ಓದಬೇಕಾದ ‘ಅಪ್ಪನ ಅಂಗಿ’

ಬಿದಲೋಟಿ ರಂಗನಾಥ್

ಯಾವುದೇ ಕವಿ, ಕಥೆಗಾರ, ಲೇಖಕ ತನ್ನೊಳಗಿನ ನೋವನ್ನು ಸಾಮಾನ್ಯವಾಗಿ ಹೊರಹಾಕಲು ಹವಣಿಸುತ್ತಿರುತ್ತಾನೆ. ಅದು ಫಲಿಸಿ ಮನುಷ್ಯ ಕಥೆಗಾರನೋ ಕವಿಯೋ ಆಗುತ್ತಾನೆ. ತನ್ನೊಳಗಿನ ನೋವು ಇಳಿಯುವ ಜಾಗಕ್ಕೆ ಬೇಗ ಸಿಗುವ ಮುಲಾಮು  ಕವಿತೆ. ಅದು ತನ್ನೊಳಗಿನ ನೋವಿಗೆ ನಿರಾಳತೆಯ ಉಸಿರನ್ನು ಚೆಲ್ಲುವ ಮೂಲಕ ಬಿಡುಗಡೆಯ ಬೇಡಿಯನ್ನು ಕಳಚುತ್ತದೆ. ಯಾರಿಗೂ ಹೇಳಿಕೊಳ್ಳಲಾಗದ ಭಾವ ಕವಿತೆಯ ಸ್ವರೂಪ ಪಡೆದು ಕವಿಯಾಗಿರುವ ಸಂದರ್ಭಗಳೇ ಹೆಚ್ಚು. ನಂತರ ಬೇರೆಯವರ ನೋವನ್ನೇ ನನ್ನ ನೋವು ಎಂದು ಭಾವಿಸುತ್ತಾ ಸಮಾಜಮುಖಿಯಾಗುತ್ತಾ, ತನ್ನ ಜವಾಬ್ಧಾರಿಯನ್ನು ಕವಿಯಾದವನು ವಿಸ್ತರಿಸಿಕೊಳ್ಳುತ್ತಾನೆ.

ಅಂತಹ ಒಂದು ಉದಾಹರಣೆಯಂತೆ ಇತ್ತೀಚೆಗೆ ಲಕ್ಷ್ಮಣ್  ಅವರ ಎರಡನೇ ಕವನ ಸಂಕಲನ “ಅಪ್ಪನ ಅಂಗಿ” ತನ್ನೊಳಗೆ ಹಾದು ಹೋದ ವರ್ತಮಾನದ ತಲ್ಲಣಗಳನ್ನು ಬಾಚಿ ನಮ್ಮ ಮುಂದೆ ಇಟ್ಟಿದೆ.  ಬಹುರೂಪಿ ಪ್ರಕಾಶನ “ಅಪ್ಪನ ಅಂಗಿ” ಕವನ ಸಂಕಲನ ಪ್ರಕಟಿಸಿದೆ.

ಕವಿಯಾದವನು ಯಾವಾಗಲೂ ವರ್ತಮಾನದ ತಲ್ಲಣಗಳಿಗೆ ಜಾತಿ, ಮತ, ಪಂಥ, ಧರ್ಮವನ್ನು ಮೀರಿ ಕಿವಿಯಾಗಬೇಕು. ಆಗ ಮಾತ್ರ ಕವಿ ಸಮಾಜದ ಚಿಕಿತ್ಸಕನಾಗುತ್ತಾನೆ. ತಾನು ತೊಟ್ಟ ಅಂಗಿ ಶುಭ್ರವಾಗಿದೆ ಎಂದು ತನ್ನೊಳಗಿನ ಅಸ್ಮಿತೆಗೆ ಹೆಚ್ಚು ಒತ್ತು ಕೊಡುವಂತಹದ್ದು ಕೂಡ ಸ್ವಾರ್ಥವೆನಿಸುತ್ತದೆ. ಇಂತಹದನ್ನು ಮೀರಿ ಅಪ್ಪನ ಅಂಗಿ ಕವನ ಸಂಕಲನದ ಕವಿತೆಗಳು ತನ್ನೊಗಿನ ಸಹಜ ಜಾಗೃತಿ ಮನಸನ್ನು ತೆರೆದಿಡುತ್ತದೆ. ಈ ಸಂಕಲನದಲ್ಲಿ ಒಟ್ಟು 26 ಕವಿತೆಗಳಿವೆ. ಹೆಚ್ಚು ಕವಿತೆಗಳು ತನ್ನೊಳಗಿನ ಸಂವೇದನೆಯನ್ನು,ಸೃಜನಶೀಲತೆಯ ಮೂಲಕ ಗಟ್ಟಿಗೊಳಿಸಿಕೊಂಡಿವೆ.

“ಹಣೆಯ ಮೇಲೆ ಕೈಯಿಟ್ಟು
ಆಕಾಶ ದಿಟ್ಟಿಸುವಾಗಲೆಲ್ಲ ಅಪ್ಪನ ಗಾಂಧಿ
ಟೊಪ್ಪಿಗೆ ನೆಲಕ್ಕೆ ಬಿದ್ದು ಮಣ್ಣುಪಾಲಾಗುತಿತ್ತು
ಅಪ್ಪ ಅದನ್ನೆ ಕೊಡವಿ ಕೊಡವಿ ಧರಿಸುತ್ತಿದ್ದ”. (ಗಾಂಧಿ ಟೊಪ್ಪಿಗೆ ಮತ್ತು ಅಪ್ಪ)

ಈ ಮೇಲಿನ ಸಾಲುಗಳು ಈ ಸಂಕಲನದ ಮೊದಲ ಕವಿತೆ ಸಾಲುಗಳು. ಇವು ತನ್ನೊಳಗಿನ ಅಪ್ಪನ ಭಾವವನ್ನು ಸಮೀಕರಿಸಿಕೊಳ್ಳುವ ಭಾವವೇ ವಿಶಿಷ್ಟವಾದದ್ದು ಮತ್ತು ಸೃಜನಶೀಲತೆಯ ಜಾಗೃತ ಭಾವವೊಂದು ತನ್ನೊಳಗೆ ಕೊಡವಿ ಎದ್ದು ನಿಲ್ಲುತ್ತದೆ ಮತ್ತು ಬೆರಗನ್ನು ಹುಟ್ಟಿಸುತ್ತದೆ. ಸ್ವಾರ್ಥ ಅಸಹನೆ ಅಸತ್ಯವೇ ತಾಂಡವಾಡುತ್ತಿರುವ ವರ್ತಮಾನದ ಪರಿಸ್ಥಿಯಯಲ್ಲಿ ಅಪ್ಪನಿಗೆ ಬೇಕಿದ್ದ ಗಾಂಧಿ ಇಲ್ಲವೇನೋ ಅನ್ನಿಸುವ ಸಂಧರ್ಭಗಳು ನಿರ್ಮಾಣವಾಗುತ್ತಿರುವ ಈ ಸ್ಥಿಯಲ್ಲಿ ಗಾಂಧಿಯನ್ನು ಒಮ್ಮೆ ನೋಡಿ ತನ್ನೊಳಗನ್ನು ಬೆಳಗಿಕೊಳ್ಳಿ ಎಂದು ಹೇಳುವಂತಿದೆ. ನೆಲಕ್ಕೆ ಬಿದ್ದ ಗಾಂಧಿ ಟೋಪಿಯನ್ನು ಕೊಡವಿ ಹಾಕಿಕೊಳ್ಳುತ್ತಿದ್ದ ಅಪ್ಪ ಸತ್ಯ ನಿಷ್ಠೆಯನ್ನು ಹಾಕಿಕೊಳ್ಳುತ್ತಿದ್ದ ಎಂಬುದನ್ನು ಕವಿ ರೂಪಕದ ಮೂಲಕ ಚಂದವಾಗಿ ಅರ್ಥಗರ್ಭಿತವಾಗ ಕಾಣಿಸಿದ್ದಾರೆ. ನಮ್ಮನ್ನೂ ಒಳಗೊಂಡಂತೆ ಈ ಸಂಕಲನದ ಕವಿಯನ್ನೂ ಸೇರಿ ಅಪ್ಪಂದಿರು ತೊಟ್ಟ ಗಾಂಧಿ ಟೊಪ್ಪಿಗೆಯನ್ನು ತೊಡಲು ಒದ್ದಾಡುತ್ತಿರುವ ಸ್ಥಿತಿಯನ್ನು ಪರಮಾರ್ಶಿಸಿಕೊಳ್ಳುವ ಅನಿವಾರ್ಯತೆ ಇದೆ. ಅಂತಹ ಗಾಂಧಿ ಟೊಪ್ಪಿಗೆ ತೊಟ್ಟಾಗ ಮಾತ್ರ ಸತ್ಯದ ಪಥ ತೆರೆದುಕೊಳ್ಳುವುದು

“ಅಪ್ಪನಿಗಿದ್ದದ್ದು ಒಂದೇ
ಮೊಂಡು ತೋಳಿನ ಅಂಗಿ
ಹತ್ತಿ ಉತ್ತುವಾಗಲೂ ಜೋಳ ಬಿತ್ತುವಾಗಲೂ
ಮದುವೆಗೂ ಸೈ ಮಸಣಕ್ಕೂ ಸೈ
ಅಲ್ಲಲ್ಲಿ ಗುಂಡಿ ತಪ್ಪಿದ ಬಟನ್ ಗಳು
ಅದರ ಮೈ ತುಂಬ ಅವ್ವ ಹಾಕಿದ ತೇಪೆಗಳು”(ಅಪ್ಪನ ಅಂಗಿ)

ಈ ಸಂಕಲನದ ಶೀರ್ಷಿಕೆ ಕವಿತೆ “ಅಪ್ಪನ ಅಂಗಿ” ತನ್ನೊಳಗಿನ ಭಾವ, ನೋವಿನ ಅಸ್ಮಿತೆಯನ್ನು ಹೊತ್ತುನಿಂತು ಅಮೂರ್ತ ಭಾವವೊಂದು ಬಿಡಿಸಿರುವ ಚಿತ್ರಕ್ಕೆ ಬಣ್ಣತುಂಬುವಂತೆ ಕಣ್ಣುಮುಂದೆ ಬಂದು ನಿಲ್ಲುತ್ತದೆ. ಅಪ್ಪನ ಅಂಗಿಯ ಮೂಲಕ ಅಪ್ಪನ ಅನುಭವಗಳನ್ನು ರೂಪಕಗಳ, ಪ್ರತಿಮೆಗಳ, ಲಯದ ಮೂಲಕ ಕಟ್ಟಿಕೊಡುವಲ್ಲಿ ಕವಿತೆಯು ಸಫಲವಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಈ ಕವಿತೆ ಯಾವುದೋ ಆಪ್ತ ಭಾವಲೋಕವನ್ನು ಆವರಿಸುವಂತೆ ಮಾಡುತ್ತದೆ. ಈ ಸಂಕಲನದ ಕವಿಯ ಅಪ್ಪನ ಅನುಭವ ಮಾತ್ರವಲ್ಲದೆ ನಮ್ಮ ನಿಮ್ಮ ಅಪ್ಪಂದಿರ ಅನುಭವವೇ ಇರಬೇಕೆನೋ ಎಂಬ ಭಾವ ಕಣ್ಣ ಮುಂದೆ ಹಾದು ಹೋಗುತ್ತದೆ. ಹಾಗೆಯೇ ಬದುಕಿನ ಬೆವರ ಹನಿ ಉದುರಿಸಿ ತನ್ನ ಮಕ್ಕಳಿಗೆ ಛಲದಿಂದ ಬದುಕುವ ರೀತಿ ರಿವಾಜನ್ನು ಕಲಿಸುವಂತಿದೆ.

ಕವಿಯಾದವನು ಯಾವಾಗಲು ಎಚ್ಚರದಿಂದ ವರ್ತಿಸಬೇಕು. ಆಗಲೇ ಸಮಾಜದಲ್ಲಿರುವ ಯಾವುದೇ ಅಂಕು ಡೊಂಕುಗಳಿಗೆ ಎಚ್ಚರದ ಗಂಟೆಯಾಗಲು ಸಾಧ್ಯ. ಅಂತಹ ಒಂದು  ಪ್ರಜ್ಞೆ ಕವಿಯಾದವನಿಗೆ ಅತ್ಯಗತ್ಯ. ಹಾಗೆ ಅಂತಹ ಸನ್ನಿವೇಶಕ್ಕೆ ಕವಿಯಾದವನು ಜವಾಬ್ಧಾರಿಪೂರ್ವಕವಾಗಿ ಮಿಡಿಯಬೇಕು.

“ದೇವರ ಗುರುತು ಸಿಗುತ್ತಿಲ್ಲ ಸ್ತಂತ ದೇವರಿಗೆ
ಮಡುವಿನಲ್ಲಿ ಮುಳುಗು ಹಾಕಿದ
ದೇವರ ಕಣ್ಣು ಕಾಣಿಸುತ್ತಿಲ್ಲ” (ನೆರೆ ದೇವರು)

ಮೊದಲ ಸಾಲಿನಲ್ಲಿ ಹೇಳಿರುವಂತೆ “ಸ್ವಂತ” ಎಂಬ ಪದ ಬಳಕೆಯ ಬದಲಾಗಿ “ಸ್ವತಃ “ಅಂತ ಇದ್ದರೆ ಆ ಸಾಲಿಗೆ ಇನ್ನು ಕಳೆ ಬರುತಿತ್ತೇನೋ ಎಂಬುದು ನನ್ನ ಅಭಿಪ್ರಾಯ. ಉತ್ತರ ಕರ್ನಾಟಕ ಭಾಗದಲ್ಲಿ ವಿಪರೀತ ಮಳೆ ಬಂದ ಕಾರಣ ನೆರೆ ಬಂದು ಅವರ ಜೀವನವೇ ಅಸ್ತವ್ಯಸ್ತವಾದ ಸ್ಥಿತಿ ಇಂದಿಗೂ ಕಣ್ಣಿಗೆ ಕಟ್ಟಿದ ರೀತಿ ಇದೆ. ಅದನ್ನು ಗಮನಿಸಿದ ಕವಿಹೃದಯ ತನ್ನ ಹೃದಯ ಮೀಟಿ ಇಂತಹ ಒಂದು ವರ್ತಮಾನದ ಕವಿತೆಗೆ ಕಾರಣವಾಗಿದೆ ಎನ್ನಬಹುದು. ತನ್ನಲ್ಲಿ ಎಲ್ಲಾ ಇದ್ದರೂ ಎದುರಿಗಿರುವ ಹಸಿದವರು ಕವಿಗೆ ಕಾಣಬೇಕು. ಅಗಲೇ ನಿಜವಾದ ಕಾವ್ಯದ ಹುಟ್ಟಿಗೆ ಮನಸು ತುಡಿಯುತ್ತದೆ. ಅಂತಹ ದೀನ ಸ್ಥಿತಿಯಲ್ಲಿ ದೇವರು ತನ್ನ ಜೀವವನ್ನೇ ಉಳಿಸಿಕೊಳ್ಳಲಾರ ಸ್ಥಿತಿಗೆ ತಲುಪು ಸನ್ನಿವೇಶ ಕವಿಯ ಕಣ್ಮುಂದೆ ಬಂದು ಕೆಲವು ಕವಿತೆಗಳಾಗಿವೆ

ನಂಬಿಕೆಯ ಮೇಲೆ ನಡೆಯುವ ಮನುಷ್ಯ ತನ್ನನ್ನೇ ಉಳಿಸಿಕೊಳ್ಳಲಾರದ ದೀನ ಸ್ತಿತಿಗೆ  ಮರುಗುತ್ತಾನೆ. ಆಕಾರವಿಲ್ಲದ ದೇವರನ್ನು ಪೂಜಿಸುವ ಜನರನ್ನು ನಿಜದ ಅರ್ಥದ ಕಡೆ ಕೊಂಡೊಯ್ಯುವಲ್ಲಿ ಕವಿತೆಯು ಅಪಾರ ನೋವನ್ನು ಸೃಜಿಸುವ ಮುಖೇನ ನಶಿಸಿಹೋಗುತ್ತಿರುವ ಪುರಾತನ ದೇವಾಲಯಗಳ ಬಗ್ಗೆ ಮರುಕವೂ ಇದೆ.

“ತೊಟ್ಟಿಲಿನಲಿ ಮಲಗಿದ
ಮಗುವಿನ ಕಾಲ್ಗೆಜ್ಜೆಯ ಒಂದು
ಸಣ್ಣ ಸೊಲ್ಲಿಗೆ ಎಚ್ಚರವಾಗುತ್ತದೆ ಈ ಲೋಕ “(ತೊಟ್ಟಿಲ ಮಳೆ)

ಈ ಕವಿತೆಯ ಎಲ್ಲಾ ಸಾಲುಗಳು ಆಪ್ತವಾಗಿವೆ. ಭಾವದ ಉತ್ತುಂಗದಲ್ಲಿ ಚಲಿಸಿವೆ.ಬರೆದರೆ ಹೀಗೆ ಬರೆಯಬೇಕೆಂಬ ಅನಿಸಿಕೆ ಮನಸ್ಸಿನಲ್ಲಿ ಮೂಡದಿರದು. ಹೌದು ತುಂಟ ನಗು, ತೊದಲು ನುಡಿ ಎಲ್ಲವೂ ಚಂದವೆ ಇವೆ. ಅಂತಹದರಲ್ಲಿ ಮಗು ದೇವರ ಸಮಾನ ಎಂದು ಭಾವಿಸಿರುವ ಸಮಾಜದ ಎದಿರು ಅದರ ಮೇಲಿರುವ ಪೋಷಕರ ಕಾಳಜಿಯನ್ನೂ ಸಹ ಎಚ್ಚರಿಸುತ್ತದೆ. ಹೊರಗಿನ ಹಾಗುಹೋಗುಗಳೇ ಗೊತ್ತಿಲ್ಲದ ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಅಸಲಿ ಜವಾಬ್ಧಾರಿಯೊಂದನ್ನು ನಮ್ಮ ಮುಂದೆ ಇಡುತ್ತದೆ. ಆ ಮಗುವಿನ ಗೆಜ್ಜೆ ಸದ್ದಿಗೆ ಅಂತಹ ಶಕ್ತಿ ಇದೆ ಇಂತಹ ಭಾವನಾತ್ಮಕ ಸೆಳೆತವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಕವಿ ಲಕ್ಷ್ಮಣ್ ಯಶಸ್ವಿಯಾಗಿದ್ದಾರೆ.

“ಜಗದ ತೊಟ್ಟಿಲ ತೂಗುವ ಪ್ರಭುವೆ
ಹಸಿದು ನಿದ್ದೆಗೆ ಜಾರಿದ ಮಗುವ ಎಚ್ಚರಿಸು” (ತೊಟ್ಟಿಲ ಮಳೆ)
ಎಂಬ ಕವಿತೆಯಲ್ಲಿ ಅಂಧಕಾರದ ಕತ್ತಲ ಕಣ್ಣನ್ನು ತೆರೆಸು. “ತೊಟ್ಟಿಲನ್ನು ತೂಗಿ ಮಗುವನ್ನು ಜಿಗುಟಬೇಡ” ಎಂಬ ನಿಲುವಿನ ಹಿಂದೆ ಹಸಿದ ಮಗುವಿನ ನಿದ್ದೆ ಎಂತಹದ್ದು ? ಸಹಜವಾಗಿ ಹಸಿದ ಹೊಟ್ಟೆಯಿಂದ ಇರುವ ಯಾವ ಮಗುವಿಗೂ ನಿದ್ದೆ ಬರಲು ಸಾಧ್ಯವೇ ಇಲ್ಲ. ಅದು ಶಾಶ್ವತ ನಿದ್ದೆಯೇ ಎಂಬ ಗೊಂದಲ ಕಾಡುತ್ತದೆ ಅಥವ ಮಗುವಿನ ರೂಪವಾಗಿ ಜನರೇ ಹಸಿವಿನಿಂದ ಪ್ರಜ್ಞೆ ತಪ್ಪಿರಬಹುದೇ ? ದೊರೆ ಹಸಿವು ಮುಕ್ತ ಭಾರತವನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂಬ ಸಾಮಾಜಿಕ ಕಳಕಳಿಯೂ ಇಲ್ಲಿ ತೆರೆಯುತ್ತದೆ.

“ಕೊನೆಯ ಸಾಲು
ಹೀಗೆ ಇರಲಿ ಅಪೂರ್ಣವಾಗಿ
ಮರ ಕಾಯುವುದಿಲ್ಲವೆ ?
ಗೂಡು ತೊರೆದ ಹಕ್ಕಿಗಳ ದಾರಿಯ” (ಕಣ್ಣಲ್ಲಿ ಕೊಳ ಮುಡಿದ ಚೆಲುವೆ )

ಮರವೊಂದು ಪೂರ್ಣವಾಗಬೇಕೆಂದರೆ ಅಲ್ಲೊಂದು ಹಕ್ಕಿ ಕಲವ ಕೇಳಿಸಲೇ ಬೇಕು. ಇಲ್ಲವೆಂದರೆ ಮೌನ ಹೆಪ್ಪುಗಟ್ಟುತ್ತದೆ. ಅದಕ್ಕೊಂದು ಜೀವಕಳೆ ಬರಬೇಕೆಂದರೆ ಕಾದ ಸಾಲುಗಳಿಗೆ ಯಾವಾಗಬೇಕಾದರೂ ಪದಜೋಡಿಸಿ ಕವಿತೆಯ ಸಾಲುಗಳನ್ನಾಗಿಸಬಹುದು ಎಂಬ ಹಂಬಲ ನಿಜವಾದರೂ, ಅಪೂರ್ಣವಾದಷ್ಟು ಪ್ರಕೃತಿ ಸಹಜ ಸೌಂದರ್ಯದವಿಲ್ಲದೆ ಸೊರಗುತ್ತದೆ ಎಂಬ ಅರಿವೂ ಇರಬೇಕಾದ ಅವಶ್ಯಕತೆ ಇದೆ.

ಕೆಲವು ಕವಿತೆಗಳಲ್ಲಿ connectivity ತಪ್ಪಿ ಏನನ್ನೋ ಹೇಳಲು ಹೋಗಿ ಧಿಡೀರನೆ ಯಾವುದೋ ಸಾಲುಗಳು ಬಂದು ಕೂರುತ್ತವೆ. ಭಾವನಾತ್ಮಕ ಸ್ಪರ್ಶದಿಂದ ತನ್ನ ಜಾಗವನ್ನು ಕಸಿಯುತ್ತವೆ. ಯಾವುದೇ ಪದ್ಯ ಆರಂಭದಿಂದಲೂ ಕೊನೆಯತನಕ ತಂತಿಮೇಲೆ ನಡೆದಂತೆ ಇರಬೇಕು ವಾಲುವ ಗೋಜಿಗೆ ಬಿದ್ದು ಅರ್ಥಕೆಡಿಸಬಾರದು.

ಈ ಸಂಕಲನದ ಕೆಲವು ಕವಿತೆಗಳು ವೈಚಾರಿಕ ನೆಲೆಗಟ್ಟನ್ನು ಕೊಡವಿ ಧಾರ್ಮಿಕ ನೆಲೆಯ ದೇವರ ಮೇಲೆ ತನ್ನ ಜವಾಭ್ದಾರಿಯನ್ನು ಎಸೆದು ನಿಲ್ಲುತ್ತವೆ.
ಮದುವೆ ಅಲ್ಬಮಿನಲಿ ಅವ್ವ, ಆತ್ಮದ ಕತ್ತಲಿಗೆ ಯಾವ ಕಂದೀಲು, ಡೈರಿಯ ಮರದ ಟೊಂಗೆಯಲಿ ನೇಣಿಗೆ ಬಿದ್ದ ಚಂದ್ರ, ಗಾಯಗೊಂಡ ಹಗಲು, ಕೆನ್ನೆಯ ಮೇಲಿನ ಮೂರು ಬಣ್ಣಗಳು, ಖಾಯಂ ವಿಳಾಸ ಇವೆಲ್ಲ ಉತ್ತಮ ಕವಿತೆಗಳ ಸಾಲಿನಲ್ಲಿ ನಿಂತು ಕವಿಯನ್ನು ಬೆನ್ನ ತಟ್ಟುತ್ತವೆ.

ಇವರ ಈ ಸಂಕಲನದಲ್ಲಿ ಮಳೆ, ಪ್ರವಾಹ, ನೆರೆಯನ್ನು ತುಂಬಿ ಬರೆಸಿಕೊಂಡ ಕವಿತೆಗಳು ಆಯಾ ವರ್ತಮಾನದ ನಿಲುವುಗನ್ನಡಿಗಳಾಗಿವೆ. ಇನ್ನು ಕೆಲವು ಕೆಲವು ಕವಿತೆಗಳು ಹೆಚ್ಚು ಮಾತಾಡಿ  philosophy ಯನ್ನು ಹೇಳುವಲ್ಲಿ ಗೆದ್ದು ಬೀಗುತ್ತವೆ.

ಗೆಳೆಯ ಲಕ್ಷ್ಮಣ್ ತಾನು ಅನುಭವಿಸಿದ ನೋವು ಕಷ್ಟ ಕಾರ್ಪಣ್ಯದ ಗಂಟಿಗೆ ಕೆಲವು ಕವಿತೆಗಳ ರೂಪುಕೊಡಬಹುದಿತ್ತು. ಸಮಾಜದ ಎದುರಿಗಿರುವ ಸಾಮಾಜಿಕ ವೈರುಧ್ಯಗಳ  ಬಗ್ಗೆಯೂ  ಕವಿತೆಯ ರೂಪಕೊಡಬಹುದಿತ್ತು. ಅದನ್ನು ಮುಂದಿನ ಕವಿತೆಗಳಲ್ಲಿ ಮಾಡುತ್ತಾರೆಂಬ ಭರವಸೆ ಇದೆ.

ಈ ಸಂಕಲನಲ್ಲಿ ಸರಳ ಭಾಷೆಯಲ್ಲಿಯೇ ಹೇಳುತ್ತಾ ಪ್ರತಿಮೆ ರೂಪಗಳನ್ನು ಕಟೆಯುತ್ತಾ ಚಂದದ ಅರ್ಥವತ್ತಾದ ಕವಿತೆಗಳನ್ಧು ಕೊಟ್ಟಿರುವ ಲಕ್ಷ್ಮಣ್ ಅವರು ನಮ್ಮ ನಡುವಿನ ಉತ್ತಮ ಭರವಸೆಯ ಕವಿಯಾಗಬಲ್ಲರು ಎಂಬ  ಆಸ್ಥೆಯನ್ನಷ್ಟೆ ಬಿಚ್ಚಿಡುತ್ತಾ, ಅವರಿಂದ ಇನ್ನು ಚಂದದ ಪರಿಪೂರ್ಣ ಕವನಗಳು ಹೊಮ್ಮಲಿ ಎಂದಷ್ಟೇ ಹೇಳುವೆ.

 

‍ಲೇಖಕರು avadhi

April 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. T S SHRAVANA KUMARI

    ಉತ್ತಮ ಕೃತಿ ಪರಿಚಯ. ಓದಬೇಕೆನ್ನುವ ಆಸಕ್ತಿ ಮೂಡಿಸುತ್ತಿದೆ.

    ಪ್ರತಿಕ್ರಿಯೆ
  2. Bidaloti Ranganath

    ಧನ್ಯವಾದಗಳು ಶರವಣಕುಮಾರ್ ಸರ್

    ಪ್ರತಿಕ್ರಿಯೆ
  3. ಎನ್ಟಿ

    ಕೃತಿಯ ವಿಶ್ಲೇಷಣೆ ಚೆನ್ನಾಗಿದೆ ಬಿದಲೋಟಿ ಅಭಿನಂದನೆಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: