ ಸರ್…

ಹೀಗೆ ಹೇಳಿದ್ದು ಮಾತ್ರವಲ್ಲ; ತಮ್ಮ ಅನಿಸಿಕೆಯನ್ನು ಆಕೆ ತುಂಬಾ ಅಕ್ಕರೆಯಿಂದ ಬರೆದೂ ಕೊಟ್ಟರು. ಅದನ್ನು ನೋಡುತ್ತಿದ್ದಂತೆ, ಮನಸ್ಸು ತುಂಬಿ ಬಂತು. ಓದುಗರಿಂದ ಸಿಗುವ ಇಂಥ ಅಕ್ಕರೆ- ಮೆಚ್ಚುಗೆಯ ಮಾತುಗಳೇ ಬಹುದೊಡ್ಡ ಪ್ರಶಸ್ತಿಗಳು ಅನ್ನಿಸಿತು. ಈ ಖುಷಿಯ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿದ್ದರಿಂದ- ಇಷ್ಟು ಬರೆದೆ…

‍ಲೇಖಕರು Admin

29 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading