ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ ‘ಮಹಾತ್ಮನ ಮಗಳು’

ಮಂಜುನಾಥ್ ಚಾಂದ್ ಅವರ ‘ಮಹಾತ್ಮನ ಮಗಳು’

ವೀರಲೋಕ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಪ್ರಸನ್ನ ಅವರಬರಹ ಇಲ್ಲಿದೆ.

-ಪ್ರಸನ್ನ

ಮಂಜುನಾಥ್ ಚಾಂದ್ ಅವರ ಹೊಸ ಪುಸ್ತಕ ‘ಮಹಾತ್ಮನ ಮಗಳು’ ಒಂದು ಮಹತ್ವವಾದ ಕೃತಿ. ಈ ಕೃತಿಯ ಮಹತ್ವದ ಬಗ್ಗೆ ಮಾತನಾಡುವ ಮೊದಲು ಇದರ ಲೇಖಕರ ಬಗ್ಗೆ ಎರಡು ಮಾತು. ಇದೊಂದು ಅನುವಾದ. ಮೀರಾ ಬೆಹೆನ್ ಯಾನೆ ಮೆಡಲಿನ್ ಸ್ಲೇಡ್ ಅವರ ಆತ್ಮಕಥೆಯಾದ ಸ್ಪಿರಿಟ್ಸ್ ಪಿಲ್ಗ್ರಿಮೇಜ್ ಕನ್ನಡ ಅನುವಾದವಿದು. ಆದರೆ ಇದು ಎಲ್ಲಿಯೂ ಅನುವಾದದ ಕೃತಿ ಎಂದು ಅನ್ನಿಸುವುದೇ ಇಲ್ಲ. ಮೀರಾ ಒಬ್ಬರು ಕನ್ನಡತಿ ಮತ್ತು ಮಹಾತ್ಮರು ಒಬ್ಬರು ಕನ್ನಡಿಗ ಅನ್ನುವಷ್ಟು ಆಪ್ತವಾಗಿ ಮತ್ತು ಅಷ್ಟೇ ಸೂಕ್ಷ್ಮವಾಗಿ ಹೆಣೆದಿರುವ ಅನುವಾದವಿದು. ಅದಕ್ಕೆ ನಾನು ಮಂಜುನಾಥ್ ಚಾಂದ್ ಅವರನ್ನು ಅಭಿನಂದಿಸುತ್ತೇನೆ.

ಇನ್ನು ಈ ಕೃತಿಯ ಮಹತ್ವದ ಬಗ್ಗೆ ಹೇಳಬೇಕೆಂದರೆ ಇಲ್ಲಿ ಮೀರಾ ಬೆಹೆನ್ ಅವರು ಗಾಂಧೀಜಿ ಅವರ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಬದಲಾಗಿ ಅವರ ಆಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಈ ಕೃತಿಯಿಂದಾಗಿ ಅವರ ನಡೆ-ನುಡಿ ಮತ್ತು ಜೀವನಶೈಲಿ ಅವರ ಒಡನಾಡಿಗಳೊಂದಿಗೆ ಇದ್ದ ವ್ಯವಹಾರ ಇಂತವುಗಳು ತುಂಬಾ ಆಪ್ತವಾಗಿ ಮೂಡಿಬಂದಿವೆ. ಈ ಪುಸ್ತಕವನ್ನು ಓದುತ್ತ ಹೋದಹಾಗೆ ಗಾಂಧೀಜಿ ಅವರನ್ನು ಹೇಗೆ ಕಡೆಗಣಿಸಿದ್ದೇವೆ ಎಂಬ ಅರಿವಾಗುತ್ತದೆ. ಅದರಲ್ಲೂ ನಮ್ಮ ರಾಜಕೀಯ ಪಕ್ಷಗಳು ಎಷ್ಟು ಗಾಂಧಿಯನ್ನು ತಿರಸ್ಕರಿಸಿವೆ ಎಂದು ಅನ್ನಿಸತೊಡಗುತ್ತದೆ.

ನಿಜ, ಯಾರೂ ತಿರಸ್ಕರಿಲ್ಲ. ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ವರ್ಷಕ್ಕೊಮ್ಮೆ ಗಾಂಧಿ ಆರಾಧನೆ ಮಾಡುತ್ತಾರೆ. ಆಗಾಗ ಕೆಲವು ಅನಗತ್ಯ ಸಂದರ್ಭಗಳಲ್ಲಿ ಅವರ ಕೆಲವು ಮಾತುಗಳನ್ನು ಉದಾಹರಿಸುತ್ತಾರೆ. ಅವರ ಹೆಸರಿನಲ್ಲಿ ಒಂದೆರಡು ರಸ್ತೆಗಳು, ಸೌಧಗಳನ್ನು ಕಟ್ಟಿದ್ದಾರೆ, ಇವೆಲ್ಲವೂ ನಿಜ. ಆದರೆ ಮೂಲದಲ್ಲಿ ನಾವೆಲ್ಲರೂ ಗಾಂಧಿಯಿಂದ ನೂರಾರು ಮೈಲಿ ದೂರ ಬಂದಿದ್ದೇವೆ. ಇದನ್ನು ನವ ಗ್ಯಾರಂಟಿ ಯುಗ ಅಥವಾ ಸಂವಿಧಾನದ ಯುಗ ಅನ್ನಿ. ಈ ಯುಗದಲ್ಲಿ ಗಾಂಧೀಜಿಯವರ ವೈಯಕ್ತಿಕ ಜವಾಬ್ದಾರಿ ಯಾರಿಗೂ ಇಲ್ಲ.

ಈ ಕೃತಿಯನ್ನು ಓದುತ್ತ ಹೋದಹಾಗೆ, ಕೆಲವೊಮ್ಮೆ ಕಣ್ಣೀರು ಬರುತ್ತದೆ. ಯಾಕೆಂದರೆ ಎಂತಹ ವ್ರತನಿಷ್ಠೆ ಮೀರಳದ್ದು ಹಾಗೂ ಗಾಂಧೀಜಿಯವರದ್ದು ಎಂದು ಅರಿವಾಗುತ್ತದೆ. ಈ ಮೀರಾಳ ಆತ್ಮಕಥನವನ್ನು ಓದುತ್ತಿದ್ದಾಗ ಗಾಂಧಿ ಅವರನ್ನು ಮಹಾತ್ಮಾ ಎಂದು ಕರೆದದ್ದು ಏಕೆ ಎಂಬ ಮಾತು ಸ್ಪಷ್ಟವಾಗಿ ತಿಳಿಯುತ್ತದೆ. ಈ ಕೃತಿಯನ್ನು ನಾವು ಓದಬೇಕು ಮಾತ್ರವಲ್ಲ, ಈ ಪುಸ್ತಕದ ಮೂಲಕ ಮತ್ತೆ ನಾವು ಗಾಂಧೀಜಿಯವರ ಆಚಾರಗಳ ಕಡೆಗೆ ಹೊರಡಬೇಕಾಗಿದೆ. ಸಾವರ್ಕರ್ ಅವರು ಕಟ್ಟಲು ಬಯಸಿದ ಮತ್ತು ಬಿಜೆಪಿ ಕಟ್ಟಲು ಬಯಸುತ್ತಿರುವ ನಾಡು ನಗರೀಕೃತವಾಗಿರುವ, ನಗರದ ಕಡೆಗೆ ದಾಪುಗಾಲು ಇಟ್ಟಿರುವ ಬಿಜೆಪಿ. ಹೆಸರಿಗೆ ಹಿಂದು ಧರ್ಮ, ಹೆಸರಿಗೆ ಪರಂಪರೆ ಎಂದು ಹೇಳುವ ಬಿಜೆಪಿ ಬೃಹತ್ ಕೈಗಾರಿಕೆಗಳು, ಬೃಹತ್ ಕೈಗಾರಿಕೋದ್ಯಮಿಗಳು ನಗರದ ಬೆಳವಣಿಗೆಯನ್ನು ಪೋಷಿಸುವ ಕಡೆಗೆ ಹೊರಟಿದೆ. ಅದಕ್ಕೆ ತದ್ವಿರುದ್ಧವಾಗಿ ಹಳ್ಳಿಗರು, ಹಳ್ಳಿಯ ಉತ್ಪಾದನೆ, ಬಡವರು, ಸುಸ್ಥಿರ ಬದುಕನ್ನು ಮೂಲದಲ್ಲಿ ಇಟ್ಟುಕೊಂಡ ಗಾಂಧೀಜಿಯನ್ನು ನಾವು ಮತ್ತೆ ನೆನಪಿಸಿಕೊಂಡು ಅವರ ಮಾರ್ಗದಲ್ಲಿ ಹೋಗದೇ ಇದ್ದರೆ ವಿನಾಶ ಕಟ್ಟಿಟ್ಟ ಬುತ್ತಿ.

ನಾನು ಈಗಾಗಲೇ ಹೇಳಿದ ಹಾಗೆ ಮೀರಾ ಅವರ ಕೃತಿಯು ಬಹಳ ಪ್ರೀತಿಯಿಂದ ಗಾಂಧಿಯವರ ಆಚಾರದ ಬಗ್ಗೆ ತನ್ನ ರೀತಿನೀತಿ, ಕಟ್ಟುನಿಟ್ಟು ಜನರಿಗೆ ಆತನ ಬಗ್ಗೆ ಇದ್ದ ಅಪಾರವಾದ ಪ್ರೀತಿ ಇವುಗಳ ಬಗ್ಗೆ ಹೇಳುತ್ತ ಹೋಗುತ್ತದೆ. ನಿಜಕ್ಕೂ ಹೇಳುತ್ತೇನೆ ಇದೊಂದು ಅಸಾಧಾರಣವಾದ ಕೃತಿ. ಎಲ್ಲರೂ ಓದಲೇಬೇಕಾದ ಪುಸ್ತಕ.

‍ಲೇಖಕರು Admin

7 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading