ರೇವಣಸಿದ್ದಪ್ಪ ಜಿ ಆರ್
ಓಡುತ್ತಿದ್ದ
ಓಡುತ್ತಿದ್ದಾನೆ
ಮತ್ತು
ಓಡುತ್ತಲೇ ಇರುವನು
ರಚ್ಚೆ ಹಿಡಿದಂತೆ
ಸುತ್ತುವ ಭೂಮಿಯ ಮೇಲೆ
ಹುಚ್ಚು ಹಿಡಿದಂತೆ
ಓಡುತ್ತಿದ್ದಾನೆ
ಯಾರೋ ಬೆಂಬತ್ತಿದಂತೆ
ಯಾರನೋ ಬೆನ್ನು ಹತ್ತಿದವನಂತೆ
ಓಡುವುದೇ ಖಯಾಲಿಯಾದವನಂತೆ
ಓಡುತ್ತಿದ್ದಾನೆ
ಬೆಳಕಿನ ವೇಗವಿಲ್ಲ
ನಿಜ, ಕತ್ತಲಲ್ಲೂ ಬಿಡದೆ
ಓಡುತ್ತಿದ್ದಾನೆ.

ಬೆನ್ನ ಮೇಲಿನ ಹೊರೆ
ಹೊತ್ತವನಿಗಷ್ಟೇ ಗೊತ್ತು
ಹೊತ್ತಿನ ಅರಿವಿಲ್ಲದೆ
ಓಡುತ್ತಿದ್ದಾನೆ
ಮುಖದ ಮೇಲಿನ ಬೆವರು,
ಕೈಕಾಲುಗಳಿಗಾದ ದಣಿವು
ಪರಿವೆಯಿಲ್ಲದೆ ಓಡುತ್ತಿದ್ದಾನೆ
ಅಷ್ಟದಿಕ್ಕುಗಳೂ
ಕಲಸುಮೇಲೋಗರವಾದಂತೆ
ಎತ್ತಲೆತ್ತಲೋ ಓಡುತ್ತಿದ್ದಾನೆ
ಇಲ್ಲಿಂದ ಹೊರಟವನು
ಎಲ್ಲಿಗೆ ಮುಟ್ಟುವನು?
ಪ್ರಾಯಶಃ
ಮುಟ್ಟಿದ ಮೇಲೆ
ಮುಟ್ಟುವವಗೆ ಗೊತ್ತು!






0 Comments