ಸಾವಿಲ್ಲದ ನಮೂನೆಯ ಸಾಸಿವೆ…

ನಾಗೇಶ ಹೆಗಡೆ

ಸಾಸಿವೆಯ ಕುಲಾಂತರಿ ತಳಿಯನ್ನು ಹೊಲಕ್ಕೆ ಇಳಿಸಲು ಇದೀಗ ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರ ಹಿಂದಿನ ಹುನ್ನಾರದ ಕುರಿತು ನಾನು 2016ರಲ್ಲೇ ಪ್ರಜಾವಾಣಿಯ ನನ್ನ ಅಂಕಣದಲ್ಲಿ ಬರೆದಿದ್ದು ಇಲ್ಲಿದೆ. ಅಂದಹಾಗೆ, ಕುಲಾಂತರಿ ಸಾಸಿವೆಯನ್ನು ವಿರೋಧಿಸುವವರಲ್ಲಿ ಆರ್‌ಎಸ್‌ಎಸ್‌ ಬಣಕ್ಕೆ ಸೇರಿದ “ಭಾರತೀಯ ಕಿಸಾನ್‌ ಸಂಘʼʼ ಮತ್ತು “ಸ್ವದೇಶೀ ಜಾಗರಣ ಮಂಚ್‌” ಕೂಡ ಸೇರಿವೆ. ಆದರೂ ಭಾಜಪಾ ಸರಕಾರ ಸಾಸಿವೆಗೆ ಹಸಿರು ನಿಶಾನೆ ತೋರಿಸಿದೆ ಎಂದರೆ ಅದರ ಹಿಂದೆ ಅದೆಷ್ಟು ಪ್ರಬಲ ಲಾಬಿ ಇದ್ದೀತು?

ಕುಲಾಂತರಿ ಸಾಸಿವೆ ಕಳೆದ ಐದಾರು ವರ್ಷಗಳಿಂದ ಹೊಲಕ್ಕೆ ನುಗ್ಗಲು ಯತ್ನಿಸುತ್ತಲೇ ಇದೆ. ಯಕ್ಷಗಾನದಲ್ಲಿ ಬಣ್ಣದ ವೇಷಗಳು ಪರದೆಯ ಮರೆಯಲ್ಲಿ ನಿಂತು ಒಮ್ಮೆ ಭಾಗಶಃ ಕಿರೀಟ ತೋರಿಸಿ, ಮತ್ತೆ ಮರೆಮಾಚಿ, ಮಗದೊಮ್ಮೆ ಮೀಸೆಯ ತುಸು ಭಾಗ ತೋರಿಸಿ, ಮತ್ತೆ ಮರೆಯಾಗಿ ಪ್ರೇಕ್ಷಕರನ್ನು ಕೆಣಕುವ ಹಾಗೆ, ಈ ಹೊಸ ಸಾಸಿವೆ ಕೂಡ ಆಗಾಗ ಸುದ್ದಿಯಾಗಲು ಯತ್ನಿಸುತ್ತ, ನೇಪಥ್ಯಕ್ಕೆ ದೂಡಿಸಿಕೊಳ್ಳುತ್ತ ಮತ್ತೆ ಇದೀಗ ರಂಗಕ್ಕೆ ಬರಲು ಹವಣಿಸುತ್ತಿದೆ.

ಎರಡು ತಿಂಗಳ ಹಿಂದೆ, (2016ರಲ್ಲಿ) ಇನ್ನೇನು ಅದರ ಕೃಷಿಗೆ ಅನುಮತಿ ಕೊಡುತ್ತೇವೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ ಸೂಚನೆ ನೀಡಿದ್ದೇ ತಡ, ದೇಶಾದ್ಯಂತ ಕುಲಾಂತರಿ ವಿರೋಧಿ ಸಂಘಟನೆಗಳು (ಎಂದಿನಂತೆ) ಭಾರೀ ಗಲಾಟೆ ಎಬ್ಬಿಸಿದವು. ಜಾವಡೇಕರ್ ಮತ್ತೆ ಅಷ್ಟೇ ಅವಸರದಲ್ಲಿ ಅದನ್ನು ಅದುಮಿಟ್ಟರು.

ಅದನ್ನು ತುಸು ಹೊತ್ತು ಅದುಮಿ ಇಟ್ಟಿದ್ದಷ್ಟೆ. ಎರಡು ತಿಂಗಳ ನಂತರ ʻರಾಷ್ಟ್ರೀಯ ಪ್ರೊಗ್ರೆಸಿವ್ ಕಿಸಾನ್ ಸಮಿತಿʼ (ಹೆಸರನ್ನೇ ಕೇಳಿರದ) ಹೆಸರಿನಲ್ಲಿ ನೇತಾರೈತರು ಅದೆಲ್ಲಿಂದಲೊ ೧,೩೮,೩೧೩ ರೈತರ ಸಹಿ ಸಂಗ್ರಹಣೆ ಮಾಡಿ ಕುಲಾಂತರಿ ಸಾಸಿವೆ ಕೃಷಿಕರಿಗೆ ಶೀಘ್ರ ಬೇಕೆಂದು ಒತ್ತಾಯಿಸಿದ್ದಾರೆ.

ಈ ಬೆದರು ಬೊಂಬೆಯಾಟದ ಸೂತ್ರದಾರ ಎಲ್ಲೆಲ್ಲಿದೆ? ನಾವೂ ನೇಪಥ್ಯದಲ್ಲಿ ತುಸು ಇಣುಕಿ ನೋಡೋಣ:
ಬಿಟಿ ಹತ್ತಿಯ ಅಬ್ಬರದ ದಿನಗಳಲ್ಲೇ ವಿಜ್ಞಾನಿಗಳು ಪೈಪೋಟಿಯಲ್ಲಿ ಭತ್ತ, ಬದನೆ, ಕೋಸು, ಬಟಾಟೆ, ಸಾಸಿವೆ… ಹೀಗೆ ನಾನಾ ಸಸ್ಯಗಳ ಮೇಲೆ ಕುಲಾಂತರಿ ತಂತ್ರದ ಪ್ರಯೋಗಕ್ಕೆ ಇಳಿದರು. ತಮ್ಮ ಹೊಸ ಬೀಜಗಳೊಂದಿಗೆ GEACಯ ಎದುರು ಅನುಮತಿಗಾಗಿ ಕ್ಯೂ ನಿಂತರು.
ದಿಲ್ಲಿಯ ದೀಪಕ್ ಪೆಂಟಾಲ್ ಹೆಸರಿನ ಖ್ಯಾತ ವಿಜ್ಞಾನಿಯೂ ದಿಲ್ಲಿ ವಿವಿಯ ಕ್ಯಾಂಪಸ್ಸಿನಲ್ಲಿ ಕುಲಾಂತರಿ ಜೀವಿಗಳ ಅದ್ಧೂರಿ ಪ್ರಯೋಗಾಲಯ ಆರಂಭಿಸಿದರು. ೨೦೦೨ರಲ್ಲಿ ‘ಧಾರಾ ಮಸ್ಟರ್ಡ್ ಹೈಬ್ರಿಡ್ ೧೧’ (ಡಿಎಮ್‌ಎಚ್೧೧) ಹೆಸರಿನ ಹೊಸ ಸಾಸಿವೆ ತಳಿಯನ್ನು ಸೃಷ್ಟಿಸಿದರು.
ಧಾರಾ ಎಂದರೆ ಮದರ್ ಡೇರಿಯ ಖಾದ್ಯತೈಲದ ಬ್ರಾಂಡಿನ ಹೆಸರು. ಅದಕ್ಕಾಗಿ ಡೇರಿ ಅಭಿವೃದ್ಧಿ ಮಂಡಲಿಯ ಭಾರೀ ಧನಸಹಾಯವನ್ನೂ ಪಡೆದರು.

ಈ ವಿಜ್ಞಾನಿ ಮುಂದೆ ದಿಲ್ಲಿ ವಿವಿಯ ಕುಲಪತಿಯಾಗಿ ನಿವೃತ್ತಿಯಾಗಿ ಅಲ್ಲೇ ಅದೇ ಲ್ಯಾಬಿನ ನಿರ್ದೇಶಕರಾಗಿದ್ದಾರೆ. ಅವರಿಗೆ ಮೊನ್ಸಾಂಟೊ ಬೆಂಬಲವೂ ಇಲ್ಲ; ಅವರು ಸಾಸಿವೆಯಲ್ಲಿ ತೂರಿಸಿದ್ದು ಬಿಟಿ ಏಕಾಣುಜೀವಿಯ ತಳಿಸೂತ್ರವೂ ಅಲ್ಲ. ಆದರೆ ಮಣ್ಣಿನಲ್ಲೇ ಇರುವ ಬ್ಯಾಸಿಲಸ್ ಅಮೈಲೊ ಲಿಕ್ವಿಫೇಸಿಯನ್ಸ್ (ಬಿಎ) ಎಂಬ ಸೂಕ್ಷ್ಮಾಣು ಜೀವಿಯನ್ನು ಎತ್ತಿದರು. ಅದನ್ನು ತಾನೇ ರೂಪಿಸಿದ ಹೈಬ್ರಿಡ್‌ ಸಾಸಿವೆಯ ಅಂಗಾಂಶದಲ್ಲಿ ಸೇರಿಸಿದರು.

ಇದರ ವಿಶೇಷ ಗುಣ ಏನೆಂದರೆ, ದಂಟು, ಎಲೆ, ಹೂಕಾಯಿಗಳ ತುಂಬ ಇದರ ತಳಿಗುಣವನ್ನು ಸೇರಿಸಿಕೊಂಡ ಸಾಸಿವೆ ಸಸ್ಯದ ಮೇಲೆ ಎಷ್ಟೇ ಕಳೆನಾಶಕ ವಿಷವನ್ನು ಸುರಿದರೂ ಸಾಸಿವೆ ಸಾಯುವುದಿಲ್ಲ. ಅದು ಸಾವಿಲ್ಲದ ಸಾಸಿವೆಯಾಗುತ್ತದೆ. ಬದಲಿಗೆ ಅದರ ಸುತ್ತ ಬೆಳೆದಿರುವ ಕಳೆಸಸ್ಯಗಳು ಸುಟ್ಟು ಹೋಗುತ್ತವೆ.

ಅಂದರೆ, ಸಾಸಿವೆಯ ಸಾಲಿನಗುಂಟ ಆಸಿಡ್ ಸುರಿದ ಹಾಗೆ ಕಳೆನಾಶಕ ಗ್ಲುಫೊಸಿನೇಟ್ ವಿಷವನ್ನು ಸುರಿಯುತ್ತ ಹೋದರೆ ಕೆಲಸ ಮುಗಿಯಿತು. ಇಲ್ಲಿ ಮೊನ್ಸಾಂಟೊ ಕಂಪನಿಯ ಪಾತ್ರ ಏನೂ ಇಲ್ಲ ನಿಜ. ಆದರೆ ಅಷ್ಟೇ ಕುಖ್ಯಾತಿ ಗಳಿಸಿದ ಬಾಯರ್ ಹೆಸರಿನ ಇನ್ನೊಂದು ಬಹರಾಷ್ಟ್ರೀಯ ಕಂಪನಿ ʼಗ್ಲುಫೊಸಿನೇಟ್ʼ ವಿಷವನ್ನು ತಯಾರಿಸುತ್ತದೆ. ಇದನ್ನು ಸುರಿದರೆ ಕಳೆಗಳೆಲ್ಲ ಸತ್ತರೂ ಸಾಸಿವೆ ಸಸ್ಯಗಳು ಮಾತ್ರ ಸೊಂಪಾಗಿ ನಿಂತಿರುತ್ತವೆ.

ಮೊನ್ಸಾಂಟೊ ಕಂಪನಿ ಬಿಟಿ ಬದನೆಯನ್ನು ಹೊಲದಲ್ಲಿ ಬೆಳೆಸಲು ಹೊರಟು ದೇಶಾದ್ಯಂತ ಪ್ರತಿಭಟನೆ ಎದುರಿಸಿತಷ್ಟೆ. ಯಾವ ಆಹಾರವಸ್ತುಗಳಿಗೂ ಕುಲಾಂತರಿ ತಂತ್ರಜ್ಞಾನ ಬೇಡವೆಂದು ಜಪಾನ್, ಚೀನಾ ಸೇರಿದಂತೆ ನೂರೊಂದು ರಾಷ್ಟçಗಳು ನಿಷೇಧ ಹಾಕಿರುವ ಅದೇ ಸಂದರ್ಭದಲ್ಲಿ ದೀಪಕ್ ಪೆಂಟಾಲ್ ತಮ್ಮ ಲ್ಯಾಬಿನಲ್ಲಿ ಬೆಳೆಸಿದ ಕುಲಾಂತರಿ ಸಾಸಿವೆಯನ್ನು ಪ್ರಾಯೋಗಿಕವಾಗಿ ಹೊಲದಲ್ಲಿ ಬೆಳೆಸಲು ಜಿಇಎಸಿಯ ಅನುಮತಿ ಕೇಳಿದರು.

ಕುಲಾಂತರಿಗಳ ಸಮಗ್ರ ಅಧ್ಯಯನ ನಡೆದ ಹೊರತೂ ಹೊಲಕ್ಕೆ ಊರುವುದು ಬೇಡವೆಂದು ಸಂಸದೀಯ ಸಮಿತಿ ಹಾಗೂ ಸರ್ವೋಚ್ಚ ನ್ಯಾಯಾಲಯದ ತಾಂತ್ರಿಕ ಸಮಿತಿ ಶಿಫಾರಸು ಮಾಡಿದವು. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಮೇಲೆ ಈ ಸಮಿತಿಗಳ ಶಿಫಾರಸುಗಳನ್ನು ಬದಿಗೊತ್ತಿ, ಜಿಇಎಸಿಯ ಸದಸ್ಯರನ್ನು ಬದಲಿಸಿ, ಕುಲಾಂತರಿ ಸಾಸಿವೆ ಬೆಳೆಗೆ ಪ್ರಾಯೋಗಿಕ ಅನುಮತಿ ನೀಡಲಾಯಿತು.
ಆದರೆ ಸಾಸಿವೆಯನ್ನು ಜಾಸ್ತಿ ಬೆಳೆಯುವ ಬಹುತೇಕ ರಾಜ್ಯಗಳು ರೈತರಿಗೆ ಅನುಮತಿ ನೀಡಲು ನಿರಾಕರಿಸಿದವು. ರಾಜಸ್ತಾನದಲ್ಲಿ ರೈತರೇ ಪ್ರಾಯೋಗಿಕ ಬೆಳೆಯನ್ನು ಸುಟ್ಟು ಹಾಕಿದರು. ಪಂಜಾಬ್ ಮತ್ತು ದಿಲ್ಲಿ ಎರಡೇ ರಾಜ್ಯಗಳ ಹೊಲದಲ್ಲಿ ನಡೆದ ಪ್ರಯೋಗಗಳ ಆಧಾರದ ಮೇಲೆ ಈಗ (2016ರಲ್ಲಿ) ಎಲ್ಲೆಂದರಲ್ಲಿ ಅದನ್ನು ಬೆಳೆಯಲು ಮುಕ್ತ ಅವಕಾಶ ಬೇಕೆಂಬ ಒತ್ತಾಯ ಬಂದಿದೆ.

ರೈತಪರ ಸಂಘಟನೆಗಳ ವಾದದ ಪ್ರಕಾರ, ಕುಲಾಂತರಿ ಸಾಸಿವೆಯಿಂದ ರೈತರಿಗೆ ಏನೂ ಪ್ರಯೋಜನ ಇಲ್ಲ. ಸರಕಾರಗಳು ಸೂಕ್ತ ಬೆಂಬಲ ಬೆಲೆ ಮತ್ತು ಇನ್ನಿತರ ಪ್ರೋತ್ಸಾಹ ನೀಡಿದರೆ ಮಾಮೂಲು ಸಾಸಿವೆಯ ಉತ್ಪಾದನೆಯನ್ನೇ ಮೂರು ಪಟ್ಟು ಹೆಚ್ಚಿಸಬಹುದು. ಕು.ಸಾಸಿವೆ ಮತ್ತು ಅದರ ಎಣ್ಣೆಯಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತದೆ ಅನ್ನೋದನ್ನು ಪೆಂಟಾಲ್ ರಹಸ್ಯವಾಗಿ ಇಟ್ಟಿದ್ದಾರೆ. ಅದಕ್ಕೆ ಅನುಮತಿ ನೀಡಬೇಕಾದ ಜಿಇಎಸಿಯಲ್ಲಿ ವೈದ್ಯವಿಜ್ಞಾನಿಯೇ ಇಲ್ಲ.

ಬಹುರಾಷ್ಟ್ರೀಯ ಕಳೆನಾಶಕ ಕಂಪನಿಗೆ ಲಾಭ ಮಾಡುವುದಷ್ಟೇ ಈ ಸಾಸಿವೆಯ ಉದ್ದೇಶವಾಗಿದೆ. ಅಕಸ್ಮಾತ್ ಈ ಸಾಸಿವೆಯಿಂದ ರೈತರಿಗೆ, ವರ್ತಕರಿಗೆ ಅಥವಾ ಬಳಕೆದಾರರಿಗೆ ವ್ಯಾಪಕ ಹಾನಿಯಾದರೆ ಯಾರು ನಷ್ಟ ತುಂಬಿಕೊಡಬೇಕು ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಬಿಟಿ ಹತ್ತಿಯ ವಿಷಯದಲ್ಲಿ ಈಗಲೂ ನಿರ್ಧಾರವಾಗಿಲ್ಲ.

ಅಮೆರಿಕದಲ್ಲಿ ಕುಲಾಂತರಿ ನಿಯಮಗಳು ತುಂಬ ಬಿಗಿಯಾಗಿವೆ. ಒಂದು ಉದಾಹರಣೆಯನ್ನು ನೋಡಿ:
ಅಲ್ಲಿ ಕು.ಜೋಳವನ್ನು ಪಶು ಆಹಾರಕ್ಕೆ ಮಾತ್ರ ಬಳಸಬೇಕಿತ್ತು. ಸ್ಟಾರ್‌ಲಿಂಕ್ ಕಂಪನಿಯ ಜೋಳದ ಅವಲಕ್ಕಿಯ ಜೊತೆ ಅವರದೇ ಕುಲಾಂತರಿ ಜೋಳದ ಕಾರ್ನ್‌ಫ್ಲೇಕ್‌ ಸೇರಿ ೨೦೦೦ದಲ್ಲಿ ಮನುಷ್ಯರ ಆಹಾರದ ಡಬ್ಬಿಗೂ ಸೇರಿ ಎಡವಟ್ಟಾಯಿತು. ನಷ್ಟ ಪರಿಹಾರಕ್ಕೆಂದು ನೂರು ಕೋಟಿ ಡಾಲರ್‌ಗಿಂತ ಹೆಚ್ಚು ಹಣವನ್ನು ಕಂಪನಿ ಕಕ್ಕಬೇಕಾಯಿತು.

ನಮ್ಮಲ್ಲಿ ಬಿಟಿ ಹತ್ತಿಯಿಂದ ನಷ್ಟವಾದರೆ ರೈತರೇ ಅನುಭವಿಸಬೇಕು ಅಥವಾ ನಮ್ಮೆಲ್ಲರ ತೆರಿಗೆ ಹಣದಿಂದ ಪರಿಹಾರ ನೀಡಬೇಕೆ ವಿನಾ ಕಂಪನಿಗಳಿಗೆ ಬಿಸಿ ತಟ್ಟುವುದೇ ಇಲ್ಲ. ಈಗ ಬಹುರಾಷ್ಟ್ರೀಯ ಕಂಪನಿಯ ಕಳೆನಾಶಕ ವಿಷದ ಏಜೆಂಟರಂತೆ ವಿಜ್ಞಾನಿಗಳು ವರ್ತಿಸುತ್ತಿದ್ದಾರೆಯೆ?
ಕಳೆನಾಶಕಗಳ ಇತಿಹಾಸವೇ ಕರಾಳವಾಗಿದೆ. ದಟ್ಟಡವಿಯಲ್ಲಿ ಅಡಗಿ ಕೂತಿರುತ್ತಿದ್ದ ವಿಯೆಟ್ನಾಂ ಯೋಧರನ್ನು ಹೊರಕ್ಕೆಳೆಯಲೆಂದು ಅಮೆರಿಕದ ಮಿಲಿಟರಿ ಮೊನ್ಸಾಂಟೊ ಕಂಪನಿಯ ‘ಏಜೆಂಟ್ ಆರೇಂಜ್‌ʼ ಎಂಬ ಕಳೆನಾಶಕವನ್ನು ಗಿಡಮರಗಳ ಮೇಲೆ ಸುರಿದಿದ್ದರಿಂದ ಲೆಕ್ಕವಿಲ್ಲದಷ್ಟು ಕುಟುಂಬಗಳು ಈಗಲೂ ನರಳುತ್ತಿವೆ. ನಂತರ ಮಾನ್ಸಾಂಟೊ ಕಂಪನಿ ಹೊಸದಾಗಿ ಕಳೆನಾಶಕ ನಿರೋಧಕ (ರೌಂಡಪ್ ರೆಡಿ) ಸೋಯಾ, ಸೆಜ್ಜೆ, ಹತ್ತಿ, ಗೋಧಿ ಮುಂತಾದ ಕುಲಾಂತರಿ ಸಸ್ಯಗಳನ್ನು ಸೃಷ್ಟಿಸಿತು. ಅವಕ್ಕೆಲ್ಲ ಅದೇ ಕಂಪನಿಯ ‘ರೌಂಡಪ್’ ಹೆಸರಿನ ಕಳೆನಾಶಕ ವಿಷವನ್ನು ಸುರಿದರೆ ಕಳೆ ಮಾತ್ರ ಸಾಯುತ್ತವೆ, ಬೆಳೆ ಉಳಿಯುತ್ತವೆ.

ಆದರೆ ಕಳೆ ಸುರಿದಲ್ಲೆಲ್ಲ ಮಣ್ಣಿಗೆ, ನೀರಿಗೆ, ಗಾಳಿಗೆ ವಿಷ ಹರಡುತ್ತದೆ. ಇತರ ಜೀವಿಗಳಿಗೆ ಹಾಗಿರಲಿ, ಮನುಷ್ಯರಲ್ಲೂ ಅದು ಕ್ಯಾನ್ಸರ್‌ಗೆ ಕಾರಣವಾಗಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು. ಕಳೆದ ಮೇ ತಿಂಗಳಲ್ಲಿ ಜರ್ಮನಿ ಇದೇ ರೌಂಡಪ್‌ಗೆ (ಅದರ ವೈಜ್ಞಾನಿಕ ಹೆಸರು ‘ಗ್ಲೈಫೊಸೇಟ್ ಗೆ) ನಿಷೇಧ ಹೇರಿತು. ಜೂನ್‌ನಲ್ಲಿ ನೆದರ್ಲೆಂಡ್ಸ್ ನಿಷೇಧ ಹೇರಿತು. ಜುಲೈ ತಿಂಗಳಲ್ಲಿ ಫ್ರಾನ್ಸ್ ಕೂಡ ನಿಷೇಧಿಸಿತು. ಶ್ರೀಲಂಕಾ, ಬ್ರಝಿಲ್, ಅರ್ಜೆಂಟೈನಾ, ಕೊಲಂಬಿಯಾ ಹೀಗೆ ಸಾಲು ಸಾಲು ದೇಶಗಳು ರೌಂಡಪ್ಪನನ್ನು ಕತ್ತು ಹಿಡಿದು ಹೊರದಬ್ಬಿದವು.
ಭಾರತ ಮಿಸುಕಲಿಲ್ಲ. ನಮ್ಮಲ್ಲಿ ಎಲ್ಲೆಂದರಲ್ಲಿ “ಗ್ಲೈಫೊಸೇಟ್‌” (ರೌಂಡಪ್‌) ಕಳೆನಾಶಕ ಬಳಕೆಯಾಗುತ್ತಿದೆ. ಕಳೆಗಿಡ ಎಂದು ಕಂಡಕಂಡ ಸಸ್ಯಗಳನ್ನೆಲ್ಲ ಸುಟ್ಟು ಹಾಕುವ ಈ ದ್ರವಕ್ಕೆ ಬೇಡಿಕೆ ದಿನದಿನಕ್ಕೆ ಹೆಚ್ಚುತ್ತಿದೆ. ಈಗ ಬಾಯರ್ ಕಂಪನಿಯ ಕಳೆನಾಶಕವೂ ಅಷ್ಟೇ ಅಪಾಯಕಾರಿ ಎಂದು ಆರೋಗ್ಯ ವಿಜ್ಞಾನಿಗಳು ಹೇಳುತ್ತಿದ್ದಾರೆ. ಯದ್ವಾತದ್ವಾ ಬಳಸಿದರೆ ತಲೆಸುತ್ತು, ಪ್ರಜ್ಞಾಶೂನ್ಯತೆ, ಮೈಕೈ ನಡುಕ ಬರುತ್ತದೆಂಬುದು ಗೊತ್ತಾಗಿದೆ. ಇನ್ನು ಸಾವನ್ನೇ ಗೆದ್ದು ನಿಲ್ಲಬಲ್ಲ ಸಾಸಿವೆಯ ಗುಣ ಇನ್ನೇನೇನೊ?

ಮೂಲ ಉದ್ದೇಶ ಏನು ಗೊತ್ತೆ? ಕುಲಾಂತರಿ ಸಾಸಿವೆಯ ಉತ್ಪಾದನೆಗೆ ಅನುಮತಿ ಸಿಕ್ಕರೆ ಸಾಕು, ಅದರ ಹಿಂದೆ ಸಾಲುಸಾಲಾಗಿ ಎಳ್ಳು, ಕೊತ್ತಂಬರಿ, ಬೆಂಡೆ, ಕೋಸು, ಬದನೆ ಎಲ್ಲವೂ ಕುಲಾಂತರಿ ರೂಪ ಪಡೆದು ಮಾರುಕಟ್ಟೆಗೆ ಬರುತ್ತವೆ. ಬೀಜೋತ್ಪಾದನಾ ಕಂಪನಿಗಳಿಗೆ ಹಬ್ಬವೋ ಹಬ್ಬ.

ಹಿಂದೆ, ಬಿಟಿ ಹತ್ತಿ ಬರುವ ಮುನ್ನ ನಮ್ಮ ದೇಶದಲ್ಲಿ 35 ಬಗೆಯ ಹತ್ತಿ ತಳಿಗಳಿದ್ದವು. ಈಗ ಎಲ್ಲವೂ ನಾಪತ್ತೆಯಾಗಿ ಕೇವಲ ಬಿಟಿ ಹತ್ತಿ ವಿಜೃಂಭಿಸುತ್ತಿದೆ. ಅದೇ ಗತಿ ಇನ್ನು ಆಹಾರ ಬೆಳೆಗೂ ಬರುವ ಸಾಧ್ಯತೆ ಇದೆ. ಸಾಸಿವೆ ಅನ್ನೋದು ಆರಂಭ ಅಷ್ಟೆ.

ಅಮಾಯಕ ರೈತರಿಗೆ ಇದೆಲ್ಲ ಗೊತ್ತಾಗುವುದಿಲ್ಲ. ಅವರು ಹೆಚ್ಚು ಇಳುವರಿಯ ಈ “ಹೈಬ್ರಿಡ್‌” ಸಾಸಿವೆಯನ್ನು ಬೆಳೆಯುತ್ತಾರೆ. ಅದಕ್ಕೆ ಜಾಸ್ತಿ ಗೊಬ್ಬರ ಹಾಕಿದಾಗ ಸಹಜವಾಗಿ ಸುತ್ತೆಲ್ಲ ಕಳೆ ಬೆಳೆಯುತ್ತದೆ. ಆ ಕಳೆಯನ್ನು ಸುಟ್ಟುಹಾಕಲು ʼರೌಂಡಪ್‌ʼ ಮಾದರಿಯ ಬಾಯರ್‌ ಕಂಪನಿಯ ದ್ರವವೇ ಬೇಕು. ಕಂಪನಿಗೆ ಭಾರೀ ಲಾಭ. ನೀರು, ಮಣ್ಣು ಎಲ್ಲ ಕ್ರಮೇಣ ವಿಷಮಯವಾಗಿ ರೈತನೂ ಜಾನುವಾರುಗಳೂ ಆಸ್ಪತ್ರೆಗೆ ಹೋದರೆ ಅಲ್ಲಿ ಇನ್ನೊಂದು ಕಂಪನಿಗೆ ಲಾಭ. ಪರಿಸರ ಹಾಳಾದರೆ ಯಾರಿಗೇನು?

ಅತ್ತ ಬಿಟಿ ಹತ್ತಿ ಬೆಳೆದವರು ಮಾನ್ಸಾಂಟೊ ಬಾಣಲೆಗೆ ಬಿದ್ದಿದ್ದರೆ ಇತ್ತ ಸಾಸಿವೆಯ ಕೃಷಿಕರಿಗಾಗಿ ಬಾಯರ್ ಬೆಂಕಿ ಸಿದ್ಧವಾಗಿದೆ.
-ವಿಜ್ಞಾನ ವಿಶೇಷ ೭ಏಪ್ರಿಲ್೨೦೧೬ ನಾಗೇಶ ಹೆಗಡೆ
[ಅಪ್‌ಡೇಟ್‌: ಮಾನ್ಸಾಂಟೊ ಕಂಪನಿಯನ್ನು ಈಗ ಬಾಯರ್‌ ಕಂಪನಿಯೇ ಖರೀದಿ ಮಾಡಿದೆ. ʼಬೆಂಕಿಯೂ ನೀನೇ ಬಾಣಲೆಯೂ ನೀನೇ!]
ಚಿತ್ರಕೃಪೆ: ದಿ ಟೆಲಿಗ್ರಾಫ್

‍ಲೇಖಕರು Admin

October 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: