ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಳಸುಳಿಗಳ ರೂಪದ ರಕ್ಕಸತನ ಹೀಗೆಯೇ…

ಗೀತಾಲಕ್ಷ್ಮಿ. ಎಲ್

ಇತ್ತೀಚೆಗೆ ಗಂಡು-ಹೆಣ್ಣು ಲಿಂಗಾಧಾರಿತ ನೆಲೆಯ ಹೊಸ ರೂಪದ ಚರ್ಚೆಗಳ ಬಗೆಗೆ ಕೇಳಿ ಕೆಲವು ಕಡೆ ಓದಿ ಒಂದಷ್ಟು ಒಳಗೆ ಹುಡುಕಿಕೊಳ್ಳತೊಡಗಿದೆ. ಇಲ್ಲಿಯವರೆಗೆ ನಡೆದ ಜಾಡಿನ ಗುರುತುಗಳಲ್ಲಿ ಕಾಲಕಾಲಕ್ಕೆ ಗಂಡನ್ನು ಗಂಡಾಗಿಯೇ ನೋಡಲ್ಪಟ್ಟ ಗಂಡು ಕುಲದ ಅಹಂ, ಹೆಣ್ಣನ್ನು ಹೆಣ್ಣಾಗಿಯೇ ಅಂಕೆಯಲ್ಲಿ ಇರಬೇಕೆಂದು ಬಯಸುವ ಗಂಡಿನಂತೆಯೇ ಯೋಚಿಸುವ ಹೆಣ್ಣು ಕುಲ ಇಬ್ಬರ ನಡುವೆ ಹುಟ್ಟುವ ಸಂಕೀರ್ಣವಾದ ಸಂಘರ್ಷಗಳ ತಾಕತ್ತು ಏನು ಇದೆಲ್ಲಾ? ಪ್ರೀತಿಯ ಧ್ಯಾನದಲ್ಲಿ ಬದುಕಲು ಇಷ್ಟೆಲ್ಲಾ ತರ್ಕಗಳ ಹೋರಾಟಗಳ ಅಗತ್ಯ ಇದೆಯಾ? ಒಂದಷ್ಟು ಪ್ರಶ್ನೆಗಳು.

ಏನಾದರೂ ಕಾಲದ ಒಡಲನ್ನೇ ತಡಕುವ ನಾವು ಮಹಿಳೆಯ ಪರ ಇರುವ ದನಿಗಳನ್ನು ಹುಡುಕಿ ಸಂಭ್ರಮಿಸುವುದು, ಮಹಿಳೆಯರು ಕಟ್ಟಿ ಬೆಳೆಸಿಕೊಂಡು ಸಾಗಿಸುತ್ತಿರುವ ಚಳುವಳಿಗಳನ್ನು ನೋಡಿ ಪುಳಕಗೊಳ್ಳುವುದು, ಗಂಡಿನ ಒಳಗಲ್ಲಿ ನಟಿಸಲ್ಪಡುವ ಮಾಯೆಗಳನ್ನೇ ಒಪ್ಪಿಕೊಂಡು ಬೀಗುವುದು ಹೀಗೆ ಅನೇಕಗಳು ನನಗೆ ಸವಾಲಿನ ರೂಪದಲ್ಲಿ ಕಾಡತೊಡಗಿವೆ.

ಸಂವೇದನೆ ಎನ್ನುವುದು ಗಂಡಿಗಿಷ್ಟು ಪ್ರಮಾಣದಲ್ಲಿರಬೇಕು ಹೆಣ್ಣಿಗೆ ಇಷ್ಟು ಮಟ್ಟದಲ್ಲಿ ಮಾತ್ರ ಇರಬೇಕು ಎಂದೆಲ್ಲಾ ಹಂಚಿಕೊಂಡು ಬಂದ ಚಿಂತನೆಯ ಒಳಗಿನ ಅವಿವೇಕ ಯಾವುದು? ಸಮಪ್ರಮಾಣದ ಸಂವೇಧನೆಗಳು ಲಿಂಗಾಧಾರಿತ ಹಾದಿಯನ್ನು ಒಮ್ಮೆ ಹಿಡಿದರೆ ಅಂತಹವರ ಒಳಗೂ ಪ್ರಹಸನವೊಂದರ ಪಾತ್ರವಾಗಿಬಿಡುವ ಅಪಾಯವಿದೆ.

ಪ್ರತಿಯೊಂದು ಕಾಲಘಟ್ಟದಲ್ಲೂ ಮಹಿಳೆಯರ ಪರ ಇರುವ ಒಳಿತು ಮತ್ತು ಕೆಡಕುಗಳ ಬಗೆಗೆ ಓದಿಕೊಳ್ಳುವಾಗ ನೇರಾನೇರಾ ನೋಡುವಾಗ ಕಾಣಿಸುವ ಘಟನೆಗಳ ಪರಿಧಿಯಲ್ಲಿ ಹೆಣ್ಣಿನ ಸುತ್ತ ಕಟ್ಟಲ್ಪಟ್ಟ ಒಪ್ಪಿತ ಹಿಂಸೆಗಳ ಗೋಡೆಗಳನ್ನು ಇಲ್ಲವಾಗಿಸಲು ನೆರವಾದ ಮನಸ್ಸುಗಳ ಬಗ್ಗೆ ಯೋಚಿಸುವಾಗ ೧೨ನೇ ಶತಮಾನ ಬಹು ದೊಡ್ಡ ಮಾನವ ಪ್ರೇಮದ ಗುರುತಾಗಿ ಭರವಸೆ ಹುಟ್ಟಿಸುತ್ತದೆ.

ಅವಮಾನಿಸಲ್ಪಡುವ ವೃತ್ತಿಯಲ್ಲಿರಿಸಿದ್ದ ಮಹಿಳೆಯರನ್ನೂ ಕೂಡ ಸಮಾಜಕ್ಕೆ ಮುಖಾಮುಖಿಯಾಗಿಸುವಲ್ಲಿ ಶರಣರ ಸಿದ್ಧತೆ ಮತ್ತು ಕಾರ್ಯರೂಪ ಮಹತ್ವದ್ದಾಗಿ ಕಾಣುತ್ತದೆ.

ಪ್ರಕಟವಾಗುತ್ತಿರುವ ಮಹಿಳೆಯರ ಸಮಸ್ಯೆಗಳನ್ನು ಕುರಿತ ಪುಸ್ತಕಗಳಲ್ಲಿ ಸಮಾಜ ಸುಧಾರಕರ ಗುಣಗಾನಕ್ಕಿಂತ ಪ್ರಾಯೋಗಿಕವಾಗಿ ಏನು ಆಗಬೇಕಾಗಿದೆ ಎಂಬ ಜಾಗ್ರತೆ ಮುಖ್ಯ. ಹಾಗೆಯೇ ವಾಸ್ತವದ ದಿಕ್ಕನ್ನು ಹೊಸರೂಪದಲ್ಲಿ ಕಟ್ಟಬೇಕಾಗಿದದ್ದು ಅಷ್ಟೇ ಮುಖ್ಯ.

ಶತಮಾನಗಳಿಂದ ಹೆಣ್ಣಿನ ಆಳಕ್ಕೆ ಗಂಡು ತುಂಬಲ್ಪಟ್ಟ ಚಿಂತನೆಗಳು ಹೇಗಿವೆಯೆಂದರೆ; ಮಹಿಳೆಯೇ ತಾನು ಭಯಪೂರಿತ ಅಂಕೆಯಲ್ಲಿ ಇರಬೇಕೆಂದು ಭಾವಿಸಿ ತನ್ನನ್ನು ನಿಯಂತ್ರಿಸಿಕೊಳ್ಳುವುದು ಒಪ್ಪಿತ ಕ್ರಿಯೆಯಾಗಿದೆ.

ಸುಟ್ಟರು, ಅತ್ಯಾಚಾರ ಆಯಿತು, ಮನೆ ಬಿಡಿಸಿದರು, ಸತ್ತ ಗಂಡನ ಚಿತೆಗೆ ನೂಕಿ ಜೀವ ಹತ್ಯೆ ಮಾಡಿದರು ಹೀಗೆ ಸಾಗುವ ಕಾಲಕಾಲದ ವರ್ತಮಾನಗಳನ್ನು ಕೇಳಿಯೋ, ಓದಿಯೋ, ನೋಡಿಯೋ ಇಂತಹವೆಲ್ಲಾ ಇವತ್ತಿಗೆ ನಿಂತುಬಿಟ್ಟಿವೆ, ಎಲ್ಲವೂ ಸುಧಾರಣೆಯಾಗುತ್ತಿದೆ ಎಂದು ಮುದಗೊಳ್ಳುವಂತಹದ್ದು ನಿಜಕ್ಕೂ ಏನು ನಡೆಯುತ್ತಿದೆ?

ಜಾಗತೀಕರಣದ ತರುವಾಯ ಹೊಸ ಸವಾಲುಗಳು ಮಹಿಳೆಯ ಮುಂದಿವೆ. ಇತ್ತೀಚಿಗೆ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಹಳ್ಳಿಯೊಂದಕ್ಕೆ ಖಾಸಗಿ ಕೆಲಸದ ಮೇಲೆ ಹೋಗಿದ್ದೆ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ನಿರ್ವಹಿಸುವ ಮಹಿಳೆಯೊಬ್ಬರ ಮನೆಯಲ್ಲಿ ಕೆಲವು ಕಾಲ ಉಳಿದೆವು.

ನನ್ನ ಬಂಧು ಹೇಳುತ್ತಯಿದ್ದರು ಇಲ್ಲಿ ಶ್ರಮಜೀವಿಗಳೆಂದರೆ ಬಹುಪಾಲು ಮಹಿಳೆಯರೆ, ಗಂಡಸರು ಇಬ್ಬರು ಮಹಿಳೆಯರನ್ನು ಮದುವೆಯಾಗುವ ಮೂಲಕ ನಿರ್ವಹಿಸುವ ವೃತ್ತಿಯೆಂದರೆ ಕುಡುಕರಾದದ್ದು. ಆ ಭಾಗದ ಬುಡಕಟ್ಟು ಕುಟುಂಬಗಳ ಸ್ಥಿತಿ ಇವತ್ತಿಗೂ ಚಿಂತಾಜನಕವಾಗಿದೆ.

