ಓದುಗನ ಕೈಬೀಸಿ ಕರೆಯುವ ‘ಭ್ರಮರ ಬಂಧು’

ವಾಗರ್ಥ ಕೃಷಿಯ ಮುಕ್ತಾಫಲ ಧ್ವನಿಪೂರ್ಣ ಕಾವ್ಯ

ಡಾ. ದೊಡ್ಡರಂಗೇಗೌಡ

—-

ಕವಿಯೇ ಉಳುಮೆದಾರ! ಅಧ್ಯಯನವೇ ರಸಗೊಬ್ಬರ, ಭುವಿಯೇ ಸಾಂಸ್ಕೃತಿಕ ಹೊಲ, ಕವಿಯೇ ನೆಲದ ಒಡೆಯ, ಗೇಯ್ಮೆಯೇ ಕಾವ್ಯಾಭ್ಯಾಸದ ಹವ್ಯಾಸ, ಓದುವ, ಬರೆಯವ ಪ್ರವೃತ್ತಿಯೇ ಕಾವ್ ಚಿಂತನ ಮಂಥನದ ಹೂರಣ! ಬಿತ್ತುವ ನಿಮಗ್ನ ಕಾರ್ಯವೇ ಕಾವ್ಯಾಂಕುರಕ್ಕೆ ಪೂರಕವಾದ ಪರಿಕರ! ಪರಿಸರವೇ ಸ್ಪೂರ್ತಿ, ಹದಮಳೆಯೇ ಲಯಬದ್ದವಾ ರಾಗ ರಂಗಿನ ಹಣಿಸುವಿಕೆ, ಹೀಗೆ ಹುಟ್ಟುವ ಪೈರು ಹಸಿ ಹಸಿರಾದ ಕಾವ್ಯ, ಹೊನ್ನಾರಿನ ಶುಭಸಿರಿ, ತೂಗಿ ತೊನೆವ ಮಾತು, ಮಾತಿನ ಅರ್ಥ ಸೋಪಜ್ಞವಾದ ಗೀತದ ಇಂಚರ. ಈ ಎಲ್ಲದರ ಮೇಳ ಕಾವ್ಯ ಮೈತಳೆವ ಸೃಷ್ಟಿಕಾರ್ಯ! ಅದು ಹೊರಬಂದಾಗ ಕಾವ್ಯ ನೀಡಿದ ಕವಿಯ ಧನ್ಯತಾಭಾವ.
ಕವಿ/ಕವಯತ್ರಿ ಒಂದು ಮಹಾನ್ ಚೇತನ! ಕವಿಯ ಜೀವನಾನುಭವವೇ ಕಾವ್ಯ ಸಾಮಗ್ರಿ; ಅದು ಸದಾ ಸ್ಪಂದಿತ; ಆರ್ದ್ರವಾದದ್ದು. ಲೋಕಾನುಭವವನ್ನು ತನ್ನ ಸಹಜವಾದ ಸ್ಪರ್ಷದಿಂದ ಹೀರಿಕೊಳ್ಳುತ್ತದೆ. ಅಲ್ಲಿ ಘಟನಾವಳಿಗಳಿಂದುಂಟಾದ ತುಡಿತ-ಮಿಡಿತದ ಹಸಿಹಸಿ ತೇವಾಂಶ ಇರುತ್ತದೆ. ಅದೇ ಕವಿಯ ಕಾವ್ಯಕ್ಕೆ ಇಂಧನ! ಚಂದನ; ಸಕಲ ಕರ್ಮ ಕಾರಣ!

ಎಲ್ಲಿ ಲೋಕಾನುಭವದ ನೈಜ ಅನ್ನಿಸಿಕೆ ಕವಿಯ ಹೃದಯಕ್ಕೆ ಬೇರುತ್ತದೋ, ನಾಟುತ್ತದೋ ಅಲ್ಲಿ ಬರೆಯಬೇಕೆಂಬ ಹೇಳಿಕೊಳ್ಳಬೇಕೆಂಬ ಒತ್ತಡವೇ ಕಾಡುತ್ತದೆ. ಅದೊಂದು ಬಗೆ ಪುಟಿವ ಕಾರಂಜಿ. ಒಳಗೆ ಹುದುಗಿಸಿಕೊಳ್ಳಲಾಗದು, ಹೊರಬರುವ ತಹತಹ ಅದಕ್ಕೆ, ಹಾಗಿ ಮೇಲ್ಜಿಗಿವ ಭಾವ ಚಿಲುಮೆ ಕಾವ್ಯದ ಸ್ಪುರತೆಗೆ ಅತಿರೇಕದ ಅಭಿವ್ಯಕ್ತಿಯ ಬುಗ್ಗೆಯಾಗುತ್ತದೆ, ಅಂಥಾ “ಅಪ್ ಸರ್ಜ್” ಕಾವ್ಯವಾಗಿ ಹೊರಬಂದು ಹೊನಲಾಗಿ ಆಕಾರವನ್ನು ಪಡೆಯುತ್ತದೆ.

ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಬರಹಗಾರ್ತಿ ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿಯವರು ಕಥೆಗಳನ್ನೂ, ಕಾದಂಬರಿಗಳನ್ನೂ, ಹನಿಗವನಗಳನ್ನೂ, ಭಾವಗೀತೆಗಳನ್ನೂ, ಕವಿತೆಗಳನ್ನೂ ಬರೆದು ಪ್ರಕಟಿಸಿದ್ದಾರೆ. ಆಕೆಯ ಚುಟುಕುಗಳಂತೂ ಆಕರ್ಷಕ, ಸಂಕ್ಷಿಪ್ತತೆ, ವ್ಯಂಗ್ಯ, ವಿಡಂಬನೆ, ಮಾತಿನಲ್ಲಿ ಚುರುಕುತನ, ವಿಷಯದ ಆಯ್ಕೆಯಲ್ಲಿ ಜಾಣತನ ಪ್ರದರ್ಶಿಸಿ ಓದುಗರ ಮನ ಗೆದ್ದಿದ್ದಾರೆ. ಶ್ಲೇಷಗಳ ಬಳಕಯಲ್ಲೂ ಅಗ್ರಗಣ್ಯೆ, ವಿಚಾರವಂತೆ, ಹೊಸತನಕ್ಕೆ ಹಂಬಲಿಸುವ ಕವಯತ್ರಿ! ನವೋದಯ ಹಾಗೂ ನವ್ಯ ಎರಡೂ ಕಾವ್ಯ ಮಾರ್ಗದಲ್ಲಿ ಪಳಗಿದ್ದಾರೆ. ಇಷ್ಟಾದರೂ ಸ್ತ್ರೀವಾದಿ ಲೇಖಕಿಯರಂತೆ ಅತಿರೇಕಕ್ಕೆ ಹೋಗದೆ ಸುವರ್ಣ ಮಧ್ಯಮ ನಿಲುವನ್ನು ನಿಚ್ಚಳವಾಗಿ ಪ್ರದರ್ಶಿಸಿದ್ದಾರೆ. ತನ್ಮೂಲಕ ತಮ್ಮ ಸೋಪಜ್ಞತೆಯನ್ನು ಮೆರೆದಿದ್ದಾರೆ. ಕಾಯುವ ಸುಖದ ರಸ ನಿಮಿಷಗಳನ್ನು ಕವಯತ್ರಿ ಚೆನ್ನಾಗಿ ಪದಪುಂಜಗಳಲ್ಲಿ ಕಟ್ಟಿಕೊಡುತ್ತಾರೆ.
 
ಬಯಕೆಯ ಬೆಟ್ಟಗಳು ಸಾಲಾಗಿ ಹರಡಿವೆ
ಅಂತರಂಗದ ಹಾಡು ಗುನುಗಿವೆ

ನನ್ನ ಎದೆಯೊಳಗೆ ನಡೆದು ಬರುವುದು
ನಿನ್ನ ಹೆಜ್ಜೆ ಸದ್ದು- ಮಾರ್ಮಿಕವಾಗಿ ಗಮನಿಸುವಿಕೆ!

  • *
    ಎಲ್ಲ ಬದಲಾವಣೆಗೂ ನೀನು ಕಾರಣ
    ಬೆರಗುಗೊಳ್ಳುವೆ ನಾನು!
    * *
    ಪ್ರೀತಿಯ ಮುಂದೆ ಎಲ್ಲವೂ ಸುಳ್ಳು
    ಮರೆಯುವೆ ಶತಮಾನಗಳ ನೋವು
  • ಇಂಥ ಅಪರೂಪದ ಸಾಲುಗಳನ್ನು ಬರೆದಿರುವ ಕವಯತ್ರಿಯ ಪ್ರತೀಕ್ಷೆಯಲ್ಲೂ ಪ್ರೇಮಭಿಕ್ಷೆಯ ಪರಿಪರಿ ಇದೆ!
    ಈ ಸಂಕಲನದ ಅತ್ಯಂತ ಶ್ರೇಷ್ಟ ಪದ್ಯ “ನಾನು ಉರಿದು ಹೋಗುತ್ತಿದ್ದೇನೆ” ಹೆಣ್ಣಿನ ತಳಮಳ, ಆಕೆಯನ್ನು ಗಮನಿಸದೆ ದೂರ ಇಟ್ಟ ರೀತಿ ಅಸಹನೀಯ!
  • ಇಲ್ಲಿ ಅಗ್ನಿಕನ್ಯೆ, ಆಕೆಯ ಮನಸನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ! ಆ ವಹ್ನಿಕಲ ಕ್ಷತ್ರಿಯೆಯನ್ನು ಮಾತಾಡಿಸಿದರೆ ಎಲ್ಲಿ ಇವಳು ನನಗೂ ಅಂಟಿಕೊಂಡುಬಿಟ್ಟಾಳೋ ಎಂಬ ಗಂಡು ಸಮಾಜದ ಉಪೇಕ್ಷೆಯ ಚಿತ್ರಣ ಇಲ್ಲಿದೆ. ಬೆಂಕಿ ಕಂಡರೆ ಯಾಕೆ ಈ ಭಯ ಎಂದೇ ಪ್ರಶ್ನಿಸುತ್ತಾಳೆ ನಾರೀಮಣಿ!
  • ಇದ್ದಾಗ ಗಮನಿಸಲೂ ಇಲ್ಲ ಆದರಿಸಲೂ ಇಲ್ಲ, ಇಲ್ಲದಾಗ ಅಳಿದುಳಿದ ಅಸ್ತಿಗಳನ್ನು ಎತ್ತಿಕೊಳ್ಳಲು ಧಾವಿಸಿ ಬರುತ್ತಾರೆ ಎಂಬ ಸ್ತ್ರೀ ಸಂವೇದನೆಯಲ್ಲಿ ಅಪಾರ ನೋವಿದೆ. ಅಳಿಸಲಾಗದ ಅಳಲೂ ಇದೆ! ಕವಯತ್ರಿ ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ ಮತ್ತೆ ಮತ್ತೆ ಪ್ರೇಮವನ್ನು ಪ್ರೇಮದ ಪರಿಪರಿಯನ್ನೂ ಅರ್ತಿಯ ಅನಂತ ಆಯಾಮಗಳನ್ನೂ ನಲ್ಮೆಯ ಆಳ ಅಗಲಗಳನ್ನೂ ಬರೆಯುತ್ತಾರೆ. ಹೀಗಾಗಿ ಅವರ ಒಲುಮೆ ಗೀತೆಗಳಿಗೆ ಬಾನಗಲ-ಭುವಿಯಗಲ ವಿಸ್ತಾರವಿದೆ; ವೈಶಾಲ್ಯವಿದೆ. ಒಂದೇ ವಸ್ತು ಕುರಿತು ಬರೆದರೂ ನಾನಾ ಅರ್ಥದ ಪರಂಪರೆಗಳಿವೆ! ಉದಾಹರಣೆಗೆ ಒಲವಿನಲೆ ಪದ್ಯ ಓದಿ ಓದುಗರು ನನ್ನ ಮಾತಿನ ವಿವಿದಾರ್ಥಗಳನ್ನು ಮನಗಾಣಬಹುದು. ನಿನ್ನೊಲವ ಅಲೆಗಳು ಅಪ್ಪಳಿಸಿದಾಗೆಲ್ಲಾ ಮನದ ಭಾಗಳು ಉಕ್ಕುಕ್ಕಿ ನಿನಗೆ ಮುತ್ತಿಕ್ಕುತ್ತವೆ, ಅಪ್ಪುತ್ತವೆ, ಮಾತುಗಳು ಕರಗಿ ಮೌನವಾಗಿ ರಾಗಾನುರಾಗದ ನಿವೇದನೆಯ ನಿನಗರ್ಪಿಸುತ್ತವೆ. ಪ್ರೀತಿಯ ರಂಗಿನ ಓಕುಳಿಯಾಡುವ ಚಿತ್ರ ಚೆನ್ನಾಗಿ ನೀಡುತ್ತಾರೆ. ಇನಿಯನ ಸುಖದ ಸಾಂಗತ್ಯದ ಪರಾಕಾಷ್ಠೆಯ ಭಾವಗಳು ಭಾವತೀವ್ರತೆಯ ಆನಂದದ ಶಿಖರಗಳನ್ನು ಮುಟ್ಟುವ ವಿವಿಧ ಬಗೆಯ ಬಣ್ಣನೆಯ ರಾಗರಂಗು ಚಿತ್ತದ ಅನಂತ ಚಿತ್ತಾರಗಳನ್ನು ಬರೆಯುತ್ತವೆ.
  • ನಾಳೆ ಜೇನಾಗುವಾ, ಕಾಯುತ್ತಾ ನಿನಗಾಗಿ ಈ ಪರಿಯ ಗೀತ ಸರಣಿಯಲ್ಲಿ ಹೃದಯಾನುರಾಗದ ಪ್ರೇಮಸರಪಳಿ ಸುತ್ತಿಕೊಂಡ ಬಗೆಯಲ್ಲಿ ಈ ಕವಿಯ/ಕವಯತ್ರಿಯ ಅನುರಾಗದ ಬೃಹದ್ದರ್ಶನವೇ ಅಭಿವ್ಯಕ್ತಿಸಿದೆ. ಕಡ, ಹೃದಯದೆಲೆಯ ಮೇಲೆ, ಮರೆಯಲೆಂತು? ಒಲವಿನ ಬಿನ್ನಹವಿದು, ಕಚಗುಳಿ, ಬೀಗಮುದ್ರೆ ಇವೆಲ್ಲಾ ಇದೇ ಸಾಲಿನ ಪದ್ಯಗಳು.
  • ಧ್ವನಿಯನ್ನು ಆಧರಿಸಿ ಹೇಳುವುದಾದರೆ ಪ್ರೇಮದ ಧಾರಾವಾಹಿ! ಒಲವು ಆಯಸ್ಕಾಂತದಂತೆ ಬರಸೆಳೆದಿದೆ, ಪ್ರೇಮಾರಾಧನೆಯ ಸುತ್ತಲೇ ಈ ಕವಿತೆಗಳು ಗಿರಕಿ ಹೊಡೆದರೂ ಅಂತರಂಗದ ಒಲವಿನ ತಂತು-ಬಣ್ಣದ ಬುಗುರಿಯಂತೆ ತಿರುಗುವಿಕೆಯ ಚೆಲುವು ಸೌಂದರ್ಯಮೀಮಾಂಸೆಯನ್ನೇ ಪಡಿ ನುಡಿಯುವಂತಿದೆ.
  • ಹಾಗೆ ನೋಡಿದರೆ ಇದೊಂದು ಪ್ರೇಮಕೋಶದ ಭಾವಭಂಡಾರ! ಪ್ರೇಮವೇ ಇವರಿಗೆ ಊಟ ನಿದ್ದೆ ಹಗಲು ಇರುಳು ಎಲ್ಲಾ!
    ನಾ ನಿನ್ನ ಸಂಧಿಸಲಿಲ್ಲ . . . . ನೀ ನನ್ನ ನೋಡಲಿಲ್ಲ
    ಆದರೂ ಕಾಡತಾವ ನೆನಪು!
    ಇಂಥ ಪ್ರೇಮದ ಒಗಟುಗಳು ಕೃತಿಯ ಉದ್ದಗಲ ಮೈಚಾಚಿವೆ; ಓದುಗನ ಕೈಬೀಸಿ ಕರೆಯುತ್ತವೆ. ಅದೇ ಇಲ್ಲಿನ ಶ್ರೇಷ್ಠತೆ!

‍ಲೇಖಕರು avadhi

November 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: