ಆಕಾರದಾಕಾರದಾಚೆ
ರೂಪ ಹಾಸನ
1
ಕಣ್ಣಿಗೆ ಕಾಣದಂತೆ ನಿಟ್ಟುಸಿರಿಡುತ್ತಾ
ಒಳಗೇ ಗೂಢವಾಗಿ
ಕುದಿಯುತ್ತಿದ್ದ ಮಜ್ಜಿಗೆಹುಳಿ
ತಟ್ಟನೆ ಉಕ್ಕಿ ಸುರಿಯುತ್ತದೆ
ಒಳಗಿನ ಕುದಿ
ಉಕ್ಕಿದಾಗಲೇ ಗೊತ್ತು.
2
ಕಾದು ನಿಂತಿದ್ದ
ಕಾವಲಿಗೆ ಪಾಪದ ಹಸಿಹಿಟ್ಟು
ಬಿದ್ದೊಡನೆ ಹದಬೆಂದು
ಗರಿಗುಡುತ್ತದೆ ದೋಸೆ
ನಿರಾಕಾರದ ಹಿಟ್ಟು ಹರಡಿ
ದೋಸೆಯಾಕಾರ.
3
ಸುಡುವ ಬಾಣಲೆಗೆ
ಬಿದ್ದ ಹಿಡಿ ಕಾಳು
ಚಟಪಟ ಚಟಪಟ
ಸಿಡಿದು ಬಿಳಿಯ ಅರಳು
ಬಾಣಲೆಯೆದುರು ಮೂಕ ಕಾಳಿಗೆ
ಅದೆಷ್ಟೊಂದು ಭಂಡ ಧೈರ್ಯ.
4
ಮೂರು ದಿನಗಟ್ಟಲೆ ನೆನಸಿ
ಬಸಿದು ನೆರಳಲ್ಲೇ ಒಣಗಿಸಿ ಕುಟ್ಟಿ
ಮಲ್ಲುಬಟ್ಟೆಯಲಿ ಸೋಸಿ ಸೋಸಿ
ಕುಂಕುಮ ನುಣುಪಿನ ಸರಿಹಿಟ್ಟು ತಯಾರು
ಪಕ್ವತೆಯ ಮಹಾಬಿಂದುವಿಗಾಗಿ
ಮತ್ತೆ ಮತ್ತೆ ಪರೀಕ್ಷೆ. ಸಿದ್ಧತೆ.

5
ಅಕ್ಕಿ ಉದ್ದುಗಳ
ಕ್ರಮವರಿತು ಬೆರೆಸಿ ತಿರುವಿ
ಮುಚ್ಚಿಟ್ಟ ಇಡ್ಲಿಹಿಟ್ಟು
ಹುದುಗಾಗಿ ಉಬ್ಬಿನಿಲ್ಲುತ್ತದೆ
ತಾಕತ್ತು ಬಿಡಿ ಅಕ್ಕಿ ಉದ್ದಿನದಲ್ಲ
ಎರಡು ಒಂದಾದ ಆ ಕ್ಷಣದ್ದು.
6
ಉಗುರು ಬೆಚ್ಚಗಿನ
ಹಾಲಿಗಿಷ್ಟೇ ಹೆಪ್ಪು ಹನುಕಿಸಿದ್ದು
ರಾತ್ರಿಯೆಲ್ಲಾ ಎಂಥದೋ ಮಸಲತ್ತು
ಬೆಳಗಿಗಾಗಲೇ ಹಾಲೇ ಮೊಸರು
ಮೇಲೆ ಸಾಭ್ಯಸ್ಥ ಗಟ್ಟಿಕೆನೆ
ಮಡುಗಟ್ಟಿದ ಹುಳಿ ಒಡಲಾಳದಲ್ಲಿ.
7
ಅವ್ಯಕ್ತದಾಚೆಯಿಂದ
ವ್ಯಕ್ತದೀಚೆಗೆ ಸೇರುವ ತುಡಿತ
ಕ್ರಿಯೆಯೊತ್ತಡದ ಪ್ರತಿಕ್ರಿಯೆ
ಹೊರಗು ಒಳಗಾಗಿ ಮಾಗಿ
ಒಳಗು ಹೊರಗಾಗಲೇ ಬೇಕಾದ ತುರ್ತು
ಒಳ ಹೊರಗಿನ ಸಮೀಕರಣ
ಆಕಾರ ನಿರಾಕಾರಗಳ ವ್ಯಾಕರಣ.






olagina kudhi ukkidaagale gottu.nija.roopakagalalle maathanaaduva nimm kavite adbhthavaagide roopa madam-smitha
Nimma kavitheya mruduthva istavaayithu mam…
ಇದೀಗ ಮಾಗಿದ ಕವಿತೆ ಓದಿದೆ !
chennaagide
aestondu olaartha hothha naijya kavite…nimminda matrave enthaha kavite neyalu saadhya….. thumba eshtavaythu nange
ಅವ್ಯಕ್ತದಾಚೆಯಿಂದ
ವ್ಯಕ್ತದೀಚೆಗೆ ಸೇರುವ ತುಡಿತ ‘sarva kalika sathya heluva, arthapoorna salugalu, roopakagala typical ‘roopa madam’ kavithe. thumba thanks, olleya kavithe neediddakke….