ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೂಲಹಳ್ಳಿ ಕವಿತೆಗಳು..

ನೀನಿಲ್ಲದ ನಿನ್ನನೇ

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಕುದಿಯುವ ಸಮುದ್ರದ
ತಳ ಸೇರಿರುವೆ
ಬೇಯಬೇಕಿತ್ತು
ಜೀವ ಕಳೆದು

ಕಾಣಬೇಕು ಜೀವಕೆ
ಒಳಗಿದ್ದುಕೊಂಡೇ ಕಾಣಲಾಗದ
ರಕ್ತ ಮಾಂಸ ಮಜ್ಜೆಗಳು
ಮಡಿಚಲಾಗದೆ ಸೆಟೆದ ಮೂಳೆಗಳು

ಇಷ್ಟೇ
ಇದ್ದಾಗ ಎಲ್ಲ ಧರ್ಮ ತರತಮ ಕಾಮ

ಮರ ಸೀಳುವ ಬಡಗಿಗೆ ಗೊತ್ತು
ಕೀಲು ಜೋಡಣೆ
ಮುರಿದ ರಥವ ಎತ್ತಿ ನಿಲಿಸಿ
ಜಾತ್ರೆ ನೆರವಿದಾತನು

ಉಘೇ ಉಘೇ ಕೂಗಿ
ಬಾಳೆ ದವನ ತೂರಿ
ಬಣ್ಣ ಬಣ್ಣದ ಪಟವ ಕಣ್ತುಂಬಿಕೊಂಡು
ತೊಡೆಪಟ್ಟಿಯ ಕಸುವ ರಟ್ಟೆಗೂ ಸೇರಿಸಿ
ರಥ ಎಳೆದು ಬಂದರೆ
ನಿರಾಳ ಬಾನು

ಇದೆಲ್ಲವ
ಒಳಗಿದ್ದು ಕುಣಿಸಿದ ಜೀವವೆ
ನೀನಿಲ್ಲದ ನಿನ್ನನೇ ನೋಡು
ಮಾಂಸ ಬೆಂದರೂ ರುಚಿಯಿಲ್ಲ

ರುಚಿ ಅರುಚಿ
ಎಲ್ಲ ನಿನ್ನ ಮರ್ಮ

ಶಿವನೇ ಕೊಡು..
ಶಿವನೇ
ಕೊಡು
ಇಲ್ಲದೆಯೂ ಇದ್ದಂತಿರುವ
ನಿನ್ನ ಗಾಢ ನಂಬಿಕೆಯನು
ಈ ನೆಲ ಜಲ ಹಕ್ಕಿ ಹೂವುಗಳ
ಹೋಲಿಕೆಯಲ್ಲಿ
ಅವಳ ಮನ ಬಾಗಿಲನು ತಟ್ಟಲಾಗಿಲ್ಲ
ಅದಕ್ಕೇ ಬೇಕು
ಏನಿಲ್ಲ
ಮುಂಗೈ ಸೋಕಿ
ಒಂದು ಮುತ್ತನಿಡಲು
ನಿನ್ನ ನಂಬಿಕೆ ಸಾಕು
ಮುಂದೆ
ಅದೇ ಮುತ್ತು
ನಿನ್ನಾಸರೆಯಲ್ಲಿ ನದಿ ಹರಿಸಬಲ್ಲದು
ಆಗ ನೋಡು ನೀನು ಮರೆಗೆ
ಈ ಧರೆಯ ಸಂಭ್ರಮ ನೂತ
ಸಕಲವೂ ಅವಳ ಎದೆಯೊಳಗೆ
ಒಟ್ಟಾರೆ
ಸಾಮಾನ್ಯಕ್ಕೂ
ಅಸಾಮಾನ್ಯ ನಂಬಿಕೆ ಬೇಕು
ಪ್ರಜ್ವಲಿಸುವ ಪ್ರೇಮಕೆ
ಅದು ನಂದಿದ ಮೇಲೂ
ಊರುಗೋಲಿನ ಹೆಜ್ಜೆಗೊಂದು
ದಾರಿ ಬೇಕು ಸಾಗಲು

‍ಲೇಖಕರು avadhi

3 April, 2020

2 Comments

  1. sangeetha raviraj

    thulahalli kavitegalu chennagive

    • Kotresh T A M Kotri

      ಇಷ್ಟವಾಯಿತು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading