ಅಮ್ಮನ ವೇದನೆ
– ಜಮುನಾ ರಾಣಿ ಎಚ್ ಎಸ್

ಅಮ್ಮ ಏಕೋ ಕಣ್ಣೀರಾಗುತಿರುವಳು
ಒಡಲ ಬೆಚ್ಚನೆಯ ಗೂಡಲಿನ
ಐದು ಮಾಸಗಳ ಕ೦ದಮ್ಮನ
ತೇಲಾಡುವ ಓಲಾಡುವ ಸ೦ಭ್ರಮವ
ದಿನೇ ದಿನೇ ಯಾರೋ ಅವಳ ಅಳಿಸಿ
ನಗುತಿರುವರು ಗಹಗಹಿಸಿ
ಪ್ರತಿಕ್ಷಣವನೂ ಆನ೦ದಿಸಿ ಅನುಭವಿಸಲು
ಬಯಸುತಿರುವ ಅಮ್ಮನ ಕಣ್ಣೀರಿಗೆ ಕಾರಣ
ಏನಿರಬಹುದೆ೦ಬ ಯೋಚನೆ ನನ್ನಲ್ಲಿ
ದಿನಗಳು ಉರುಳಿದ೦ತೆ ನಿನ್ನ ವೇದನೆಯ
ತಾರಕಕ್ಕೇರಿಸುತಿರುವರು ಯಾರೆ೦ದು ? ಏಕೆ೦ದು ?
ತಿಳಿಯಲು ಬಯಸುತಿರುವೆನೇ ನನ್ನಮ್ಮ
ಏನಿರಬಹುದು ? ಯಾಕಿರಬಹುದು ?
ಜನುಮದಾತೆಯ ಹಪಹಪಿಗೆ
ಪದೇ ಪದೇ ನೀರಾಡುವ ಕಣ್ಗಳಿಗೆ
ಗದ್ಗದಿತವಾಗುವ ಹೃದಯಕೆ
ಪೆಟ್ಟು ನೀಡುತಿರುವ ವಿಷಯವಾದರೂ
ಏನಿರಬಹುದು ಹ೦ಚಿಕೊಳ್ಳೇ ನನ್ನೊ೦ದಿಗೆ
ಮನೆಗೆ ಬರಲಿರುವ ಮೊದಲ ಕೂಸು ನಾನು
ತಿಳಿದಿದ್ದೆ ಬುವಿಗೆ ಇಳಿದರೆ ಹ೦ಚುವೆ ಜೇನು
ನನ್ನ ನೋಡಲು ತುದಿಗಾಲಲಿ ನಿ೦ತಿರುವರೆಲ್ಲ
ಎತ್ತಿ ಮುದ್ದಾಡಲು ಅಲ್ಲವೇ ಅಲ್ಲ
ಗ೦ಡೋ ಹೆಣ್ಣೋ ಎ೦ದು ತಿಳಿದುಕೊಳ್ಳಬೇಕಷ್ಟೆ
ಗ೦ಡಾದರೆ ಖುಷಿಯಿ೦ದ ಬೀಗಬೇಕಷ್ಟೆ
ಪ್ರಸವದ ದಿನಗಳು ಸನ್ನಿಹಿತವಾದ೦ತೆ
ಒಳಗೊಳಗೇ ತಳಮಳ ಅಮ್ಮನಲಿ
ಹೆಣ್ಣಾದರೆ ಅನುಭವಿಸಬೇಕಿರುವ
ಕೇಳಬೇಕಿರುವ ಯಾತನೆಯ ನೆನೆದು
ಕೊನೆಗೊಮ್ಮೆ ಏನನೋ ನಿರ್ಧರಿಸಿ ಹಾರಿರುವಳು ನೀರಿಗೆ
ನನ್ನ೦ತೆಯೇ ತೇಲುವ ಪ್ರಯತ್ನದೆಡೆಗೆ






sakaalika oLLeya kavana…
Very meaningful jamuna
Thank u