ಆ ಒಂದು ಘಳಿಗೆ..
-ವೀರೇಶ ನಾಯಕ
ಪ್ರಾಯಶಃ, ಆ ಘಳಿಗೆ ನಿನಗೂ ನೆನಪಿರಬಹುದು
ಒಂದೇ ಕಪ್ ಗೆ ಮೋಹಕವಾದ
ತುಟಿಗಳ ಆಲಂಗಿಸಿ ಕಾಫಿ ಹೀರಿದ ಸಧ್ದು
ಎಲ್ಲ ತಿರುವುಗಳನ್ನು ದಾಟಿದ ಮಾತುಗಳು
ನಾ ಮುಂದು, ತಾ ಮುಂದು ಎಂದು ಓಟಕ್ಕಿಳಿದ ಕಣ್ಸನ್ನೆಗಳು
ನಿಬ್ಬೆರಗಾಗಿ ನಿಂತ ಕೂದಲ ಹೆರಳಿನ ಎಳೆಗಳು
ನೀನಿಗಲೂ ಹೂಂ, ಅನ್ನು
ಹೆಪ್ಪುಗಟ್ಟಿದ ನೆನಪಿಗೆ ನದಿಯಾಗುವ ಸಾಮರ್ಥ್ಯವೂ ಇದೆ
ಇಲ್ಲವೆ, ಮಡುಗಟ್ಟಿದ ದುಃಖದಿಂದ ಆವಿಯಾಗುವ ಸೂತಕವೂ ಇದೆ
ಯಾರಿಗೆ ಗೊತ್ತು?
ನಾಳೆಯ ದಿನ ನಮ್ಮಿಬ್ಬರ
ಸವೆದ ಚಪ್ಪಲಿಗಳು ಬೀದಿಗಿಳಿದು ಕಂಬನಿ ಹಾಕಬಹುದು
ನೆನಪೆಂಬ ಕೊಂಬೆ ಮುರಿದು
ಎರಡು ಹೋಳಾಗಬಹುದು
ಯಾರು ಊಹಿಸಲು ಸಾಧ್ಯ?
ಯಾವ ಘಳಿಗೆ ಹೇಗೆ ಬದಲಾಗುತ್ತದೆಂದು
ಇಬ್ಬರ ಎದೆಯಲ್ಲೂ ಒಂದೆ ನಡುಕವಿದೆ
ನಾನಿನ್ನ ಕಳೆದುಕೊಳ್ಳುವ, ಇಲ್ಲವೇ ನೀ ನನ್ನ ಕಳೆದುಕೊಳ್ಳುವ
ಅಂದಾಜಿಗೆ ಸಿಗಲಾರದ ದಯೆ
ಇಬ್ಬರ ಕಣ್ಣಲ್ಲೂ ಇದೆ
ಶವಯಾತ್ರೆಗೆ ಹೊರಟ ಕರುಣೆ
ಅಷ್ಟೊಂದು ಬರ್ಬರವೆ?
ಬೆನ್ನ ಹಿಂದೆ ಕೂತ ಕನಸುಗಳ ದಾರಿ
ಬಗೆದಷ್ಟು ನಿರಂತರತೆ
ಅಳತೆಗೆ ಸಿಗಲಾರದ ಮೃದು ಯವ್ವನ
ನಿರೂದ್ಯೋಗಿಯಾಗಿ ಅಬ್ಬೆಪಾರಿಯಾದ
ನಮ್ಮಿಬ್ಬರ ನಿನ್ನೆಯ ಖಯಾಲಿ
ನಾಳೆಯ ಜವಾಬ್ದಾರಿ
ಓಮ್ಮೆಲೆ ಮಾಡಿದ ದಾಳಿಗೆ
ಉಲ್ಕೆಗಳಂತೆ ಚೂರಾದ ಆಸೆಗಳನ್ನು
ನಿನ್ನಕಣ್ಣ ಬಿಂಬಗಳಲ್ಲಿ ನೋಡುವುದು ಶೋಚನೀಯ
ದೀರ್ಘವಾದ ನಿಟ್ಟುಸಿರು, ಮೌನ ಸ್ಮಶಾನದಲ್ಲಿ
ಕಳೆದು ಹೋಗಿರುವಾಗ ಹುಡುಕಲು ಪ್ರಯತ್ನಿಸಬೇಡ






0 Comments