ಬೆಳಗೆದ್ದು ಅರಣ್ಯಕ್ಕೆ ಹೋಗುವುದು ಸೌದೆ ಹುಡುಕಿ ತಂದು ಸಂತೆಗಿಟ್ಟು ಬದುಕನ್ನು ಉಳಿಸಿಕೊಳ್ಳಲು ಹೋರಾಡುವ ಸಾವಿರಾರು ಮಹಿಳೆಯರ ಅಶಕ್ತ ಪಾಡುಗಳು ಇವತ್ತಿನ ಮೀಡಿಯಾಗಳಿಗೆ ಕಾಣಿಸ್ತಾನೇ ಇಲ್ಲ. ಈ ಭಾಗದ ಅಥವಾ ಇಂತಹ ಅನೇಕ ಜಾಗಗಳಲ್ಲಿ ನರಳುತ್ತಿರುವ ಮಹಿಳೆಯರ ಅಳಲನ್ನು ಯಾರು ಕೇಳಬೇಕು? ಹೇಗೆ ಸರಿಮಾಡಬೇಕು, ಮಹಿಳಾ ಸಬಲೀಕರಣ ಎಂದೆಲ್ಲಾ ಅರ್ಥಪೂರ್ಣ ಹೋರಾಟಗಳ ಚಲನೆ ಇಂತಹ ಜಾಗಗಳನ್ನು ಇನ್ನೂ ಏಕೆ ತಲುಪಿಲ್ಲ? ಹೀಗೆ ಬಗೆಹರಿಯದ ಸಮಸ್ಯೆಗಳಿಗೆ ಹೋರಾಟಗಳು ಬದಲಾಗಬೇಕಿದೆ. ಮಹಿಳೆಯರ ಪರ ಹೋರಾಡುವ ಬರೆದು ಪ್ರಕಟಿಸುವ ಸ್ತ್ರೀವಾದಿ ಚಿಂತಕರೆಲ್ಲರೂ ಲೆಕ್ಕವಿಲ್ಲದಷ್ಟೂ ನೊಂದ ಮಹಿಳೆಯರ ಬಾಳನ್ನು ಹಸನು ಮಾಡಲು ಆಗದಂತಹ ಹುನ್ನಾರ ಹುಟ್ಟುತ್ತಿರುವುದಾದರೂ ಎಲ್ಲಿ?

ಆಧುನಿಕ ಸವಲತ್ತುಗಳಲ್ಲಿ ಬದುಕುವ ಉದ್ಯೋಗಸ್ಥ ಮಹಿಳೆಯರಿಗೆ ಹಾಗೂ ಕೊರತೆಗಳನ್ನೇ ಕಾಣದ ಅನೇಕ ಕುಟುಂಬದ ಮಹಿಳೆಯರಿಗೆ ಎದುರಾಗುವ ಸಣ್ಣ ಸಣ್ಣ ಅನುಭವಗಳು ಸಮಸ್ಯೆಗಳಂತೆ ಕಾಡುತ್ತಾ ಅಶಕ್ತರಂತೆ ಜೀವಹಾನಿ ಮಾಡಿಕೊಳ್ಳುತ್ತಿರುವ ಸುದ್ಧಿಗಳನ್ನು ಓದುವಾಗ ನಮ್ಮ ಸುತ್ತ ನಡೆಯುವ ಇಂತಹವುಗಳನ್ನು ಕಾಣುವಾಗ ಬದುಕಲಾಗದಂತೆ ದುರ್ಬಲಗೊಳಿಸುವ ಒತ್ತಡ ಹೇಗೆ ಮಹಿಳೆಯನ್ನು ಆಳ್ತಾ ಇದೆ ಅಂತ ನಿಜಕ್ಕೂ ಭೀತಿಯಾಗುತ್ತಿದೆ.

ಅವತ್ತಿನ ಗಾಳಿ, ಅವತ್ತಿನ ಮಳೆ ಎಂದು ನಂಬಿ ದಿನದ ಹಸಿವನ್ನು ನೀಗಿಸಿಕೊಳ್ಳಲು ಉತ್ಸಾಹದಿಂದ ಶ್ರಮಿಸುವ ಅನೇಕ ಮಹಿಳೆಯರ ಒಳಗಿನ ಗಟ್ಟಿತನ ಅಕ್ಷರಸ್ಥರಲ್ಲಿ ಇಲ್ಲವಾಗಲು ಸಕಾರಣ ಏನಿದೆ? ಪ್ರತಿನಿತ್ಯ ಹಲ್ಲೆಗೆ ಒಳಗಾಗುವ ವ್ಯಸನಿಗಳ ಕಾಟದಿಂದ ಕುಟುಂಬಗಳನ್ನು ರಕ್ಷಿಸಿಕೊಳ್ಳುವ ಮಕ್ಕಳನ್ನು ಸರಿದಾರಿಗೆ ತರಲು ಹೆಣಗುವ ಮಹಿಳೆಯರ ಸ್ಥೈರ್ಯ ಅಕ್ಷರಸ್ಥ ಮಹಿಳೆಯರ ಒಟ್ಟು ಬದುಕಿಗೆ ತಲುಪಿ ಧೈರ್ಯ ಕೊಡುತ್ತಿಲ್ಲವಲ್ಲ.

ಎಲ್ಲಾ ಕಾಲಕ್ಕೂ ಬದಲಾಗಲ್ಪಟ್ಟ ಶೋಷಣೆಗಳಿಂದ ನರಳುವಂತೆಯೇ ತುಂಬಲ್ಪಟ್ಟ ಗಂಡು ಪ್ರಜ್ಞೆಯ ಪ್ರಾಬಲ್ಯವನ್ನು ನಿಯಂತ್ರಿಸಲು ಇನ್ನು ಏನೇನೆಲ್ಲಾ ಮಾಡಬೇಕಾಗಿದೆ ಎಂಬುದು ಹೊಸ ತುರ್ತು. ಲಿಂಗಸಮಾನತೆಗಾಗಿ ಹೋರಾಡಿದ ಸಮಾನ ಆಶಯಗಳ ಪುರುಷರ ಸೃಜನಶೀಲ ಚಲನೆಯು ಕೂಡ ಕೆಲವು ಕಡೆ ದಿಢೀರಂತ ಸ್ಥಾವರವಾಗಿಬಿಡಲು ಎದುರಾಗುತ್ತಿರುವ ಈಗೋ ಯಾವ ರೂಪದಲ್ಲಿ ಕಾಣಿಸಲು ಚಿಂತಿಸುತ್ತಿದೆ.

ಕೆಲವು ಬರಹಗಾರರ ಚಿಂತಕರ ಬಾಯಲ್ಲೇ ಕೇಳಿದ್ದೇನೆ ಗಂಡು ಮಕ್ಕಳನ್ನು ನಿಯಂತ್ರಿಸುವಂತೆ ಹೆಣ್ಣು ಮಕ್ಕಳನ್ನು ನಿಯಂತ್ರಿಸಲಾಗುತ್ತಿಲ್ಲ. ಎಂತಹ ಕಡಿವಾಣಕ್ಕೂ ಜಗ್ಗದೆ ಇವತ್ತಿನ ಹೆಣ್ಣು ಮಕ್ಕಳು ಮಿತಿಮೀರುತ್ತಿವೆ ಅಂತೆಲ್ಲಾ. ಹಾಗಾದರೆ ಮೀರುವ ಕ್ರಿಯೆಯ ಒಳಗೂ ಕೂಡ ಗಂಡುಗಳದೇ ಪ್ರಾಬಲ್ಯ ಮೊದಲಾಗಬೇಕಾ? ಮೀರುವಂತೆ ಪ್ರಚೋದಿಸುವ ಹುಡುಗರು ಮೀರಲು ಸಿದ್ದವಾದ ಹುಡುಗಿಯರ ಒಳಗಿನ ಎಚ್ಚರಗಳನ್ನು ನಾಶ ಮಾಡಿದ ವ್ಯವಸ್ಥೆಯ ಲೋಪಗಳ ಕುರಿತು ಯೋಚಿಸುವುದು ಬಹಳ ಮುಖ್ಯವಾದದು.

ಇವತ್ತಿನ ಬಹುಪಾಲು ಮೀಡಿಯಾಗಳು, ಪತ್ರಿಕೆಗಳು, ಭಾರತ ಪ್ರಕಾಶಿಸುತ್ತಿದೆ ಎಂದು ಪ್ರಚಾರ ಮಾಡುತ್ತಿರುವುದು ಎಲ್ಲಾ ವಾಸ್ತವಗಳನ್ನು ಮರೆಮಾಚುತ್ತಿರುವ ಕೇಡಿನ ಹಾಗೆ ಕಾಣುತ್ತಿದೆ. ಉದ್ಯಮ ಲೋಕ, ಸಿನಿಮಾ, ಧರ್ಮ, ಪುರಾಣದ ಪಾತ್ರಗಳು ಕೊಲ್ಲುವ ಉನ್ಮಾದಗಳನ್ನು ಹೆಚ್ಚಿಸುತ್ತಿರುವುದನ್ನು ನೋಡಿದರೆ ಅರಿವನ್ನು ಮನುಷ್ಯ ಪ್ರೀತಿಯನ್ನು ಹೇಗೆ ಹತ್ಯೆ ಮಾಡಲಾಗುತ್ತಿದೆ ಎಂಬುದನ್ನು ಗಮನಿಸಿ ಇಂತಹದ್ದೆಲ್ಲಾ ಆಗದಂತೆ ಜನಸಮುದಾಯವನ್ನು ಎಚ್ಚರಗೊಳಿಸಬೇಕಾಗುತ್ತದೆ.

ರಾಜಕಾರಣ ರೂಪಿಸಲ್ಪಟ್ಟ ಅನೇಕ ಕ್ರಿಯೆಗಳು ದುರ್ಬಲಗೊಳಿಸಲ್ಪಟ್ಟ ಜಾತಿಗಳನ್ನೇ ಯಾಕೆ ಹೆಚ್ಚು ಆಯ್ಕೆ ಮಾಡಿ ಹಲ್ಲೇ ಮಾಡಲು ಮುಂದಾಗುತ್ತಿರುವುದು? ಈ ದೇಶದಲ್ಲಿ ಅಸ್ತ್ರಗಳಿಗೆ ಧರ್ಮದ ಸಂಘ ಬೇಕು ಇವೆರಡೂ ಆಪ್ತವಾಗುವ ಮೂಲಕ ಸಮಾಜದ ಒಳಿತಿಗೆ ದುಡಿಯುವ ಶಕ್ತ ಪ್ರಜ್ಞಾವಂತರನ್ನು ಆಯ್ದು ಕೊಲ್ಲುವ ದಂಧೆ ನಡೆಯುತ್ತಿದೆ. ಇಂತಹ ವಿಕಾರವನ್ನು ಇಲ್ಲವಾಗಿಸಲು ನಿರಂತರ ಶ್ರಮಿಸದೇ ಹೋದರೆ ಪ್ರಜ್ಞೆಗಳನ್ನೇ ಕಳೆದುಕೊಂಡು ಹಿಂಸೆಗಳನ್ನು ಗೌರವಿಸುವ ಕೆಟ್ಟಸ್ಥಿತಿಯನ್ನೇ ಯುವ ಸಮುದಾಯದ ಸುತ್ತ ಸ್ಥಾಪಿಸುವ ಹುನ್ನಾರ ಇನ್ನೂ ಹೆಚ್ಚುತ್ತದೆ.

ಪ್ರಜ್ಞೆಗಳು ನಾಶವಾಗಿ ಆಯುಧಗಳು ಬೀದಿಗಿಳಿದಿವೆ. ವಿಚಾರವಂತ ಮಹಿಳೆಯರನ್ನು, ಪುರುಷರನ್ನ ಕೊಲ್ಲುವ ಮೂಲಕ ನಿರರರ್ತಕವಾದ ಧರ್ಮ ಗಳಿಸಿದ್ದಾದರು ಏನು? ಕೊಲ್ಲುವ ಧರ್ಮದ ಹೆಸರಿನ ಚಟವನ್ನು ಚೆಲ್ಲುತ್ತಾ ಪ್ರಬಲಗೊಳ್ಳುತ್ತಿರುವ ರಾಜಕಾರಣಕ್ಕೆ ಎಂತಹ ಮದ್ದುಗಳನ್ನು ಅರೆಯಬೇಕಾಗಿದೆ. ಮೀಡಿಯಾಗಳು ಕೂಡ ಯಾಕೆ ಎಚ್ಚರಗೊಳಿಸುವ ಪ್ರೇಮವನ್ನು ಇಲ್ಲಿ ಕಲಿಸುತ್ತಿಲ್ಲ. ಫೇಕ್ ಇಮೇಜ್‌ಗಳನ್ನು ಕಾಣಿಸಿದಷ್ಟೂ ಪ್ರಜ್ಞೆಗಳು ಸಾಯುತ್ತವೆ ಎಂಬ ಪ್ರಾಥಮಿಕ ಜ್ಞಾನವೂ ಇಲ್ಲದ ಮೇಲೆ ಹೇಗೆ?

ನಮೋ ನಮೋ ಎನ್ನುವ ಹುಚ್ಚು ಮತವನ್ನು ಕೇಳ್ತಾ ಇದೆ. ಶ್ರೀರಾಮನನ್ನು ಮತ ಖರೀದಿಗೆ ಬಿಡಲಾಗಿದೆ. ಧರ್ಮ ಸಂಕರಗಳು ಮತದ ಬೇಟೆಯನ್ನೇ ಮೊದಲು ಮಾಡಿಕೊಂಡಿವೆ. ಒಟ್ಟು ಚುನಾವಣೆಗಳು ಬರಬರುತ್ತಾ ಭೀಕರವಾಗುತ್ತಿರುವುದು ವಿಸ್ಮಯದ ಕವಚ ತೊಡಿಸಿ ಮತದ ಮಾರುಕಟ್ಟೆಯನ್ನು ಗಟ್ಟಿಗೊಳಿಸುತ್ತಿರುವ ಪರಿಣಾಮಗಳು ಮಹಿಳೆಯರ ಅಳಲುಗಳ ಕಡೆ ನಿಗಾ ವಹಿಸದೆ ಸಮಾಜ ಬಯಸುವ ಅಲಂಕಾರಗಳೊಳಗೆ ಮಹಿಳೆಯರನ್ನು ಉಳಿಸಲಾಗುತ್ತಿದೆ.

ಇನ್ನು ಕ್ಷುಲ್ಲಕ ಸಂಗತಿಗಳೆಂದರೆ ಹೆಣ್ಣು ಧರಿಸಬೇಕಾದ ಉಡುಪುಗಳನ್ನು ಕೂಡ ಗಂಡು ಮನಸ್ಸುಗಳು ನಿರ್ಧರಿಸಲ್ಪಡುವ ಅಥವಾ ಉಡುಪಿನ ಕಾರಣಕ್ಕೆ ವ್ಯವಸ್ಥೆ ಕೆಡುತ್ತಿದೆ ಅಂತ ಬಿಂಬಿಸುವ ಇಂತ ಅನಿಷ್ಟ ಮನಸ್ಸುಗಳು ಸಾಯದ ಹೊರತು ಹೊಸದೇನೂ ಹುಟ್ಟುವುದಿಲ್ಲ. ಮತಕ್ಕಾಗಿಯೇ ಎಲ್ಲವನ್ನೂ ನಡೆಸುತ್ತಿರುವ ರಾಜಕಾರಣ ಒಟ್ಟು ಭಾರತದ ಕುಟುಂಬಗಳ ಒಳಿತನ್ನು ಯಾಕೆ ಯೋಚಿಸುತ್ತಿಲ್ಲ.

ಧರ್ಮವನ್ನು ವಿಕಾರಗೊಳಿಸುತ್ತಿರುವ ನಿಷ್ಪ್ರಯೋಜಕರ ಮನಸ್ಸಿನಲ್ಲಿರುವ ಊಳೆತ್ತುವವರು ಯಾರು? ಒಟ್ಟು ಎಲ್ಲವೂ ಸಂಕೀರ್ಣವಾಗ್ತಾಯಿದೆ. ಹೇಳುವುದು ಹೆಬ್ಬದ, ಬಿತ್ತುವುದು ಧೂಳದ ಎನ್ನುವಂತೆ ಪ್ರಗತಿಯ ಹಿಂದೆ ಪ್ರಗತಿ ಎನ್ನುವ ಹೆಸರಿನ ಹಿಂದಿರುವ ಫಲಿತಾಂಶ ಧರ್ಮದ ಹೆಸರಿನ ಕೊಲೆಗಳು ಇಲ್ಲವೇ ಮುಖವಾಡ ಧರಿಸಿದ ಹುಸಿ ಆದರ್ಶದ ಕಾಣಿಸುವ ಹಿಂಸೆಗಳು. ಒಟ್ಟು ವಿಪರೀತದ ಇಕ್ಕಟ್ಟುಗಳಲ್ಲಿ ಹೆಣ್ಣನ್ನು ಕಾಡುವ ಕೊಲ್ಲುವ ಶೋಷಿಸುವ ವರದಿಗಳನ್ನು ನೋಡಿದರೆ ಹೊಸದೊಂದು ಅನಿಕೇತನ ಪ್ರಜ್ಞೆ ಬೇಧವಿಲ್ಲದ ಶುದ್ಧ ಅರಿವಿನ ಹುಟ್ಟಿಗಾಗಿ ಹೋರಾಡಬೇಕಿದೆ.

ಒಲೆಗಳ ಮುಂದೆ ಮಸಿ ಮೆತ್ತಿಕೊಂಡು ಹೇಳಿಕೊಳ್ಳಲಾಗದ ಕಾವಿನಲ್ಲಿ ಲಿಂಗಸಮಾನತೆಯೊಂದು ಇದೆ ಎಂಬ ಕನಸುಗಳೇ ಗೊತ್ತಿಲ್ಲದೆ ನಿತ್ಯ ಬೇಯುತ್ತಿರುವ ಮುಗ್ಧ ಮಹಿಳೆಯರಿಗಾಗಿ ಹೊಸ ಚಳುವಳಿಗಳಾಗಬೇಕಿದೆ. ಹೆಣ್ಣು ಮಕ್ಕಳ ಕಣ್ಣೋಳಗಿನ ಮೌನಕ್ಕೆ ಮಾತು ಮೂಡಲು ಎಂತಹ ಕಾಲ ಬರಬೇಕು? ಲಿಂಗಸಮಾನತೆಗಾಗಿ ಹೋರಾಟಗಳು ನಡೆಯುತ್ತಿದ್ದರೂ ಕೂಡ ಪ್ರಾಪಂಚಿಕ ಮಟ್ಟದಲ್ಲಿ ಸಮಾನತೆಯ ಕಡೆಗಿನ ಆಶಯಗಳು ಗಂಡಿನ ಹಿಡಿತದ ಕಡೆಗೆ ಚಲಿಸುತ್ತಿರುವುದು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣುತ್ತಿದೆ.

ಕಡೆಗೆ ಲಂಕೇಶ್ ಮಾಸ್ತರರ ಮಾತು ನೆನಪಾಗುತ್ತಿದೆ. ಮನುಷ್ಯರ ಸೃಷ್ಠಿ ಮತ್ತು ಲಯ ಶಕ್ತಿಯನ್ನು ಪರಿಗಣಿಸದೆ ನಾವು ನಡೆಸುವ ಚಿಂತನೆಗಳೆಲ್ಲಾ ಮುಕ್ಕಾಗಿರುತ್ತವೆ. ಬುದ್ಧನ ಮಾತು, ಕ್ರಿಯೆ, ಮೌನ ಎಲ್ಲರಲ್ಲಿ ಪ್ರೇಮವನ್ನು ಸ್ಪುರಿಸಿದಾಗ ಫಲ ಸಿಗುತ್ತದೆ.

‍ಲೇಖಕರು

17 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading